1 : ಮಗನೇ, ದೇವರ ಸೇವೆಮಾಡಲು
ಬಯಸುವಿಯೋ?
ಹಾಗಾದರೆ ಶೋಧನೆಗಳನ್ನೆದುರಿಸಲು
ನಿನ್ನಾತ್ಮವನ್ನು ಸಿದ್ಧಪಡಿಸಿಕೊ!
2 : ನಿನ್ನ ಹೃದಯದಲ್ಲಿರಲಿ ಪ್ರಾಮಾಣಿಕತೆ,
ಸ್ಥಿರತೆ
ಕಷ್ಟ ಬಂದಾಗ ನಿನಗಿರದಿರಲಿ ಚಂಚಲತೆ.
3 : ಆತನನ್ನು ಸೇರಿಕೊಂಡಿರು; ಬಿಟ್ಟಗಲಬೇಡ
ಅಭಿವೃದ್ಧಿ ಹೊಂದುವೆ ಅಂತಿಮ ದಿನ.
4 : ನಿನ್ನ ಮೇಲೆ ಬಂದುದೆಲ್ಲವನು ಸ್ವೀಕರಿಸು
ಬಡತನ ಬಂದರೂ ದೀರ್ಘಶಾಂತಿಯಿಂದಿರು.
5 : ಬಂಗಾರದ ಪರೀಕ್ಷೆಯಾಗುವುದು ಬೆಂಕಿಯಲ್ಲಿ
ಆತನ ಭಕ್ತರ ಪರೀಕ್ಷೆ ಅವಮಾನದ
ಕುಲುಮೆಯಲ್ಲಿ.
6 : ಆತನಲ್ಲಿಡು ಭರವಸೆ;
ನೆರವೀಯುವನಾತ ನಿನಗೆ,
ಸರಿಪಡಿಸಿಕೊ ನಿನ್ನ ನಡತೆಯನು;
ನಿರೀಕ್ಷೆಯಿಡು ಆತನಲೇ.
7 : ದೇವರಲ್ಲಿ ಭಯಭಕ್ತಿಯುಳ್ಳವರೇ,
ಆತನ ಕರುಣೆಗಾಗಿ ಕಾದಿರಿ
ಸನ್ಮಾರ್ಗವನ್ನು ಬಿಟ್ಟು ತೊಲಗಬೇಡಿ;
ಬಿದ್ದು ಹೋದೀರಿ!
8 : ದೇವರಿಗೆ ಭಯಪಡುವವರೇ, ಆತನಲ್ಲಿಡಿ
ಭರವಸೆ
ತಕ್ಕ ಪ್ರತಿಫಲ ದೊರಕುವುದು ನಿಮಗೆ ತಪ್ಪದೆ.
9 : ದೇವರಿಗೆ ಭಯಪಡುವವರೇ, ಒಳಿತನ್ನು
ನಿರೀಕ್ಷಿಸಿರಿ
ನಿತ್ಯ ಸಂತೋಷವನ್ನೂ ಕೃಪೆಯನ್ನೂ
ಹಾರೈಸಿರಿ.
10 : ಹಿಂದಿನವರನ್ನು ಗಮನಿಸಿರಿ; ತಂದುಕೊಳ್ಳಿರಿ
ಲಕ್ಷ್ಯಕೆ
ದೇವರನ್ನು ನಂಬಿದವರಿಗೆ ಆಗಿದ್ದುಂಟೆ ನಾಚಿಕೆ?
ಭಯಭಕ್ತಿಯಿಂದ ಬಾಳಿದವನನು ಆತ
ಕೈಬಿಟ್ಟದ್ದುಂಟೆ?
11 : ಏಕೆನೆ, ಸರ್ವೇಶ್ವರನು ದಯಾಪೂರಿತನು,
ಕನಿಕರವುಳ್ಳವನು
ಪಾಪಗಳನ್ನು ಕ್ಷಮಿಸುವವನು, ಕಷ್ಟದಲ್ಲಿ
ರಕ್ಷಿಸುವವನು.
12 : ಅಂಜುಬುರುಕರೇ, ದುರ್ಬಲರೇ,
ಕಪಟ ಪಾಪಿಗಳೇ, ಧಿಕ್ಕಾರ ನಿಮಗೆ !
13 : ದುರ್ಬಲಮನಸ್ಸುಳ್ಳವನಿಗೆ ಧಿಕ್ಕಾರ!
ಆತನಿಗೆ ನಂಬಿಕೆಯಿಲ್ಲ; ಎಂತಲೇ ಆಶ್ರಯ
ದೊರಕುವುದಿಲ್ಲ.
14 : ಸಹನಾಶಕ್ತಿ ಕಳೆದುಕೊಂಡವರೇ, ನಿಮಗೆ
ಧಿಕ್ಕಾರ !
ಏನು ಮಾಡುವಿರಿ ಆತ ನಿಮ್ಮನ್ನು
ಪರೀಕ್ಷಿಸುವಾಗ ?
15 : ದೇವರಿಗೆ ಭಯಪಡುವವರು
ಆತನ ಮಾತುಗಳನ್ನು ಮೀರರು
ಆತನನ್ನು ಪ್ರೀತಿಸುವವರು
ಆತನ ಮಾರ್ಗಗಳನ್ನು ಅನುಸರಿಸುವರು.
16 : ದೇವರಿಗೆ ಭಯಪಡುವವರು, ಅರಸುವರು
ಆತನಿಗೆ ಮೆಚ್ಚಿಕೆಯಾದುದನೇ
ಆತನನು ಪ್ರೀತಿಸುವವರು, ನಿರತರಾಗಿರುವರು
ಆತನ ನಿಯಮಗಳಲೇ.
17 : ದೇವರಿಗೆ ಭಯಪಡುವವರು ಅಣಿಮಾಡುವರು
ತಮ್ಮ ಹೃದಯಗಳನು
ಆತನ ಮುಂದೆ ತಗ್ಗಿಸಿಕೊಳ್ಳುವರು
ತಮ್ಮ ಅಂತರಾತ್ಮವನು.
18 : ಮಾನವನ ಕೈಗೆ ಸಿಕ್ಕಿಬೀಳದಂತೆ
ಒಪ್ಪಿಸಿಬಿಡೋಣ ನಮ್ಮನ್ನೇ ದೇವರಿಗೆ
ಕಾರಣ, ಆತನ ಮಹಿಮೆಯಿದ್ದಂತೆಯೇ
ಇರುವುದು ಆತನ ಕೃಪೆ.