Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜೂಡಿತ


1 : ವೀಣೆಯನು ನುಡಿಸುತ, ಗೀತೆಯ ಹಾಡಿರಿ ನನ್ನ ದೇವನಿಗೆ ಝಲ್ಲರಿ ಬಾರಿಸಿ, ಸ್ತುತಿಮಾಡಿರಿ ಸರ್ವೇಶ್ವರನಿಗೆ ಕೀರ್ತನೆಗಳನು, ಗೀತೆಗಳನು ಹಾಡಿರಿ ಆ ಪರಮನಿಗೆ ಆತನ ನಾಮಸ್ತುತಿ ಮಾಡುತ, ಪ್ರಾರ್ಥನೆ ಸಲ್ಲಿಸಿರಿ ಆತನಿಗೆ.
2 : ಯೋಧಪಂಕ್ತಿಗಳನು ಧ್ವಂಸಮಾಡುವ ಸರ್ವೇಶ್ವರನೆ ಬಾಧಕರ ಕೈಯಿಂದ ನನ್ನನ್ನು ತಪ್ಪಿಸಲೆಂದೆ ಗುಡಾರವನ್ನೆಬ್ಬಿಸಿದ ತನ್ನ ಜನರ ಮಧ್ಯೆ.
3 : ಉತ್ತರದ ಗುಡ್ಡಗಾಡುಗಳಿಂದ ಇಳಿದರು ಅಸ್ಸೀರಿಯರು ಅವರೊಡನೆ ಬಂದ ಸೇನೆಗಳೋ ಸಹಸ್ರಾರು. ಅಡ್ಡಗಟ್ಟಿದರಾ ಯೋಧರು ಕಣಿವೆಯ ಹಾದಿಗಳನು. ಕುದುರೆಗಳು ಆವರಿಸಿದವು ಗುಡ್ಡಗಾಡುಗಳನು.
4 : ‘ಬೆಂಕಿಗೆ ಆಹುತಿಯಾಗಿಸುವೆ ನಿನ್ನ ನಾಡನು ಕತ್ತಿಗೆ ತುತ್ತಾಗಿಸುವೆ ನಿನ್ನ ಯುವಕರನು ನೆಲಕ್ಕಪ್ಪಳಿಸುವೆ ನಿನ್ನ ಹಸುಳೆಗಳನು ಮೃಗಗಳ ಬಾಯಿಗೆ ಹಾಕುವೆ ನಿನ್ನ ಪುಟಾಣಿಗಳನು ಸೆರೆಹಿಡಿಯುವೆ ನಿನ್ನ ಯುವತಿಯರನು’ ಈ ಪರಿ ಬೆದರಿಕೆ ಒಡ್ಡಿದನಾ ಅಸ್ಸೀರಿಯನು.
5 : ಆದರೆ ಸರ್ವಶಕ್ತ ಸರ್ವೇಶ್ವರನು ಒಬ್ಬ ಮಹಿಳೆಯ ಕೈಯಿಂದಲೇ, ಸೋಲಿಸಿದನವರನು.
6 : ಅವರ ವೀರನಾಯಕ ಪತನವಾದುದು ಯುವಕರ ಕೈಯಿಂದಲ್ಲ ಅವನು ಹತನಾದುದು ಸೂರ್ಯದೇವತೆಯ ಕುವರರಿಂದಲ್ಲ ಘನರಾಕ್ಷಸನಾದವನೂ ಮಾಡಲಿಲ್ಲ ಅವರ ಮೇಲೆ ಆಕ್ರಮಣ. ಆದರೆ ಮೆರಾರಿಯ ಕುವರಿಯಿಂದ ನಿರಾಯುಧಕಳಾದ ಜೂಡಿತಳ ಮುಖದ ಬೆಡಗು ಬಿನ್ನಾಣದಿಂದ ಪತನನಾದ !
7 : ಇಸ್ರಯೇಲಿನಲಿ ದೀನದಲಿತರನು ಉದ್ಧರಿಸಲೆಂದು ಬದಿಗಿಟ್ಟಳವಳು ತನ್ನ ವಿಧವಾವಸ್ತ್ರಗಳನು ಪರಿಮಳ ತೈಲದಿಂದ ಅಭ್ಯಂಗಿಸಿದಳು ತನ್ನ ಮೊಗವನು.
8 : ಆತನನು ವಂಚಿಸಲೆಂದೇ ಧರಿಸಿದಳು ಉತ್ತಮ ಉಡಿಗೆಯನು ರುಮಾಲಿನಿಂದ ಕಟ್ಟಿಕೊಂಡಳು ತನ್ನ ಕೇಶರಾಶಿಯನು.
9 : ಅವಳ ಪಾದರಕ್ಷೆ ಆಕರ್ಷಿಸಿತು ಆತನ ಕಣ್ಣನು ಅವಳ ಬೆಡಗು ಸೂರೆಮಾಡಿತು ಆತನ ಮನಸ್ಸನು ಅವಳ ಕತ್ತಿ ಇರಿಯಿತು ಆತನ ಕುತ್ತಿಗೆಯನು.
10 : ಪರ್ಷಿಯನ್ನರು ನಡುಗಿದರು ಅವಳ ಕೆಚ್ಚಿಗೆ ಮಿದ್ಯಾನರು ಬೆದರಿದರು ಅವಳ ಶೌರ್ಯಕೆ.
11 : ತಲ್ಲಣಗೊಂಡರೆಲ್ಲರು, ನನ್ನ ದಲಿತರು ಕಹಳೆಮೊಳಗಿದಾಗ ದಿಗ್ಭ್ರಮೆಗೊಂಡರು, ನನ್ನ ದುರ್ಬಲ ಜನರು ಕೂಗಿದಾಗ ಹಿಂಜರಿದರೆಲ್ಲರು, ನನ್ನವರೆಲ್ಲರು ಆರ್ಭಟಿಸಿದಾಗ.
12 : ಕೇವಲ ದಾಸಿಯರ ಮಕ್ಕಳು ಬೆನ್ನಟ್ಟಿದರವರನು ದ್ರೋಹಿಗಳ ಸಂತಾನವೋ ಎಂಬಂತೆ ಇರಿದರವರನು ಸರ್ವೇಶ್ವರನ ಕಾಳಗದಲಿ ಹತಮಾಡಿದರು ಎಲ್ಲರನು.
13 : ಹಾಡುವೆನು ನಾ ದೇವನಿಗೆ ನೂತನ ಕೀರ್ತನೆಯನು: ಸರ್ವೇಶ್ವರಾ, ಭಗವಂತ, ಮಹಿಮಾವಂತ ನೀನು ಮಹಾಶಕ್ತಿಶಾಲಿ, ಅಜೇಯನು ನೀನು,
14 : ಸೃಷ್ಟಿಸಮಸ್ತವು ಸೇವೆಸಲ್ಲಿಸಲಿ ನಿನಗೆ ಸೃಷ್ಟಿಯಾಯಿತೆಲ್ಲಾ ನಿನ್ನ ನುಡಿಮಾತ್ರಕೆ ಒಟ್ಟುಗೂಡಿದವೆಲ್ಲವು ನಿನ್ನ ಉಸಿರಾಟಕೆ ಪ್ರತಿಭಟಿಸುವವರಾರೂ ಇಲ್ಲ ನಿನ್ನ ಮಾತಿಗೆ.
15 : ಬೆಟ್ಟಗಳು ಕದಲಿ ಸಾಗರದೊಳು ಮುಳುಗಿದರೂ ಬಂಡೆಗಳು ಮೇಣದಂತೆ ಕರಗಿಹೋದರೂ ದಯೆತೋರುವೆ ನೀನು ನಿನಗಂಜುವವರೆಲ್ಲರಿಗೂ.
16 : ನನ್ನ ಜನಾಂಗಕೆ ವಿರುದ್ಧ ನಿಲ್ಲುವವರಿಗೆ ಧಿಕ್ಕಾರ ! ತೀರ್ಪಿನ ದಿನದಲಿ ದಂಡಿಸುವನವರನು ಸರ್ವಶಕ್ತ ಸರ್ವೇಶ್ವರ.
17 : ಕಬಳಿಸುವುದು ಅವರ ದೇಹವನು ಅಗ್ನಿ ಹಾಗೂ ಕ್ರಿಮಿಕೀಟ ವೇದನೆಯಿಂದ ರೋಧಿಸುವರವರು ಅನವರತ.
18 : ಜೆರುಸಲೇಮನ್ನು ಸೇರಿದಾಗ ಆ ಜನರೆಲ್ಲರು ದೇವರ ಸನ್ನಿಧಿಯಲ್ಲಿ ಸಾಷ್ಟಾಂಗ ಎರಗಿದರು. ಅವರು ಮಡಿ ಮಾಡಿಕೊಂಡು ಕಾಣಿಕೆ, ನೈವೇದ್ಯ, ದಹನಬಲಿಗಳೆಲ್ಲವನ್ನು ಅರ್ಪಿಸಿದರು.
19 : ಜನರು ತನಗಿತ್ತ ಹೊಲೊಫರ್ನೆಸನ ಸ್ವತ್ತನ್ನೂ ತಾನೇ ಬಿಚ್ಚಿತಂದಿದ್ದ ಮೇಲು ಚಪ್ಪರದ ಸಾಮಾನುಗಳನ್ನೂ ಜೂಡಿತಳು ಅರ್ಪಿಸಿ, ತನ್ನ ಹರಕೆಯನ್ನು ತೀರಿಸಿದಳು.
20 : ಮೂರು ತಿಂಗಳವರೆಗೆ ಜನರು ಜೆರುಸಲೇಮಿನ ಮಹಾದೇವಾಲಯದ ಮುಂದೆ ಆನಂದದಿಂದ ವಿಜಯೋತ್ಸವ ಕೊಂಡಾಡಿದರು. ಜೂಡಿತಳು ಸಹ ಈ ಉತ್ಸವದಲ್ಲಿ ಭಾಗವಹಿಸಿದಳು.
21 : ಇದಾದನಂತರ ಪ್ರತಿಯೊಬ್ಬರೂ ಮನೆಗೆ ಹಿಂದಿರುಗಿದರು. ಜೂಡಿತಳು ಬೆಥೂಲಿಯಕ್ಕೆ ಹೋಗಿ ತನ್ನ ಸ್ವಂತ ಆಸ್ತಿಯಿಂದಲೇ ಜೀವನ ನಡೆಸಿದಳು. ಜೀವಮಾನಪರ್ಯಂತ ನಾಡಿನಲ್ಲಿ ಎಲ್ಲ ಅವಳ ಕೀರ್ತಿ ಹರಡಿತು.
22 : ಅವಳನ್ನು ವರಿಸುವಂಥವರು ಅನೇಕರಿದ್ದರು. ಆದರೂ, ಅವಳ ಯಜಮಾನ ಮನಸ್ಸೆ ಸತ್ತು ಪಿತೃಗಳೊಂದಿಗೆ ಸೇರಿಕೊಂಡಿದ್ದರಿಂದ, ಯಾವ ಪುರುಷನ ಬಯಕೆಗೂ ಆಕೆ ಶರಣಾಗಲಿಲ್ಲ.
23 : ತನ್ನ ಗಂಡನ ಮನೆಯಲ್ಲಿದ್ದಷ್ಟು ಕಾಲವೂ ಹೆಚ್ಚು ಹೆಚ್ಚು ಗೌರವವನ್ನು ಗಳಿಸಿಕೊಂಡಳು. ತನ್ನ ದಾಸಿಗೆ ಬಿಡುಗಡೆಯಿತ್ತಳು. ಜೂಡಿತಳು ಬದುಕಿದ್ದು 105 ವರ್ಷ. ಅನಂತರ ಬೆಥೂಲಿಯದಲ್ಲಿ ಸ್ವರ್ಗಸ್ಥಳಾದಳು. ಆಕೆಯ ಯಜಮಾನ ಮನಸ್ಸೆಯ ಗುಹೆಯಲ್ಲೇ ಅವಳನ್ನು ಸಮಾಧಿ ಮಾಡಲಾಯಿತು.
24 : ಏಳು ದಿನವಿಡೀ ಇಸ್ರಯೇಲ್ ಮನೆತನ ಶೋಕಾಚರಣೆಯಲ್ಲಿತ್ತು. ಸಾಯುವ ಮುನ್ನ ಆಕೆ ತನ್ನ ಆಸ್ತಿಯನ್ನು ತನ್ನ ಹಾಗೂ ಮನಸ್ಸೆಯ ಬಂಧುಬಳಗದವರಿಗೆ ಹಂಚಿಕೊಟ್ಟಿದ್ದಳು.
25 : ಜೂಡಿತಳ ಉಳಿದ ಜೀವಮಾನಕಾಲದಲ್ಲಾಗಲೀ ಅನಂತರ ಬಹುಕಾಲದವರೆಗಾಗಲೀ ಇಸ್ರಯೇಲರ ಗೋಜಿಗೆ ಯಾರೂ ಬರಲಿಲ್ಲ.

· © 2017 kannadacatholicbible.org Privacy Policy