Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಸಮಯೋಚಿತ ಮಾತುಕತೆ ಕಾಲೋಚಿತವಲ್ಲದ ಬುದ್ಧಿವಾದ ಚಂದವಲ್ಲ ಸಮಯವರಿತು ಸುಮ್ಮನಿರುವವನೇ ಜಾಣ.
2 : ಕೋಪಿಸಿಕೊಳ್ಳುವುದಕ್ಕಿಂತ ಬುದ್ಧಿಹೇಳುವುದು ಎಷ್ಟೋ ಒಳಿತು ತನ್ನ ತಪ್ಪನ್ನು ಒಪ್ಪಿಕೊಳ್ಳುವವನಿಗೆ ಹಾನಿ ತಟ್ಟದು.
3 : ಕೋಪಿಸಿಕೊಳ್ಳುವುದಕ್ಕಿಂತ ಬುದ್ಧಿಹೇಳುವುದು ಎಷ್ಟೋ ಒಳಿತು ತನ್ನ ತಪ್ಪನ್ನು ಒಪ್ಪಿಕೊಳ್ಳುವವನಿಗೆ ಹಾನಿ ತಟ್ಟದು.
4 : ಬಲಾತ್ಕಾರದಿಂದ ನ್ಯಾಯನಿರ್ಣಯಗಳನ್ನು ಸಾಧಿಸುವವನು ಕನ್ಯೆಯನ್ನು ಕೆಡಿಸಲಿಚ್ಛಿಸುವಂಥ ನಪುಂಸಕನು.
5 : ಮೌನಿಯು ಪಂಡಿತನಾಗಿ ಕಂಡುಬರುವನು ಮಾತಾಳಿಯು ದ್ವೇಷಪಾತ್ರನಾಗುವನು.
6 : ಉತ್ತರ ಗೊತ್ತಿಲ್ಲದೆ ಸುಮ್ಮನಿರುವವನು ಒಬ್ಬನು ಸಮಯವರಿತು ಮೌನತಾಳುವವನು ಇನ್ನೊಬ್ಬನು.
7 : ತಕ್ಕ ಸಮಯ ಬರುವವರೆಗೆ ಸುಮ್ಮನಿರುವವನು ಜಾಣ ಸಮಯ ತಪ್ಪಿ ಮಾತಾಡುವವನು ವಾಚಾಳಿ ಹಾಗೂ ಕೋಣ.
8 : ಅತಿಯಾಗಿ ಮಾತಾಡುವವನು ತುಚ್ಛನೆನಿಸಿಕೊಳ್ಳುವನು ದರ್ಪದಿಂದ ಮಾತಾಡುವವನು ದ್ವೇಷಕ್ಕೆ ಪಾತ್ರನಾಗುವನು.
9 : ಮನುಷ್ಯ ಸೌಭಾಗ್ಯವನ್ನು ಒಮ್ಮೊಮ್ಮೆ ಕಂಡುಕೊಳ್ಳಬಹುದು ದುರ್ಭಾಗ್ಯದಿಂದಲೇ ನಷ್ಟಕ್ಕೆ ಗುರಿಯಾಗಬಹುದು ಲಾಭದಿಂದಲೇ.
10 : ನಿನಗೇನೂ ಲಾಭಗಿಟ್ಟದಿರಬಹುದು ಒಂದು ವಿಧವಾದ ದಾನದಿಂದ ನಿನಗೆ ಇಮ್ಮಡಿಫಲ ದೊರಕಬಹುದು ಇನ್ನೊಂದು ವಿಧವಾದ ದಾನದಿಂದ.
11 : ಒಮ್ಮೊಮ್ಮೆ ಕೀರ್ತಿಗೋಸ್ಕರ ತಗ್ಗಿಸಲ್ಪಡುವುದೂ ಉಂಟು ತಗ್ಗಿದವನು ತಲೆಯೆತ್ತುವುದೂ ಉಂಟು.
12 : ಒಂದಿಷ್ಟೇ ಕೊಟ್ಟು ಅತಿಯಾಗಿ ಕೊಂಡುಕೊಳ್ಳಬಹುದು ಆಮೇಲೆ ಏಳರಷ್ಟು ಅದರ ನಿಮಿತ್ತ ಖರ್ಚು ಮಾಡಬೇಕಾಗಬಹುದು.
13 : ಜಾಣನು ಜನಪ್ರಿಯನಾಗುವನು ಮಾತಿನಿಂದ ಮೂಢನ ಮಾತು ವಿರಸವಾಗುವುದು ಸರಸದಿಂದ.
14 : ನಿನಗಾವ ಲಾಭವೂ ದಕ್ಕದು ಮೂರ್ಖನ ಕೊಡುಗೆಯಿಂದ ಅವನು ಮಾಡುವುದು ಒಂದರಿಂದಲ್ಲ, ಹಲವಾರು ದೃಷ್ಟಿಯಿಂದ.
15 : ಅವನು ಕೊಡುವುದು ತುಸು; ಹಂಗಿಸುವುದು ಬಹಳ ಅವನ ಬಾಯೋ, ಒಂದು ಡಂಗುರ ಇಂದು ಕೊಟ್ಟರೆ ನಾಳೆ ತಿರುಗಿ ಕೇಳುವ ಅವನು ನಿಜಕ್ಕೂ ಅನಿಷ್ಟ.
16 : ಮೂರ್ಖನ ಮಾತು ಹೀಗಿದೆ: “ಸ್ನೇಹಿತರಿಲ್ಲ ನನಗೆ; ಮನ್ನಣೆಯಿಲ್ಲ ನನ್ನ ಸತ್ಕಾರ್ಯಗಳಿಗೆ; ನನ್ನ ಅನ್ನ ತಿನ್ನುವವರೇ ನನಗೆರಡು ಬಗೆಯುತ್ತಾರೆ.”
17 : ಎಷ್ಟು ಸಾರಿ, ಎನಿತು ಜನ, ಪರಿಹಾಸ್ಯ ಮಾಡರು ಅಂಥವನನ್ನು ಕಂಡರೆ!
18 : ಅಸಮಂಜಸ ಮಾತು ನಾಲಗೆಯಿಂದ ಜಾರುವುದಕ್ಕಿಂತ ನೆಲದ ಮೇಲೆ ಜಾರುವುದು ಲೇಸು ಹೀಗೆ ದುಷ್ಟನ ಪತನ ಶೀಘ್ರವಾಗಿ ಸಂಭವಿಸುವುದು.
19 : ಸೌಜನ್ಯರಹಿತ ಮನುಷ್ಯ ಅಕಾಲದಲ್ಲಿ ಹೇಳಿದ ಕತೆಯಂತೆ ಅದು ಸದಾ ನರ್ತಿಸುವುದು ಅವಿವೇಕಿಗಳ ಬಾಯಲ್ಲಿ.
20 : ಮೂರ್ಖನ ಬಾಯಿಂದ ಬಂದ ಜ್ಞಾನೋಕ್ತಿ ತಿರಸ್ಕøತ ಏಕೆಂದರೆ ಅವನು ಆಡಿದ್ದು ಅಸಂಗತ.
21 : ಒಬ್ಬನು ಪಾಪಮಾಡದಿರಬಹುದು ಬಡತನದ ನಿಮಿತ್ತ ಅಂಥವನ ನಿದ್ರೆ ಕೆಡುವುದಿಲ್ಲ ಕೆಟ್ಟ ಮನಸ್ಸಾಕ್ಷಿಯಿಂದ.
22 : ಒಬ್ಬನು ತನ್ನನ್ನೇ ಕೆಡಿಸಿಕೊಳ್ಳಬಹುದು ಕಾರಣವಿಲ್ಲದ ನಾಚಿಕೆಯಿಂದ ತನ್ನನ್ನು ತಾನೇ ಹಾಳು ಮಾಡಿಕೊಳ್ಳಬಹುದು ಮುಖದಾಕ್ಷಿಣ್ಯದಿಂದ.
23 : ಒಬ್ಬನು ಸ್ನೇಹಿತನಿಗೆ ಮಾತುಕೊಡಬಹುದು ದಾಕ್ಷಿಣ್ಯಕ್ಕೊಳಗಾಗಿ ಇದರಿಂದ ಮಾಡಿಕೊಳ್ಳುವನವನನ್ನು ತನಗೆ ಅನಾವಶ್ಯ ವೈರಿಯಾಗಿ.
24 : ಸುಳ್ಳಾಡುವ ಚಟ ಸುಳ್ಳು ಒಂದು ಕೆಟ್ಟ ದೋಷವಾಗಿದೆ ಮನುಷ್ಯನಲ್ಲಿ ಅದು ಯಾವಾಗಲೂ ಇರುತ್ತದೆ ಅಶಿಕ್ಷಿತರ ಬಾಯಲ್ಲಿ.
25 : ಸದಾ ಸುಳ್ಳಾಡುವವನಿಗಿಂತ ಕಳ್ಳನೇ ಮೇಲು ಆದರೆ ನಾಶವೇ ಇಬ್ಬರಿಗೂ ದಕ್ಕುವ ಪಾಲು.
26 : ಸುಳ್ಳಾಡುವ ಚಟ ಅವಮಾನಕರ ಅವನ ಬೆನ್ನುಬಿಡದು ದುಮ್ಮಾನ.
27 : ಸುಜ್ಞಾನದ ಸೇವೆ ಮಾತಿನಲ್ಲಿ ಬಲ್ಲಿದನು ಮುಂದೆ ಬರುವನು ವಿವೇಕಿಯು ಮಹಾತ್ಮರನ್ನು ಮೆಚ್ಚುವನು
28 : ತನ್ನ ಭೂಮಿಯನ್ನು ತಾನೇ ಗೈಯುವವನು ಸಮೃದ್ಧಿ ಬೆಳೆಹೊಂದುವನು ಮಹಾತ್ಮರನ್ನು ಮೆಚ್ಚಿಸುವವನು ತಪ್ಪಿಗೆ ಕ್ಷಮಾದಾನ ಪಡೆಯುವನು.
29 : ಕೊಡುಗೆ, ಬಹುಮಾನಗಳು ಬುದ್ಧಿವಂತರ ಕಣ್ಣುಗಳನ್ನು ಕುರುಡುಮಾಡುವುವು ಅವನು ಗದರಿಸದಂತೆ ಅವನ ಬಾಯಿಗೆ ಕುಕ್ಕೆ ಹಾಕಿ ಮುಚ್ಚುವುವು.
30 : ಮುಚ್ಚಿಟ್ಟ ಜ್ಞಾನ, ಹುದುಗಿಟ್ಟ ಹಣ ಇವುಗಳಿಂದೇನು ಲಾಭ?
31 : ಜ್ಞಾನವನ್ನು ಮರೆಸುವುದಕ್ಕಿಂತ ಅಜ್ಞಾನವನ್ನು ಮುಚ್ಚಿಡುವುದು ಲೇಸು.

· © 2017 kannadacatholicbible.org Privacy Policy