1 : ಆಡಳಿತಗಾರರು
ಜ್ಞಾನಿಯಾದ ಅಧಿಪತಿಯಿಂದ
ಜನರಿಗೆ ದೊರಕುವುದು ಶಿಕ್ಷಣ
ವಿವೇಕಿಯಾದವನ ಆಡಳಿತ ಕ್ರಮಬದ್ಧ.
2 : ಜನಾಧಿಪತಿ ಇದ್ದಂತೆ ಅವನ ಉದ್ಯೋಗಸ್ಥರು
ಗ್ರಾಮಾಧಿಕಾರಿಯಂತೆ ಊರಜನರು.
3 : ಪ್ರಜೆಗಳು ನಾಶವಾಗುತ್ತಾರೆ
ಶಿಸ್ತು ಇಲ್ಲದ ಅರಸನಿಂದ
ರಾಷ್ಟ್ರವು ಅಭಿವೃದ್ಧಿ ಹೊಂದುತ್ತದೆ
ಅಧಿಕಾರಿಗಳ ವಿವೇಕದಿಂದ.
4 : ಜಗತ್ತಿನ ಮೇಲೆ ಅಧಿಕಾರ ಇರುವುದು
ದೇವರ ಕೈಯಲ್ಲಿ
ತಕ್ಕ ಅಧಿಕಾರಿಗಳನ್ನು ಒದಗಿಸುವನವನು
ಸೂಕ್ತ ಸಮಯದಲ್ಲಿ.
5 : ಮಾನವರ ಏಳಿಗೆ ದೇವರ ಕೈಯಲ್ಲಿದೆ
ನೀಡುವನಾತ ಅಧಿಕಾರಿಗಳಿಗೆ ತಕ್ಕ
ಮರ್ಯಾದೆ.
6 : ಅಹಂಕಾರ
ನಿನ್ನ ನೆರೆಯವನು ಮಾಡುವ ಪ್ರತೀ ತಪ್ಪಿಗೂ
ಮುನಿಸಿಕೊಳ್ಳಬೇಡ
ಬಲಾತ್ಕಾರದಿಂದ ಯಾವುದನ್ನೂ ಮಾಡಬೇಡ.
7 : ಹೇಯವಾದುದು ಅಹಂಕಾರ
ದೇವ-ಮಾನವರ ದೃಷ್ಟಿಯಲ್ಲಿ
ಹೀಗೆ ಇಮ್ಮಡಿಯಾದುದು ಅಹಂಕಾರಿ
ಮಾಡುವ ಹಾನಿ.
8 : ಅಧರ್ಮ, ಬಲಾತ್ಕಾರ, ಹಾಗು ಹಣ
ಇವುಗಳಿಂದ ಅಧಿಕಾರ ತಪ್ಪಿಹೋಗುತ್ತದೆ
ಹೀಗೆ ಅಧಿಪತ್ಯ ಮತ್ತೊಂದು ರಾಷ್ಟ್ರದ
ಕೈಸೇರುತ್ತದೆ.
9 : ಮಣ್ಣು, ಬೂದಿ ಆಗಿರುವ ಮಾನವ
ಉಬ್ಬಿಕೊಳ್ಳುವುದೆಂತು?
ಅವನು ಬದುಕಿರುವಾಗಲೇ ಕರುಳು ಕೊಳೆತು
ಹೋಗುವುದುಂಟು.
10 : ದೀರ್ಘವಾದ ರೋಗದಿಮದ ವೈದ್ಯನೂ
ಸಮಸ್ಯೆಗೀಡಾಗುವನು
ಇಂದು ಅರಸನಾದವನು ನಾಳೆ ಶವವಾಗುವನು
ಸತ್ತಮೇಲೆ ಮನುಷ್ಯನು ಕ್ರಿಮಿಕೀಟ, ಮೃಗಗಳ
ಪಾಲಾಗುವನು.
11 : ದೀರ್ಘವಾದ ರೋಗದಿಮದ ವೈದ್ಯನೂ
ಸಮಸ್ಯೆಗೀಡಾಗುವನು
ಇಂದು ಅರಸನಾದವನು ನಾಳೆ ಶವವಾಗುವನು
ಸತ್ತಮೇಲೆ ಮನುಷ್ಯನು ಕ್ರಿಮಿಕೀಟ, ಮೃಗಗಳ
ಪಾಲಾಗುವನು.
12 : ಅಹಂಕಾರ ಅಂಕುರಿಸುವುದು, ಮಾನವನು
ದೇವರನ್ನು ಬಿಟ್ಟ ದಿನವೇ
ಅವನ ಆತ್ಮ ತನ್ನ ನಿರ್ಮಾಪಕನನ್ನು ಬಿಟ್ಟು
ತೊಲಗಿದೆ ಆಗಾಗಲೇ.
13 : ಅಹಂಕಾರವೇ ಪಾಪದ ಒರತೆ
ಅಹಂಕಾರ ಪೀಡಿತನು ಹರಡುವುದು
ಹೊಲೆಯನ್ನೆ;
ಎಂತಲೆ ದೇವರು ಅಧಿಕ ವಿಪತ್ತನು ಹೇರುವರು
ಅವನ ಮೇಲೆ
ಹೀಗೆ ಅವನನ್ನು ಧ್ವಂಸಮಾಡುವರು
ಸಂಪೂರ್ಣವಾಗಿಯೆ.
14 : ಸರ್ವೇಶ್ವರ ಉರುಳಿಸುವನು ಗದ್ದುಗೆಯಿಂದ
ಅಧಿಕಾರಿಗಳನು
ಅವರ ಸ್ಥಾನಕ್ಕೆ ಏರಿಸಿರುವನು ದೀನದಲಿತರನು.
15 : ಬೇರುಸಹಿತ ಕಿತ್ತೊಗೆದನು ಜನಾಂಗಗಳನು
ತಂದಿರಿಸಿದನು ಅವರ ಸ್ಥಳದಲ್ಲಿ ದೀನರನು.
16 : ಆತನು ಜನಾಂಗಗಳ ಸೊತ್ತನ್ನು ಅಳಿಸಿಹನು
ಭೂತಳದವರೆಗೂ ಅವರನ್ನು
ನಾಶಮಾಡಿಹನು.
17 : ಅವರಲ್ಲಿ ಕೆಲವರನ್ನು ತೆಗೆದು ಹಾಕಿ,
ನಾಶಮಾಡಿದನು
ಭೂಮಿಯಲ್ಲಿ ಅವರ ಹೆಸರೇ ಇಲ್ಲದಂತೆ
ಮಾಡಿದನು.
18 : ಅಹಂಕಾರ ಮಾನವನಿಗೋಸ್ಕರ
ಉಂಟಾದುದಲ್ಲ
ಮಿತಿಮೀರಿದ ಕೋಪ, ಸ್ತ್ರೀಯಿಂದ
ಜನಿಸಿದವರಿಗಲ್ಲ.
19 : ಗೌರವಾನ್ವಿತರು
ಸನ್ಮಾನವುಳ್ಳ ಸಂತತಿ ಎಂಥದು? ಮಾನವ
ಸಂತತಿಯೇ;
ಸನ್ಮಾನವುಳ್ಳ ಜನರು ಎಂಥವರು? ದೇವನಿಗೆ
ಅಂಜುವವರೇ.
ಸನ್ಮಾನಹೀನ ಸಂತತಿ ಎಂಥದು? ಮಾನವ
ಸಂತತಿಯೇ;
ಈ ಸನ್ಮಾನಹೀನ ಜನರು ಎಂಥವರು?
ದೈವಾಜ್ಞೆಗಳ ಮೀರುವವರೇ.
20 : ಸಹೋದರರಲ್ಲಿ ಸನ್ಮಾನ ಸಲ್ಲುವುದು
ಹಿರಿಯನಿಗೆ
ದೇವರ ದೃಷ್ಟಿಯಲ್ಲಿ ಸನ್ಮಾನ ಪಾತ್ರರು
ಆತನಿಗೆ ಅಂಜುವವರೇ.
21 : ಸರ್ವೇಶ್ವರನಲ್ಲಿನ ಭಯಭಕ್ತಿ ಏಳಿಗೆಗೆ
ಮೂಲ
ಒರಟುತನ ಹಾಗು ಅಹಂಕಾರ
ತಿರಸ್ಕಾರಕ್ಕೆ ಮೂಲ.
22 : ಬಲ್ಲಿದವನಾಗಲೀ, ಪೂಜ್ಯನಾಗಲೀ,
ಬಡವನಾಗಲೀ
ಅವರ ಹೆಚ್ಚಳ ಇರುವುದು ದೇವರಿಗೆ
ಭಯಪಡುವುದರಲ್ಲಿ.
23 : ವಿವೇಕಿಯಾದ ಬಡವನನ್ನು ಅವಮಾನ
ಪಡಿಸುವುದು ಸರಿಯಲ್ಲ
ಪಾಪಾತ್ಮನಿಗೆ ಮೇರೆ ಮರ್ಯಾದೆ ಸಲ್ಲಿಸುವುದು
ತರವಲ್ಲ.
24 : ದೊಡ್ಡ ವ್ಯಕ್ತಿ, ನ್ಯಾಯಮೂರ್ತಿ, ಶಕ್ತಿಶಾಲಿ,
ಇವರು ಸನ್ಮಾನ ಪಡೆಯಬಹುದು
ಆದರೆ, ದೇವಭಯವಿರುವವನಿಗಿರುವಷ್ಟು
ಮೇರೆಮರ್ಯಾದೆ ಇವರಿಗಿರದು.
25 : ಸ್ವತಂತ್ರ ಪ್ರಜೆಗಳು ಕಾದಿರುವರು ಬುದ್ಧಿವಂತ
ಸೇವಕನಿಗಾಗಿ
ಗೊಣಗುಟ್ಟಲಾರರು ವಿವೇಕಿಗಳು ಇದನ್ನು
ನೋಡಿ.
26 : ದೀನತೆ-ಸರಳತೆ
ನಿನ್ನ ಉದ್ಯೋಗದಲ್ಲಿ ಅತೀವ ಜಾಣತನ
ತೋರಿಸಬೇಡ
ಇಕ್ಕಟ್ಟಿಗೊಳಗಾದಾಗ ಆಷಾಡಭೂತಿ
ಯಾಗಬೇಡ.
27 : ಹೊಟ್ಟೆಗಿಲ್ಲದ ಡಾಂಭಿಕನಿಗಿಂತಲು
ದುಡಿದುಣ್ಣುವ ಗೃಹಸ್ಥನೇ ಮೇಲು.
28 : ಮಗನೇ, ನಿನ್ನ ಸ್ವಾಭಿಮಾನದ ಬಗ್ಗೆ
ನಮ್ರತೆಯಿರಲಿ
ಸ್ವಾಭಿಮಾನ ನಿನ್ನ ಘನತೆಗೆ
ಅನುಗುಣವಾಗಿರಲಿ.
29 : ತನ್ನ ಆತ್ಮದ ವಿರುದ್ಧ ಪಾಪಮಾಡುವವನನ್ನು
ನೀತಿವಂತನೆಂದು ಹೇಳುವರೇ?
ತನ್ನ ಬಾಳನ್ನು ಅವಮಾನಪಡಿಸಿ
ಕೊಳ್ಳುವವನನ್ನು ಯಾರಾದರೂ
ಗೌರವಿಸುವರೇ?
30 : ಬಡವನಿಗೆ ಅವನ ಜ್ಞಾನದಿಂದಲೇ ಗೌರವ
ಸಿರಿವಂತನಿಗೆ ಅವನ ಸಿರಿಯಿಂದಲೇ ಸನ್ಮಾನ.
31 : ಬಡತನದಲ್ಲಿ ಒಬ್ಬ ಸನ್ಮಾನಪಾತ್ರನಾದರೆ,
ಸಿರಿಬಂದಾಗ ಇನ್ನೆಷ್ಟಾದಾನು?
ಐಶ್ವರ್ಯದಲ್ಲಿ ಮಾನಗೆಟ್ಟವನು ಬಡತನ
ಬಂದಾಗ ಇನ್ನೆಷ್ಟಾದಾನು?