Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸುಜ್ಞಾನಗ್ರಂಥ


1 : ಕನಿಕರವಿಲ್ಲದಾ ಕೋಪ ದುರುಳರನು ಕಾಡಿತು ಕೊನೆಯವರೆಗೂ ದೇವಾ, ಮೊದಲೇ ನೀವು ಅರಿತಿದ್ದಿರಿ ಅವರು ಮಾಡುವುದೇನೆಂಬುದನು.
2 : ನಿಮ್ಮ ಜನರಿಗೆ ನಾಡನು ಬಿಟ್ಟುಹೋಗಲು ಅನುಮತಿಕೊಟ್ಟು ತ್ವರಿತವಾಗಿ ಹೋಗಬೇಕೆಂದು ಅವರನು ಬೀದಿಗೆ ಅಟ್ಟಿಬಿಟ್ಟು ಮತ್ತೆ ಮನಬದಲಾಯಿಸಿಕೊಂಡು ಅವರನು ಬೆನ್ನಟ್ಟುವರೆಂದು ನಿಮಗೆ ತಿಳಿದಿತ್ತು.
3 : ಈಜಿಪ್ಟರು ಸತ್ತವರ ಸಮಾಧಿ ಬಳಿ ಕಣ್ಣೀರಿಡುತ್ತಾ ಶೋಕಾಚರಣೆಯಲ್ಲಿ ಇದ್ದಾಗಲು ಹುಚ್ಚು ಯೋಜನೆಯೊಂದನು ಮಾಡಿಕೊಂಡರು: ಯಾರನು ಬೇಡಿಕೊಂಡರೋ ಬಿಟ್ಟು ಹೋಗಬೇಕೆಂದು ಅವರನೇ ಬೆನ್ನಟ್ಟಿದರು ಓಡಿಹೋದರೆಂದು.
4 : ಯಾವ ದಂಡನೆಗೆ ಅವರು ಪಾತ್ರರಾಗಿದ್ದರೋ ಅದೇ ದಂಡನೆ ಅವರನ್ನೆಳೆದು ತಂದಿತು ಈ ಕಡೆಗೆ: ಈವರೆಗೆ ಅನುಭವಿಸಿದ್ದೆಲ್ಲವನು ಮರೆವಂತೆ ಮಾಡಿತು. ಇನ್ನೂ ಕಡಿದಾದ ಶಿಕ್ಷೆಯನು ಸವಿಯುವಂತೆ ಮಾಡಿತು.
5 : ನಿಮ್ಮ ಜನರು ಅದ್ಭುತಕರ ಮಾರ್ಗದಲಿ ನಡೆದು ಹೋಗುವಂತಾಯಿತು ಶತ್ರುಗಳು ವಿಚಿತ್ರ ಮರಣವನು ಅನುಭವಿಸುವಂತಾಯಿತು. ದೇವಜನರ ವಿಮೋಚನೆ
6 : ನಿಮ್ಮ ದಾಸರು ದೇವಾ, ಹಾನಿಗೀಡಾಗದಂತೆ ತಲೆಬಾಗಿತು ಸಮಗ್ರ ಸೃಷ್ಟಿ ನಿಮ್ಮ ಆಜ್ಞೆಗೆ ಬದಲಾಯಿಸಿಕೊಂಡಿತು ತನ್ನ ಸಹಜ ರೂಪವನೆ.
7 : ಪಾಳೆಯಕ್ಕೆ ನೆರಳು ನೀಡಲು ಮೇಘ ಕವಿಯಿತು ಜಲರಾಶಿಯಿದ್ದಲ್ಲಿ ಒಣನೆಲವು ಮೇಲೆದ್ದಿತು ಕೆಂಪು ಸಮುದ್ರದ ನಡುವೆ ಸುರಕ್ಷಿತ ಹೆದ್ದಾರಿ ಕಾಣಿಸಿತು ಮೊರೆಯುತ್ತಿದ್ದ ಅಲೆಗಳ ಮಧ್ಯೆ ಹುಲ್ಲುಗಾವಲುಂಟಾಯಿತು.
8 : ಒಂದೇ ಸಮೂಹದಂತೆ ನಿಮ್ಮ ಹಸ್ತಾಶ್ರಯ ಪಡೆದ ಜನರು ನಾನಾ ಅದ್ಭುತ ಕಾರ್ಯಗಳನು ನೋಡಿ, ಆ ಸಮುದ್ರವನೆ ದಾಟಿದರು.
9 : ತಮ್ಮನ್ನು ಬಿಡುಗಡೆ ಮಾಡಿದ ನಿಮ್ಮನು ಹೇ ಸರ್ವೇಶ್ವರಾ, ಕೊಂಡಾಡಿದರು ಕುರಿಮರಿಗಳಂತೆ ಕುಣಿದಾಡಿದರು, ಬಿಚ್ಚಿದ ಕುದುರೆಗಳಂತೆ ಓಡಾಡಿದರು.
10 : ನೆನಪಿಗೆ ತಂದುಕೊಂಡರು ತಮ್ಮ ಪ್ರವಾಸಕಾಲದಲಿ ನಡೆದವುಗಳನು ದನಕರುಗಳಿಗೆ ಬದಲಾಗಿ ಮಿಡಿತೆಗಳನಿತ್ತ ಭೂಮಿಯನು ಮೀನುಗಳಿಗೆ ಪ್ರತಿಯಾಗಿ ಕಪ್ಪೆಗಳನಿತ್ತ ನದಿಯನು.
11 : ಬಳಿಕ ಮೃಷ್ಟಾನ್ನವನು ಕೋರಿಕೊಳ್ಳಲು ಕಾಣಿಸಿಕೊಂಡವು ಹೊಸತರದ ಹಕ್ಕಿಗಳು.
12 : ಅವರ ಆಶೆಯನು ಪೂರೈಸಲು ಸಮುದ್ರದಿಂದೇರಿ ಬಂದವು ಲಾವಕ್ಕಿಗಳು. ಶತ್ರುಗಳಿಗಾದ ಶಿಕ್ಷೆ
13 : ದುರುಳರ ಮೇಲಾದರೋ ಎರಗಿತು ದಂಡನೆ ಎರಗಿತದು ಗುಡುಗಿನಂಥ ಅಬ್ಬರದ ಮುಂಗುರುತೊಡನೆ. ಅತಿಥಿಗಳ ಸಂಗಡ ಹಗೆತನದಿಂದ ನಡೆದುಕೊಂಡದ್ದರಿಂದ ಅನುಭವಿಸಿದರವರು ನ್ಯಾಯವಾದ ಕಷ್ಟ, ಆ ದುಷ್ಟತನದ ನಿಮಿತ್ತ.
14 : ಸೊದೋಮಿನವರು ಸೇರಿಸಿಕೊಳ್ಳಲಿಲ್ಲ ಪರಕೀಯರು ಬಂದಾಗ ಈಜಿಪ್ಟಿನವರಾದರೋ ಗುಲಾಮರನ್ನಾಗಿಸಿ ಕೊಂಡರು ಹಿತೈಷಿಗಳು ಬಂದಾಗ.
15 : ಪರಕೀಯರನು ಶತ್ರುಗಳಂತೆ ಭಾವಿಸಿದ್ದರಿಂದ ಶಿಕ್ಷೆಗೆ ಗುರಿಯಾದರವರು ನಾನಾ ವಿಧದಿಂದ.
16 : ಇವರಾದರೋ ತಮಗೆ ಸಮಾನ ಹಕ್ಕಿನವರನು ಮೊದಲು ಸಂತಸದಿಂದ ಬರಮಾಡಿಕೊಂಡರಾದರು ತರುವಾಯ ಭಯಂಕರವಾಗಿ ಹಿಂಸಿಸಿದರು.
17 : ನೀತಿವಂತನ ಮನೆಯ ಮುಂದೆ ಸೊದೋಮಿನವರು ದೃಷ್ಟಿಹೀನರಾದಂತೆ ಪ್ರತಿಯೊಬ್ಬನು ಬಾಗಿಲ ಮೂಲಕ ದಾರಿಹುಡುಕುತ್ತಾ ತಡವರಿಸಿದಂತೆ ಇವರನು ಕಾರ್ಗತ್ತಲು ಆವರಿಸಿ ಗುರಿಪಡಿಸಿತು ದೃಷ್ಟಿಹೀನತೆಗೆ. ದೇವರ ಅದ್ಭುತ ಶಕ್ತಿ
18 : ಕಿನ್ನರಿಯ ತಂತಿಗಳು ರಾಗದ ಧಾಟಿಯನು ಬದಲಾಯಿಸುವಂತೆ ಪಂಚಭೂತಗಳು ಮಾರ್ಪಡಿಸಿಕೊಂಡವು ತಮ್ಮ ಗುಣಲಕ್ಷಣಗಳನೆ ಇದ ಗಮನಿಸಬಹುದು ಸಂಭವಿಸಿದ ಘಟನೆಗಳಲೆ.
19 : ಭೂಚರ ಪ್ರಾಣಿಗಳಾದವು ಜಲಚರ ಪ್ರಾಣಿಗಳಾಗಿ ಜಲಚರ ಪ್ರಾಣಿಗಳು ಮಾರ್ಪಟ್ಟವು ಭೂಚರ ಪ್ರಾಣಿಗಳಾಗಿ.
20 : ಬೆಂಕಿ ಸ್ವಾಭಾವಿಕವಾಗಿ ಉರಿಯಿತು ನೀರಿನಲ್ಲೂ ನಂದಿಸುವ ತನ್ನ ಗುಣಧರ್ಮವನಾ ನೀರು ಮರೆತುಬಿಟ್ಟಿತು.
21 : ಜ್ವಾಲೆಗಳು ಸುಡಲಿಲ್ಲ ತಮ್ಮೊಳು ನಡೆದಾಡಿದಾ ಮೃದು ದೇಹಗಳನು ಕರಗಿಸಲಿಲ್ಲ ಮಂಜಿನಂತೆ ಸುಲಭವಾಗಿ ಕರಗಬಲ್ಲ ಅಮೃತಾಹಾರವನು.
22 : ಸರ್ವೇಶ್ವರಾ, ಎಲ್ಲ ವಿಧದಲು ಉದ್ಧರಿಸಿ ಘನಪಡಿಸಿದಿರಿ ನಿಮ್ಮ ಜನರನು ಉಪೇಕ್ಷಿಸದೆ ಅವರಿಗೆ ನೆರವಾದಿರಿ, ಎಲ್ಲಾ ಕಾಲದಲು, ಸ್ಥಳದಲು.

· © 2017 kannadacatholicbible.org Privacy Policy