1 : ಪಾಪಾಕ್ರಮಗಳು
ಮಗನೇ, ಪಾಪಮಾಡಿರುವೆಯೋ?
ಪುನಃ ಮಾಡಬೇಡ;
ಹಳೆಯ ಪಾಪಗಳಿಗಾಗಿ ಕ್ಷಮೆ ಬೇಡಿಕೊ.
2 : ಪಾಪದ ಬಳಿಯಿಂದ ಓಡಿಬಿಡು,
ಹಾವಿಗೆ ಹೆದರಿ ಓಡುವವನಂತೆ
ಕಚ್ಚುವುದದು, ಅದರ ಸಮೀಪಕ್ಕೆ ಹೋದರೆ.
ಅದರ ಹಲ್ಲುಗಳು ಕೇಸರಿಯ ಕೋರೆಯಂತಿವೆ
ಮಾನವನ ಪ್ರಾಣವನ್ನು ತೆಗೆದುಬಿಡುತ್ತವೆ.
3 : ಎಲ್ಲಾ ಅಕ್ರಮ ಇಬ್ಬಾಯ ಕತ್ತಿಗೆ ಸಮಾನ
ಮಾಯುವುದಿಲ್ಲ ಅದರ ಹೊಡೆತದಿಂದಾದ ಗಾಯ.
4 : ಸಿರಿಸಂಪತ್ತನ್ನು ಹಾಳುಮಾಡುತ್ತವೆ
ಭಯಬಲಾತ್ಕಾರಗಳು
ಅದರಂತೆಯೇ ಹಾಳಾಗುತ್ತವೆ ಗರ್ವಿಷ್ಠನ
ಮನೆ-ಮಠಗಳು.
5 : ದೇವರ ಕಿವಿಗೆ ಮುಟ್ಟುವುದು ಬಡವನ
ಬೇಡಿಕೆ
ಕೂಡಲೇ ಉತ್ತರ ಬರುವುದು ಅದಕ್ಕೆ.
6 : ಬುದ್ಧಿಯ ಮಾತುಗಳನ್ನು ಹೀನೈಸುವವನು
ಇರುವುದು ಪಾಪಮಾರ್ಗದಲ್ಲಿ
ದೇವರಿಗೆ ಅಂಜುವವನು ಆತನ ಕಡೆ
ತಿರುಗಿಕೊಳ್ಳುವನು ಹೃದಯದಲ್ಲಿ.
7 : ಮಾತಿನ ಮಲ್ಲನನ್ನು ದೂರದಿಂದಲೇ
ಗುರುತಿಸುವುದು ಕಷ್ಟವಲ್ಲ
ಆದರೆ ಅವನು ಯಾವಾಗ ಜಾರಿಬೀಳುವನೆಂದು
ವಿವೇಕಿಯೇ ಬಲ್ಲ.
8 : ಪರರ ದುಡ್ಡಿನಿಂದ ತನ್ನ ಮನೆ
ಕಟ್ಟಿಕೊಳ್ಳುವವನು
ತನ್ನ ಸಮಾಧಿಕಟ್ಟಲು ಕಲ್ಲನು
ಕೂಡಿಸುವಂತಿರುವನು.
9 : ದುಷ್ಟರ ಸಂತೆ ಸಣಬಿನ ಸಂತೆ
ಉರಿಯುವ ಬೆಂಕಿ ಅವರ ಅಂತ್ಯೆ.
10 : ಪಾಪಾತ್ಮರ ಮಾರ್ಗ ಕಲ್ಲು ಹಾಸಿ
ಸರಾಗ ಮಾಡಿದ ಹೆದ್ದಾರಿ
ಆದರೆ ಅದರ ಕೊನೆಯಲ್ಲಿರುವುದು
ಪಾತಾಳದ ಗುಂಡಿ.
11 : ಸುಜ್ಞಾನಿಯೂ ಅಜ್ಞಾನಿಯೂ
ಧರ್ಮಶಾಸ್ತ್ರವನ್ನು ಅನುಸರಿಸುವವನಿಗೆ
ಆಲೋಚನೆಗಳು ಹತೋಟಿಯಲ್ಲಿರುವುವು
ದೇವರಲ್ಲಿ ಭಯಭಕ್ತಿಯು ಸುಜ್ಞಾನದ
ಸಂಪೂರ್ಣತೆಯು.
12 : ಸುಶಿಕ್ಷಿತನಾಗಲು ಸಾಧ್ಯವಿಲ್ಲ ಚಾತುರ್ಯವಿಲ್ಲದೆ
ಆದರೆ ನಿಷ್ಠೂರತನವನ್ನು ಹೆಚ್ಚಿಸುವ
ಚಾತುರವೊಂದಿದೆ.
13 : ಜಾಣನ ಜ್ಞಾನ ವೃದ್ಧಿಯಾಗುವುದು
ಪ್ರವಾಹದಂತೆ
ಅವನ ಬುದ್ಧಿ ಉಕ್ಕುವುದು
ಜೀವದ ಬುಗ್ಗೆಯಂತೆ.
14 : ಒಡಕು ಮಡಕೆಯಂತಿದೆ ಮಂದಮತಿಯ
ಅಂತರಂಗ
ಅವನಲ್ಲಿ ಜ್ಞಾನವು ನಿಲ್ಲುವುದು ಅಸಾಧ್ಯ.
15 : ಜಾಣ್ಮೆಯ ನುಡಿ ಕೇಳಿದರೆ ಜಾಣನು
ತಲೆದೂಗುವನು; ಕೂಡಿಸಿಕೊಳ್ಳುವನು,
ಅದನ್ನೇ ಭಂಡನು ಕೇಳಿದರೆ, ಹಿಗ್ಗುವುದಿಲ್ಲ;
ಅದನ್ನು ಹಿಂದೂಡುವನು.
16 : ಮೂರ್ಖನ ಮಾತು ಪ್ರಯಾಣದಲ್ಲಿ ಹೊತ್ತ
ಹೊರೆಯಂತೆ
ಜಾಣನ ಬಾಯಲಿ ಸಿಗುವುದಾದರೋ
ಅಮೃತದಂತೆ.
17 : ಕೂಡಿದ ಸಭೆಯಲ್ಲಿ ವಿವೇಕಿ ಆಡುವ ಮಾತನ್ನು
ಕೇಳಲು ಜನರು ಆತುರದಿಂದಿರುತ್ತಾರೆ.
ಅವನ ನುಡಿಗಳನ್ನು ಮನದಲ್ಲಿಟ್ಟುಕೊಂಡು
ಮೆಲಕು ಹಾಕುತ್ತಾರೆ.
18 : ಮೂರ್ಖನಿಗೆ ಜ್ಞಾನ ಹಾಳುಮನೆಯಂತೆ
ಬುದ್ಧಿಹೀನನ ಜ್ಞಾನ ಅರ್ಥವಿಲ್ಲದ
ಮಾತಿನಂತೆ.
19 : ಬುದ್ಧಿಹೀನನಿಗೆ ಶಿಕ್ಷಣ
ಕಾಲಿಗೆ ಹಾಕಿದ ಸಂಕೋಲೆಯಂತೆ
ಕೈಗೆ ಬಿಗಿದ ಬೇಡಿಯಂತೆ.
20 : ಮೂರ್ಖನು ಕೇಕೆ ಹಾಕಿ ನಗುವನು
ದೊಡ್ಡದನಿ ಮಾಡಿ
ಜಾಣನು ಅಪರೂಪಕ್ಕೆ ಮುಗುಳ್ನಗೆ ಬೀರುವನು
ಹಸನ್ಮುಖನಾಗಿ.
21 : ವಿವೇಕಿಗೆ ಶಿಕ್ಷಣ ಬಂಗಾರದ ಆಭರಣ
ಅಂತೆಯೆ ಬಲದೋಳಿನ ಕಂಕಣ.
22 : ಮೂರ್ಖನ ಪಾದಗಳು ಕೂಡಲೆ ಸೇರುವುವು
ನೆರೆಮನೆಗೆ
ಅನುಭವಿಯಾದರೋ ನಾಚಿಕೊಳ್ಳುವನು
ಹಾಗೆ ಮಾಡುವುದಕ್ಕೆ.
23 : ತಿಳಿಗೇಡಿ ಇಣಿಕಿನೋಡುವನು ನೆರೆಮನೆಯ
ಬಾಗಿಲಲ್ಲಿ
ಸುಸಂಸ್ಕøತನು ನಿಂತುಕೊಳ್ಳುವನು ಬಾಗಿಲ
ಹೊರಗಡೆಯಲ್ಲಿ.
24 : ಪರರ ಬಾಗಿಲಲಿ ನಿಂತು ಕಿವಿಗೊಡುವುದು
ಅವಿವೇಕತನ
ವಿವೇಕಿಗೆ ಇಂಥ ನಡತೆ ನಾಚಿಕೆಗೆ ಕಾರಣ.
25 : ಅವಿವೇಕಿಗಳ ಹರಟೆ ಅಸಂಗತ ಮಾತಿನಂತೆ
ಆದರೆ ವಿವೇಕಿಗಳ ಮಾತು ತಕ್ಕಡಿಯಲಿ
ತೂಗಿಟ್ಟಂತೆ.
26 : ಮೂರ್ಖರ ಹೃದಯ ಅವರ ಬಾಯಲ್ಲಿ
ಬುದ್ಧಿವಂತರ ಬಾಯಿ ಅವರ ಹೃದಯದಲ್ಲಿ.
27 : ಅಧರ್ಮಿ ಸೈತಾನನನ್ನು ಶಪಿಸುವಾಗ
ತನ್ನನ್ನೇ ಶಪಿಸಿಕೊಳ್ಳುತ್ತಾನಲ್ಲ!
28 : ಕಿವಿಯೂದುವವನ ಆತ್ಮ ಮಲಿನ
ಅವನೆಲ್ಲರಿಗೂ ಅಸಹ್ಯ.