1 : ದೇವರನ್ನು ಅರಿಯದ
ಮನುಜರೆಲ್ಲರು
ಮಂದಮತಿಗಳೆಂಬುದು ಸಹಜ.
ಕಣ್ಣಿಗೆ ಕಾಣುವ ಚೆಲುವಾದವುಗಳಿಂದ,
ಇರುವಾತನನು ಅವರರಿಯಲಿಲ್ಲ.
ಸೃಷ್ಟಿಯಾದ ವಸ್ತುಗಳನು ಗಮನಿಸಿ
ಸೃಷ್ಟಿಕರ್ತನನು ಗುರುತಿಸಲಿಲ್ಲ.
2 : ಬದಲಿಗೆ ಅಗ್ನಿ, ಆವಿ, ವೇಗವಾಯು,
ತಾರಾಗಣ,
ಭೋರ್ಗರೆವ ಸಾಗರ, ಗಗನದ
ಜ್ಯೋತಿರ್ಮಂಡಲ
ಇವುಗಳೇ ಜಗವನ್ನಾಳುವ
ದೇವರೆಂದುಕೊಂಡರಲ್ಲಾ !
3 : ಇವುಗಳಲ್ಲಿನ ಚೆಲುವಿಗೆ ಮಣಿದು
ಇವುಗಳನೇ ದೇವರೆಂದುಕೊಂಡರು.
ಗ್ರಹಿಸದೆ ಹೋದರು ಇವುಗಳ ಒಡೆಯ
ಇನ್ನೆಷ್ಟು ಮಿಗಿಲಾಗಿರಬೇಕೆಂದು!
ಸೌಂದರ್ಯಕೆ ಮೂಲವಾದ
ಸರ್ವೇಶ್ವರನೇ ನಿರ್ಮಿಸಿದನು
ಇವುಗಳನು.
4 : ಇವುಗಳಲ್ಲಿನ ಗುಣಶಕ್ತಿಗೆ ಅಚ್ಚರಿಗೊಂಡು
ಹಾಗೆ ನುಡಿದಿದ್ದರೆ
ಇವುಗಳನು ರೂಪಿಸಿದವನೆಷ್ಟು ಶಕ್ತನೆಂದು
ತಿಳಿಯಲಿ ಅವುಗಳಿಂದಲೇ.
5 : ಸೃಷ್ಟಿವಸ್ತುಗಳ ಸೌಂದರ್ಯ
ಮಹತ್ವಗಳಿಂದ
ಅವುಗಳ ಸೃಷ್ಟಿಕರ್ತನ ಸಾದೃಶ್ಯ ಸಾಧ್ಯ.
6 : ಇಂಥವರ ಮೇಲೆ ಬರುವ ಅಪರಾಧ
ಅಂಥ ದೊಡ್ಡದೇನೂ ಅಲ್ಲ
ದೇವರನ್ನು ಹುಡುಕುವ ಆಶೆಯಿಂದಲೆ,
ತಪ್ಪುಹಾದಿ ಹಿಡಿದಿರಬಹುದಲ್ಲಾ.
7 : ಸೃಷ್ಟಿಕಾರ್ಯಗಳ ನಡುವೆ ಬಾಳುತ್ತಾ
ವಿಚಾರಿಸುತ್ತಾರೆ ಮನಃಪೂರ್ವಕವಾಗಿ
ಭ್ರಮೆಗೊಳ್ಳುತ್ತಾರೆ ಅವುಗಳ ಸಹಜವಾದ
ಚೆಲುವಿಗೆ ಬೆರಗಾಗಿ.
8 : ಹೀಗಿದ್ದರೂ ಇಂಥವರನೆ
ದೋಷಮುಕ್ತರೆನ್ನಲಾದೀತೆ?
9 : ಪ್ರಪಂಚವನ್ನೇ ಶೋಧಿಸಿನೋಡುವ ಶಕ್ತಿ
ಇವರಲ್ಲಿದ್ದ ಮೇಲೆ
ಸೃಷ್ಟಿಗೇ ಒಡೆಯನಾದವನನು
ಅರಿತುಕೊಳ್ಳಲು ತಡವಾದುದೇಕೆ?
ವಿಗ್ರಹಾರಾಧನೆ
10 : ಬೆಳ್ಳಿಬಂಗಾರಗಳಿಂದ ತಯಾರಿಸಿದ
ಕರಕುಶಲ ಪ್ರಾಣಿಗಳು
ಪುರಾತನ ಕಾಲದ ಕೆತ್ತನೆಯ ಕೇವಲ
ಕಲ್ಲಿನ ರೂಪಗಳು.
ಈ ಮುಂತಾದ ಕೈಕೆಲಸಗಳನ್ನು
ದೇವರುಗಳು ಎಂದುಕೊಂಡವರು,
ಹೀಗೆ ನಿರ್ಜೀವ ವಸ್ತುಗಳಲಿ ನಿರೀಕ್ಷೆ
ಇಟ್ಟವರು, ನಿರ್ಭಾಗ್ಯಸ್ತರು.
11 : ಚತುರ ಬಡಗಿಯೊಬ್ಬನು ಕಡಿಯುತ್ತಾನೆ
ಸೂಕ್ತವಾದ ಮರವೊಂದನು
ಜಾಣತನದಿಂದ ಸುಲಿಯುತ್ತಾನೆ
ಅದರ ತೊಗಟೆಯನು
ಅಂದಚೆಂದವಾದ ರೂಪಕೊಟ್ಟು, ಅದರಿಂದ
ಮಾಡುತ್ತಾನೆ ಪ್ರಯೋಜನಕರ
ಪಾತ್ರೆಯನು.
12 : ಕೆಲಸಮಾಡಿ ಮಿಕ್ಕ ತುಂಡುಗಳನ್ನು
ಹಾಕುತ್ತಾನೆ ಒಲೆಗೆ
ಹೊಟ್ಟೆ ತುಂಬಿಸಿಕೊಳ್ಳಲು ಅದರಿಂದ
ಮಾಡುತ್ತಾನೆ ಅಡಿಗೆ.
13 : ಕೆಲಸಕ್ಕೆ ಬಾರದ ಈ ಚೆಕ್ಕೆಗಳಿಂದ ಸುಟ್ಟ
ತುಂಡೊಂದನ್ನು ತೆಗೆದುಕೊಳ್ಳುತ್ತಾನೆ.
ವಿರಾಮವೇಳೆಯಲ್ಲಿ ಶ್ರಮದಿಂದದನು
ಕೆತ್ತಿ ಅದಕೆ ಮನುಷ್ಯರೂಪ
ಕೊಡುತ್ತಾನೆ.
14 : ಇಲ್ಲವೆ, ಅದನ್ನು ಕ್ಷುಲ್ಲಕ ಪ್ರಾಣಿಯನ್ನಾಗಿ
ಕೆತ್ತಿ, ಬಳಿಯುತ್ತಾನೆ ಬಣ್ಣ
ಅದರ ಕರೆಗಳನ್ನೆಲ್ಲಾ ಮುಚ್ಚಿಬಿಡುತ್ತಾನೆ
ಹಚ್ಚಿ ಕೆಂಬಣ್ಣ.
15 : ಅದಕ್ಕಾಗಿ ತಕ್ಕ ಗೂಡನು ನಿರ್ಮಿಸುತ್ತಾನೆ
ಗೋಡೆಯೊಳು
ಅದನು ಭದ್ರಪಡಿಸುತ್ತಾನೆ ಕಬ್ಬಿಣದ
ಮೊಳೆ ಹೊಡೆದು.
16 : ಅವನಿಗೆ ಗೊತ್ತು ಅದು ತನ್ನಷ್ಟಕ್ಕೆ
ಸಹಾಯಮಾಡಿಕೊಳ್ಳಲಾರದೆಂದು
(ಪರರ ಸಹಾಯದ ಅವಶ್ಯಕತೆಯಿರುವ
ಅದು ವಿಗ್ರಹವಲ್ಲದೆ ಮತ್ತೇನು?)
ಎಂದೇ, ನೋಡಿಕೊಳ್ಳುತ್ತಾನೆ ಅದು ಕೆಳಕ್ಕೆ
ಬೀಳಬಾರದೆಂದು.
17 : ತರುವಾಯ ನಾಚಿಕೊಳ್ಳದೆ ಬರುತ್ತಾನೆ
ಅದರೊಡನೆ ಮಾತಾಡುವುದಕ್ಕಾಗಿ
ಬೇಡಿಕೊಳ್ಳುತ್ತಾನೆ ಆಸ್ತಿಪಾಸ್ತಿಗಾಗಿ,
ಮಡದಿ ಮಕ್ಕಳಿಗಾಗಿ.
18 : ಬಲಹೀನವಾದ ಅದಕ್ಕೆ ಮೊರೆಯಿಡುತ್ತಾನೆ
ಆರೋಗ್ಯಭಾಗ್ಯಕ್ಕಾಗಿ
ಪ್ರಾಣವಿಲ್ಲದದರ ಬಳಿ ಪ್ರಾರ್ಥಿಸುತ್ತಾನೆ
ಪ್ರಾಣದಾನಕ್ಕಾಗಿ
ನೆರವಿನ ಅನುಭವವೇ ಇಲ್ಲದುದನ್ನು
ಕೋರುತ್ತಾನೆ ಸಹಾಯಕ್ಕಾಗಿ
ಒಂದು ಹೆಜ್ಜೆ ಮುಂದಿಡಲಾರದುದನ್ನು
ಕೇಳಿಕೊಳ್ಳುತ್ತಾನೆ ಸುಖಪ್ರಯಾಣಕ್ಕಾಗಿ,
ಲಾಭಕ್ಕಾಗಿ, ಸಂಪಾದನೆಗಾಗಿ, ಕಸಬಿನ
ಯಶಸ್ವಿಗಾಗಿ
ಕೈಗಳಿದ್ದೂ ಅಶಕ್ತವಾಗಿರುವುದನ್ನು
ಅಂಗಲಾಚಿಕೊಳ್ಳುತ್ತಾನೆ ಶಕ್ತಿಗಾಗಿ.