Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ನಿಜವಾದ ಆನಂದ ಧನ್ಯನು ! ತನ್ನ ಮಾತಿನಲಿ ಜಾರದವನು; ಅವನು ಪಶ್ಚಾತ್ತಾಪದ ಅವಶ್ಯಕತೆ ಇಲ್ಲದವನು.
2 : ಧನ್ಯನು ! ತನ್ನ ಮನಸ್ಸಾಕ್ಷಿಯಿಂದ ದೋಷಾರೋಪಣೆ ಹೊಂದದವನು; ಸರ್ವೇಶ್ವರನಲ್ಲಿಟ್ಟ ನಿರೀಕ್ಷೆಯಿಂದ ಆತ ತಪ್ಪಿಬೀಳನು.
3 : ಐಶ್ವರ್ಯ ತಕ್ಕುದಲ್ಲ ಜಿಪುಣನಿಗೆ ಹಣತೆಗೆದುಕೊಂಡರೆ ಪ್ರಯೋಜನವಿಲ್ಲ ಸ್ವಾರ್ಥಿಗೆ.
4 : ತನ್ನನ್ನು ತಾನೇ ಸವೆಸಿ ಕೂಡಿಡುವವನು, ಕೂಡಿಡುತ್ತಾನೆ ಪರರಿಗಾಗಿ ಅವರು ದುಂದುವೆಚ್ಚ ಮಾಡುತ್ತಾರೆ ಅವನ ಆಸ್ತಿಯನ್ನೇ ಬಳಸಿ.
5 : ತನಗೆ ತಾನೇ ಜಿಪುಣನಾಗಿರುವವನು ಯಾರಿಗೆ ತಾನೆ ಉದಾರಿಯಾಗಿರುತ್ತಾನೆ? ತನ್ನ ಸ್ವಂತ ಆಸ್ತಿಯಿಂದ ತಾನಾದರು ಸುಖಪಡುತ್ತಾನೆಯೇ?
6 : ತನಗೆ ತಾನೆ ಜಿಪುಣನಾಗಿರುವವನಿಗಿಂತ ನೀಚನಿಲ್ಲ ಇದು ಅವನ ದುಷ್ಟತನದ ಫಲ !
7 : ಇಂಥವನು ಒಳ್ಳೆಯದನ್ನು ಮಾಡಿದರೆ, ಅದು ಆಕಸ್ಮಿಕ ಕಡೆಗೆ ತನ್ನ ದುಷ್ಟತನವನ್ನು ಬಯಲು ಮಾಡುವುದು ದಿಟ.
8 : ಮತ್ಸರವುಳ್ಳವನ ಕಣ್ಣು ಕೆಟ್ಟದು ಇತರರನ್ನು ಹೀಯಾಳಿಸುವನವನು, ಮುಖ ತಿರುವಿಕೊಂಡು.
9 : ಜಿಪುಣನ ಕಣ್ಣಿಗೆ ಎಷ್ಟೇ ಇದ್ದರೂ ತೃಪ್ತಿಯಿಲ್ಲ ಜಿಪುಣತನದಿಂದ ಒಣಗಿಹೋಗುವುದು ಅವನ ಅಂತರಂಗ.
10 : ಕೆಟ್ಟ ಕಣ್ಣುಳ್ಳವನು ಅನ್ನದಲ್ಲಿಯೂ ಜಿಪುಣನು ಅವನು ಹೊಟ್ಟೆಗೆ ಸರಿಯಾಗಿ ಉಣ್ಣನು.
11 : ಮಗನೇ, ನಿನ್ನ ಯೋಗ್ಯತೆಯ ಪ್ರಕಾರ ಸುಖವಾಗಿರು ಸರ್ವೇಶ್ವರನಿಗೆ ಯೋಗ್ಯವಾದ ಕಾಣಿಕೆ ಸಲ್ಲಿಸುತ್ತಿರು.
12 : ನೆನೆಸಿಕೊ, ಸಾವು ಬರಲು ವಿಳಂಬ ಮಾಡುವುದಿಲ್ಲವೆಂದು ಸಾವಿನ ಸಮಯ ನಿನಗೆ ತಿಳಿದಿಲ್ಲವೆಂದು.
13 : ಸ್ನೇಹಿತರಿಗೆ ಸಹಾಯಮಾಡು ನೀನು ಸಾಯುವುದರೊಳಗಾಗಿ ಅವರಿಗೆ ಕೈಯೆತ್ತಿಕೊಡು ನಿನ್ನ ಶಕ್ತಿಗೆ ಅನುಸಾರವಾಗಿ.
14 : ಒಳ್ಳೆಯ ದಿನದ ಸುಖವನ್ನು ಕಳೆದುಕೊಳ್ಳಬೇಡ ಯೋಗ್ಯ ಮನದಾಶೆಯು ಓರೆಯಾಗಿ ಹೋಗಲು ಬಿಡಬೇಡ.
15 : ನಿನ್ನ ದುಡಿಮೆಯ ಫಲವನ್ನು ಇನ್ನೊಬ್ಬರಿಗೆ ಬಿಡಬೇಕಾಗುತ್ತದಲ್ಲವೆ? ನಿನ್ನ ಕಷ್ಟದ ಫಲವನ್ನು ಪರರು ಹಂಚಿಕೊಳ್ಳುವರಲ್ಲವೆ?
16 : ಕೊಡು, ಕೊಳ್ಳು; ಹೀಗೆ ಸಂತೋಷಪಡಿಸು ನಿನ್ನ ಮನವನ್ನು ಹುಡುಕಲಾಗದು ಮೃತ್ಯುಲೋಕದಲ್ಲಿ ಮೃಷ್ಟಾನ್ನವನ್ನು.
17 : ಎಲ್ಲ ಜೀವಿಗಳೂ ಮುಪ್ಪಾಗುವುವು ವಸ್ತ್ರದಂತೆ ಆದಿಯಿಂದ ಇರುವ ಒಪ್ಪಂದವೆಂದರೆ ‘ನೀ ಸತ್ತೇ ಸಾಯುವೆ’ ಎಂಬುದೆ.
18 : ಬೆಳೆದ ಮರದೆಲೆಗಳಲ್ಲಿ ಕೆಲವು ಉದುರುತ್ತವೆ, ಕೆಲವು ಚಿಗುರುತ್ತವೆ ರಕ್ತಮಾಂಸದ ಪ್ರಾಣಿಗಳಲ್ಲೂ ಒಂದು ಗತಿಸುತ್ತದೆ, ಮತ್ತೊಂದು ಜನಿಸುತ್ತದೆ.
19 : ಮಾನವ ಕೈಕೃತಿಗಳೆಲ್ಲ ಅಳಿದುಹೋಗುತ್ತವೆ ಜೀರ್ಣವಾಗಿ ಅವುಗಳನ್ನು ಮಾಡಿದವನೂ ಹೋಗುತ್ತಾನೆ ಲಯವಾಗಿ.
20 : ಸುಜ್ಞಾನಿಗಳ ಸಂತಸ ಧನ್ಯನು ! ಸುಜ್ಞಾನದ ಬಗ್ಗೆ ಧ್ಯಾನಿಸುವವನು ಧನ್ಯನು ! ವಿವೇಕದಿಂದ ಮಾತಾಡುವವನು.
21 : ಸುಜ್ಞಾನದ ಮಾರ್ಗಗಳನ್ನು ಮನನ ಮಾಡುವವನು ಅದರ ರಹಸ್ಯಗಳನ್ನು ಕಂಡುಕೊಳ್ಳುವನು.
22 : ಹೆಜ್ಜೆಯ ಜಾಡು ಹಿಡಿದು ಹೋಗುವವನಂತೆ ಅದನ್ನು ಬೆನ್ನಟ್ಟಿಹೋಗುವನು ಅದು ಹೋಗುವ ಮಾರ್ಗದಲ್ಲಿ ಅದಕ್ಕಾಗಿ ಹೊಂಚಿಕೊಂಡಿರುವನು.
23 : ಸುಜ್ಞಾನದ ಕಿಟಕಿಯಲ್ಲಿ ಆತ ಇಣಿಕಿ ನೋಡಬಲ್ಲನು ಅದರ ಬಾಗಿಲಲ್ಲಿಯೂ ನಿಂತು ಆಲಿಸಬಲ್ಲನು.
24 : ಸುಜ್ಞಾನದ ಮನೆಯ ಪಕ್ಕದಲ್ಲಿ ತಂಗುವವನು ಅದರ ಗೋಡೆಯಲ್ಲಿ ಮೊಳೆಯನ್ನು ಜಡಿಯಬಲ್ಲನು;
25 : ಸುಜ್ಞಾನದ ನೆರೆಯಲ್ಲಿ ಗುಡಾರವನ್ನು ಕಟ್ಟುವವನು ಸೌಭಾಗ್ಯವಿದ್ದಲ್ಲಿಯೇ ಇಳಿದುಕೊಳ್ಳುವನು.
26 : ತನ್ನ ಮಕ್ಕಳನ್ನು ಅದರ ಆಶ್ರಯದಲ್ಲಿರಿಸುವನು ಅದರ ಕೊಂಬೆಗಳ ಕೆಳಗೆ ವಸತಿಮಾಡುವನು.
27 : ಬಿಸಿಲು ತಗಲದಂತೆ ಅದರ ನೆರಳಿನಲ್ಲಿರುವನು ಅದರ ಪ್ರಭಾವದಲ್ಲಿ ತಂಗುವನು.

· © 2017 kannadacatholicbible.org Privacy Policy