Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸುಜ್ಞಾನಗ್ರಂಥ


1 : ದೇವರಿಲ್ಲದವರು ಅಪವಾದಮಾಡಿ- ಕೊಂಡರು ಈ ಪರಿ: “ನಮ್ಮ ಬದುಕು ಅಲ್ಪಕಾಲಿಕ ಹಾಗು ದುಃಖಕರ ಮರಣಕ್ಕೆ ಮದ್ದಿಲ್ಲ, ಸತ್ತವರಿಂದ ಹಿಂದಿರುಗಿದವರಿಲ್ಲ;
2 : ನಮ್ಮ ಹುಟ್ಟು ಆಕಸ್ಮಿಕ ಸತ್ತ ಮೇಲೆ ಆಗುತ್ತೇವೆ ಎಂದೂ ಇಲ್ಲದವರಂತೆ ನಮ್ಮ ಉಸಿರು ಬರೀ ಹೊಗೆ ನಮ್ಮ ಬುದ್ಧಿ ಎದೆಬಡಿತದಿಂದಾದ ಒಂದು ಕಿಡಿ.
3 : ಕಿಡಿ ಆರಿಹೋದಾಗ ದೇಹವಾಗುತ್ತದೆ ಭಸ್ಮ ತಿಳಿಗಾಳಿಯಲಿ ಕರಗಿಹೋಗುತ್ತದೆ ಪ್ರಾಣ.
4 : ಕಾಲಗತಿಸಿದಂತೆ ಮರೆತುಹೋಗುತ್ತದೆ ನಮ್ಮ ಹೆಸರೂ ನಮ್ಮ ಕಾರ್ಯಸಾಧನೆಗಳನು ಸ್ಮರಿಸರು ಯಾರೂ. ಮೋಡದ ಸುಳಿವಿನಂತೆ ಮಾಯವಾಗುತ್ತದೆ ಪ್ರಾಣ ಅಟ್ಟಿಬಂದು ಕರಗಿಸುತ್ತದೆ ಆ ಮಂಜನ್ನು ಸೂರ್ಯನ ಕಿರಣ.
5 : ನೆರಳಿನಂತೆ ಮಾಯವಾಗುವುದು ನಮ್ಮ ಬಾಳು ಸತ್ತ ಮೇಲೆ ಹಿಂದಿರುಗಿ ಬರುವವರಲ್ಲ ನಾವು ಮರಣಮುದ್ರೆ ಬಿದ್ದ ಮೇಲೆ ಮರಳುವುದಿಲ್ಲ ಯಾರೂ.
6 : ಎಂದೇ ಬನ್ನಿ, ಇರುವ ಸುಖಭೋಗವನು ಸವಿಯೋಣ ಯುವಜನದಂತೆ ಜಗತ್ತಿನವುಗಳನು ಅನುಭವಿಸೋಣ.
7 : ಭರ್ತಿಯಾಗೋಣ ಉತ್ತಮ ಮದ್ಯದಿಂದ ಅಲಂಕೃತರಾಗೋಣ ಸುಗಂಧ ದ್ರವ್ಯಗಳಿಂದ ವಸಂತಕಾಲದ ಪುಷ್ಪಗಳು ತಪ್ಪಿ ಹೋಗದಿರಲಿ ನಮ್ಮಿಂದ.
8 : ಗುಲಾಬಿ ಹೂ ಬಾಡಿಹೋಗುವ ಮುನ್ನ ಮುಕುಟಮಾಡಿ ಮುಡಿದುಕೊಳ್ಳೋಣ.
9 : ನಮ್ಮ ಆಡಂಬರದಿಂದ ಯಾರೂ ತಪ್ಪಿಸಿಕೊಳ್ಳದಿರಲಿ ನಮ್ಮ ಸಂಭ್ರಮದ ಸಂಕೇತ ಎಲ್ಲೆಲ್ಲೂ ಕಂಡುಬರಲಿ ಇದೇ ನಮ್ಮ ಪರಮಾನಂದ, ನಮ್ಮ ಪಾಲಿಗೆ ಬಂದ ಬುತ್ತಿ.
10 : ನೀತಿವಂತ ದಲಿತನನು ತುಳಿದುಬಿಡೋಣ ವಿಧವೆಯನು ಎಡೆಬಿಡದೆ ಪೀಡಿಸೋಣ ನರೆಗೂದಲಿನ ಮುದುಕನನ್ನೂ ಸನ್ಮಾನಿಸದಿರೋಣ.
11 : ನಮ್ಮ ಶಕ್ತಿಯೇ ನಮಗೆ ನೀತಿನಿಯಮ ದುರ್ಬಲತೆಯಿಂದ ಏನೂ ಪ್ರಯೋಜನವಿಲ್ಲ.
12 : ನೀತಿವಂತನಿಗಾಗಿ ಹೊಂಚುಹಾಕೋಣ ಬಲೆಯೊಡ್ಡಿ ಅವನು ನಮಗೊಂದು ಪೀಡೆ, ನಮ್ಮ ನಡತೆಗೆ ಅಡ್ಡಿ ಆರೋಪಿಸುತ್ತಾನೆ, ಧರ್ಮಕ್ಕೆ ವಿರುದ್ಧ ಪಾಪಕಟ್ಟಿಕೊಂಡೆವೆಂದು ದೂಷಿಸುತ್ತಾನೆ, ಸಂಪ್ರದಾಯದ ವಿರುದ್ಧ ಪಾಪ ಮಾಡಿದೆವೆಂದು.
13 : ಹೇಳಿಕೊಳ್ಳುತ್ತಾನೆ ತಾನೇ ದೇವರನು ಬಲ್ಲವನೆಂದು ಕರೆದುಕೊಳ್ಳುತ್ತಾನೆ ತನ್ನನ್ನು ತಾನೇ ದೇವರ ಮಗನೆಂದು.
14 : ನಮ್ಮ ಆಲೋಚನೆಗಳನ್ನು ಆಕ್ಷೇಪಿಸುವ ವ್ಯಕ್ತಿ ಅವನು ಅವನನ್ನು ನೋಡಿದ್ದೇ ನಮ್ಮ ಉತ್ಸಾಹ ಕುಂದಿಹೋಗುವುದು.
15 : ಏಕೆಂದರೆ ಅವನು ಇತರರಂತೆ ಅಲ್ಲ ಅವನ ಮಾರ್ಗವೋ ನಮಗೆ ವಿಚಿತ್ರ.
16 : ಅವನ ಎಣಿಕೆಯಲ್ಲಿ ನಾವೆಲ್ಲರು ನಕಲಿ ನಾಣ್ಯದಂತೆ ನಮ್ಮಿಂದ ದೂರವಾಗುತ್ತಾನೆ ಹೇಸಿಕೆಯನ್ನು ಕಂಡಂತೆ. ನೀತಿವಂತರ ಮರಣ ಸಂತೋಷಕರವೆನ್ನುತ್ತಾನೆ ದೇವರೇ ತನ್ನ ತಂದೆಯೆಂದು ಕೊಚ್ಚಿಕೊಳ್ಳುತ್ತಾನೆ.
17 : ಅವನ ಮಾತುಗಳೇ ಸತ್ಯವೇನೋ ನೋಡೋಣ ಅವನ ಜೀವಾಂತ್ಯದ ಗತಿ ಏನೆಂದು ಪರೀಕ್ಷಿಸೋಣ.
18 : ನೀತಿವಂತ ದೇವಕುಮಾರನಾಗಿದ್ದರೆ ದೇವರು ಅವನಿಗೆ ನೆರವಾಗಬೇಕು ಶತ್ರುಗಳ ಕೈಯಿಂದ ಅವನನ್ನು ತಪ್ಪಿಸಿ ಕಾಪಾಡಬೇಕು.
19 : ಅಂಥವನನ್ನು ಹಿಂಸಿಸಿ, ಪೀಡಿಸಿ, ಪರೀಕ್ಷಿಸೋಣ ಅವನಲ್ಲಿ ಸೌಜನ್ಯ ಎಷ್ಟಿದೆಯೆಂದು ತಿಳಿಯೋಣ ಅನ್ಯಾಯದೆದುರು ತಾಳ್ಮೆಯೆಷ್ಟಿದೆಯೆಂದು ಶೋಧಿಸೋಣ;
20 : ಅವಮಾನಕರ ಮರಣಶಿಕ್ಷೆಯನ್ನು ಅವನಿಗೆ ವಿಧಿಸೋಣ ‘ದೇವರು ರಕ್ಷಿಸುತ್ತಾನೆ’ ಎಂದಾಗಿತ್ತಲ್ಲವೇ ಅವನ ವಾದ?”
21 : ಈ ಪರಿ ಆಲೋಚಿಸಿ ವಂಚಿತರಾದರು ದುರುಳರು ಅವರ ದುಷ್ಟತನವೇ ಅವರನ್ನು ಕುರುಡರನ್ನಾಗಿಸಿತು.
21 : ದೇವರ ನಿಗೂಢ ಯೋಜನೆಯನ್ನು ಅವರು ಅರಿಯಲಿಲ್ಲ ಪವಿತ್ರ ಜೀವನಕ್ಕೆ ದೊರಕುವ ಫಲವನ್ನು ಹಾರೈಸಲಿಲ್ಲ ನಿರ್ದೋಷಿಗಳಿಗೆ ಸಂಭಾವನೆಯಿದೆಯೆಂದು ನಂಬಲಿಲ್ಲ.
23 : ದೇವರು ಮಾನವನನ್ನು ಸೃಷ್ಟಿಸಿದ್ದು ಅಮರತ್ವಕ್ಕಾಗಿ ಅವನನ್ನು ರಚಿಸಿದ್ದು ತಮ್ಮ ಸ್ವರೂಪಕ್ಕನುಗುಣವಾಗಿ.
24 : ಸೈತಾನನ ಮತ್ಸರದಿಂದಲೆ ಮರಣ ಪ್ರವೇಶಿಸಿತು ಲೋಕವನು ಅವನ ಪಕ್ಷಕೆ ಸೇರಿದವರೆಲ್ಲರು ಅನುಭವಿಸುವರು ಅದನು.

· © 2017 kannadacatholicbible.org Privacy Policy