1 : ಟಾರೆಣ್ಣೆ ಮುಟ್ಟುವವನು ಮೈಲಿಗೆ
ಆಗುವನು
ಅಂತೆಯೇ ಗರ್ವಿಯ ಜೊತೆ ಒಡನಾಟ
ಮಾಡುವವನು.
2 : ನಿನ್ನ ಶಕ್ತಿಮೀರಿ ಭಾರ ಹೊರಲು ಹೋಗಬೇಡ
ನಿನಗಿಂತ ಬಲವುಳ್ಳ ಸಿರಿವಂತನೊಂದಿಗೆ
ಗೆಳೆತನ ಬೇಡ;
ತಪ್ಪಲೆಗೂ ಗಡಿಗೆಗೂ ಸಂಬಂಧವೆಂತು!
ಒಂದಕ್ಕೊಂದು ತಾಕಲಾಡಿದರೆ ಗಡಿಗೆ
ಒಡೆಯುವುದು.
3 : ಸಿರಿವಂತನು ಅನ್ಯಾಯ ಮಾಡಿದ ಮೇಲೂ
ಬೆದರಿಸುವನು
ಬಡವನು ತನಗೆ ಅನ್ಯಾಯವಾಗದಿದ್ದರೂ
ಬೇಡಿಕೊಳ್ಳುವನು.
4 : ನಿನ್ನನ್ನು ಉಪಯೋಗಿಸಿಕೊಳ್ಳುವನು
ಅವನಿಗೆ ಲಾಭವಿರುವಾಗ
ನಿನ್ನನ್ನು ತೊರೆದುಬಿಡುವನು
ನಿನಗೆ ಕೊರತೆ ಬಂದಾಗ.
5 : ನಿನ್ನೊಂದಿಗೆ ಅವನಿರುವನು
ನೀನು ಅನುಕೂಲಸ್ಥನಾಗಿದ್ದರೆ
ನಿನ್ನಲ್ಲಿದ್ದುದನ್ನೆಲ್ಲ ಖರ್ಚು ಮಾಡಿಸುವನು
ಯಾವ ಚಿಂತೆಯಿಲ್ಲದೆ.
6 : ಅವನಿಗೆ ನಿನ್ನ ಅಗತ್ಯವಿದ್ದಾಗ
ನಿನ್ನನ್ನು ವಂಚಿಸುವನು
ನಸುನಗೆ ನಕ್ಕು ನಿನ್ನಲ್ಲಿ ನಿರೀಕ್ಷೆ ಹುಟ್ಟಿಸುವನು
‘ನಿನಗೇನು ಬೇಕು, ನನಗೆ ಹೇಳು’ ಎನ್ನುವನು.
7 : ನಿನ್ನಲ್ಲಿದ್ದುದನ್ನೆ ವ್ಯಯಮಾಡಿಸಿ ತನಗೆ
ಇಷ್ಟವಾದ ಊಟ ಮಾಡಿಸುವನು
ಪದೇ ಪದೇ
ನಿನ್ನನ್ನು ನಾಚಿಕೆಗೆ ಗುರಿಪಡಿಸಿ ನಿನಗೆ
ಪರಿಹಾಸ್ಯ ಮಾಡುವನು ಕಡೆಗೆ;
ಅನಂತರ ನಿನ್ನನ್ನು ಕಂಡೂಕಾಣದಂತೆ
ತಲೆಯಾಡಿಸಿ ನಡೆವನು ಓರೆಯಾಗೆ.
8 : ನೀನು ಮೋಸಹೋಗದಂತೆ
ಎಚ್ಚರಿಕೆಯಿಂದಿರು
ಮೂರ್ಖತನದಿಂದ ಆನಂದವನ್ನು
ಕೆಡಿಸಿಕೊಳ್ಳದಿರು.
ನಿನ್ನನು ಕರೆದಾಗ
ಪುನಃ ಪುನಃ ಅವನು ನಿನ್ನನ್ನು ಕರೆಯುವನು
ಹೀಗಾದಾಗ.
9 : ನಿರಾಸಕ್ತಿಯಿಂದಿರು ಮಹನೀಯನೊಬ್ಬ
ನಿನ್ನನು ಕರೆದಾಗ
ಪುನಃ ಪುನಃ ಅವನು ನಿನ್ನನ್ನು ಕರೆಯುವನು
ಹೀಗಾದಾಗ.
10 : ಅವನಿಗೆ ಒತ್ತಾಯ ಮಾಡಬೇಡ;
ಹಿಂದಕ್ಕೆ ದೂಡಿಯಾನು
ಅವನಿಂದ ಬಹುದೂರ ನಿಲ್ಲಬೇಡ;
ನಿನ್ನನ್ನು ಮರೆತುಬಿಟ್ಟಾನು.
11 : ಸರಿಸಮಾನನಂತೆ ಅವನೊಂದಿಗೆ ಮಾತಾಡಲು
ಹೋಗಬೇಡ
ಅವನ ದೀರ್ಘವಾದ ಮಾತುಗಳಲ್ಲಿ
ಭರವಸೆಯಿಡಬೇಡ.
ಏಕೆಂದರೆ, ದೀರ್ಘಮಾತಿನಿಂದ ನಿನ್ನನು
ಪರೀಕ್ಷಿಸುವನು
ನಗುನಗುತ್ತಲೇ ನಿನ್ನ ಗುಟ್ಟನ್ನು
ಅರಿತುಕೊಳ್ಳುವನು.
12 : ಹೇಳಿದ ಮಾತುಗಳನ್ನು ಗುಟ್ಟಾಗಿ ಇಡದವನಿಗೆ
ಕರುಣೆಯಿಲ್ಲ
ಅವನು ಕಷ್ಟಕೊಡಲೂ ಕಟ್ಟಿಹಾಕಲೂ
ಹಿಂಜರಿಯುವುದಿಲ್ಲ.
13 : ಗುಟ್ಟುಗಳನ್ನು ನಿನ್ನಲಿ ಇಟ್ಟುಕೊಂಡು ಬಹು
ಜಾಗ್ರತೆಯಿಂದಿರು
ನಿನ್ನ ವಿನಾಶದ ಅಪಾಯದೆಡೆಯಲ್ಲಿ
ನಡೆಯುತ್ತಿಯೆಂದು ತಿಳಿದಿರು.
14 : ನೀನು ಮಲಗಿರುವಾಗಲು ಇಂಥವುಗಳನ್ನು
ಕೇಳಿದರೆ, ಎದ್ದೇಳು
ನಿನ್ನ ಜೀವಮಾನದಲ್ಲೆಲ್ಲ ದೇವರನ್ನು ಪ್ರೀತಿಸಿ,
ರಕ್ಷಣೆಗಾಗಿ ಪ್ರಾರ್ಥಿಸು.
15 : ಸ್ವಜಾತಿಯ ಪ್ರಾಣಿಗಳು ಒಂದನ್ನೊಂದು
ಪ್ರೀತಿಸುವುದು ಸಹಜ
ಅಂತೆಯೆ ಪ್ರತಿಯೊಬ್ಬ ಮನುಷ್ಯ
ನೆರೆಯವನನ್ನು ಪ್ರೀತಿಸುವುದು ಸಹಜ.
16 : ಪ್ರಾಣಿಗಳೆಲ್ಲ ಜೊತೆಯಾಗುವುವು
ತಂತಮ್ಮ ಜಾತಿಯ ಪ್ರಾಣಿಗಳೊಂದಿಗೆ
ಅಂತೆಯೆ ಮನುಷ್ಯನೂ ಅಂಟಿಕೊಳ್ಳುವನು
ತನಗೆ ಸಮಾನವಾದವರಿಗೆ.
17 : ತೋಳಕ್ಕೂ ಕುರಿಮರಿಗೂ ಒಡನಾಟವೇನು?
ಅಂತೆಯೆ ಅಧರ್ಮಿಗೂ ಭಕ್ತನಿಗೂ
ಸಂಬಂಧವೇನು?
18 : ಕಿರುಬಕ್ಕೂ ನಾಯಿಗೂ ಒಡನಾಟವೇನು?
ಬಡವನಿಗೂ ಬಲ್ಲಿದನಿಗೂ ಸಮಾಧಾನವೇನು?
19 : ಕಾಡುಕತ್ತೆ ಕಾಡಿನಲ್ಲಿ ಸಿಂಹಕೆ
ಕೊಳ್ಳೆಯಾಗುವಂತೆ
ಬಡವರು ಬಲಿಯಾಗುವರು ಬಲ್ಲಿದರಿಗೆ.
20 : ಗರ್ವಿಯು ಹಗೆಮಾಡುವನು ನಮ್ರತೆಯನ್ನು
ಐಶ್ವರ್ಯವಂತರು ಹೀನೈಸುವರು ಬಡವರನ್ನು.
21 : ಐಶ್ವರ್ಯವಂತನು ಬಿದ್ದರೆ ಮಿತ್ರರು ಅವನನ್ನು
ಎತ್ತಿಹಿಡಿಯುವರು
ಬಡವನು ಬಿದ್ದರೆ, ಗೆಳೆಯರು ಅವನನ್ನು ಆಚೆಗೆ
ತಳ್ಳಿಬಿಡುವರು.
22 : ಐಶ್ವರ್ಯವಂತನು ಜಾರಿದರೆ ಅವನಿಗೆ
ಬಹುಜನ ಸಹಾಯಕರು
ಆಡಬಾರದ ಮಾತನ್ನಾಡಿದರೂ ಅವನಲ್ಲಿ
ತಪ್ಪು ಎಣಿಸರು;
ಬಡವನು ಜಾರಿದರೆ ಅವನನ್ನು ಗದರಿಸುವರು
ಅವನು ಸುಜ್ಞಾನವನ್ನೇ ನುಡಿದರೂ
ಅವನಿಗೆ ಯಾರೂ ಕಿವಿಗೊಡರು.
23 : ಐಶ್ವರ್ಯವಂತನು ಮಾತಾಡಿದಾಗ ಎಲ್ಲರೂ
ಸುಮ್ಮನಾಗುವರು
ಅವನು ಹೇಳಿದ್ದೆಲ್ಲವನ್ನು ಮುಗಿಲು
ಮುಟ್ಟುವವರೆಗೆ ಹೊಗಳುವರು.
ಬಡವನು ಮಾತಾಡಿದರೆ, ಹೇ ಇವನಾರು?
ಎನ್ನುವರು,
ಅವನು ಎಡವಿದರೆ, ಪೂರ್ತಿಯಾಗಿ ಬೀಳುವಂತೆ
ನೂಕಿಬಿಡುವರು.
24 : ಪಾಪವಿಲ್ಲದ ಐಶ್ವರ್ಯ ಒಳ್ಳೆಯದು
ದುರ್ಜನರ ಬಾಯಲ್ಲಿ ಬಡತನ ಕೆಟ್ಟದು.
25 : ಒಳ್ಳೆಯದಿರಲಿ, ಕೆಟ್ಟದ್ದಿರಲಿ ಹೃದಯ
ಅದರಂತೆ ಬದಲಾಗುತ್ತದೆ ಮನುಷ್ಯನ
ಮುಖಚರ್ಯ.
26 : ಹಸನ್ಮುಖವು ಉಲ್ಲಾಸ ಹೃದಯದ ಕುರುಹು
ಜ್ಞಾನೋಕ್ತಿಗಳನ್ನು ಹುಡುಕುವುದು ಮನಸ್ಸಿಗೆ
ಬೇಸರವು.