1 : ಪೊಡವಿಯ ಪಾಲಕರೇ,
ನ್ಯಾಯ ನೀತಿಯನ್ನು ಪ್ರೀತಿಸಿರಿ
ಯಥಾರ್ಥಚಿತ್ತರಾಗಿ ಸರ್ವೇಶ್ವರನನ್ನು
ಧ್ಯಾನಿಸಿರಿ
ನಿಷ್ಕಪಟ ಮನಸ್ಸಿನಿಂದ ಆತನನ್ನು ಅರಸಿರಿ.
2 : ಸರ್ವೇಶ್ವರನು ದರ್ಶನವೀಯುವುದು
ತನ್ನಲ್ಲಿ ಅಪನಂಬಿಕೆ ಪಡದವರಿಗೆ
ಸರ್ವೇಶ್ವರನನ್ನು ಅರಿತುಕೊಂಡವರು
ಅವರನ್ನು ಗುರಿಪಡಿಸರು ಪರೀಕ್ಷೆಗೆ.
3 : ದುರಾಲೋಚನೆಗಳು ಮಾನವನನ್ನು
ದೂರಮಾಡುತ್ತವೆ ದೇವರಿಂದ
ದೇವರನ್ನು ಪರೀಕ್ಷಿಸಲೆತ್ನಿಸುವವನನ್ನು
ಹುಚ್ಚನನ್ನಾಗಿಸುತ್ತದೆ
ಆತನ ಶಕ್ತಿ ಸಾಮಥ್ರ್ಯ.
4 : ಸುಜ್ಞಾನ ಪ್ರವೇಶಿಸದು ಕಪಟಾತ್ಮವನ್ನು
ಪಾಪಾಧೀನವಾದ ಹೃದಯದಲ್ಲಿ ಅದು
ತಂಗದು.
5 : ಸುಶಿಕ್ಷಿತವಾದಾ ನಿರ್ಮಲ ಆತ್ಮ
ಮೋಸದೆಡೆ ನಿಲ್ಲದು
ಅವಿವೇಕ ಆಲೋಚನೆಗಳಿಂದದು
ಓಡಿಹೋಗುವುದು
ಅನ್ಯಾಯವು ಸಮೀಪಿಸಿದಾಗ ಅದು
ಅಸಹ್ಯಪಡುವುದು.
6 : ಸುಜ್ಞಾನವೆಂಬುದು ಮಾನವನನ್ನು
ಸ್ನೇಹಿಸುವ ಚೈತನ್ಯವು
ಆದರೆ ದೇವದೂಷಣೆ ಆಡುವವರನ್ನು
ಅದು ದಂಡಿಸದೆ ಬಿಡದು.
ಏಕೆಂದರೆ ಅಂತರಾಲೋಚನೆಗಳಿಗೆ
ದೇವರೇ ಸಾಕ್ಷಿ
ಆತ ಹೃದಯಗಳನ್ನೂ ವೀಕ್ಷಿಸುತ್ತಾನೆ
ಗಮನಿಸಿ
ನಾಲಿಗೆ ಆಡುವುದನ್ನು
ಅರ್ಥಮಾಡಿಕೊಳ್ಳುತ್ತಾನೆ ಚೆನ್ನಾಗಿ.
7 : ಸರ್ವೇಶ್ವರನ ಚೈತನ್ಯ ವಿಶ್ವವನ್ನು ತುಂಬಿದೆ
ಸಮಸ್ತವನ್ನು ಒಟ್ಟಿಗೆ ಹಿಡಿದಿರುವ ಅದಕ್ಕೆ
ಪ್ರತಿಯೊಂದೂ ತಿಳಿದಿದೆ.
8 : ಎಂದೇ ಅನ್ಯಾಯ ನುಡಿವವನು
ಬಾರದೆಹೋಗನು ಸುಜ್ಞಾನದ ಲಕ್ಷ್ಯಕೆ
ಅಂಥವನನು ದಂಡಿಸದೆ ಬಿಡದು
ನ್ಯಾಯನೀತಿಯು
ಅಪರಾಧವೆತ್ತಿ ತೋರುವ ಕಾಲಕೆ.
9 : ದೇವಭಕ್ತಿಯಿಲ್ಲದವನ ಆಲೋಚನೆಗಳನ್ನು
ಪರೀಕ್ಷಿಸಲಾಗುವುದು
ಅವನ ಹೇಳಿಕೆಗಳ ವರದಿ ಸರ್ವೇಶ್ವರನನ್ನು
ಮುಟ್ಟುವುದು
ಅವನ ಅಕ್ರಮಗಳಿಗೆ ತಕ್ಕ ದಂಡನೆ
ವಿಧಿಸಲಾಗುವುದು.
10 : ಎಲ್ಲವೂ ಕೇಳಿಸುತ್ತದೆ ಸರ್ವೇಶ್ವರನ
ಸೂಕ್ಷ್ಮವಾದ ಕಿವಿಗೆ
ಗೊಣಗುಟ್ಟುವ ಪ್ರತಿಯೊಂದು ಸದ್ದೂ
ಕೇಳಿಸದಿರದು ಅದಕ್ಕೆ.
11 : ಮರೆಯಲ್ಲಿ ಆಡಿದ ಮಾತು
ಪರಿಣಾಮವಿಲ್ಲದೆ ಇರದು
ಹುಸಿಯಾಡುವ ಬಾಯಿ ನಾಶಕ್ಕೆ ಒಯ್ಯದೆ
ಇರದು.
ಆದ್ದರಿಂದ ವ್ಯರ್ಥವಾದ ಗೊಣಗಾಟದ
ಬಗ್ಗೆ ಎಚ್ಚರಿಕೆ!
ಸುಳ್ಳು ಆಪಾದನೆ ಮಾಡದಂತೆ
ಎಚ್ಚರವಹಿಸಲಿ ನಾಲಿಗೆ !
ಮರಣಕ್ಕೆ ಕಾರಣ ದೇವರಲ್ಲ
12 : ಅಕ್ರಮ ಜೀವನದಿಂದ
ಮರಣಕ್ಕೀಡಾಗಬೇಡ
ಸ್ವಕ್ರಿಯೆಗಳಿಂದ ವಿನಾಶ
ಬರಮಾಡಿಕೊಳ್ಳಬೇಡ.
13 : ಏಕೆಂದರೆ ದೇವರು ಉಂಟುಮಾಡಿಲ್ಲ
ಮರಣವನ್ನು
ಆತ ನೋಡಿ ಹಿಗ್ಗುವವನಲ್ಲ
ಜೀವಿಗಳ ಸಾವನ್ನು.
14 : ಅಸ್ತಿತ್ವದಲ್ಲಿರಲೆಂದೇ ದೇವ ಸೃಷ್ಟಿಸಿದನು
ಸಮಸ್ತವನ್ನು
ಸೃಷ್ಟಿಗಳಲ್ಲಿದೆ ಆರೋಗ್ಯ, ಅವುಗಳಲಿಲ್ಲ
ಮಾರಕ ವಿಷಯ
ಅಧೋಲೋಕಕ್ಕೆ ಈ ಲೋಕದ ಮೇಲಿಲ್ಲ
ಅಧಿಕಾರವು.
15 : ಅಂತ್ಯವೆಂಬುದಿಲ್ಲ ನ್ಯಾಯನೀತಿಗೆ.
16 : ತಮ್ಮ ನಡೆನುಡಿಗಳಿಂದಲೇ ಮರಣ
ತಂದುಕೊಂಡರು ದುರುಳರು
ಗೆಳೆಯನೋ ಎಂಬಂತೆ ಅದನ್ನು ಕೈಮಾಡಿ
ಕರೆದುಕೊಂಡರು
ಅದರೊಡನೆ ಸಂಧಾನ ಮಾಡಿಕೊಂಡರು,
ಅದರ ಮಿತ್ರರಾಗಲು ಅರ್ಹರವರು.