Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಸರ್ವೇಶ್ವರಾ, ನನ್ನ ಜೀವಕ್ಕೆ ತಂದೆಯೂ ಒಡೆಯನೂ ಆಗಿರುವಾತನೇ, ನನ್ನನ್ನು ತೊರೆದುಬಿಡಬೇಡ, ಮಾತುಗಳಿಂದ ನಾನು ಮೋಸಹೋಗುವಂತೆ ನನ್ನನ್ನು ಕೈಬಿಡಬೇಡ, ಅವುಗಳಿಂದ ನಾನು ನಾಶವಾಗುವಂತೆ.
2 : ನನ್ನ ಆಲೋಚನೆಗಳನ್ನು ಹತೋಟಿಯಲ್ಲಿಡುವವರಾರು? ನನ್ನ ಹೃದಯಕೆ ಜ್ಞಾನ ಶಿಕ್ಷಣ ನೀಡುವವರಾರು? ಅಂಥವರಿದ್ದರೆ ನನ್ನ ತಪ್ಪುಗಳನ್ನು ದಂಡಿಸಿ ತಿದ್ದುಕೊಳ್ಳಬಹುದಿತ್ತು ನನ್ನ ಪಾಪಗಳನ್ನು ತಡೆಗಟ್ಟಿ ನಿಲ್ಲಿಸಬಹುದಿತ್ತು.
3 : ಆಗ ನನ್ನ ಅಜ್ಞಾನ ಬೆಳೆಯುವುದಿಲ್ಲ; ನನ್ನ ಪಾಪಗಳು ಹೆಚ್ಚುವುದಿಲ್ಲ ನನ್ನ ವಿರೋಧಿಗಳ ಎದುರಿನಲ್ಲಿ ನಾನು ಬಿದ್ದು ಹೋಗುವುದಿಲ್ಲ ನನ್ನ ಶತ್ರು ನನ್ನನ್ನು ಕಂಡು ಹಿಗ್ಗುವುದಿಲ್ಲ.
4 : ಸರ್ವೇಶ್ವರಾ, ನನ್ನ ಜೀವಕ್ಕೆ ತಂದೆಯೂ ಒಡೆಯನೂ ಆಗಿರುವಾತನೇ, ಸೊಕ್ಕಿನ ಕಣ್ಣುಗಳನ್ನು ಕೊಡಬೇಡ ನನಗೆ.
5 : ದುರಭಿಲಾಶೆಗಳನ್ನು ನನ್ನಿಂದ ದೂರಮಾಡು.
6 : ಹೊಟ್ಟೆಬಾಕತನವಾಗಲಿ, ಕಾಮತೃಷೆಯಾಗಲಿ ನನ್ನನ್ನು ವಶಮಾಡಿಕೊಳ್ಳದಿರಲಿ ಒಪ್ಪಿಸಬೇಡ ನನ್ನನ್ನು ನಾಚಿಕೆಗೇಡಿನ ಮನೋಭಾವಕ್ಕೆ ಈಡಾಗಿ.
7 : ಆಣೆಯಿಡುವುದು ಬೇಡ ಮಕ್ಕಳೇ, ನಾಲಗೆಯ ಹತೋಟಿಯ ಬಗ್ಗೆ ಕೇಳಿ, ನಾ ಹೇಳುವುದನ್ನು: ನಾಲಗೆಯನ್ನು ಬಿಗಿಹಿಡಿಯುವವನು ಮೋಸಹೋಗಲಾರನು.
8 : ಪಾಪಿಯು ಸಿಕ್ಕಿಬೀಳುವನು ತನ್ನ ಮಾತುಗಳಿಂದಲೇ ದೂಷಕನೂ ಗರ್ವಿಷ್ಠನೂ ಮುಗ್ಗರಿಸುವರು ಅವುಗಳಿಂದಲೇ.
9 : ನಿನ್ನ ಬಾಯಿಗೆ ರೂಢಿಮಾಡಿಸಬೇಡ ಆಣೆಯಿಡುವುದನ್ನು ಚಟವಾಗಿಸಬೇಡ ಹೀಗೆ ಪರಮಪಾವನನ ಹೆಸರೆತ್ತುವುದನ್ನು.
10 : ಪದೇಪದೇ ಪೆಟ್ಟುತಿನ್ನುವ ದಾಸನಲ್ಲಿ ಯಾವಾಗಲೂ ಇರುತ್ತದೆ ಬಾಸುಂಡೆ; ಅಂತೆಯೇ ದೇವರ ಹೆಸರೇಳಿ ಆಣೆಯಿಡುವವನಲ್ಲಿ ಪಾಪದ ಕಲ್ಮಶ ಇದ್ದೇ ಇರುತ್ತದೆ.
11 : ಸದಾ ಆಣೆಯಿಡುವವನು ದೋಷಭರಿತನು ಪೀಡೆ ಅವನ ಮನೆಯನು ಬಿಟ್ಟಗಲದು ಆಣೆ ತೀರಿಸದಿದ್ದರೆ ಪಾಪ ಅವನ ಮೇಲಿರುವುದು ಅದನ್ನು ಅಲಕ್ಷಿಸಿದರೆ ಆ ಪಾಪ ಇಮ್ಮಡಿಯಾಗುವುದು. ಮಾಡಿದ ಪ್ರಮಾಣ ವ್ಯರ್ಥವಾದರೂ, ಆತ ದೋಷಿಯಾಗುವುದು ತಪ್ಪದು ಅವನ ಮನೆ ತೊಂದರೆ ತಾಪತ್ರಯಗಳಿಂದ ತುಂಬಿರುವುದು.
12 : ಕೆಟ್ಟ ಮಾತು ಮರಣದಂತಿರುವ ಮಾತು ಒಂದಿದೆ ಅಂಥದ್ದು ಕಾಣದಿರಲಿ ಯಕೋಬನ ವಂಶದಲ್ಲೇ. ಇಂಥ ಮಾತುಗಳು ದೂರವಾಗಿವೆ ನೀತಿವಂತರಿಗೆ ಅವರು ಹೊರಳಾಡುವುದಿಲ್ಲ ಪಾಪದೊಳಗೆ.
13 : ಹೊಲಸು ಮಾತಾಡುವ ಅಭ್ಯಾಸ ಕೂಡದು ಅಂಥ ಮಾತು ಪಾಪಮಯವಾಗಿರುವುದು.
14 : ನೀನು ದೊಡ್ಡವರ ಮಧ್ಯೆ ಕುಳಿತಿರುವಾಗ ಜ್ಞಾಪಕಕೆ ಬರಲಿ ನಿನ್ನ ತಾಯಿತಂದೆ ಮೈಮರೆತು ಮಾತಾಡಿ ಮೂರ್ಖನೆಂದು ಕಂಡು ಬಂದೀಯೆ ಆ ಸಭಿಕರ ಮುಂದೆ ‘ನಾನು ಹುಟ್ಟದಿದ್ದರೆ ವಾಸಿಯಾಗಿತ್ತು’ ಎಂದು ನಿನ್ನ ಜನ್ಮದಿನವನ್ನೇ ಶಪಿಸಿಕೊಂಡೀಯೆ!
15 : ಬೈಯುವ ಅಭ್ಯಾಸವುಳ್ಳವನಿಗೆ ಸುಧಾರಣೆಯಾಗದು ಸಾಯುವವರೆಗೆ.
16 : ಮೋಹಪಾಪ ಪಾಪದ ಮೇಲೆ ಪಾಪಕಟ್ಟಿಕೊಳ್ಳುವವರು ಎರಡು ತರದ ಜನರು ದೇವರ ಕೋಪವನ್ನು ತಮ್ಮ ಮೇಲೆ ಬರುವಂತೆ ಮಾಡಿಕೊಳ್ಳುವವರು ಮೂರನೆಯವರು. ಕಾಯ್ದ ಮನಸ್ಸು, ಉರಿಯುವ ಜ್ವಾಲೆ ಆರಿಹೋಗವು ಸುಟ್ಟು ಬೂದಿಯಾಗುವವರೆಗೆ ಸಂಬಂಧಿಕರೊಂದಿಗೆ ಜಾರತ್ವಗೈಯುವವನು ಬಿಡನು ಅದನ್ನು ಕೊನೆಯವರೆಗೆ.
17 : ತಿನ್ನುವುದೆಲ್ಲಾ ರುಚಿಯಾಗಿರುತ್ತದೆ ಜಾರನಿಗೆ ಅದನ್ನು ಬಿಡನವನು ಸಾಯುವವರೆಗೆ.
18 : “ನನ್ನನು ನೋಡುವವರು ಯಾರಿದ್ದಾರೆ? ನನ್ನ ಸುತ್ತಲೂ ಕತ್ತಲೆ ಮುತ್ತಿದೆ; ಗೋಡೆಗಳು ನನ್ನನ್ನು ಮರೆಯಾಗಿಸಿವೆ ನನ್ನನು ನೋಡುವವರಾರೂ ಇಲ್ಲ; ನಾನಂಜುವುದೇಕೆ? ಮಹೋನ್ನತನು ನನ್ನ ಪಾಪಗಳನ್ನು ಲೆಕ್ಕಿಸನು” ಈ ಪರಿ ಹೇಳಿಕೊಳ್ಳುವನು ವ್ಯಭಿಚಾರ ಗೈಯುವವನು.
19 : ಇಂಥವನು ಭಯಪಡುವುದು ಜನರ ಕಣ್ಣಿಗೆ ಮಾತ್ರ ಆದರೆ ಸರ್ವೇಶ್ವರನ ದೃಷ್ಟಿ ಸೂರ್ಯನಿಗಿಂತ ಹತ್ತು ಸಾವಿರ ಹೊಳೆತ! ಮನುಷ್ಯನ ಮಾರ್ಗಗಳೆಲ್ಲ ಆತನಿಗೆ ಪರಿಚಿತ ಆತ ಬಲ್ಲ ಅತಿಗುಪ್ತವಾಗಿರುವ ಎಲ್ಲ ಸ್ಥಳಗಳ ಇಂಗಿತ. ಇದನ್ನು ಆ ವ್ಯಭಿಚಾರಿ ಗ್ರಹಿಸಲಾರ.
20 : ಸೃಷ್ಟಿಗಿಂತಲೂ ಮೊದಲೇ ಸಕಲವನ್ನು ಅರಿತಿದ್ದನು ಸರ್ವೇಶ್ವರ ಸೃಷ್ಟಿಕಾರ್ಯ ಮುಗಿದಮೇಲೂ ಬಲ್ಲನು ಅವುಗಳನ್ನೆಲ್ಲಾ.
21 : ಈ ಕಾಮುಕನು ದಂಡನೆಗೆ ಗುರಿಯಾಗುವನು ನಗರಬೀದಿಗಳಲ್ಲೇ ಸಿಕ್ಕಿಬೀಳುವನು ನೆನೆಸದಿದ್ದ ಗಳಿಗೆಯಲ್ಲೇ.
22 : ವ್ಯಭಿಚಾರಿಣಿ ಅದೇ ಗತಿಯಾಗುವುದು ಗಂಡನನ್ನು ಬಿಡುವವಳಿಗೆ ಪರಪುರುಷರಿಂದ ಮಕ್ಕಳನ್ನು ಹೆರುವವಳಿಗೆ.
23 : ಕಾರಣ, ಮೊದಲನೆಯದಾಗಿ, ಆಕೆ ಮಹೋನ್ನತನ ಆಜ್ಞೆ ಮೀರಿದಳು ಎರಡನೆಯದಾಗಿ, ತನ್ನ ಗಂಡನ ವಿರುದ್ಧ ದ್ರೋಹಮಾಡಿದಳು ಮೂರನೆಯದಾಗಿ ಹಾದರಮಾಡಿ ಪರಪುರುಷನಿಂದ ಮಕ್ಕಳನ್ನು ಹೆತ್ತಳು.
24 : ಇಂಥವಳನ್ನು ತರುವರು ಸಭೆಯ ಮುಂದೆ ವಿಚಾರಣೆಗೆ ಗುರಿಪಡಿಸುವರು ಅವಳ ಮಕ್ಕಳ ಬಗ್ಗೆ.
25 : ಇಂಥವಳ ಮಕ್ಕಳು ಬೇರೂರುವುದಿಲ್ಲ ಅವಳ ಕೊಂಬೆಗಳು ಫಲಿಸುವುದಿಲ್ಲ.
26 : ಅವಳ ಸ್ಮರಣೆ ನಿಂದಾಸ್ಪದವಾಗಿ ಉಳಿಯುವುದು ಅವಳ ಕಳಂಕ ಮಾಸಿಹೋಗದು.
27 : ಆಗ ಇತರರಿಗೆ ಗೊತ್ತಾಗುವುದು: “ದೇವರ ಭಯಭಕ್ತಿಗಿಂತ ಉತ್ತಮವಾದುದು ಯಾವುದೂ ಇಲ್ಲ ಸರ್ವೇಶ್ವರನ ಆಜ್ಞೆಗಳಿಗೆ ಗಮನಕೊಡು ವುದಕ್ಕಿಂತ ಮಧುರವಾದುದು ಇಲ್ಲ,” ಎಂದು.

· © 2017 kannadacatholicbible.org Privacy Policy