Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ದೇವರಿಗೆ ಭಯಪಡುವವನೇ ಹೀಗೆ ಮಾಡುವವನು ಧರ್ಮನಿಷ್ಟೆಯುಳ್ಳವನು ಸುಜ್ಞಾನವನ್ನು ಪಡೆಯುವನು.
2 : ಅದು ಅವನನ್ನು ಸೇರಿಕೊಳ್ಳುವುದು ತಾಯಿಯಂತೆ ಅವನಿಗೆ ಉಪಚಾರಮಾಡುವುದು ತರುಣ ಸತಿಯಂತೆ.
3 : ಅವನಿಗೆ ವಿವೇಕವೆಂಬ ಅನ್ನವನ್ನು ಉಣ್ಣಕೊಡುವುದು ಜ್ಞಾನಜಲವನ್ನು ಕುಡಿಯಕೊಡುವುದು.
4 : ಅವನು ಅದರಲ್ಲಿ ನೆಲೆಗೊಂಡಿರುವನು, ಕದಲುವುದಿಲ್ಲ; ಅದನ್ನೇ ಆತುಕೊಂಡಿರುವವನು, ಆಶಾಭಂಗಪಡುವುದಿಲ್ಲ.
5 : ಅವನ ನೆರೆಮನೆಯವರಿಗಿಂತಲೂ ಹೆಚ್ಚಾಗಿ ಅದು ಅವನನ್ನು ಮೇಲಕ್ಕೆತ್ತುವುದು ಸಭಾಮಧ್ಯದಲ್ಲಿ ಅವನು ಬಾಯಿತೆರೆಯುವಂತೆ ಮಾಡುವುದು.
6 : ಅವನು ಆನಂದ ಆಮೋದಗಳನ್ನು ಹೊಂದುವನು ಚಿರಕಾಲ ಹೆಸರುವಾಸಿಯಾಗಿ ಬಾಳುವನು.
7 : ಅದನ್ನು ಹೊಂದಲಾರರು ಮಂದಮತಿಗಳು ಅದನ್ನು ಕಾಣುವುದೇ ಇಲ್ಲ ಪಾಪಾತ್ಮರು.
8 : ಅಹಂಕಾರಕ್ಕೆ ಅದು ಬಲು ದೂರ ಸುಳ್ಳುಗಾರರು ಅದನ್ನು ಸ್ಮರಿಸುವುದೇ ಇಲ್ಲ.
9 : ಪಾಪಾತ್ಮನ ಬಾಯಿಂದ ಹೊರಟ ಸ್ತುತಿ ಇಂಪಾಗಿರುವುದಿಲ್ಲ ಏಕೆಂದರೆ ಅದು ಅವನಿಗೆ ದೇವರಿಂದ ಬಂದುದಲ್ಲ.
10 : ಜ್ಞಾನದಿಂದ ಮಾಡಿದ ಸ್ತುತಿ ಇಂಪು ಅದನ್ನು ವೃದ್ಧಿಗೊಳಿಸುವರು ದೇವರು.
11 : ‘ನನ್ನ ಪಾಪಕ್ಕೆ ದೇವರೇ ಕಾರಣ’ ಎಂದು ಕೊಳ್ಳಬೇಡ ಅವರು ಹಗೆಮಾಡುವುದನ್ನು ನೀನು ನಡೆಸಬೇಡ.
12 : ‘ತಪ್ಪುಮಾಡುವಂತೆ ನನಗೆ ದಾರಿ ತಪ್ಪಿಸಿದವರು ದೇವರೇ’ ಎನ್ನಬೇಡ ಏಕೆಂದರೆ ಪಾಪಾತ್ಮರ ನೆರವು ದೇವರಿಗೆ ಬೇಕಾಗಿಲ್ಲ.
13 : ಸರ್ವೇಶ್ವರ ಪ್ರತಿಯೊಂದು ಹೀನಕೃತ್ಯವನ್ನು ದ್ವೇಷಿಸುತ್ತಾರೆ ಆತನಿಗೆ ಭಯಪಡುವವರು ಕೂಡ ಅದನ್ನು ಹೀನೈಸುತ್ತಾರೆ.
14 : ಆದಿಯಲ್ಲಿ ದೇವರು ಮನುಷ್ಯನನ್ನು ಸೃಷ್ಟಿಸಿದರು ಸ್ವಂತ ಇಚ್ಛಾನುಸಾರ ನಡೆಯಲು ಅವನನ್ನು ಬಿಟ್ಟರು.
15 : ನೀನು ಇಚ್ಛಿಸಿದೆಯಾದರೆ ಆತನ ಆಜ್ಞೆಗಳನ್ನು ಅನುಸರಿಸಿ ನಡೆವೆ ಹೀಗೆ ನಂಬಿಗಸ್ಥನಾಗಿ ದೇವರ ಚಿತ್ತಾನುಸಾರ ಬಾಳುವೆ.
16 : ನಿನ್ನ ಮುಂದೆ ಇಟ್ಟಿರುವರು ಬೆಂಕಿಯನ್ನು ಹಾಗು ನೀರನ್ನು ನೀನು ಆಯ್ದುಕೊಳ್ಳಬಹುದು ನಿನಗೆ ಬೇಕಾದುದನ್ನು.
17 : ಜೀವನ್ಮರಣಗಳು ಇರಿಸಲಾಗಿವೆ ಮನುಷ್ಯನ ಎದುರಿನಲ್ಲೆ ಅವನು ಇಷ್ಟಪಟ್ಟದ್ದನ್ನು ಕೊಡಲಾಗುವುದು ಅವನಿಗೆ.
18 : ಏಕೆಂದರೆ ದೇವರ ಜ್ಞಾನ ಅಪರಿಮಿತ ಆತ ಅಪೂರ್ವ ಬಲವಂತ, ಎಲ್ಲವನು ವೀಕ್ಷಿಸುವಂಥವ.
19 : ದೇವರಿಗೆ ಭಯಪಡುವವರ ಮೇಲಿದೆ ಆತನ ಕೃಪಾಕಟಾಕ್ಷ ಮನುಷ್ಯನು ಮಾಡುವ ಪ್ರತಿಯೊಂದೂ ಆತನಿಗೆ ವ್ಯಕ್ತ.
20 : ದುರುಳನಾಗೆಂದು ದೇವರು ಯಾರಿಗೂ ಆಜ್ಞಾಪಿಸಲಿಲ್ಲ, ಪಾಪಮಾಡಲು ಯಾರಿಗೂ ಅನುಮತಿ ಕೊಟ್ಟಿಲ್ಲ.

· © 2017 kannadacatholicbible.org Privacy Policy