1 : ‘ಸುಜ್ಞಾನ’ ಎಂಬುದೆಲ್ಲವೂ ಬರುವುದು
ಸರ್ವೇಶ್ವರನಿಂದಲೆ
ನಿತ್ಯಕ್ಕೂ ಅದಿರುವುದು ಆತನ ಬಳಿಯಲ್ಲೇ.
2 : ಎಣಿಸಬಲ್ಲವನಾರು ಕಡಲ ಮರಳಿನ ಕಣಗಳನು
ಮಳೆಯ ಹನಿಗಳನು, ಅನಂತಕಾಲದ
ದಿನಗಳನು?
3 : ಅಳೆಯಬಲ್ಲವನಾರು ಆಕಾಶದ ಎತ್ತರವನು,
ಭೂಮಿಯ ಉದ್ದಗಲವನು, ಪಾತಾಳದ
ಆಳವನು?
ಅಂತೆಯೇ ಸುಜ್ಞಾನದ ನೆಲೆಯನು?
4 : ಸೃಷ್ಟಿಯಾಯಿತು ಸುಜ್ಞಾನ ಸಕಲಕ್ಕೂ
ಮೊದಲೇ
ವಿವೇಚನಾಗ್ರಹಿಕೆ ಕಾಲಕ್ಕೆ ಮುಂಚೆಯೇ.
5 : ಉನ್ನತ ಸ್ವರ್ಗದ ದೇವರ ವಾಣಿಯೇ
ಸುಜ್ಞಾನದ ಮೂಲ
ಆತನ ಶಾಶ್ವತವಾದ ಆಜ್ಞೆಗಳೇ ಅದರ
ಮಾರ್ಗ.
6 : ಬಯಲಾಯಿತೆ ಸುಜ್ಞಾನದ ಮೂಲ
ಯಾರಿಗಾದರೂ?
ಅರಿತಿರುವರೆ ಅದರ ಭವ್ಯ ಕಲ್ಪನೆಗಳನು
ಯಾರಾದರೂ?
7 : ಪ್ರಕಟವಾಯಿತೆ ಸುಜ್ಞಾನದ ಅರಿವು
ಯಾರಿಗಾದರೂ?
ಗ್ರಹಿಸಿರುವರೆ ಅದರ ಮಾರ್ಗಗಳನು
ಯಾರಾದರೂ?
8 : ಸುಜ್ಞಾನಿ ಒಬ್ಬನಿಹನು; ಆತನು ಅತ್ಯಂತ
ಭಯಂಕರನು
ಆತನೇ ಸಿಂಹಾಸನಾರೂಢನಾಗಿರುವ
ಸರ್ವೇಶ್ವರನು.
9 : ಸುಜ್ಞಾನವನ್ನು ನಿರ್ಮಿಸಿದಾಗ ಸರ್ವೇಶ್ವರನೇ
ಅದನ್ನು ವೀಕ್ಷಿಸಿ ತೂಕಮಾಡಿದಾತ ಆತನೇ
ಅದನ್ನು ಸುರಿಸಿದನು ಸಮಸ್ತ ಸೃಷ್ಟಿ
ಕಾರ್ಯಗಳ ಮೇಲೆ.
10 : ಸಕಲ ಜೀವಿಗಳಲಿ ನೆಲೆಸುವುದದು ಆತನ
ಇಚ್ಛೆಯಂತೆ
ದಯಪಾಲಿಸಿರುವನದನ್ನು ಹೇರಳವಾಗಿ
ಆತನನ್ನು ಪ್ರೀತಿಸುವವರಿಗೆ.
ದೇವರಲ್ಲಿ ಭಯಭಕ್ತಿ
11 : ದೇವರಲ್ಲಿ ಭಯಭಕ್ತಿಯು ತರುತ್ತದೆ ಮಹಿಮೆ,
ಗೌರವ,
ಸಂತೋಷ, ಪರಮಾನಂದದ ಮುಕುಟ.
12 : ದೇವಭಯದಿಂದ ಅರಳುತ್ತದೆ ಅಂತರಂಗ,
ಅದು ಬೀರುತ್ತದೆ ಹರ್ಷ ಹಾಗು
ದೀರ್ಘಾನಂದ.
13 : ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಿಗೆ
ಕಾದಿದೆ ಶುಭಾಂತ್ಯ
ಮರಣ ದಿನದಲ್ಲಿ ಲಭಿಸುವುದು
ದಯೆದಾಕ್ಷಿಣ್ಯ.
14 : ದೇವರಲ್ಲಿ ಭಯಭಕ್ತಿಯೇ ಜ್ಞಾನದ ಉದಯ
ನಂಬಿಕಸ್ಥರಿಗೆ ಅದರ ಉಗಮಸ್ಥಾನ
ತಾಯಿಯ ಉದರ.
15 : ಮಾನವರಲ್ಲಿದೆ ಅದರ ನಿತ್ಯ ನಿವಾಸ
ಅವರ ಸಂತಾನದ ನೆಚ್ಚಿಗೆಗೆ ಅದು ಯೋಗ್ಯ.
16 : ದೇವ ಭಯಭಕ್ತಿಯಿಂದ ಜ್ಞಾನಸಿದ್ಧಿ
ಅದರ ಸತ್ಫಲಗಳಿಂದ ತೃಪ್ತಿ.
17 : ತುಂಬುವುದದು ಭಕ್ತರ ಗೃಹಗಳನ್ನು
ಒಳ್ಳೇವಸ್ತುಗಳಿಂದ
ಅವರ ಉಗ್ರಾಣಗಳನ್ನು ತನ್ನ ಉತ್ಪನ್ನದಿಂದ.
18 : ದೇವರಲ್ಲಿ ಭಯಭಕ್ತಿಯೇ ಸುಜ್ಞಾನದ
ಶಿರೋಮಣಿ
ಸೊಂಪಾಗಿ ಬೆಳೆಯುವುವು ಅದರಿಂದ
ಶಾಂತಿ ಸಮೃದ್ಧಿ.
19 : ಸರ್ವೇಶ್ವರನು ವೀಕ್ಷಿಸಿ ಅದನ್ನು
ಪರೀಕ್ಷಿಸಿರುವನು
ಮಳೆಗರೆದನು ಕೌಶಲ್ಯವನು, ಗ್ರಹಿಕೆಯನು
ಅಧಿಕರಿಸಿಹನು ಅದನಪ್ಪಿಕೊಂಡವರ
ಗೌರವವನು.
20 : ಸರ್ವೇಶ್ವರನಲಿ ಭಯಭಕ್ತಿಯೇ ಸುಜ್ಞಾನದ
ಮೂಲವು
ದೀರ್ಘಾಯುಸ್ಸೇ ಅದರ ಕೊಂಬೆಯು.
21 : ಸರ್ವೇಶ್ವರನ ಭಯ ತೊಲಗಿಸುವುದು
ಪಾಪವನು
ಅದಿರುವ ಎಡೆಯಲ್ಲಿ ತಡೆಗಟ್ಟುವುದು
ಕೋಪವನು.
22 : ನ್ಯಾಯಸಮ್ಮತವಾಗದು ದುಷ್ಟವಾದ ಕೋಪ
ಮನುಷ್ಯನ ಕೋಪದ ಸೆಳೆತವೇ ಪತನಕ್ಕೆ
ಕಾರಣ.
23 : ಸಹನೆಯುಳ್ಳವನು ತಾಳಿಕೊಳ್ಳುವನು ಸೂಕ್ತ
ಕಾಲದವರೆಗೆ
ಚಿಲುಮೆಯಂತೆ ಉಕ್ಕುವುದು ಪರಮಾನಂದ
ಕೊನೆಗೆ.
24 : ಮೌನವಾಗಿರುವನು ಅವನು ಸಮಯ
ಬರುವವರೆಗೆ
ಅವನೆಷ್ಟು ವಿವೇಕಿಯೆಂದು ನುಡಿಯುವುವು
ಭಕ್ತರ ಬಾಯಿಗಳೆ.
ಸುಜ್ಞಾನ - ಸನ್ನಡತೆ
25 : ವಿವೇಕದ ದೃಷ್ಟಾಂತಗಳಿವೆ ಸುಜ್ಞಾನದ
ನಿಧಿಯಲಿ
ಪಾಪಿಗಾದರೋ ಭಕ್ತಿ ಕಾಣಿಸುವುದು
ಅಸಹ್ಯವಾಗಿ.
26 : ದೈವಾಜ್ಞೆಗಳನು ನೀ ಪಾಲಿಸಿ ಸುಜ್ಞಾನವನು
ಬಯಸುವೆಯಾದರೆ
ದಯಪಾಲಿಸುವನು ಆತ ಅದನ್ನು
ಧಾರಾಳವಾಗಿ ನಿನಗೆ.
27 : ಕಾರಣ, ದೇವರಲ್ಲಿ ಭಯಭಕ್ತಿಯೇ ಸುಜ್ಞಾನ,
ಸುಶಿಕ್ಷಣ
ಆತ ಮೆಚ್ಚುವಂಥದು ಪ್ರಾಮಾಣಿಕತೆ ಮತ್ತು
ವಿನಯ.
28 : ದೇವರ ಭಯಭಕ್ತಿಯಲ್ಲಿ ನಿನಗಿರದಿರಲಿ
ಅಪನಂಬಿಕೆ
ದ್ವಂದ್ವ ಮನಸ್ಸಿನಿಂದ ಸೇರಬೇಡ
ಆತನ ಸನ್ನಿಧಿಗೆ.
29 : ವರ್ತಿಸಬೇಡ ಜನರ ಮುಂದೆ ಕಪಟತನದಿಂದ
ಮಾತಾಡುವಾಗ ನಡೆದುಕೊ ಎಚ್ಚರದಿಂದ.
30 : ಉಬ್ಬಿಕೊಳ್ಳಬೇಡ, ಬಿದ್ದು ಹೋದೀಯೇ
ಕೆಳಗೆ!
ಇದರಿಂದ ಅಪಮಾನವಾದೀತು ನಿನಗೆ.
31 : ನಿನ್ನ ಗುಟ್ಟು ರಟ್ಟಾದೀತು ಜನರ ಮುಂದೆ
ನಿನ್ನನು ಒಗೆದುಬಿಟ್ಟಾರು ದೇವರು
ತಮ್ಮ ಜನರ ಮಧ್ಯೆ
ಏಕೆನೆ, ನೀನು ಸೇರಲಿಲ್ಲ ದೇವರ ಸನ್ನಿಧಿಗೆ
ಭಯಭಕ್ತಿಯಿಂದ
ನಿನ್ನ ಅಂತರಂಗ ತುಂಬಿಕೊಂಡಿತ್ತು
ಮೋಸ ವಂಚನೆಯಿಂದ.