1 : ಗುಣವತಿಯಾದ ಹೆಂಡತಿಯನ್ನು
ಪಡೆದವನು ಧನ್ಯನು !
ಇಮ್ಮಡಿಯಾಗುವುವು ಅವನ ಬಾಳಿನ
ದಿನಗಳು.
2 : ಸದ್ಗುಣಿ ಆನಂದಪಡಿಸುವಳು
ತನ್ನ ಗಂಡನನ್ನು
ಇಂಥವನು ಸಮಾಧಾನದಿಂದ ಪೂರೈಸುವನು
ಬದುಕನ್ನು.
3 : ಒಳ್ಳೆಯ ಹೆಂಡತಿ ಒಂದು ಸೌಭಾಗ್ಯ
ಅಂಥವಳು ದೇವರಲ್ಲಿ ಭಯಭಕ್ತಿಯುಳ್ಳವನಿಗೆ ಲಭ್ಯ.
4 : ಅವನು ಬಡವನಿರಲಿ, ಬಲ್ಲಿದನಿರಲಿ
ತೃಪ್ತನಾಗಿರುವನು.
ಸಕಲ ಸಂದರ್ಭಗಳಲ್ಲಿ
ಹಸನ್ಮುಖನಾಗಿರುವನು.
5 : ಮೂರು ವಿಷಯಗಳನ್ನು ಕುರಿತು ಅಳುಕಿತು
ನನ್ನ ಹೃದಯ
ನಾಲ್ಕನೆಯದನ್ನು ಕುರಿತು, ನನ್ನಲ್ಲುಂಟಾಯಿತು
ಭಯ:
ನಗರದ ನಿಂದೆ, ಪುಂಡರ ತಂಡ, ಸುಳ್ಳು
ಆರೋಪ, ಇವು ಮರಣಕ್ಕಿಂತಲೂ
ಭಯಂಕರ!
6 : ಆದರೆ ಇನ್ನೊಬ್ಬಳ ಮೇಲೆ ಹೊಟ್ಟೆಕಿಚ್ಚು
ಪಡುವ ಸ್ತ್ರೀಯು
ಎಲ್ಲರನ್ನೂ ನಿಂದಿಸುವ ಅವಳ ನಾಲಗೆಯು
ಹೃದಯಾಘಾತವನ್ನು, ದುಃಖವನ್ನು ಉಂಟು
ಮಾಡುವಂಥವು.
7 : ಕೆಟ್ಟ ಹೆಂಗಸು ಅತ್ತಿತ್ತ ಹೊಯ್ದಾಡುವ
ನೊಗವಿದ್ದಂತೆ
ಇಂಥವಳನ್ನು ಕಟ್ಟಿಕೊಂಡವನು ಚೇಳನ್ನು
ಹಿಡಿದುಕೊಂಡವನಂತೆ.
8 : ಕುಡುಕಳು ಎಂಥವನಲ್ಲೂ ಕಡುಗೋಪ
ಎಬ್ಬಿಸುವಳು
ಇಂಥವಳು ತನ್ನ ಮಾನವನ್ನು ಸಹ
ಮುಚ್ಚಿಕೊಳ್ಳಳು.
9 : ಹೆಣ್ಣಿನ ಸೂಳೆತನ ಕಂಡುಬರುವುದೆಲ್ಲಿ?
ಅವಳ ಕಣ್ಣುಹೊಡೆತದಲ್ಲಿ, ರೆಪ್ಪೆಬಡಿತದಲ್ಲಿ.
10 : ಬಿಗಿಬಂಧನದಲ್ಲಿಡು ಮಾನವನ್ನರಿಯದ
ಮಗಳನ್ನು
ಇಲ್ಲದಿರೆ, ದುರುಪಯೋಗಿಸಿಕೊಂಡಾಳು
ಸ್ವಾತಂತ್ರ್ಯವನ್ನು.
11 : ನಾಚಿಕೆಯಿಲ್ಲದ ಅವಳ ಕಣ್ಣಿನ ಬಗ್ಗೆ ಎಚ್ಚರಿಕೆ!
ಆಶ್ಚರ್ಯಪಡಬೇಡ ಅದು ನಿನಗೆ
ಕೆಡುಕುಮಾಡಿದರೆ.
12 : ನೀರಡಿಕೆಯುಳ್ಳ ದಾರಿಹೋಕನಂತೆ, ಸಿಕ್ಕಿದ
ನೀರಿಗೆ ಬಾಯಿ ತೆರೆಯುವಳು
ಪ್ರತೀಗೂಟದ ಬಳಿ ಕುಳಿತು, ಬಂದ
ಬಾಣಕ್ಕೆ ಬತ್ತಳಿಕೆ ತೆರೆಯುವಳು.
13 : ಗಂಡನನ್ನು ಮೆಚ್ಚಿಸುವುದು ಹೆಂಡತಿಯ
ಲಾವಣ್ಯ
ಅವಳ ಬುದ್ಧಿವಂತಿಕೆಯಿಂದ ಅವನ ದೇಹಕ್ಕೆ
ಮತ್ತಷ್ಟು ಚೈತನ್ಯ.
14 : ಮಿತಿಮಾತಿನ ಸತಿ ದೇವರಿಂದ ಬಂದ ವರವು
ಸುಶಿಕ್ಷಿತ ಮನಸ್ಸಿಗೆ ಸಮಾನವಾದುದೊಂದೂ
ಇಲ್ಲವು.
15 : ಲಜ್ಷಾಶೀಲ ಸತಿ ಚೆಲುವಿನ ಮೇಲೆ
ಚೆಲುವಿದ್ದಂತೆ
ಬೆಲೆಯೇ ಕಟ್ಟಲಾಗದು ಆಕೆಯ
ಪಾತಿವ್ರತ್ಯಕ್ಕೆ.
16 : ಸರ್ವೇಶ್ವರನ ಉನ್ನತಾಕಾಶದಲ್ಲಿ ಏರುತ್ತಿರುವ
ಸೂರ್ಯನೋಪಾದಿ
ತನ್ನ ಮನೆತನವನ್ನೆಲ್ಲ ನೋಡಿಕೊಳ್ಳುವ
ಸೊಬಗಿನ ಸತಿ.
17 : ಮುಪ್ಪಿನಕಾಲದಲ್ಲಿ ಹೊಳೆಯುವ ಮುಖ
ದೀಪಸ್ತಂಭದ ಮೇಲೆ ಬೆಳಗುವ ದೀಪ.
18 : ಸ್ಥಿರಮನಸ್ಸಿನವಳ ಸುಂದರವಾದ ಪಾದ
ಬೆಳ್ಳಿಯ ಗದ್ದುಗೆ ಮೇಲಿರಿಸಿದ
ಬಂಗಾರದ ಕಂಭ.
19 : ಮಗನೇ, ನಿನ್ನ ಯೌವನದ ಹುರುಪು
ಉತ್ಸಾಹವನ್ನು ಕಾಪಾಡು
ನಿನ್ನ ಶಕ್ತಿಸಾಮಥ್ರ್ಯವನ್ನು ಅನ್ಯರೊಡನೆ
ವ್ಯರ್ಥಮಾಡದಿರು.
20 : ಫಲವತ್ತಾದ ಭೂಮಿಯನ್ನು
ಇಡೀ ಬಯಲಿನಲ್ಲಿ ಹುಡುಕು
ನಿನ್ನ ಸ್ವಂತ ಬೀಜವನ್ನು ಅಲ್ಲಿ ಬಿತ್ತನೆ ಮಾಡು;
ನಿನ್ನ ಬಿತ್ತನೆ ಕಾಳಿನಲಿ ನಂಬಿಕೆಯಿಡು.
21 : ಹೀಗೆ ನಿನ್ನ ಸಂತತಿ ಉತ್ಪನ್ನವಾಗಿ
ಬೆಳೆಯುವುದು
ತನ್ನ ಸಂತಾನ ಭಾಗ್ಯದಲ್ಲಿ ನಂಬಿಕೆಯಿಟ್ಟು
ವೃದ್ಧಿಯಾಗುವುದು.
22 : ವೇಶ್ಯೆಯು ಉಗುಳಿಗಿಂತ ಬೀಳು
ಗಂಡನಿರುವವಳು ಕೋಟೆಗಿಂತ ಗಟ್ಟಿಗಳು.
23 : ಅಧರ್ಮಿಯಾದ ಹೆಂಡತಿ ದೈವಾಜ್ಞೆ
ಉಲ್ಲಂಘಿಸುವವನ ಗೋಳು
ಭಕ್ತಿಯುಳ್ಳವಳಾದರೋ ದೇವರಿಗೆ
ಭಯಪಡುವವನ ಮೋಜು.
24 : ನಾಚಿಕೆಯಿಲ್ಲದ ಹೆಂಡತಿಗೆ ನೀಚತನದಲ್ಲೂ
ಒಸಗೆ
ಶೀಲವತಿಗೆ ತನ್ನ ಗಂಡನ ಮುಂದೆಯೂ
ನಾಚಿಕೆ.
25 : ಹಠಮಾರಿಯಾದ ನಾರಿ ನಾಯಿಯಂತೆ ಬೀಳು
ಸಭ್ಯಳಾದರೋ ಸರ್ವೇಶ್ವರನಿಗೆ ಅಂಜುವಳು.
26 : ಗಂಡನನ್ನು ಗೌರವಿಸುವ ಹೆಂಡತಿಯನ್ನು
ಜ್ಞಾನಿಯೆನ್ನುವರು
ಗಂಡನನ್ನು ಗರ್ವದಿಂದ ಕಾಣುವವಳನ್ನು
ಅಧರ್ಮಿಯೆಂದು ಕರೆವರು.
ಗುಣವತಿಯಾದ ಹೆಂಡತಿಯನ್ನು ಪಡೆದವನು
ಧನ್ಯನು !
27 : ವಾಚಾಳಿ ಹೆಂಡತಿಯ ದೊಡ್ಡ ನಾಲಿಗೆ
ಶತ್ರುಗಳನ್ನೆಚ್ಚರಿಸುವ ಯುದ್ಧ ಕಹಳೆ
ಇಂಥವಳನ್ನು ಕಟ್ಟಿಕೊಂಡಿರುವವನ ಜೀವನ
ಕಲಹಕ್ರಾಂತಿಗೆ ಸಮಾನ.
28 : ನೊಂದಿದೆ ನನ್ನ ಮನಸ್ಸು ಎರಡು
ವಿಷಯಗಳನು ಕುರಿತು;
ನನಗೆ ಸಿಟ್ಟು ತರಿಸುತ್ತದೆ ಮೂರನೆಯದು:
ಬಡತನದಲಿ ಬಳಲುತ್ತಿರುವ ಬಂಟನು
ಕಸಕ್ಕೆ ಸಮಾನವಾಗಿ ಎಣಿಸಲಾದ ಜ್ಞಾನಿಯು
ಪಾಪಮಾರ್ಗಕೆ ತಿರುಗುವ ಸಜ್ಜನನು
ದೇವರು ಕತ್ತಿಗಾಗಿ ಸಿದ್ಧಗೊಳಿಸುವರು
ಇಂಥವನನ್ನು.
29 : ವ್ಯಾಪಾರ
ತಪ್ಪು ಮಾಡದಿರುವ ವ್ಯಾಪಾರಿ ಅಪರೂಪ
ಪಾಪದಿಂದ ಮುಕ್ತನಲ್ಲ
ಕಿರುಕುಳ ಕೊಡುವ ವರ್ತಕ.