1 : ಆದುದರಿಂದ ಅರಸುಗಳೇ,
ಕೇಳಿ ತಿಳಿದುಕೊಳ್ಳಿ
ಜಗದ ನ್ಯಾಯಮೂರ್ತಿಗಳೇ,
ಅರ್ಥಮಾಡಿಕೊಳ್ಳಿ;
2 : ಬಹುಜನಗಳ ಮೇಲೆ ದೊರೆತನ
ಮಾಡುವವರೇ, ಆಲಿಸಿ
ಅನೇಕ ರಾಷ್ಟ್ರಗಳ ಮೇಲೆ
ಹೆಚ್ಚಳಪಡುವವರೇ, ಕಿವಿಗೊಡಿ:
3 : ನಿಮಗೆ ಒಡೆತನ ದೊರೆತದ್ದು
ಸರ್ವೇಶ್ವರನಿಂದ
ನಿಮ್ಮ ಪ್ರಭುತ್ವ ಬಂದುದು
ಆ ಮಹೋನ್ನತನಿಂದ.
ನಿಮ್ಮ ಕಾರ್ಯಗಳನ್ನು ಶೋಧಿಸುವವನು ಆತನೆ
ನಿಮ್ಮ ಸಂಕಲ್ಪಗಳನ್ನು ಪರಿಶೀಲಿಸುವವನು
ಆತನೆ.
4 : ಆತನ ರಾಜ್ಯದ ರಾಯಭಾರಿಗಳು ನೀವೆಲ್ಲ:
ಸರಿಯಾಗಿ ನೀವು ನ್ಯಾಯತೀರಿಸಲಿಲ್ಲ
ಆತನ ಆಜ್ಞೆಗಳನ್ನು ಪರಿಪಾಲಿಸಲಿಲ್ಲ
ಆ ದೇವರ ಸಂಕಲ್ಪದಂತೆ
ನಡೆದುಕೊಳ್ಳಲಿಲ್ಲ.
5 : ಆತ ನಿಮ್ಮ ಮೇಲೆರಗುವನು ತ್ವರೆಯಾಗಿ,
ಭೀಕರವಾಗಿ
ಉನ್ನತಸ್ಥಾನದಲ್ಲಿರುವ ನಿಮಗೆ
ತೀರ್ಪಿಡುವನು ಕ್ರೂರವಾಗಿ.
6 : ದೀನರಿಗೆ ದಯಾಪೂರಿತ ಕ್ಷಮೆ
ದೊರಕಬಹುದು
ಬಲಾಢ್ಯರಿಗಾದರೋ ಕಠಿಣಪರೀಕ್ಷೆ
ಕಾದಿರುವುದು.
7 : ಸರ್ವರಿಗೂ ದೊರೆಯಾದ ಸರ್ವೇಶ್ವರ
ಮುಖದಾಕ್ಷಿಣ್ಯ ತೋರುವವನಲ್ಲ
ದೊಡ್ಡಸ್ತಿಕೆಯನ್ನು ಗಮನಿಸುವವನಲ್ಲ.
ಹಿರಿದುಕಿರಿದುಗಳೆರಡನ್ನು ಮಾಡಿದಾತ
ಎಲ್ಲರನ್ನು ಸಮನಾಗಿ ನೋಡಿಕೊಳ್ಳಬಲ್ಲ.
8 : ಆದರೂ ಬಲವಂತರಿಗಾಗುವ ಪರೀಕ್ಷೆ
ಇರುವುದು ಕಠಿಣತರವಾಗಿಯೇ.
9 : ಎಂದೇ ಅರಸುಕುವರರೇ,
ನನ್ನೀ ಬೋಧನೆಗಳೆಲ್ಲ ನಿಮಗಾಗಿಯೇ;
ಸುಜ್ಞಾನಿಗಳಾಗಿ, ನೀವು ಸನ್ಮಾರ್ಗ
ಬಿಡಬಾರದೆಂದೇ ಇದ ನುಡಿದಿರುವೆ.
10 : ಶುದ್ಧಾಚಾರಗಳನ್ನು ಶ್ರದ್ಧೆಯಿಂದ
ಪಾಲಿಸಿದರೆ ಪರಿಶುದ್ಧರಾಗುವರು
ಅವುಗಳಲ್ಲಿ ಸುಶಿಕ್ಷಿತರಾದವರು
ಸರಿಯಾಗಿ ಉತ್ತರಿಸಬಲ್ಲರು.
11 : ಆದುದರಿಂದ ನನ್ನೀ ನುಡಿಗಳನು ಬಯಸಿರಿ,
ಅವುಗಳಿಗಾಗಿ ಹಂಬಲಿಸಿರಿ;
ಆಗ ಸುರಕ್ಷಿತರಾಗುವಿರಿ.
ಸುಜ್ಞಾನದ ಮೌಲ್ಯ
12 : ಸುಜ್ಞಾನವೆಂಬಾಕೆ ತೇಜೋ ಪುಂಜಳಾಗಿ
ಇರುವಳು, ಅವಳ ಕಾಂತಿ ಕುಂದದು.
ಪ್ರೀತಿಸುವವರಿಗೆ ಸಹಜವಾಗಿ ಗೋಚರ
ಆಗುವಳು, ಅರಸುವವರಿಗೆ ಸಿಕ್ಕುವಳು.
13 : ತನ್ನನ್ನು ತಿಳಿಯಲಪೇಕ್ಷಿಸುವವರ ಹತ್ತಿರಕೆ
ತಾನೇ ಬಂದು ತಿಳಿಯಪಡಿಸಿಕೊಳ್ಳುತ್ತಾಳೆ.
14 : ಅವಳನ್ನು ಹುಡುಕಲು ನಸುಕಿನಲೇ
ಏಳುವ ಪರಿಶ್ರಮ ಬೇಡ;
ಕಾರಣ – ತನ್ನ ಬಾಗಿಲಲೇ ಅವಳು
ಕುಳಿತಿರುವುದನ್ನು ಕಾಣುವನಾತ.
15 : ಅವಳ ಮೇಲೇ ನಿಗವಿಟ್ಟಿರುವವನು
ಬುದ್ಧಿಸಂಪನ್ನನಾಗುವನು
ಅವಳನ್ನೇ ಕಾಯ್ದಿರುವವನು ಚಿಂತೆಯಿಂದ
ಬೇಗ ಮುಕ್ತನಾಗುವನು.
16 : ಸುಜ್ಞಾನ ತನಗೆ ಯೋಗ್ಯರಾದವರನು
ಅರಸುತ್ತಾ ಸಂಚರಿಸುತ್ತಾಳೆ
ಹಾದಿಯಲ್ಲೇ ಅವರಿಗೆ ಪ್ರಸನ್ನಳಾಗಿ
ಕಾಣಿಸಿಕೊಳ್ಳುತ್ತಾಳೆ
ಅವರ ಪ್ರತಿಯೊಂದು ಆಲೋಚನೆಯಲ್ಲೂ
ಅವರೊಂದಿಗಿರುತ್ತಾಳೆ.
17 : ಕಲಿಯಬೇಕೆಂಬ ನೈಜ ಆಕಾಂಕ್ಷೆಯೇ
ಸುಜ್ಞಾನದ ಉಗಮ
ಕಲಿಕೆಯ ಬಗ್ಗೆ ಇರುವ ಆಸಕ್ತಿಯೆ
ಸುಜ್ಞಾನದ ಪ್ರೇಮ.
18 : ಸುಜ್ಞಾನದ ಪ್ರೇಮ, ಅದರ ನಿಯಮಗಳ
ಅನುಸರಣ,
ಆ ನಿಯಮಗಳ ಪರಿಪಾಲನ –
ಇವುಗಳಿಂದ ಅಮರತ್ವವು ಪ್ರಾಪ್ತ.
19 : ಅಮರತ್ವವು ಮಾನವನನ್ನು ದೇವರ
ಸಾಮಿಪ್ಯಕ್ಕೊಯ್ಯುತ್ತದೆ.
20 : ಹೀಗೆ ಜ್ಞಾನಾಭಿರುಚಿ ಅರಸೊತ್ತಿಗೆಗೆ
ಏರಿಸುತ್ತದೆ.
21 : ಆದುದರಿಂದ ಜನಾಧಿಪತಿಗಳೇ,
ಸಿಂಹಾಸನದಲಿ, ರಾಜದಂಡದಲಿ
ಆನಂದಿಸಬೇಕಾದರೆ
ಸುಜ್ಞಾನ ಪ್ರಭೆಯನು ಸನ್ಮಾನಿಸಿರಿ;
ಆಗ ನೀವು ಚಿರಕಾಲ ಆಳುವಿರಿ.
ಸುಜ್ಞಾನದ ವಿವರಣೆ
22 : ಸುಜ್ಞಾನವೆಂದರೇನು? ಅದು
ಉಗಮವಾದುದು ಹೇಗೆ?
ಹೇಳುತ್ತೇನೆ ಕೇಳಿ: ನಿಮ್ಮಿಂದ
ರಹಸ್ಯಗಳನ್ನು ಮರೆಯಾಗಿಸಲಾರೆ”
ಸೃಷ್ಟಿಯ ಆದಿಯಿಂದ ಆಕೆಯ
ಮಾರ್ಗವನ್ನು ವ್ಯಕ್ತಪಡಿಸುವೆ
ಸತ್ಯವನ್ನು ಉಪೇಕ್ಷಿಸದೆ,
ತಿಳಿದಷ್ಟು ಮಟ್ಟಿಗೆ ವಿವರಿಸುವೆ.
23 : ಇದರಿಂದ ಅಸೂಯೆಪಡಬೇಕೆಂಬ
ಉದ್ದೇಶವೇನೂ ನನಗಿಲ್ಲ
ಅಸೂಯೆಯೂ ಜ್ಞಾನವೂ
ಬೆರೆಯುವುದಿಲ್ಲ.
24 : ಸುಜ್ಞಾನಿಗಳ ಸಂಖ್ಯೆ ಹೆಚ್ಚಿದಷ್ಟೂ
ವಿಶ್ವಕ್ಕೆ ಹೆಚ್ಚು ಸಂರಕ್ಷಣೆ
ವಿವೇಕಿಯಾದ ಅರಸ ಶಾಂತಿಪ್ರದ
ನಾಗುವನು ತನ್ನ ಪ್ರಜೆಗಳಿಗೆ.
ಎಂದೇ ಶಿಕ್ಷಣ ಪಡೆ ನನ್ನ ನುಡಿಗಳಿಂದ
ನಿನಗೆ ಪ್ರಯೋಜನವಿದೆ ಅವುಗಳಿಂದ.
ರಾಜನಾದರೂ ತಾಯಿಗೆ ಮಗ