1 : ಹಟಮಾರಿಗಳ ದುರ್ಗತಿ
ನಿರುಪಯುಕ್ತ ಮಕ್ಕಳ ಬಹು
ಸಂಖ್ಯೆಯನ್ನು ಬಯಸಬೇಡ
ಭಕ್ತಿಹೀನ ಮಕ್ಕಳಲ್ಲಿ ಆನಂದಪಡಬೇಡ.
2 : ದೇವರಲ್ಲಿ ಅವರಿಗೆ ಭಯಭಕ್ತಿ ಇಲ್ಲದಿರಲು
ಸಂತೋಷಿಸಬೇಡ ಅವರು ಬೆಳೆದು ಅಧಿಕ
ಸಂಖ್ಯೆಯಲ್ಲಿದ್ದರೂ.
3 : ಅವರ ಬದುಕಿನಲ್ಲಿ ಭರವಸೆಯಿಡಬೇಡ
ಅವರ ಅಧಿಕ ಸಂಖ್ಯೆಯಲಿ ಮನಸ್ಸಿಡಬೇಡ.
ಸಜ್ಜನರಲ್ಲದ ಸಾವಿರ ಮಕ್ಕಳಿಗಿಂತ ಒಬ್ಬನೇ ಮೇಲು
ದುರುಳ ಮಕ್ಕಳಿಗಿಂತ ಅವರಿಲ್ಲದೆ
ಮಡಿಯುವುದೇ ಲೇಸು.
4 : ವಿವೇಕಿಯಾದ ಒಬ್ಬನಿಂದ ಊರು ಬಲಿಯುತ್ತದೆ
ಅಧರ್ಮಿಗಳ ಪೀಳಿಗೆಯು
ಅಳಿದುಹೋಗುತ್ತದೆ.
5 : ಇಂಥ ಅನೇಕ ಘಟನೆಗಳನ್ನು ಕಣ್ಣಾರೆ
ಕಂಡಿದ್ದೇನೆ
ಇವುಗಳಿಗಿಂತ ಹೆಚ್ಚಿನವುಗಳನ್ನು ಕಿವಿಯಾರೆ
ಕೇಳಿದ್ದೇನೆ.
6 : ಪಾಪಾತ್ಮರ ಸಭೆಯಲ್ಲಿ ಹೊತ್ತಿಕೊಳ್ಳುವುದು ಬೆಂಕಿ
ಅವಿಧೇಯ ಜನರ ನಿಮಿತ್ತ ಉರಿಯುವುದು ಕೋಪಾಗ್ನಿ.
7 : ದೇವರು ಮನ್ನಿಸಲಿಲ್ಲ ಪೂರ್ವಕಾಲದ
ಪ್ರಚಂಡ ಪುರುಷರನ್ನು
ಸ್ವಶಕ್ತಿಯಲ್ಲಿಯೇ ನಂಬಿಕೆಯಿಟ್ಟು
ಬಿದ್ದುಹೋದ ಆ ನರರನ್ನು.
8 : ಆತ ಉಳಿಸಲಿಲ್ಲ ಲೋಟನು ಪ್ರವಾಸಿಯಾಗಿದ್ದ
ಪ್ರದೇಶವನ್ನು
ಅವರ ಅಹಂಕಾರಕ್ಕಾಗಿ ಹೀನೈಸಿಬಿಟ್ಟನು
ಅವರನ್ನು.
9 : ನಾಶಕ್ಕೆ ಗುರಿಯಾದ ಜನಾಂಗವನು ಆತ
ಕನಿಕರಿಸಲಿಲ್ಲ
ತಮ್ಮ ಪಾಪದಲ್ಲಿಯೆ ಆದರವರು ಸಂಹಾರ.
10 : ಆತ ದಂಡಿಸದೆ ಬಿಡಲಿಲ್ಲ ಆರು ಲಕ್ಷ
ಕಾಲಾಳುಗಳನ್ನು
ಕಠಿಣ ಹೃದಯಿಗಳಾಗಿದ್ದ ಆ ಜನರನ್ನು.
11 : ಒಬ್ಬನೇ ಹಠಮಾರಿಯಿದ್ದರೂ ಅವನನ್ನು
ಶಿಕ್ಷಿಸದಿದ್ದರೆ ಆಶ್ಚರ್ಯವಾಗುತ್ತಿತ್ತು !
ಕಾರಣ, ದೇವನಲ್ಲಿವೆ ಕೃಪೆಯೂ ಕೋಪವೂ;
ಅತಿ ಕನಿಕರವುಳ್ಳವನಾಗಿದ್ದರೂ
ಸುರಿದುಬಿಡುವನು ಕೋಪವನ್ನು.
12 : ಆತನಲ್ಲಿ ಅಧಿಕವಾಗಿದೆ ಕರುಣೆ;
ಅಂತೆಯೆ ಕಠಿಣವಾಗಿದೆ ದಂಡನೆ
ನ್ಯಾಯತೀರಿಸುವನಾತ ಅವನವನ ಕೃತ್ಯಗಳಿಗೆ
ತಕ್ಕಂತೆ.
13 : ತನ್ನ ಕೊಳ್ಳೆಯೊಂದಿಗೆ ಪಾರಾಗಲಾರ
ಪಾಪಿಯು
ವಿಫಲವಾಗದು ಭಕ್ತರ ಕಷ್ಟಸಹಿಷ್ಣುತೆಯು.
14 : ಪ್ರತಿಯೊಬ್ಬನಿಗೆ ಸಂಭಾವನೆ ದಕ್ಕುವುದು
ಅವನ ಕಾರ್ಯಕ್ಕನುಸಾರವಾಗಿ
ಪ್ರತಿಯೊಬ್ಬನು ಅನುಭವಿಸುವನು ತನ್ನ
ನಡತೆಗೆ ಸರಿಯಾಗಿ.
15 : ಸರ್ವೇಶ್ವರನಿಂದ ಫರೋಹನ ಹೃದಯ
ಕಠಿಣವಾಯಿತು
ಹೀಗೆ ವಿಶ್ವವು ದೇವರ ಮಹತ್ಕಾರ್ಯಗಳನ್ನು
ಅರಿತುಕೊಳ್ಳುವಂತಾಯಿತು.
16 : ಸೃಷ್ಠಿಸಮಸ್ತಕ್ಕೂ ದೇವರು ತನ್ನ
ಕರುಣೆಯನ್ನು ಪ್ರಕಟಿಸಿದ್ದಾರೆ
ಮಾನವನ ಮಧ್ಯೆ ಕತ್ತಲನ್ನೂ ಬೆಳಕನ್ನೂ
ಬೇರ್ಪಡಿಸಿದ್ದಾರೆ.
17 : ಪ್ರತಿಫಲ ನಿಶ್ಚಯ
‘ನಾನು ದೇವರಿಗೆ ಮರೆಯಾಗಿರುವೆ;
ಉನ್ನತದಲ್ಲಿ ನನ್ನನು ನೆನೆಸುವನಾರು?
ಗಣನಾತೀತ ಜನಸಂದಣಿಯಲಿ ನನ್ನನು
ಗುರುತಿಸಬಲ್ಲವರಾರು?
ಮೇರೆಯಿಲ್ಲದ ಸೃಷ್ಟಿಯಲಿ ನನ್ನ ಆತ್ಮವು
ಮಾತ್ರ ಎಷ್ಟರದು?’
ಈ ಪರಿಯೆಲ್ಲ ನೀನು ಹೇಳಿಕೊಳ್ಳದಿರು.
18 : ಕದಲುವುದು ಆಕಾಶ, ಆಕಾಶಗಳ ಆಕಾಶ
ಭೂಮಿ, ಸಾಗರ;
ದೇವರು ಪ್ರತ್ಯಕ್ಷವಾಗುವಾಗ.
19 : ಆತ ನೋಡುವಾಗ ಗಡಗಡನೆ
ನಡುಗುವುವು
ಬೆಟ್ಟಗಳೂ ಭೂಮಿಯ ಅಸ್ತಿಭಾರವೂ.
20 : ಯಾವ ಹೃದಯವೂ ಆಲೋಚಿಸುವುದಿಲ್ಲ
ಈ ವಿಷಯಗಳನು
ಗ್ರಹಿಸುವವನಾರು ಆತನ ರೀತಿನೀತಿಗಳನು?
21 : ಬಿರುಗಾಳಿ ಒಂದುಂಟು; ಅದನ್ನು ಯಾವ
ಮನುಷ್ಯನೂ ಕಂಡಿಲ್ಲ
ದೇವರ ಕಾರ್ಯದ ಬಹುಭಾಗ
ಕಣ್ಣಿಗೆ ಕಾಣುವುದಿಲ್ಲ.
22 : ಆತನ ನೀತಿಕಾರ್ಯಗಳನ್ನು ಯಾರಿಂದ
ಮೆಚ್ಚಿಕೊಳ್ಳಲು ಸಾಧ್ಯ?
ಅದಕ್ಕಾಗಿ ಯಾರು ತಾನೇ ಕಾದುಕೊಂಡಿರಲು
ಸಾಧ್ಯ?
ಆತನ ಒಪ್ಪಂದ ಈಡೇರುವ ಕಾಲ
ಇನ್ನೂ ದೂರವಿದೆಯಲ್ಲಾ?
23 : ಇಂಥ ಮಾತುಗಳನ್ನೆಲ್ಲ ತಲೆಯಲಿ
ತುಂಬಿಕೊಳ್ಳುವವನು ಬುದ್ಧಿಹೀನನು
ಹೀಗೆಲ್ಲಾ ಹುಚ್ಚುಹುಚ್ಚಾಗಿ
ಆಲೋಚಿಸುತ್ತಿರುವನು ಅವನು.
24 : ಸೃಷ್ಟಿಯಲ್ಲಿ ದೇವರ ಸುಜ್ಞಾನ
ಮಗನೇ, ವಿವೇಕಿಯಾಗು ನನ್ನ ಮಾತನ್ನಾಲಿಸು
ಪೂರ್ಣಮನಸ್ಸಿನಿಂದ ನನ್ನ ಮಾತುಗಳನ್ನು
ಗಮನಿಸು.
25 : ಸುಶಿಕ್ಷಣವನ್ನು ತಿಳಿಯಪಡಿಸುವೆನು
ಸಮತೂಕವಾಗಿ
ಜ್ಞಾನವನ್ನು ತಿಳಿಸಿಕೊಡುವೆನು
ಯಥಾರ್ಥವಾಗಿ.
26 : ದೇವರ ಕಾರ್ಯಗಳು ನ್ಯಾಯವಾಗಿವೆ
ಆರಂಭದಿಂದಲೇ
ಅವುಗಳ ಭಾಗೋಪಭಾಗಗಳನ್ನು
ವಿಂಗಡಿಸಿಹನು ನಿರ್ಮಾಣ ಕಾಲದಿಂದಲೇ.
27 : ಎಂದೆಂದಿಗೂ ನಿಲ್ಲದಂತೆ ಕ್ರಮಪಡಿಸಿರುವನು
ತನ್ನ ಕಾರ್ಯಗಳನ್ನೆಲ್ಲ
ಅವುಗಳಿಗೆ ಹಸಿವು-ದಣಿವುಗಳಿಲ್ಲ;
ತಮ್ಮ ಕೆಲಸವನ್ನು ಅವು ನಿಲ್ಲಿಸುವುದಿಲ್ಲ.
28 : ಒಂದು ಇನ್ನೊಂದನ್ನು ದೂಡುವುದಿಲ್ಲ
ಆತನ ಅಪ್ಪಣೆಯನ್ನು ಎಂದೂ
ಉಲ್ಲಂಘಿಸುವುದಿಲ್ಲ.
29 : ಆಮೇಲೆ ದೇವರು ಭೂಮಿಯನ್ನು
ಕಟಾಕ್ಷಿಸಿದರು
ಅದನ್ನು ಸಕಲ ಸೌಭಾಗ್ಯದಿಂದ ತುಂಬಿಸಿದರು.
30 : ಎಲ್ಲಾ ತರದ ಜೀವಜಂತುಗಳು ತುಂಬಿ
ಕೊಂಡವು ಅದರೊಳಗೆ
ಕೊನೆಗೆ ಅವು ಮರಳಿ ಮಣ್ಣಾಗಿ ಸೇರುವುವು
ಅದರಲ್ಲೆ.