Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜೂಡಿತ


1 : ಹದಿನೆಂಟನೇ ವರ್ಷದ ಮೊದಲನೇ ತಿಂಗಳ 22ನೇ ದಿನ ಅಸ್ಸೀರಿಯರ ಅರಸ ನೆಬೂಕದ್ನೆಚ್ಚರನ ಅರಮನೆಯಲ್ಲಿ ಒಂದು ಸುದ್ದಿ ಹಬ್ಬಿತು. ಈ ಮೊದಲೇ ಶಪಥಮಾಡಿದಂತೆ, ಅರಸನಿಗೆ ಬೆಂಬಲ ನೀಡದ ಎಲ್ಲ ದೇಶಗಳ ಮೇಲೆ ಸೇಡನ್ನು ತೀರಿಸಿಕೊಳ್ಳುವುದು ಖಂಡಿತ ಎಂದು ತಿಳಿದುಬಂದಿತು.
2 : ಅರಸನು ತನ್ನ ಮಂತ್ರಿ ಮಂಡಲದವರನ್ನೂ ಹಿರಿಯ ದಳಪತಿಗಳನ್ನೂ ಕರೆಸಿ, ಗುಟ್ಟಾಗಿ ಸಮಾಲೋಚನೆ ನಡೆಸಿದನು. ತನಗೆ ಬೆಂಬಲ ನೀಡದ ದೇಶಗಳನ್ನು ಸಂಪೂರ್ಣವಾಗಿ ನಾಶಗೊಳಿಸಲು ತೀರ್ಮಾನಿಸಿರುವುದಾಗಿ ಅರಸನು ಅವರಿಗೆ ಖುದ್ದಾಗಿ ತಿಳಿಸಿದನು.
3 : ಅರಸನ ಬೇಡಿಕೆಗಳನ್ನು ನಿರಾಕರಿಸಿದ ಎಲ್ಲರನ್ನೂ ಸಂಹರಿಸಬೇಕೆಂದು ರಾಜಾಜ್ಞೆ ಹೊರಡಿಸಲಾಯಿತು.
4 : ಈ ಗುಪ್ತ ಸಮಾಲೋಚನೆ ನಡೆದ ಬಳಿಕ ಅಸ್ಸೀರಿಯದ ಅರಸ ನೆಬೂಕದ್ನೆಚ್ಚರನು ತನಗೆ ಮಾತ್ರ ಅಧೀನನಾಗಿದ್ದ ಪ್ರಧಾನ ಸೇನಾಧಿಪತಿ ಹೊಲೊಫರ್ನೆಸ್ ಎಂಬವನನ್ನು ಕರೆಸಿದನು. ಅವನಿಗೆ, “ಸಮಸ್ತ ಜಗತ್ತಿನ ಒಡೆಯನಾದ ರಾಜಾಧಿರಾಜನ ಆಜ್ಞೆಯಿದು:
5 : ಹೊರಡು, ಎದೆಕುಂದದೆ ಯುದ್ಧಮಾಡು. ವೀರ ಪ್ರವೀಣರನ್ನು ಆಯ್ದುಕೊ. 120 ಸಾವಿರ ಸೈನಿಕರನ್ನೂ 12 ಸಾವಿರ ರಾಹುತರನ್ನೂ ಆರಿಸಿಕೊಂಡು
6 : ನನ್ನ ಕರೆಯನ್ನು ತಿರಸ್ಕರಿಸಿದ ಪಶ್ಚಿಮ ದೇಶಗಳ ಮೇಲೆ ಧಾಳಿಮಾಡು.
7 : ನೆಲಜಲ ಮುಂತಾದ ಮೂಲಭೂತ ಪದಾರ್ಥಗಳನ್ನು ಸಜ್ಜುಗೊಳಿಸುವಂತೆ ಸೈನಿಕರಿಗೆ ಆಜ್ಞಾಪಿಸು. ಏಕೆಂದರೆ, ನಾನು ರೌದ್ರಾವೇಶನಾಗಿ ಆ ನಾಡುಗಳನ್ನೆಲ್ಲ ಆಕ್ರಮಿಸಿಕೊಳ್ಳುವೆ. ನನ್ನ ಸೈನ್ಯ ಧರೆಯೆಲ್ಲವನ್ನೂ ಮುತ್ತಿಕೊಳ್ಳುವುದು. ನಾನು ಸರ್ವವನ್ನೂ ಸೂರೆ ಮಾಡುವೆನು.
8 : ಕಣಿವೆಗಳೂ ಸರೋವರಗಳೂ ಗಾಯಗೊಂಡ ಶತ್ರುಗಳಿಂದ ತುಂಬಿಹೋಗುವುವು. ನದಿಗಳು ಸತ್ತವರ ಶವಗಳಿಂದ ತುಂಬಿ ಹರಿಯುವುವು. ಭೂಮಿಯ ಕಟ್ಟಕಡೆಯವರೆಗೆ ಶತ್ರುಗಳು ಸೆರೆಹೋಗುವಂತೆ ಮಾಡುವೆನು.
9 : “ಈಗ ಹೊರಡು; ನನಗಾಗಿ ಇಡೀ ಪ್ರಾಂತ್ಯವನ್ನು ಆಕ್ರಮಿಸಿಕೊ.
10 : ಶರಣಾಗತರಾದವರನ್ನು ಸೆರೆಯಲ್ಲಿಡು. ನಾನು ಬಂದು ಅವರನ್ನು ಶಿಕ್ಷಿಸುತ್ತೇನೆ.
11 : ಎದುರಿಸುವಂಥವರಾರಿಗೂ ಕರುಣೆ ತೋರಿಸಬೇಕಾಗಿಲ್ಲ. ಎಲ್ಲರನ್ನು ಖಡ್ಗದಿಂದ ಹತಮಾಡು. ನಿನಗೆ ವಹಿಸಿಕೊಟ್ಟ ಪ್ರದೇಶವನ್ನೆಲ್ಲ ಕೊಳ್ಳೆಹೊಡೆ.
12 : ನನ್ನ ಜೀವದಾಣೆ, ನನ್ನ ಸಜೀವ, ಸಶಕ್ತ ರಾಜ್ಯದ ಮೇಲೆ ಪ್ರಯಾಣ ಮಾಡಿ ಇದ್ದೇನೆ. ನನ್ನ ಭುಜ ಬಲದಿಂದ ಇದನ್ನೆಲ್ಲ ಈಡೇರಿಸುವೆನು.
13 : ನೀನಾದರೋ ನಿನ್ನ ಪ್ರಭುವಿನ ಆಜ್ಞೆಗಳನ್ನು ಚಾಚೂ ತಪ್ಪದೆ ಈಡೇರಿಸಬೇಕು. ತಡಮಾಡಬೇಡ. ನಾನು ಹೇಳಿದಂತೆ ಕಟ್ಟುನಿಟ್ಟಾಗಿ ಮಾಡು,” ಎಂದನು.
14 : ಅರಸನ ಸನ್ನಿಧಿಯಿಂದ ಹೊರಟುಬಂದ ಹೊಲೊಫರ್ನೆಸ್ ದಂಡನಾಯಕರನ್ನೂ ದಳಪತಿಗಳನ್ನೂ ಅಸ್ಸೀರಿಯ ಸೈನ್ಯದ ವಿವಿಧ ಅಧಿಕಾರಿಗಳನ್ನೂ ಕರೆಸಿದನು.
15 : ಒಡೆಯನ ಆಜ್ಞಾನುಸಾರವಾಗಿ ಶೂರ ಸೈನಿಕರನ್ನು ಎಚ್ಚರಿಕೆಯಿಂದ ಆರಿಸಿಕೊಂಡನು.
16 : ಸುಮಾರು 120 ಸಾವಿರ ಸೈನಿಕರು, 12 ಸಾವಿರ ರಾಹುತರು ಬಿಲ್ಲು ಬಾಣಗಳೊಂದಿಗೆ ಕಾಳಗಕ್ಕೆ ಸುಸಜ್ಜಿತರಾಗುವಂತೆ ಮಾಡಿದನು.
17 : ಸಾಮಾನು ಸರಂಜಾಮುಗಳನ್ನು ಸಾಗಿಸಲು ಅಸಂಖ್ಯಾತ ಒಂಟೆಗಳು, ಕುದುರೆಗಳು, ಕತ್ತೆಗಳು, ಹಾಗೂ ಆಹಾರಕ್ಕಾಗಿ ಕುರಿ ಮೇಕೆಗಳು, ಹೋತಹೋರಿಗಳು ಸಿದ್ಧವಾದವು.
18 : ಇನ್ನೂ ಹೆಚ್ಚಿನ ಅವಶ್ಯಕತೆಗಳಿಗಾಗಿ ಪ್ರತಿ ಒಬ್ಬನಿಗೂ ಬೆಳ್ಳಿ ಬಂಗಾರವನ್ನು ರಾಜನ ಭಂಡಾರದಿಂದ ಕೊಡಲಾಯಿತು.
19 : ಅರಸ ನೆಬೂಕದ್ನೆಚರನಿಗೆ ಮುಂದಾಳಾಗಿ ಹೊಲೊಫೆರ್ನೆಸ್ ತನ್ನ ಸೈನ್ಯದೊಂದಿಗೆ ಪಶ್ಚಿಮ ಪ್ರಾಂತ್ಯವನ್ನೆಲ್ಲಾ ಆಕ್ರಮಿಸಿಕೊಳ್ಳಲು ಹೊರಟನು. ರಾಹುತರು, ರತಗಳು, ಆಯ್ಕೆಯಾದ ಕಾಲಾಳುಗಳು – ಎಲ್ಲರು ಅವನೊಂದಿಗೆ ಹೋದರು.
20 : ಅವನನ್ನು ಹಿಂಬಾಲಿಸಿದ ಇತರರು ಮಿಡತೆಗಳ ದಂಡಿನಂತೆ, ಸಮುದ್ರದ ಉಸುಬಿನಂತೆ ಕಂಡರು. ಅವರನ್ನು ಎಣಿಕೆಮಾಡಲು ಯಾರಿಂದಲೂ ಆಗುತ್ತಿರಲಿಲ್ಲ.
21 : ಹೀಗೆ ಅವರು ನಿನೆವೆಯಿಂದ ಹೊರಟು ಮೂರು ದಿನಗಳ ಪ್ರಯಾಣ ಮಾಡಿ ಬೆಕ್ತಿಲೀತ್ ಬಯಲನ್ನು ಸೇರಿದರು. ಅಲ್ಲಿಂದ ಉತ್ತರಕ್ಕೆ ಸಿಲಿಸಿಯಾದ ಗುಡ್ಡದ ಬಳಿ ಡೇರೆಗಳನ್ನು ಹಾಕಿದರು.
22 : ಕಾಲಾಳು, ರಾಹುತರು ಮತ್ತು ರಥಗಳೊಂದಿಗೆ ಕೂಡಿದ ಇಡೀ ಸೈನ್ಯದೊಂದಿಗೆ ಹೊಲೊಫರ್ನೆಸನು ಮಲೆನಾಡಿಗೆ ಸಾಗಿದನು.
23 : ಪುಟ್ ಮತ್ತು ಲೂದ್ ಮಾರ್ಗವಾಗಿ ಹೋಗಿ ಸಿಯೋನಿನ ದಕ್ಷಿಣ ವಿಭಾಗದ ಮರುಭೂಮಿಯ ಅರುಗಿನಲ್ಲಿದ್ದ ರಾಸಿಸ್ ಹಾಗು ಇಷ್ಮಾಯೇಲ್ ಅವರ ಮಕ್ಕಳನ್ನು ಸೆರೆಹಿಡಿದನು.
24 : ಅಲ್ಲಿಂದ ಯೂಫ್ರೆಟಿಸ್ ಬದಿಯಲ್ಲಿ ಸಾಗುತ್ತಾ ಮೆಸಪಟೋಮಿಯಾವನ್ನು ದಾಟಿದನು. ಅಲ್ಲಿದ್ದ ಅಬ್ರೋನ್ ನದಿಯ ಸರಹದ್ದಿನಲ್ಲಿದ್ದ ಕೋಟೆಗಳನ್ನು ನೆಲಸಮಮಾಡಿ, ಸಮುದ್ರ ತೀರವನ್ನು ಸೇರಿದನು.
25 : ಅನಂತರ ಸಿಲಿಸಿಯಾದ ಪ್ರಾಂತ್ಯಗಳನ್ನು ಮುತ್ತಿ, ಹೋರಾಟಕ್ಕೆ ಬಂದವರನ್ನೆಲ್ಲ ಸಂಹರಿಸಿದನು. ಅರೇಬಿಯಾಭಿ ಮುಖವಾಗಿರುವ ಜಾಫೇತಿನ ದಕ್ಷಿಣ ಸೀಮೆಗಳ ಮೂಲಕ ಸಾಗುತ್ತಾ ಮಿದ್ಯಾನರನ್ನು ಸುತ್ತುಗಟ್ಟಿದನು. ಅವರ ಗುಡಾರಗಳನ್ನು ಸುಟ್ಟುಹಾಕಿ,
26 : ಅವರ ಕುರಿ ಮಂದೆಗಳನ್ನು ದೋಚಿಕೊಂಡು, ದಮಸ್ಕಸ್ಸಿನ ಬಯಲಿಗೆ ಇಳಿದನು.
27 : ಅದು ಗೋದಿಯ ಸುಗ್ಗಿಕಾಲವಾಗಿತ್ತು. ಹೊಲೊಫರ್ನೆಸ್ ಆ ಹೊಲಗದ್ದೆಗಳಿಗೆ ಬೆಂಕಿಯಿಟ್ಟು, ದನಕರುಗಳನ್ನೂ ಕುರಿಮಂದೆಗಳನ್ನೂ ನಾಶಮಾಡಿದನು. ನಗರಗಳು ನೆಲಸಮವಾದವು, ಗ್ರಾಮಗಳು ನಿರ್ಜನ ಪ್ರದೇಶಗಳಾದವು, ಯುವಕರೆಲ್ಲ ಕತ್ತಿಗೆ ತುತ್ತಾದರು.
28 : ಸಮುದ್ರತೀರದ ಸಿದೋನ್, ಟೈರ್, ಸೂರ್, ಬಸಿಯಾನ ಮತ್ತು ಜಮ್ನಿಯಾ ಮುಂತಾದ ಊರುಗಳ ಜನರು ಭಯಭ್ರಾಂತರಾದರು; ಅಜೋತೊಸ್ ಮತ್ತು ಅಷ್ಕಲೋನ್ ಜನರು ತಲ್ಲಣಗೊಂಡರು.

· © 2017 kannadacatholicbible.org Privacy Policy