1 : ಜೂಡಿತ್ ನೆಲದ ಮೇಲೆ ಅಧೋಮುಖವಾಗಿ ಬಿದ್ದು ಹಣೆಗೆ ಬೂದಿ ಹಚ್ಚಿಕೊಂಡಳು. ಒಳ್ಳೆಯ ಬಟ್ಟೆಗಳನ್ನು ತೆಗೆದಿಟ್ಟು, ಗೋಣಿತಟ್ಟನ್ನು ಮಾತ್ರ ಉಳಿಸಿಕೊಂಡು ಉಚ್ಚಸ್ವರದಿಂದ ದೇವರಿಗೆ ಪ್ರಾರ್ಥನೆ ಮಾಡಿದಳು. ಅದೇ ಸಮಯದಲ್ಲಿ ಜೆರುಸಲೇಮಿನ ದೇವಾಲಯದಲ್ಲಿ ಸಂಧ್ಯಾಧೂಪಾರತಿ ಬೆಳಗುತ್ತಿದ್ದರು. ಆಗ ಜೂಡಿತ್ ಹೇಳಿದ್ದೇನೆಂದರೆ:
2 : “ಸರ್ವೇಶ್ವರಾ, ನಮ್ಮ ಪೂರ್ವಜ
ಸಿಮೆಯೋನನ ದೇವರೇ,
ಪರಕೀಯರ ಮೇಲೆ ಸೇಡು ತೀರಿಸಲು
ಆತನಿಗೆ ನೀ ಕತ್ತಿಯನ್ನಿತ್ತೆ.
ಅವಮಾನಗೊಳಿಸಿದರವರು ಕನ್ಯೆಗೆ
ಅತ್ಯಾಚಾರವೆಸಗಿ
ಮಾನಭಂಗಮಾಡಿದರು ಆಕೆಯನ್ನು ಬಟ್ಟೆ
ಬರಿದುಮಾಡಿ
ನಾಚಿಕೆಗೀಡುಮಾಡಿದರು ಆಕೆಯ
ಉದರವನ್ನು ಕೆಡಿಸಿ
‘ಮಾಡಕೂಡದೆಂದು’ ನೀ ವಿಧಿಸಿದರೂ
ಎಸಗಿದರು ಹೀನಕೃತಿ.
3 : ಈ ಕಾರಣ ಹತ್ಯೆಗೀಡುಮಾಡಿದೆ ಅವರ
ಅರಸರನೆ
ರಕ್ತದಿಂದ ತೋಯಿಸಿದೆ ಅವರು ಹೇಸಿಗೆ
ಮಾಡಿದ ಹಾಸಿಗೆಯನೆ.
ಸದೆಬಡಿದೆ ನೀ ದಾಸರನು
ದಣಿಗಳೊಂದಿಗೆ
ಸದೆಬಡಿದೆ ಅವರನು ಅವರ
ಸಿಂಹಾಸನಗಳ ಮೇಲೆಯೆ.
4 : ಅವರ ಸತಿಯರನ್ನು ಅಪಹರಿಸಲು
ಶತ್ರುಗಳಿಗೆ ಬಿಟ್ಟೆ
ಹೆಣ್ಣುಮಕ್ಕಳನ್ನು ಸೆರೆಹಿಡಿಯಲು ಅವರಿಗೆ
ಕೊಟ್ಟೆ
ಅವರ ಕೊಳ್ಳೆಯನ್ನು ಪಾಲು
ಮಾಡಿಕೊಳ್ಳಲು
ಪ್ರಿಯ ಇಸ್ರಯೇಲರಿಗೆ ಬಿಟ್ಟೆ.
ನಿನ್ನಲ್ಲಿ ಭಕ್ತಿವಿಶ್ವಾಸವಿಟ್ಟ ಮಕ್ಕಳು
ಅವರೇ
ತಮ್ಮಲ್ಲಿ ಹೇಸಿಗೆ ಮಾಡಿದವರನ್ನು
ದ್ವೇಷಿಸಿದವರು ಅವರೇ.
ನಿಮ್ಮ ಆಶ್ರಯಕ್ಕಾಗಿ ಮೊರೆಯಿಟ್ಟವರು
ಈ ಇಸ್ರಯೇಲರೇ.
ಓ ದೇವಾ, ನನ್ನ ದೇವಾ,
ಈ ವಿಧವೆಯ ಪ್ರಾರ್ಥನೆಯನ್ನಾಲಿಸಯ್ಯಾ !
5 : ನಿನ್ನೆ, ಇಂದು, ನಾಳೆ, ಎಂಬುದು ನಿನ್ನದೇ.
ಇರುವುದನು, ಬರುವುದನು
ಯೋಚಿಸುವವನು ನೀನೇ.
ಗತಿಸಿಹೋದುದನು ಆಲೋಚಿಸಿದಾತನು
ನೀನೇ.
6 : ನಿರೀಕ್ಷೆಯುಳ್ಳದ್ದಾಗಿವೆ ನಿನ್ನ
ನಿರ್ಧಾರಗಳೆಲ್ಲ
ಸಿದ್ಧವಿದ್ದು ‘ಇಗೋ ಇಲ್ಲಿದ್ದೇವೆ’
ಎನ್ನುವುವು ಅವೆಲ್ಲ.
ಪೂರ್ವಸಿದ್ಧವಾದವು ನಿನ್ನ ಮಾರ್ಗಗಳೆಲ್ಲ
ಪೂರ್ವವಿವೇಚನೆಯಿಂದಾದವು ನಿನ್ನ
ತೀರ್ಪುಗಳೆಲ್ಲ.
7 : ಇಗೋ ನೋಡು, ಅಸ್ಸೀರಿಯದವರು !
ಮಹತ್ತಾದ ಸೈನ್ಯ ತಮಗಿದೆಯೆಂದು
ಕೊಚ್ಚಿಕೊಳ್ಳುತಿಹರು
ಕುದುರೆಗಳು, ರಾಹುತರು,
ಇರುವುವೆಂದು ಮೆರೆಯುತಿಹರು.
ಕಾಲಾಳುಗಳ ಸೇನೆ ಶಕ್ತಿಯಲಿ ಹಿಗ್ಗುತಿಹರು
ಬಿಲ್ಲು ಗುರಾಣಿಗಳನೆ, ಕಲ್ಲು ಕವಣೆಗಳನೆ
ನೆಚ್ಚಿಕೊಂಡಿಹರು.
ನಿನ್ನನಾದರೋ ಒಪ್ಪದಿಹರು
ಸರ್ವೇಶ್ವರನೆಂದು,
ಯುದ್ಧಪಡೆಗಳನು ಪುಡಿಪುಡಿ
ಮಾಡುವವನು ನೀನೆಂದು,
‘ಸರ್ವೇಶ್ವರ’ ಎಂಬ ಬಿರುದು ನಿನಗೆ
ಮೀಸಲೆಂದು.
8 : ಅವರ ಹಿಂಸಾಚಾರವನು ನಿಲ್ಲಿಸು ದೇವಾ,
ನಿನ್ನ ಶಕ್ತಿಯಿಂದ
ಅವರ ಶೌರ್ಯವನು ಕರಗಿಸು ನಿನ್ನ
ಕೋಪಾಗ್ನಿಯಿಂದ.
ಏಕೆನೆ, ಹವಣಿಸುತಿಹರು
ಪುಣ್ಯಕ್ಷೇತ್ರಗಳನು ಹೊಲಸಾಗಿಸಲು,
ನಿನ್ನ ಮಹಿಮಾನಾಮದ ಗುಡಾರವನು
ಮಲಿನಗೊಳಿಸಲು,
ನಿನ್ನ ಬಲಿಪೀಠದ ಕೊಂಬುಗಳನು
ಮುರಿದುಹಾಕಲು.
9 : ಅವರ ಗರ್ವವನು, ದೇವಾ, ಗಮನಿಸು
ನಿನ್ನ ಕೋಪಾಗ್ನಿಯನು ಅವರ ಶಿರಗಳ
ಮೇಲೆ ಸುರಿಸು
ನನ್ನ ಮನದಾಲೋಚನೆಯನು
ಕೈಗೂಡಿಸಲು
ನನ್ನ ಕೈಗಳನು ಬಲಪಡಿಸು.
10 : ದಣಿಯನು, ದಾಸನನು
ಅರಸನನು, ಸಿಂಹಾಸನವನು
ಕೆಡವಿಬಿಡು ನಿನ್ನ ಮಾತಿನ ಮೋಡಿಯಿಂದ,
ಅಡಗಿಸಿಬಿಡು ಅವರ ಸೊಕ್ಕನು
ಈ ಮಹಿಳೆಯ ಕೈಯಿಂದ.
11 : ನಿನ್ನ ಶಕ್ತಿ ದೇವಾ, ಅಂಕೆಸಂಖ್ಯೆಗಳಲ್ಲಿಲ್ಲ
ನಿನ್ನ ಶೌರ್ಯ ಶೂರರ
ಸಾಮಥ್ರ್ಯದಲ್ಲಿಲ್ಲ.
ಏಕೆನೆ ದೀನದಲಿತರ ದೇವ ನೀನು
ದುರ್ಬಲರ, ಶೋಷಿತರ ಸಹಾಯಕ ನೀನು.
ದಿಕ್ಕಿಲ್ಲದವರ ಉದ್ಧಾರಕ,
ನಿರಾಶೆಗೊಂಡವರ ಆಶ್ರಯ ನೀನು.
12 : ದಯಮಾಡು, ದಯಮಾಡು,
ನನ್ನ ಪಿತೃಗಳ ದೇವಾ
ಇಸ್ರಯೇಲಿಗೆ ಸ್ವಾಸ್ತ್ಯವನ್ನೀಯುವ ದೇವಾ
ಭೂಪರಗಳ ಒಡೆಯ, ಜಲರಾಶಿಗಳ
ಸೃಷ್ಟಿಕರ್ತ
ಸೃಷ್ಟಿಸಮಸ್ತಗಳ ರಾಜ, ಆಲಿಸು ನನ್ನೀ
ಪ್ರಾರ್ಥನೆಯ.
13 : ನಿನ್ನ ಒಡಂಬಡಿಕೆಯನು, ನಿನ್ನ ಈ
ಶ್ರೀನಿವಾಸವನು,
ಸಿಯೋನ್ ಪರ್ವತವನು, ನಿನ್ನವರ
ಮನೆತನವನು,
ನಾಶಮಾಡಲು ಮಾಡಿಹರು ಕ್ರೂರ
ಯೋಜನೆಗಳನು.
ಗಾಯಗೊಳಿಸಿ ಸಾಯಿಸಲು
ಈ ಶತ್ರುಗಳನು
ಕರುಣಿಸೆನಗೆ ಕಪಟ ನಾಲಗೆಯೊಂದನು.
14 : ತೋರಿಸೀಗ ಸರ್ವಜಾತಿ ಜನಾಂಗಗಳಿಗೆ
ಸರ್ವಶಕ್ತ, ಸರ್ವವಲ್ಲಭ, ಸರ್ವೇಶ್ವರ
ನೀನೆಂದೇ;
ಇಸ್ರಯೇಲ್ ಕುಲಕ್ಕೆ ಸಂರಕ್ಷಕನಾರೂ
ಇಲ್ಲ ನೀನಲ್ಲದೆ.