Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜೂಡಿತ


1 : ನಡೆದ ಸಂಗತಿಯನ್ನೆಲ್ಲ ಜೂಡಿತಳಿಗೆ ತಿಳಿಸಲಾಯಿತು. ಜೂಡಿತಳು ಮೆರಾರಿಯ ಮಗಳು. ಮೆರಾರಿ ಓಕ್ಸನಿಗೆ, ಓಕ್ಸನು ಜೋಸೆಫನಿಗೆ, ಜೋಸೆಫ್ ಓಜಿಯೆಲನಿಗೆ, ಓಜಿಯೆಲನು ಎಲ್ಕೀಯನಿಗೆ, ಎಲ್ಕೀಯನು ಅನನೀಯನಿಗೆ ಹುಟ್ಟಿದವರು. ಅನನೀಯನು ಗಿದ್ಯೋನನಿಗೆ, ಗಿದ್ಯೋನನು ರಫಾಯಿಮನಿಗೆ, ರಫಾಯಿಮನು ಅಹೀತುಬನಿಗೆ, ಅಹೀತುಬನು ಎಲೀಜನಿಗೆ, ಎಲೀಜನು ಹಿಲ್ಕೀಯನಿಗೆ ಹುಟ್ಟಿದವರು. ಹಿಲ್ಕೀಯನು ಎಲೀಯಾಬನಿಗೆ, ಎಲಿಯಾಬನು ನಥಾನಿಯೆಲನಿಗೆ, ನಥಾನಿಯೆಲನು ಸಲಾಮಿಯೇಲನಿಗೆ, ಸಲಾಮಿಯೇಲನು ಸರಾಸದೇಯನಿಗೆ, ಸರಾಸದೇಯನು ಇಸ್ರಯೇಲನಿಗೆ ಹುಟ್ಟಿದವರು.
2 : ಅವಳ ಕುಲದವನೂ ಕುಟುಂಬದವನೂ ಆದ ಮನಸ್ಸೆ ಅವಳ ಗಂಡ. ಆತ ಜವೆಗೋದಿಯ ಸುಗ್ಗಿಕಾಲದಲ್ಲಿ ತೀರಿಹೋಗಿದ್ದ.
3 : ಕೊಯ್ದ ಪೈರಿನ ಕಂತೆಗಳನ್ನು ಕಟ್ಟುವುದನ್ನು ನೋಡಿಕೊಳ್ಳುವ ಉಸ್ತುವಾರಿ ಅವನಿಗಿತ್ತು; ಆಗ ಹೊಲದಲ್ಲೇ ಬಿಸಿಲಿನ ತಾಪಕ್ಕೆ ಸಿಕ್ಕಿಬಿದ್ದು, ಹಾಸಿಗೆ ಹಿಡಿದು ಸತ್ತುಹೋದ. ಅವನು ಸತ್ತಿದ್ದು ಸ್ವಂತ ಊರಾದ ಬೆಥೂಲಿಯದಲ್ಲಿ; ದೋತಾನಿಗೂ ಬಲಮೋನಿಗೂ ನಡುವೆ ಇರುವ ಪೂರ್ವಜರ ಸಮಾಧಿಯಲ್ಲಿ ಅವನಿಗೆ ಭೂಸ್ಥಾಪನೆ ಮಾಡಲಾಗಿತ್ತು.
4 : ಹೀಗೆ ವಿಧವೆಯಾದ ಜೂಡಿತಳು ಮೂರುವರ್ಷ ನಾಲ್ಕು ತಿಂಗಳವರೆಗೆ ಮನೆಯ ಒಳಗೆ ಇದ್ದಳು.
5 : ತನಗಾಗಿಯೇ ಒಂದು ಮೇಲು ಕೊಠಡಿಯನ್ನು ಕಟ್ಟಿಕೊಂಡು ಅಲ್ಲಿ ಗೋಣಿತಟ್ಟಿನ ಒಳಉಡಿಗೆಯನ್ನೂ ವಿಧವೆಯ ವಸ್ತ್ರಗಳನ್ನೂ ತೊಟ್ಟುಕೊಂಡು ಶೋಕದ ದಿನಗಳನ್ನು ಉಪವಾಸ, ಪ್ರಾರ್ಥನೆಗಳಿಂದ ಕಳೆಯುತ್ತಿದ್ದಳು.
6 : ಸಬ್ಬತ್ ಹಾಗೂ ಅದರ ಹಿಂದಿನ ದಿನ, ಹುಣ್ಣಿಮೆ ಹಾಗು ಅದರ ಹಿಂದಿನ ದಿನ ಮತ್ತು ಹಬ್ಬದ ದಿನಗಳಲ್ಲಿ ಮಾತ್ರ ಊಟ ಮಾಡುತ್ತಿದ್ದಳು.
7 : ಅವಳು ಸುರಸುಂದರಿಯಾಗಿಯೂ ನೋಡುವುದಕ್ಕೆ ರಮಣೀಯವಾಗಿಯೂ ಇದ್ದಳು. ಗಂಡನಿಂದ ಪಡೆದ ಚಿನ್ನಬೆಳ್ಳಿಯ ಆಭರಣಗಳು, ದಾಸದಾಸಿಯರು, ಪಶುಪ್ರಾಣಿಗಳು, ಹೊಲಗದ್ದೆ ಇವೆಲ್ಲಾ ಅವಳಿಗಿತ್ತು.
8 : ಸ್ವಂತ ಆಸ್ತಿಪಾಸ್ತಿಯಿಂದಲೇ ಜೀವನ ಸಾಗಿಸುತ್ತಿದ್ದಳು. ಅವಳಿಗೆ ವಿರುದ್ಧ ಯಾರೂ ಒಂದೇ ಒಂದು ಮಾತನ್ನೂ ಆಡುತ್ತಿರಲಿಲ್ಲ. ಅವಳಿಗೆ ದೇವರಲ್ಲಿ ಅಷ್ಟೊಂದು ಭಯಭಕ್ತಿಯಿತ್ತು.
9 : ನೀರಿನ ಸರಬರಾಜು ಕಡಿಮೆಯಾಗಿ ಜನರು ಎಷ್ಟು ಕಂಗೆಟ್ಟಿದ್ದಾರೆ, ಊರ ಹಿರಿಯರ ವಿರುದ್ಧ ಎಷ್ಟು ಕಟುವಾಗಿ ದೂರು ಕೊಟ್ಟಿದ್ದಾರೆ ಎಂದು ಜೂಡಿತಳಿಗೆ ಗೊತ್ತಾಯಿತು. ಉಜ್ಜೀಯನು ಜನರಿಗೆ ಸಮಾಧಾನ ಹೇಳಿದ್ದು ಹಾಗು ಐದೇ ದಿನಗಳೊಳಗೆ ಪಟ್ಟಣವನ್ನು ಅಸ್ಸೀರಿಯರಿಗೆ ಬಿಟ್ಟುಕೊಡುವುದಾಗಿ ಶಪಥ ಮಾಡಿದ್ದು, ಇವೆಲ್ಲವನ್ನು ಅವಳಿಗೆ ತಿಳಿಸಲಾಯಿತು.
10 : ತಕ್ಷಣವೇ ಜೂಡಿತ್ ತನ್ನ ಮನೆವಾರ್ತೆಯವಳನ್ನು ಕಳುಹಿಸಿ, ಚಟ್ರಿ ಮತ್ತು ಚರ್ಮಿ ಎಂಬ ಇಬ್ಬರು ಊರ ಹಿರಿಯರನ್ನು ಕರೆಸಿದಳು.
11 : ಅವರು ಬಂದಾಗ ಜೂಡಿತ್ ಅವರಿಗೆ ಹೀಗೆಂದಳು: “ಬೆಥೂಲಿಯದ ಜನನಾಯಕರೇ, ನನಗೆ ಕಿವಿಗೊಡಿ. ನೀವಿಂದು ಮಾಡಿದ್ದು ತಪ್ಪು. ನಿಗದಿತ ಕಾಲದೊಳಗೆ ದೇವರ ಸಹಾಯ ದೊರಕದಿದ್ದರೆ, ಶತ್ರುಗಳಿಗೆ ಪಟ್ಟಣವನ್ನು ಬಿಟ್ಟುಕೊಡುವುದಾಗಿ ಜನರಿಗೆ ಪ್ರಮಾಣವಚನ ಕೊಟ್ಟದ್ದು ತಪ್ಪು. ಇದರಿಂದ ದೇವರನ್ನು ಕೆಣಕಿದಂತಾಗಿದೆ.
12 : ದೇವರನ್ನು ಇಂದು ಪರೀಕ್ಷೆ ಮಾಡುವುದಕ್ಕೆ ಜನರ ನಡುವೆ ದೇವರ ಸ್ಥಾನದಲ್ಲಿ ಕುಳಿತುಕೊಳ್ಳುವುದಕ್ಕೆ ನೀವು ಯಾರು?
13 : ಸರ್ವಶಕ್ತ ಸರ್ವೇಶ್ವರನನ್ನೇ ಪರೀಕ್ಷೆ ಮಾಡುವಷ್ಟು ಧೈರ್ಯ ನಿಮಗೆಲ್ಲಿಂದ ಬಂದಿತು? ನಿಮಗೆ ಏನೂ ಅರ್ಥವಾಗಿಲ್ಲ, ಇನ್ನು ಮುಂದಕ್ಕೂ ಅರ್ಥಮಾಡಿಕೊಳ್ಳುವುದಿಲ್ಲ.
14 : ಮಾನವ ಹೃದಯದ ಅಂತರಾಳವನ್ನೇ ತಿಳಿಯದ, ಮಾನವನ ವಿವೇಚನಾ ಶಕ್ತಿಯನ್ನೇ ಗ್ರಹಿಸಲಾಗದ ನೀವು, ಎಲ್ಲವನ್ನೂ ಉಂಟುಮಾಡಿದ ದೇವರನ್ನು ಗ್ರಹಿಸಲು ನಿಮ್ಮಿಂದ ಸಾಧ್ಯವೇ? ಅವರ ಮನಸ್ಸನ್ನು ಅಳೆಯಲು, ಅವರ ಯೋಜನೆಗಳನ್ನು ತಿಳಿಯಲು ನಿಮ್ಮಿಂದಾದೀತೆ? ಬೇಡ, ಸಹೋದರರೇ, ದೇವರಾದ ಸರ್ವೇಶ್ವರನನ್ನು ರೇಗಿಸಬೇಡಿ.
15 : ಬರುವ ಐದು ದಿನಗಳಲ್ಲಿ ನಮಗೆ ನೆರವಾಗಲು ಅವರಿಗೆ ಚಿತ್ತವಿಲ್ಲದಿದ್ದರೂ ತಮಗೆ ಇಷ್ಟಬಂದಷ್ಟು ದಿನ ನಮ್ಮನ್ನು ಕಾಪಾಡಲು ಶಕ್ತರಾಗಿದ್ದಾರೆ; ಅಂತೆಯೇ ಶತ್ರುಗಳ ಸಮ್ಮುಖದಲ್ಲಿ ನಮ್ಮನ್ನು ನಾಶಗೊಳಿಸಲು ಶಕ್ತರಾಗಿ ಇದ್ದಾರೆ.
16 : ನಮ್ಮ ದೇವರಾದ ಸರ್ವೇಶ್ವರನ ಯೋಚನೆಗಳ ಬಗ್ಗೆ ದೃಢ ಷರತ್ತು ಹಾಕಲು ನಮಗೆ ಹಕ್ಕಿಲ್ಲ. ಮನುಷ್ಯರಂತೆ ದೇವರನ್ನು ಬೆದರಿಸಲಾಗದು; ಮಾನವರಂತೆ ಅವರನ್ನು ಪುಸಲಾಯಿಸಲೂ ಆಗದು.
17 : ಬದಲಿಗೆ ಅವರು ನಮ್ಮನ್ನು ರಕ್ಷಿಸಲೆಂದು ಸಹನೆಯಿಂದ ಕಾಯೋಣ. ನಮಗೆ ನೆರವಾಗಬೇಕೆಂದು ದೈನ್ಯದಿಂದ ಅವರನ್ನು ಪ್ರಾರ್ಥಿಸೋಣ. ಅವರಿಗೆ ಇಷ್ಟವಿದ್ದರೆ ಖಂಡಿತವಾಗಿಯೂ ಅವರು ನಮ್ಮ ಮೊರೆಯನ್ನು ಕೇಳುವರು.
18 : “ನಿಜವಾಗಿಯೂ ಇತ್ತೀಚೆಗೆ, ಈಗಲೂ ಸಹ, ಮಾನವ ಕೈಕೃತಿಗಳಾದ ದೇವರುಗಳನ್ನು ಪೂಜಿಸುವಂಥ ಕುಲವಾಗಲೀ ಕುಟುಂಬವಾಗಲೀ ಊರುಕೇರಿಗಳಾಗಲೀ ನಮ್ಮಲ್ಲಿಲ್ಲ. ಹಿಂದಿನ ಕಾಲದಲ್ಲಿ ಅವರು ಪೂಜಿಸಿದ್ದುಂಟು.
19 : ಈ ಕಾರಣ ಅವರು ಕೊಲೆಗೂ ಸುಲಿಗೆಗೂ ಗುರಿಯಾದರು. ಶತ್ರುಗಳ ಕೈಯಲ್ಲಿ ಅತೀವ ಸಂಕಟಕೆ ಒಳಗಾಗಿ ನಾಶವಾದರು.
20 : ನಾವಾದರೋ, ನಮ್ಮ ದೇವರನ್ನು ಬಿಟ್ಟು ಬೇರೆ ಯಾವ ದೇವರನ್ನೂ ಒಪ್ಪುವುದಿಲ್ಲ; ಇಂತಿರಲು, ಅವರು ನಮ್ಮನ್ನು ತೃಣೀಕರಿಸುವುದಿಲ್ಲ, ನಮ್ಮ ರಾಷ್ಟ್ರವನ್ನು ಪರಿತ್ಯಜಿಸುವುದಿಲ್ಲ ಎಂಬ ಭರವಸೆ ನಮಗಿರಬೇಕು.
21 : “ಒಂದು ವೇಳೆ, ನಿಮ್ಮ ನಿರೀಕ್ಷೆಯಂತೆ, ಶತ್ರುಗಳು ನಮ್ಮನ್ನು ಆಕ್ರಮಿಸಿಕೊಂಡರೆ, ಆಗ ಇಡೀ ಜುದೇಯವು ಆಕ್ರಮಕ್ಕೊಳಗಾಗುವುದು. ನಮ್ಮ ಪವಿತ್ರ ಕ್ಷೇತ್ರಗಳು ಕೊಳ್ಳೆಯಾಗುವುವು. ಅವುಗಳನ್ನು ಅಪವಿತ್ರಗೊಳಿಸಿದ್ದಕ್ಕಾಗಿ ನಮ್ಮ ರಕ್ತತೆತ್ತಿ ಪರಿಹಾರ ಮಾಡಬೇಕಾಗುವುದು.
22 : ನಮ್ಮ ಸಹೋದರರ ಕೊಲೆ, ನಮ್ಮ ರಾಷ್ಟ್ರದ ದಾಸ್ಯ, ನಮ್ಮ ಸಂತಾನದ ನಾಶ, ಇವೆಲ್ಲವು ಇತರ ರಾಷ್ಟ್ರಗಳ ಕೈಕೆಳಗಿರುವ ನಮ್ಮ ತಲೆಯ ಮೇಲೆ ಹಿಮ್ಮೆಟ್ಟಿ ಬರುವುವು; ನಮ್ಮನ್ನು ಆಳುವವರು ನಮ್ಮನ್ನು ತುಚ್ಛವಾಗಿ ಎಣಿಸುವರು. ನಮ್ಮನ್ನು ನಿಂದೆ ಅವಮಾನಕ್ಕೆ ಗುರಿಮಾಡುವರು.
23 : ನಾವು ಶರಣಾಗತರಾಗುವುದರಿಂದ ಅವರ ವಿಶ್ವಾಸವನ್ನು ಗಳಿಸಲಾಗುವುದಿಲ್ಲ. ಇಲ್ಲ, ನಮ್ಮ ದೇವರಾದ ಸರ್ವೇಶ್ವರ, ನಾವು ಶರಣಾಗತರಾದರೆ, ನಮ್ಮನ್ನು ನಾಚಿಕೆ ಗೀಡುಮಾಡುವರು.
24 : ಆದ್ದರಿಂದ ಸಹೋದರರೇ, ನಮ್ಮ ಅಣ್ಣತಮ್ಮಂದಿರಿಗೆ ಒಳ್ಳೆಯ ಆದರ್ಶವನ್ನು ನೀಡೋಣ. ಏಕೆಂದರೆ ಅವರ ಅಳಿವು-ಉಳಿವು ನಮ್ಮ ಕೈಯಲ್ಲಿದೆ; ನಮ್ಮ ದೇವಾಲಯ, ಗರ್ಭಗುಡಿ, ಬಲಿಪೀಠ, ಎಲ್ಲವೂ ನಮ್ಮ ಜವಾಬ್ದಾರಿಯಾಗಿದೆ.
25 : “ಇಂತಿರಲು, ನಮ್ಮ ಪೂರ್ವಜರನ್ನು ಪರೀಕ್ಷಿಸಿದಂತೆ ಈಗ ನಮ್ಮನ್ನು ಪರೀಕ್ಷಿಸುತ್ತಿರುವ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸೋಣ.
26 : ದೇವರು ಅಬ್ರಹಾಮನೊಂದಿಗೆ ಹೇಗೆ ನಡೆದುಕೊಂಡರು? ಇಸಾಕನನ್ನು ಹೇಗೆ ಪರೀಕ್ಷಿಸಿದರು? ಸಿರಿಯಾದ ಮೆಸಪಟೋಮಿಯಾದಲ್ಲಿ ತನ್ನ ಸೋದರಮಾವನಾದ ಲಾಬಾನನ ಕುರಿಮಂದೆಯನ್ನು ಕಾಯುತ್ತಿದ್ದ ಯಕೋಬನಿಗೆ ಏನಾಯಿತು? ಎಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿ.
27 : ಅವರ ಅಂತರಂಗವನ್ನು ಪರಿಶೋಧಿಸುವ ಸಲುವಾಗಿ ದೇವರು ಅವರನ್ನು ಪರೀಕ್ಷಿಸಿದರು. ಅಂತೆಯೇ ಅವರು ಈಗ ನಮ್ಮ ಮೇಲೆ ಸೇಡನ್ನು ತೀರಿಸುತ್ತಿಲ್ಲ; ಬದಲಿಗೆ ತಮಗೆ ಪ್ರಿಯವಾದವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ,” ಎಂದಳು.
28 : ಆಗ ಉಜ್ಜೀಯನು, “ನೀನು ಹೇಳಿದ್ದು ಎಲ್ಲವೂ ನಿನ್ನ ನಿಷ್ಕಪಟ ಹೃದಯದ ಅಂತರಾಳದಿಂದ ಹೊರಬಂದಿದೆ. ಯಾರೂ ಅದಕ್ಕೆ ವಿರುದ್ಧ ಮಾತೆತ್ತುವಂತಿಲ್ಲ.
29 : ನೀನು ಬುದ್ಧಿಶಕ್ತಿಯನ್ನು ತೋರಿಸಿದ್ದು ಇಂದೇ ಮೊದಲಲ್ಲ, ಚಿಕ್ಕಂದಿನಿಂದಲೂ ನೀನು ಎಷ್ಟೋ ಚುರುಕು ಬುದ್ಧಿಯುಳ್ಳವಳು ಎಂದು ಜನರಿಗೆ ಗೊತ್ತು.
30 : ನೀರಡಿಕೆಯಿಂದ ಕಂಗಾಲಾಗಿದ್ದ ಜನರು ನಮ್ಮನ್ನು ಬಲವಂತಪಡಿಸಿದ್ದರಿಂದ ನಾವು ಅವರಿಗೆ ಹಾಗೆ ಮಾತುಕೊಟ್ಟು ದೃಢ ಶಪಥಮಾಡಿದೆವು.
31 : ನೀನು ಭಯಭಕ್ತಿಯುಳ್ಳ ಮಹಿಳೆ. ನಮ್ಮ ಬಾವಿಗಳು ತುಂಬುವಷ್ಟು ಮಳೆಗರೆಯಲಿ, ನಾವು ಸೊರಗಿಹೋಗದೆ ಬದುಕುವಂತಾಗಲಿ ಎಂದು ಸರ್ವೇಶ್ವರನಲ್ಲಿ ಪ್ರಾರ್ಥಿಸು,” ಎಂದನು.
32 : ಆಗ ಜೂಡಿತ್, “ಕೇಳಿ, ನಾನು ಏನನ್ನೋ ಮಾಡಬೇಕೆಂದಿದ್ದೇನೆ. ಯುಗಯುಗಾಂತರಕ್ಕೂ ನಮ್ಮ ಸಂತತಿಯವರಿಗೆ ಅನುವಂಶಿಕವಾಗಿ ಜ್ಞಾಪಕಾರ್ಥವಾಗಿರುವಂಥ ಸಂಗತಿಯಿದು.
33 : ಈ ರಾತ್ರಿ ನೀವು ಊರಿನ ಹೆಬ್ಬಾಗಿಲ ಬಳಿ ಇರಬೇಕು. ನಾನು ನನ್ನ ಸೇವಕಿಯೊಂದಿಗೆ ಆಚೆ ಹೋಗುತ್ತೇನೆ. ಶತ್ರುಗಳಿಗೆ ನಮ್ಮ ಪಟ್ಟಣವನ್ನು ಬಿಟ್ಟುಕೊಡಲು ಗೊತ್ತು ಮಾಡಿರುವ ಅವಧಿಯೊಳಗೆ, ಇಸ್ರಯೇಲನ್ನು ರಕ್ಷಿಸಲು ದೇವರು ನನ್ನನ್ನು ಉಪಯೋಗಿಸುವರು.
34 : ನಾನು ಏನು ಮಾಡಬೇಕೆಂದಿದ್ದೇನೆಂದು ಕೇಳಬೇಡಿ. ನನ್ನ ಕೆಲಸ ಮುಗಿಯುವವರೆಗೆ ನಿಮಗೇನೂ ನಾನು ಹೇಳುವುದಿಲ್ಲ,” ಎಂದಳು.
35 : ಆಗ ಉಜ್ಜೀಯನು ಮತ್ತು ಪ್ರಮುಖರು, “ಶಾಂತಿಸಮಾಧಾನದಿಂದ ತೆರಳು, ನಮ್ಮ ಶತ್ರುಗಳ ಮೇಲೆ ಸೇಡು ತೀರಿಸಲು ಸರ್ವೇಶ್ವರ ನಿನಗೆ ದಾರಿತೋರಿಸಲಿ,” ಎಂದು ಹೇಳಿ,
36 : ಮಹಡಿಯಿಂದಿಳಿದು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು.

· © 2017 kannadacatholicbible.org Privacy Policy