1 : ಪರೋಪಕಾರಕ್ಕೆ ನಿಯಮಗಳು
ಯಾರಿಗೋಸ್ಕರ ಎಂದು ನೋಡು,
ಸತ್ಕಾರ್ಯಮಾಡುವ ಮುಂದೆ
ಆಗ ಧನ್ಯವಾದ ದೊರಕುವುದು
ನಿನ್ನ ಸತ್ಕಾರ್ಯಕ್ಕೆ.
2 : ಭಕ್ತಿವಂತನಿಗೆ ಒಳ್ಳೇದನ್ನು ಮಾಡು;
ನಿನಗೆ ಪ್ರತಿಫಲ ಸಿಗುವುದು
ಅವನಿಂದ ಸಿಗದಿದ್ದರೂ ಮಹೋನ್ನತ
ನಿಂದಲಾದರೂ ಸಿಗುವುದು.
3 : ಯಾವ ಒಳಿತೂ ಗಿಟ್ಟದು
ಕೆಡುಕು ಮಾಡುವವನಿಗೆ
ಹಾಗೆಯೇ ದಾನಧರ್ಮಮಾಡಲು
ನಿರಾಕರಿಸಿದವನಿಗೆ.
4 : ಭಕ್ತನಿಗೆ ಕೊಡು;
ಪಾಪಾತ್ಮನಿಗೆ ನೆರವು ನೀಡಬೇಡ.
5 : ದೀನನಿಗೆ ಧಾರಾಳವಾಗಿ ಕೊಡು;
ಅಧರ್ಮಿಗೆ ಕೊಡಬೇಡ
ಹಿಂತೆಗೆದಿಡು ಅವನಿಗೆ ಕೊಡಬೇಕೆಂದಿರುವ
ರೊಟ್ಟಿಯನ್ನು ಕೂಡ.
ಏಕೆನೆ, ನಿನ್ನ ಮೇಲೆ ಅವನು ನಡೆಸ್ಯಾನು
ದೊರೆತನ
ನೀನು ಮಾಡಿದ ಉಪಕಾರಕ್ಕೆ ಹೊಂದುವೆ
ಇಮ್ಮಡಿ ಅಪಕಾರ.
6 : ಪರಾತ್ಪರನು ಪಾಪಿಗಳನ್ನು ದ್ವೇಷಿಸುತ್ತಾನೆ
ಭಕ್ತಿಹೀನರಿಗೆ ಮುಯ್ಯಿತೀರಿಸುತ್ತಾನೆ.
7 : ಸಜ್ಜನರಿಗೆ ಕೊಡು
ದುರ್ಜನರಿಗೆ ಸಹಾಯ ಮಾಡದಿರು.
ನೈಜ ಹಾಗೂ ಕಪಟ ಸ್ನೇಹಿತರ ಗುಣಲಕ್ಷಣಗಳು
8 : ಮಿತ್ರನ ಪರೀಕ್ಷೆಯಾಗುವುದಿಲ್ಲ ಸುಖದಲ್ಲಿ
ಶತ್ರುವು ಸಿಕ್ಕಿಬೀಳುವನು ದುಃಖದಲ್ಲಿ.
9 : ವೈರಿಗಳು ವ್ಯಸನಪಡುವರು ಒಬ್ಬನು
ಸಮೃದ್ಧಿಯಲ್ಲಿರುವಾಗ
ಇದ್ದ ಗೆಳೆಯನೂ ದೂರವಾಗುವನು
ಅವನು ಬಡವನಾಗುವಾಗ.
10 : ನಂಬಬೇಡ ವೈರಿಯನ್ನು ಎಂದೂ
ಅವನ ಕೆಡುಕು ತಾಮ್ರಕ್ಕೆ ಹತ್ತುವ ಕಿಲುಬು.
11 : ಅವನು ತನ್ನನು ತಗ್ಗಿಸಿಕೊಂಡರೂ,
ನೆಲ ಕಚ್ಚಿಕೊಂಡರೂ
ಅವನ ವಿಷಯದಲ್ಲಿ ಜೋಕೆಯಾಗಿರು,
ಎಚ್ಚರಿಕೆಯಿಂದಿರು;
ಕನ್ನಡಿ ಒರೆಸಿದವನಂತೆ ಅವನೊಡನೆ ವರ್ತಿಸು
ಆಗ ತಿಳಿಯುವೆ ಅವನ ಕಿಲುಬಿನಿಂದ
ಕನ್ನಡಿ ಮಾಸಲಿಲ್ಲವೆಂದು.
12 : ಇರಿಸಿಕೊಳ್ಳಬೇಡ ಅವನನ್ನು ನಿನ್ನೊಂದಿಗೆ
ನಿನ್ನ ತಳ್ಳಿ ನಿಂತುಕೊಂಡಾನು ನಿನ್ನ ಸ್ಥಳದಲ್ಲೆ;
ಅವನನ್ನು ಕುಳ್ಳಿರಿಸಬೇಡ ನಿನ್ನ ಬಲಗಡೆಯಲ್ಲೆ
ಆಕ್ರಮಿಸಿಕೊಂಡಾನು ನಿನ್ನ ಆಸನವನ್ನೆ;
ಕಡೆಗೆ ನನ್ನ ಮಾತುಗಳು ನೆನಪಾಗಲು ನಿನಗೆ
ಇರಿದಂತಾಗುವುದು ನಿನ್ನ ಎದೆ.
13 : ಸಂತಾಪಪಡುವರೆ ಹಾವಾಡಿಗನಿಗೆ
ಹಾವು ಕಚ್ಚಿದರೆ?
ಕಾಡುಮೃಗಗಳನ್ನು ಪಳಗಿಸುವವನಿಗೆ
ಅವು ಕಚ್ಚಿದರೆ?
14 : ಅಂತೆಯೇ ಪಾಪಾತ್ಮನ ಜೊತೆ ಸೇರಿದವರು
ಅವನ ಪಾಪದಲ್ಲಿ ಪಾಲುಗೊಂಡವರು.
15 : ನಿನ್ನ ಬಳಿ ಇರುವನು ಅವನು ಕೆಲಕಾಲ
ನಿನ್ನ ಬಳಿ ನಿಲ್ಲನು ನೀನು ಪತನವಾಗುವಾಗ.
16 : ವೈರಿ ಆಡುವುದು ಸವಿಮಾತು
ನಿನ್ನನ್ನು ಹಳ್ಳಕ್ಕೆ ತಳ್ಳುವುದೇ ಅವನ ಮಸಲತ್ತು.
ಅಳಬಹುದು ಅವನು ಕಣ್ಣಿನಿಂದ
ಸಮಯ ಬಂದಾಗ ತೃಪ್ತನಾಗನು
ರಕ್ತಪಾತದಿಂದ ಕೂಡ.
17 : ನಿನಗೆ ಬಡತನ ಬಂದಾಗ ನೀನು ಮೊದಲು
ಕಾಣುವುದು ಇವನನ್ನೆ
ನಟಿಸುವನವನು ನಿನಗೆ ನೆರವಾಗುವವನಂತೆ
ಸಮಯ ಕಾಯುತ್ತಿರುವನು ನಿನ್ನನು
ಕೆಡವುದಕ್ಕೆ.
18 : ಅವನು ತಲೆ ಅಲ್ಲಾಡಿಸುವನು, ಚಪ್ಪಾಳೆ
ತಟ್ಟುವನು
ಪಿಸುಮಾತಾಡುವನು, ಮುಖಭಾವವನ್ನು
ಬದಲಿಸುವನು.