1 : ಸೋಮಾರಿ
ಮೈಗಳ್ಳನು ಮೈಲಿಗೆ ತುಂಬಿದ
ಕಲ್ಲಿಗೆ ಸಮಾನ
ಎಲ್ಲರೂ ಛೀಮಾರಿ ಹಾಕುವರು ಅವನಿಗೆ
ಮಾನವಿಲ್ಲದ ಕಾರಣ.
2 : ಮೈಗಳ್ಳ ತಿಪ್ಪೆಯ ಮೇಲಿರುವ ಹೇಸಿಗೆಗೆ
ಸಮಾನ
ಕೈಒದರಿಬಿಡುವರು ಜನರು
ಅದನ್ನು ಮುಟ್ಟಿದ ತಕ್ಷಣ.
3 : ಕುಲಗೆಟ್ಟ ಕುಡಿಗಳು
ತುಂಟನನ್ನು ಹೆತ್ತದಕ್ಕೆ ತಂದೆಗೆ ಅವಮಾನ
ಮೂರ್ಖ ಮಗಳು ಹುಟ್ಟಿದರೋ
ಅವನಿಗೆ ನಷ್ಟ.
4 : ವಿವೇಕವುಳ್ಳ ಮಗಳು ತನ್ನ ಪತಿಯನ್ನು
ಕಂಡುಕೊಳ್ಳುವಳು
ಮಾನಗೆಟ್ಟವಳು ತಂದೆಗೆ ವ್ಯಸನವನ್ನುಂಟು
ಮಾಡುವಳು.
5 : ಲಜ್ಜೆಗೆಟ್ಟವಳು ತಂದೆಯ ಹಾಗು ಗಂಡನ
ಮಾನ ಕಳೆಯುವಳು
ಅವರಿಬ್ಬರೂ ಅವಳನ್ನು ಹೇಸುವರು.
6 : ಅನುಚಿತಕಾಲದ ಬುದ್ಧಿಮಾತು, ಅಳುವ
ಕಾಲದಲಿ ಹಾಡುವ ಗೀತೆಗೆ ಸಮಾನ
ಬೆತ್ತಬೆದರಿಕೆ ಎಲ್ಲ ಕಾಲದಲ್ಲೂ ಉಚಿತ;
ಅವುಗಳಿಂದ ಬರುವುದು ಜ್ಞಾನ.
7 : ಒಳ್ಳೆಯ ಮಕ್ಕಳು ನತದೃಷ್ಟ ಹೆತ್ತವರ
ಗೋಳನ್ನು ಮರೆಯಿಸುವರು.
8 : ದುರ್ನಡತೆಯ, ಅಸಂಸ್ಕøತ, ಮೊಂಡು
ಹೃದಯದ ಮಕ್ಕಳು
ತಮ್ಮ ಕುಲಕ್ಕೆ ಕಂಟಕಪ್ರಾಯರಾಗಿರುವರು.
9 : ಸುಜ್ಞಾನ-ಮೂರ್ಖತನ
ಮೂರ್ಖನಿಗೆ ಬೋಧನೆ ಮಾಡುವವನೇ,
ನೀನು ಒಡೆದ ಮಣ್ಣಿನ
ಜಾಡಿಯನ್ನಂಟಿಸುವವನಂತೆ!
ಗಾಢನಿದ್ರೆಯಲ್ಲಿರುವವನನ್ನು
ಎಬ್ಬಿಸುವವನಂತೆ!
10 : ಮೂರ್ಖನಿಗೆ ಬುದ್ಧಿ ಹೇಳುವುದು
ತೂಕಡಿಸುವವನಿಗೆ ಕತೆ ಹೇಳಿದಂತೆ
ಬುದ್ಧಿ ಹೇಳಿ ಮುಗಿಸಿದಾಗ ಅವನು
ಕೇಳುವನು:
‘ಏನಂದೆ?’
11 : ಸತ್ತವನಿಗಾಗಿ ಶೋಕಿಸು; ಅವನ ಪ್ರಾಣ
ಜ್ಯೋತಿ ನಂದಿಹೋಗಿದೆ
ಮೂರ್ಖನಿಗಾಗಿ ಮರುಗು; ಅವನಲ್ಲಿ ಜ್ಞಾನ
ಜ್ಯೋತಿ ಇಲ್ಲದಾಗಿದೆ
ಸತ್ತವನಿಗಾಗಿ ಸ್ವಲ್ಪ ವ್ಯಸನಪಡು; ಅವನು
ಪಡೆದಿದ್ದಾನೆ ಅಂತಿಮ ವಿಶ್ರಾಂತಿಯನ್ನು
ಮೂರ್ಖನ ಬಾಳು ಮರಣಕ್ಕಿಂತ ಬೀಳು.
12 : ಮೃತನಿಗಾಗಿ ಶೋಕವನ್ನಾಚರಿಸುವುದುಂಟು
ಏಳುದಿನಗಳವರೆಗೆ
ಮೂರ್ಖರಿಗಾಗಿ ಗೋಳಾಡಬೇಕು, ಅವರು
ಜೀವದಿಂದಿರುವವರೆಗೆ.
13 : ಮತಿಗೇಡಿಯೊಂದಿಗೆ ಮಾತು ಬೆಳೆಸಬೇಡ
ತಿಳಿಗೇಡಿಯ ನೆರೆ ಸೇರಬೇಡ
ತಿಳಿಗೇಡಿಯ ವಿಷಯದಲ್ಲಿ ಜಾಗ್ರತೆ!
ಇಲ್ಲದಿದ್ದರೆ ಸಿಕ್ಕಿಕೊಳ್ಳುವೆ ಸಂಕಟಕ್ಕೆ
ಅವನ ಒಡನಾಟದಿಂದ ನಿನಗೆ ದೋಷ
ತಗಲುವುದು
ಅವನಿಂದ ದೂರವಿರು, ಆಗ ನಿನಗೆ ವಿಶ್ರಾಂತಿ
ದೊರಕುವುದು,
ಅವನ ಹುಚ್ಚುತನದಿಂದ ನಿನಗೆ
ಬೇಸರವಾಗದು.
14 : ಸೀಸಕ್ಕಿಂತ ಭಾರವಾದದ್ದು ಇದೆಯೇ?
ಇದ್ದರೆ ಅದರ ಹೆಸರು ಮೂರ್ಖತನವೇ!
15 : ಉಪ್ಪು, ಉಸುಬು, ಕಬ್ಬಿಣಗಳ ಭಾರವನ್ನೂ
ಸಹಿಸಲು ಸಾಧ್ಯ
ಆದರೆ ಮೂರ್ಖನ ಭಾರವನ್ನು ಸಹಿಸಲು
ಕಷ್ಟಸಾಧ್ಯ.
16 : ಮನೆಯ ಅಡ್ಡತೊಲೆ, ಭೂಕಂಪದಿಂದಲೂ
ಬೀಳದಂತೆ ಮಾಡಬಹುದು
ಅಂತೆಯೇ ಹಿತಬೋಧೆಯಿಂದ ಸುಸ್ಥಿರವಾದ
ಮನಸ್ಸು
ಶೋಧನೆ ಬಂದಾಗಲು ಅಳುಕದು.
17 : ತಿಳುವಳಿಕೆ ತುಂಬಿದ ಮನಸ್ಸಿನಲಿ ನೆಲೆಯಾದ
ಹೃದಯ
ಗಿಲಾವು ಮಾಡಿದ ಗೋಡೆಯ ಮೇಲೆ ಬರೆದ ಚಿತ್ರ.
18 : ಎತ್ತರದ ಬೇಲಿ ಗಾಳಿಯ ಹೊಡೆತಕ್ಕೆ
ತಡೆಯದು
ಅವಿವೇಕಿಯಾದ ಅಂಜುಬುರುಕನ ಹೃದಯ
ಯಾವ ಭಯವನ್ನು ಸಹಿಸದು.
19 : ಸ್ನೇಹ
ಕಣ್ಣು ಚುಚ್ಚಿದರೆ ಕಣ್ಣೀರು
ಹೃದಯ ಚುಚ್ಚಿದರೆ ಮನದರಿವು.
20 : ಹಕ್ಕಿಗಳು ಹಾರಿಹೋಗುವುವು ಕಲ್ಲೆಸೆದರೆ
ಸ್ನೇಹ ಮುರಿಯುವುದು ಸ್ನೇಹಿತನನ್ನು
ನಿಂದಿಸಿದರೆ.
21 : ಗೆಳೆಯನ ವಿರುದ್ಧ ನೀನು ಕತ್ತಿ ಹಿರಿದಿದ್ದರೂ,
ನಿರಾಶೆಯಾಗದಿರು
ಒಂದು ವೇಳೆ ಸಂಧಾನವಾಗಬಹುದು;
22 : ಸ್ನೇಹಿತನ ವಿರುದ್ಧ ಮಾತಾಡಬೇಕಾಗಿ
ಬಂದರೂ ಹಿಂದೆಗೆಯಬೇಡ,
ಸಂಧಾನವಾಗಬಹುದು.
ಆದರೆ ನಿಂದೆ, ಸೊಕ್ಕು,
ಗುಟ್ಟುರಟ್ಟಾಗಿಸುವುದು,
ನಂಬಿಕೆದ್ರೋಹ
ಇಂಥವುಗಳ ನಿಮಿತ್ತ, ಎಂಥ ಸ್ನೇಹಿತನೂ
ಬಿಟ್ಟುಹೋಗುವುದು ಖಂಡಿತ.
23 : ನೆರೆಯವನ ವಿಶ್ವಾಸವನ್ನು ಸಂಪಾದಿಸು,
ಅವನು ಬಡವನಾಗಿರುವಾಗ;
ನಿನಗೂ ಸಂತೃಪ್ತಿಯಾಗುವುದು,
ಅವನಿಗೆ ಸುಖ ಬಂದಾಗ
ಅವನನ್ನು ಬಿಡದಿರು,
ಅವನು ಆಪತ್ಕಾಲದಲ್ಲಿರುವಾಗ
ನಿನಗೂ ಪಾಲು ಬರುವುದು,
ಅವನಿಗೆ ಯಶಸ್ಸು ದೊರಕಿದಾಗ.
24 : ಬಿರುಸುಮಾತುಗಳು ಹೊರಬೀಳುವುವು
ರಕ್ತಪಾತದ ಮೊದಲು
ಉಗಿಹೊಗೆಗಳಾಡುವುವು ಆವಿಗೆಯ ಬೆಂಕಿ
ಭುಗಿಲೇಳುವ ಮೊದಲು.
25 : ಮಿತ್ರನಿಗೆ ಆಶ್ರಯಕೊಡಲು ನಾನು
ಹಿಂಜರಿಯುವುದಿಲ್ಲ
ಅವನಿಂದ ಮುಖತಪ್ಪಿಸಿಕೊಳ್ಳಲು
ಇಷ್ಟಪಡುವುದಿಲ್ಲ.
26 : ಅವನಿಂದ ನನಗೇನಾದರೂ ಕೇಡು
ಸಂಭವಿಸಿದಲ್ಲಿ
ಕೇಳಿದವರೆಲ್ಲರೂ ಎಚ್ಚರಿಕೆ ವಹಿಸುವರು
ಅವನ ವಿಷಯದಲ್ಲಿ.
27 : ಪಾಪ ತಡೆಗಟ್ಟಲು ಪ್ರಾರ್ಥನೆ
ನಾನು ತಪ್ಪು ಮಾಡದಂತೆ, ನನ್ನ ನಾಲಿಗೆ
ನನ್ನನು ಕೆಡಿಸದಂತೆ,
ನನ್ನ ಬಾಯಿಗೆ ಕಾವಲಿರಿಸುವವರಾರು?
ನನ್ನ ತುಟಿಗಳ ಮೇಲೆ ಜಾಣತನವೆಂಬ
ಮುದ್ರೆ ಒತ್ತುವವರಾರು?