1 : ಸುಜ್ಞಾನದ ಸ್ತುತಿ
ಸುಜ್ಞಾನವೆಂಬಾಕೆ ಹೊಗಳಿಕೊಳ್ಳು
ವಳು ತನ್ನನ್ನೇ
ಹೆಚ್ಚಳಪಡುವಳವಳು ದೇವಜನರ ಮಧ್ಯೆ.
2 : ಬಾಯಿ ತೆರೆಯುವಳು ಮಹೋನ್ನತನ
ಸಭೆಯಲ್ಲಿ
ಹೆಚ್ಚಳಪಡುವಳು ಆತನ ಶಕ್ತಿಯ
ಸಮಕ್ಷಮದಲ್ಲಿ.
3 : “ನಾನು ಮಹೋನ್ನತನ ಬಾಯೊಳಗಿಂದ
ಬಂದೆ
ಮಂಜುಮೋಡದಂತೆ ಭೂಮಿಯೆಲ್ಲವನ್ನೂ
ಮುಚ್ಚಿಕೊಂಡೆ.
4 : ನಾ ವಾಸಮಾಡಿದೆ ಉನ್ನತಲೋಕದಲ್ಲಿ
ನನ್ನ ಆಸನವಿದೆ ಮೇಘಸ್ತಂಭದಲ್ಲಿ.
5 : ನಾನೊಬ್ಬಳೇ ಸುತ್ತಾಡಿದೆ ಆಕಾಶ
ಮಂಡಲವನ್ನೆಲ್ಲಾ
ತಿರುಗಾಡಿದೆ ಪಾತಾಳದಲ್ಲೆಲ್ಲಾ.
6 : ಅಧಿಕಾರ ನಡೆಸಿದೆ ಸಮುದ್ರ ತೆರೆಗಳಲ್ಲೂ
ಸಮಗ್ರ ಭೂಮಿಯಲ್ಲೂ
ಪ್ರತಿಯೊಂದು ಜನಾಂಗದಲ್ಲೂ,
ರಾಷ್ಟ್ರದಲ್ಲೂ.
7 : ವಿಶ್ರಾಂತಿನೆಲೆಯನು ನಾ ಕೋರಿದೆ
ಇವೆಲ್ಲದರಲ್ಲಿ
ಯಾರ ಪ್ರಾಂತ್ಯದಲಿ ನಾನು ತಂಗಿರಲಿ?
8 : ಆಗ ಅಪ್ಪಣೆ ಮಾಡಿದ ನನಗೆ ಎಲ್ಲದರ
ಸೃಷ್ಟಿಕರ್ತನು
ನಾನೊಂದೆಡೆ ಬೀಡುಬಿಡುವಂತೆ ಮಾಡಿದನು
ನನ್ನ ನಿರ್ಮಾಪಕನು.
‘ನಿನ್ನ ಬಿಡಾರ ಇಸ್ರಯೇಲಿನಲ್ಲಿರಲಿ
ಯಕೋಬನ ಸಂತಾನ ನಿನಗೆ ಪ್ರಜೆಯಾಗಿರಲಿ’
ಎಂದೆನಗೆ ನುಡಿದನು.
9 : ಆತ ಸೃಷ್ಟಿಸಿದನೆನ್ನನು ಆದಿಯಲ್ಲಿ ಯುಗಕ್ಕೆ
ಮೊದಲೆ
ಸದಾಸರ್ವದಾ ನಾನಿರುವೆ ಅಳಿಯದೆ.
10 : ಆತನಿಗೆ ನಾ ಸೇವೆ ಮಾಡಿದೆ ಪರಿಶುದ್ಧ
ಗುಡಾರದಲ್ಲಿ
ಹೀಗೆ ಪ್ರತಿಷ್ಠಾಪಿತಳಾದೆ ಸಿಯೋನಿನಲ್ಲಿ.
11 : ಅಂತೆಯೇ ನಿವಾಸನೆಲೆಯನಿತ್ತರೆನಗೆ
ಆ ಪ್ರಿಯ ನಗರದಲ್ಲಿ
ಅಧಿಕಾರವಿತ್ತೆನಗೆ ಜೆರುಸಲೇಮಿನಲ್ಲಿ.
12 : ಬೇರೂರಿಕೊಂಡೆ ಗೌರವಾನ್ವಿತ
ಆ ಜನಾಂಗದಲ್ಲಿ
ಸರ್ವೇಶ್ವರನ ಸ್ವಕೀಯ ಪ್ರಜೆಯಲ್ಲಿ.
13 : ಎತ್ತರವಾಗಿ ಬೆಳೆದ ಲೆಬನೋನಿನ ದೇವದಾರು
ಮರದಂತೆ
ಹೆರ್ಮೋನ್ ಪರ್ವತದ ತುರಾಯಿ ಗಿಡದಂತೆ.
14 : ಬೆಳೆದೆ ಎತ್ತರವಾಗಿ ಸಮುದ್ರ ತೀರದ
ತಾಳೆಮರದಂತೆ
ಜೆರಿಕೋವಿನಲ್ಲಿನ ಗುಲಾಬಿ ಗಿಡದಂತೆ
ಬಯಲು ನಾಡಿನ ಅಂದವಾದ ಎಣ್ಣೆಮರದಂತೆ
ಅಂತೂ ನಾ ಮೆರೆದೆ ಉನ್ನತವಾದ ಮರದಂತೆ.
15 : ಪರಿಮಳ ಬೀರಿದೆ ಲವಂಗಚಕ್ಕೆಯಂತೆ
ಗುಲಾಬಿ ಹೂವಿನಂತೆ
ಆರಿಸಿದ ಮೀರೆಂಬ ರಸಗಂಧ, ಸುಗಂಧ,
ಚಕ್ಕೆಯಂತೆ
ಹಾಗು ಗುಗ್ಗುಲ, ಹಾಲುಮಡ್ಡಿಗಳಂತೆ
ದೇವದರ್ಶನದ ಗುಡಾರದಲ್ಲೇಳುವ
ಸಾಂಬ್ರಾಣಿ ಹೊಗೆಯಂತೆ.
16 : ನನ್ನ ಕೊಂಬೆಗಳನ್ನು ಹರಡಿದೆ
ಏಲಾಮರದಂತೆ
ಚಿಗುರಿದೆ ನಾ ಅಂದವಾಗಿ ದ್ರಾಕ್ಷಾಬಳ್ಳಿಯಂತೆ.
ನನ್ನ ಕೊಂಬೆಗಳಿದ್ದವು ಸೊಗಸಾಗಿ, ರಮ್ಯವಾಗಿ
ನನ್ನ ಹೂಗಳಿದ್ದವು ಸೊಂಪಾಗಿ, ಫಲಗಳು
ಸಮೃದ್ಧಿಯಾಗಿ.
17 : ನನ್ನ ಕೊಂಬೆಗಳನ್ನು ಹರಡಿದೆ
ಏಲಾಮರದಂತೆ
ಚಿಗುರಿದೆ ನಾ ಅಂದವಾಗಿ ದ್ರಾಕ್ಷಾಬಳ್ಳಿಯಂತೆ.
ನನ್ನ ಕೊಂಬೆಗಳಿದ್ದವು ಸೊಗಸಾಗಿ, ರಮ್ಯವಾಗಿ
ನನ್ನ ಹೂಗಳಿದ್ದವು ಸೊಂಪಾಗಿ, ಫಲಗಳು
ಸಮೃದ್ಧಿಯಾಗಿ.
18 : ನಿಷ್ಕಳಂಕ ಪ್ರೀತಿ, ದೇವಭಯ, ಸುಜ್ಞಾನ,
ಪವಿತ್ರ ನಂಬಿಕೆ.
ನಾ ಮಾತೆಯಾಗಿರುವೆ ಇವುಗಳಿಗೆ
ನಿತ್ಯವಾಗಿರುವ ನಾನು ಅನುಗ್ರಹಿಸಲಾಗಿರುವೆ
ನನ್ನ ಮಕ್ಕಳೆಲ್ಲರಿಗೆ, ಆತನು ಹೆಸರಿಟ್ಟವರಿಗೆ.
19 : ನನ್ನನ್ನು ಬಯಸುವ ಜನರೇ,
ನನ್ನ ಬಳಿಗೆ ಬನ್ನಿ
ನನ್ನ ಸತ್ಫಲಗಳಿಂದ ಸಂತೃಪ್ತರಾಗಿ.
20 : ಏಕೆಂದರೆ, ಸಿಹಿ ನನ್ನ ಸ್ಮರಣೆ
ಜೇನುತುಪ್ಪಕ್ಕಿಂತ
ಮಧುರ ನನ್ನಾನುಭವ ಜೇನುಗೂಡಿಗಿಂತ.
21 : ನನ್ನನ್ನು ಭುಜಿಸುವವರು
ಇನ್ನೂ ಭುಜಿಸಬೇಕೆನ್ನುವರು
ನನ್ನನ್ನು ಪಾನಮಾಡುವವರು
ಇನ್ನೂ ಪಾನಮಾಡಬೇಕೆನ್ನುವರು.
22 : ನಾಚಿಕೆಯಾಗದು ನಾನು ಹೇಳಿದಂತೆ
ಕೇಳುವವನಿಗೆ
ತಪ್ಪುಮಾಡಲಾಗದು ನಾನು ಹೇಳಿದಂತೆ
ನಡೆಯುವವನಿಗೆ.”
23 : ಸುಜ್ಞಾನ ಮತ್ತು ಧರ್ಮಶಾಸ್ತ್ರ
ಸುಜ್ಞಾನವು ಮಹೋನ್ನತ ದೇವರ
ಒಡಂಬಡಿಕೆಯ ಗ್ರಂಥವು
ಯಕೋಬ ಸಮಾಜಕ್ಕೆ ಮೋಶೆ ವಿಧಿಸಿ
ಸೊತ್ತಾಗಿ ಕೊಟ್ಟ ಧರ್ಮಶಾಸ್ತ್ರವು.
24 : ಎಡೆಬಿಡದೆ ಸರ್ವೇಶ್ವರನಿಂದ ಶಕ್ತಿ ಹೊಂದು
ಹಿಡಿದುಕೊ ಶಕ್ತಿನೀಡಲೆಂದು ಆತನನ್ನು
ಸರ್ವಶಕ್ತ ಸರ್ವೇಶ್ವರನೊಬ್ಬನೇ ದೇವರು
ಆತನ ಹೊರತು ಬೇರೆ ಇಲ್ಲ ಉದ್ಧಾರಕನು.
25 : ಹೊಸ ಫಲಗಳ ಕಾಲದಲ್ಲಿ ಟೈಗ್ರೀಸ್
ನದಿಯಂತೆ,
ಪೀಶೋನ್ ನದಿಯಂತೆ ಮಾಡುವನಾತ
ಜ್ಞಾನ ತುಂಬಿ ಹರಿವಂತೆ.
26 : ತುಂಬು ವಿವೇಕವನ್ನೀವನು ಯೂಫ್ರೆಟಿಸ್
ನದಿಯಂತೆ
ಸುಗ್ಗಿಕಾಲದ ಜೋರ್ಡನ್ ಹೊಳೆಯಂತೆ.
27 : ನೈಲಿನಂತೆ, ದ್ರಾಕ್ಷಿಯ ಸುಗ್ಗಿಕಾಲದ
ಗೀಹೋನ್ ನದಿಯಂತೆ
ಮಾಡುವುದದು ಸುಶಿಕ್ಷಣ ಪ್ರಜ್ವಲಿಸಿ
ಹರಿಯುವಂತೆ.
28 : ಆದಿಮಾನವ ಸುಜ್ಞಾನವನ್ನು ಪೂರ್ತಿಯಾಗಿ
ತಿಳಿದುಕೊಳ್ಳಲಿಲ್ಲ
ಅಂತೆಯೇ ಕಟ್ಟಕಡೆಯವನೂ ಅದನ್ನು
ಸಂಪೂರ್ಣವಾಗಿ ಗ್ರಹಿಸಲಾರ.
29 : ಏಕೆಂದರೆ ಆಕೆಯ ಆಲೋಚನೆಗಳು
ಸಾಗರಕ್ಕಿಂತಲೂ ವಿಶಾಲ
ಆಕೆಯ ಸಂಕಲ್ಪಗಳು ಪಾತಾಳಕ್ಕಿಂತಲೂ
ಅಗಾಧ.
30 : ನಾನಂತೂ ಬಂದೆ ನದಿಯಿಂದ ತೆಗೆದ
ಕಾಲುವೆಯಂತೆ
ತೋಟದೊಳಗೆ ಬಂದೆ ನೀರಿನ ನಾಳದಂತೆ.
31 : ಆಗ ನಾನೆಂದುಕೊಂಡೆ:
“ನನ್ನ ತೋಟಕ್ಕೆ ನೀರು ಬಿಡುವೆ
ನನ್ನ ಹೂವಿನ ಮಡಿಗೆ ಯಥೇಚ್ಛವಾಗಿ
ಕುಡಿಸುವೆ”
ಆಗ ಏನಾಶ್ಚರ್ಯ! ನನ್ನ ಕಾಲುವೆ
ನದಿಯಾಯಿತು
ನನ್ನ ನದಿ ಸಾಗರವಾಯಿತು!
32 : ಇನ್ನು ಸುಬೋಧೆಯನ್ನು ಬೆಳಗಿಸುವೆ
ಉದಯಕಾಲದ ಬೆಳಕಿನಂತೆ
ಬಹುದೂರ ಅದು ಹರಡುವಂತೆ.
33 : ಹರಿಯಮಾಡುವೆ ಸುಬೋಧೆಯನ್ನು
ಪ್ರವಾದನೆಯಂತೆ
ಅದು ಯುಗಯುಗಾಂತರಗಳವರೆಗೂ
ಉಳಿಯುವಂತೆ.
34 : ನಾ ಕಷ್ಟಪಟ್ಟಿರುವೆ, ನೋಡಿ, ನನಗಾಗಿ
ಮಾತ್ರವಲ್ಲ
ಸುಜ್ಞಾನವನ್ನು ಹುಡುಕುವವರೆಲ್ಲರಿಗೋಸ್ಕರ.