Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜೂಡಿತ


1 : “ಮಹಿಳೆಯೇ, ಧೈರ್ಯದಿಂದಿರು. ಹೆದರಬೇಡ, ವಿಶ್ವದೊಡೆಯ ನೆಬೂಕದ್ನೆಚ್ಚರನಿಗೆ ಸೇವೆಮಾಡುವ ಯಾವ ವ್ಯಕ್ತಿಯನ್ನೂ ನಾನು ನೋಯಿಸುವಂಥವನಲ್ಲ.
2 : ಈಗಲೂ ಸಹ ಗುಡ್ಡಗಾಡಿನಲ್ಲಿರುವ ನಿಮ್ಮ ಜನರು ನನ್ನನ್ನು ಹೀಯಾಲಿಸದಿದ್ದರೆ, ಒಂದೇ ಭರ್ಜಿಯನ್ನಾಗಲೀ ನಾನು ಅವರಿಗೆದುರಾಗಿ ಎತ್ತುತ್ತಿರಲಿಲ್ಲ. ಇದು ಅವರ ತಪ್ಪು, ನನ್ನದಲ್ಲ.
3 : ಆದರೆ ನೀನೇಕೆ ತಪ್ಪಿಸಿಕೊಂಡು ಇಲ್ಲಿಗೆ ಬಂದಿರುವೆ? – ಆಗಲಿ; ಸದ್ಯ ನೀನು ಬದುಕಿಕೊಂಡೆ. ಈ ರಾತ್ರಿ ಮಾತ್ರವಲ್ಲ, ಹಲವಾರು ರಾತ್ರಿಗಳಲ್ಲಿ ಸುರಕ್ಷಿತವಾಗಿರುವೆ.
4 : ನಿನ್ನನ್ನು ಯಾರೂ ಬಾಧಿಸುವುದಿಲ್ಲ; ಬದಲಿಗೆ, ನನ್ನ ಒಡೆಯ ನೆಬೂಕದ್ನೆಚ್ಚರನ ಸೇವೆ ಮಾಡುವವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ನಿನ್ನನ್ನೂ ನೋಡಿಕೊಳ್ಳುವರು,” ಎಂದು ಹೊಲೊಫರ್ನೆಸ್ ಉಸುರಿದನು.
5 : ಅದಕ್ಕೆ ಜೂಡಿತ್, “ದಯಮಾಡಿ, ತಮ್ಮ ದಾಸಿ ಹೇಳುವುದನ್ನು ಕೇಳಿ. ಸನ್ನಿಧಾನದಲ್ಲಿ ಮಾತನಾಡಲು ತಮ್ಮ ದಾಸಿಗೆ ಅಪ್ಪಣೆಯಾಗಬೇಕು. ಈ ರಾತ್ರಿ ಒಡೆಯರಾದ ತಮಗೆ ಒಂದೇ ಒಂದು ಸುಳ್ಳನ್ನೂ ಆಡಲಾರೆ.
6 : ತಮ್ಮ ದಾಸಿಯ ಸಲಹೆಯನ್ನು ಪಾಲಿಸಿದರೆ ಸಾಕು. ದೇವರು ತಮ್ಮ ಕಾರ್ಯವನ್ನು ಯಶಸ್ವಿಗೊಳಿಸುವರು. ನನ್ನ ಪ್ರಭು ಕೈಗೊಳ್ಳುವ ಯಾವ ಕಾರ್ಯವೂ ವಿಫಲವಾಗದು.
7 : ವಿಶ್ವದೊಡೆಯ ರಾಜಾಧಿರಾಜ ನೆಬೂಕದ್ನೆಚ್ಚರನು ಚಿರಾಯುವಾಗಲಿ! ಪ್ರತಿಯೊಂದು ಜೀವಾತ್ಮವನ್ನು ಸರಿಪಡಿಸಲು ಅವರು ನಿಮ್ಮನ್ನು ನೇಮಿಸಿದ್ದಾರೆ. ಅವರ ಆಳ್ವಿಕೆ ಮುಂದುವರೆಯಲಿ! ನಿಮ್ಮ ಮುಖಾಂತರ ಮಾನವರು ಮಾತ್ರವಲ್ಲ, ಕಾಡುಮೃಗಗಳು, ಸಾಕುಪ್ರಾಣಿಗಳು ಮೊದಲ್ಗೊಂಡು ಆಕಾಶದ ಪಕ್ಷಿಗಳು ಕೂಡ ನಿಮ್ಮ ಆಜ್ಞಾನುಸಾರ ನೆಬೂಕದ್ನೆಚ್ಚರನಿಗೂ ಅವನ ವಂಶಕ್ಕೂ ಸೇವೆ ಮಾಡುತ್ತವಲ್ಲವೆ?
8 : “ನಿಮ್ಮ ಅಸಾಧಾರಣ ಪ್ರತಿಭೆ ಹಾಗೂ ಚಾಕಚಕ್ಯತೆಯನ್ನು ಕುರಿತು ನಾವು ಕೇಳಿದ್ದೇವೆ. ಈ ಚಕ್ರಾಧಿಪತ್ಯದಲ್ಲಿ ನಿಮ್ಮ ಸಾಮಥ್ರ್ಯಕ್ಕೆ ಎದುರಾಳಿ ಯಾರೂ ಇಲ್ಲ. ನಿಮ್ಮ ಅನುಭವದ ಸಂಪತ್ತಿಗೆ ಮಿತಿ ಇಲ್ಲ. ಯುದ್ಧ ನಿಪುಣತೆಯಲ್ಲಿ ನಿಮಗೆ ಯಾರೂ ಸಾಟಿ ಇಲ್ಲ; ಇದು ಇಡೀ ವಿಶ್ವಕ್ಕೆ ತಿಳಿದಿರುವಂಥ ವಿಷಯ.
9 : ನಿಮ್ಮ ಆಲೋಚನಾ ಸಭೆಯಲ್ಲಿ ಆಕಿಯೋರನು ಏನೇನು ಹೇಳಿರುವನೆಂದು ನಮಗೆ ತಿಳಿದಿದೆ. ಬೆಥೂಲಿಯದ ಜನರು ಅವನ ಜೀವವನ್ನು ಉಳಿಸಿದ್ದರಿಂದ, ಅವನು ನಿಮಗೆ ಹೇಳಿದ್ದೆಲ್ಲವನ್ನೂ ಅವರಿಗೆ ತಿಳಿಸಿದ್ದಾನೆ.
10 : ಒಡೆಯಾ, ದೊರೆಯೆ, ಅವನು ಹೇಳಿದ ಸಮಾಚಾರವನ್ನು ಕಡೆಗಣಿಸಬೇಡಿ. ಅವನ ಮಾತು ನಿಜವಾದುದರಿಂದ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಒಳಿತು. ನಮ್ಮ ರಾಷ್ಟ್ರವನ್ನು ಯಾರೂ ದಂಡಿಸುವಂತಿಲ್ಲ. ಅವರು ದೇವದ್ರೋಹ ಕಟ್ಟಿಕೊಳ್ಳದಿದ್ದರೆ, ಯಾವ ಕತ್ತಿಗೂ ಅವರ ಮೇಲೆ ಶಕ್ತಿ ಇರದು.
11 : ಆದರೆ ವಾಸ್ತವವಾಗಿ ಒಡೆಯರಾದ ನೀವು ಸೋತು ಹಿಮ್ಮೆಟ್ಟಬೇಕಾಗಿಲ್ಲ. ಪದೇ ಪದೇ ಅವರು ಕಟ್ಟಿಕೊಳ್ಳುವ ಪಾಪವು ದೇವರನ್ನು ಉದ್ರೇಕಿಸುತ್ತದೆ. ಮರಣವು ಅವರ ಮೇಲೆ ಎರಗಲಿದೆ
12 : ಆಹಾರ ಪದಾರ್ಥಗಳು ಕಡಿಮೆಯಾಗುತ್ತಿವೆ. ನೀರು ಸಹ ಸಾಲದಾಗಿದೆ. ಶಾಸ್ತ್ರಾನುಸಾರ ತಿನ್ನಬಾರದೆಂದು ದೇವರು ಆಜ್ಞಾಪಿಸಿದ ಮಾಂಸಕ್ಕಾಗಿ ಪಶುಪ್ರಾಣಿಗಳನ್ನು ವಧಿಸಲಿದ್ದಾರೆ.
13 : ದವಸ ಧಾನ್ಯಗಳ ಪ್ರಥಮ ಫಲವನ್ನು ದೇವರಿಗೆ ಸಮರ್ಪಿಸುತ್ತಾರೆ. ದೇವರ ಸಮ್ಮುಖದಲ್ಲಿ ಸೇವೆ ಮಾಡುವ ಯಾಜಕರಿಗೆ ಮಾತ್ರ ಅದು ಮೀಸಲಾಗಿರುತ್ತದೆ. ಅವುಗಳನ್ನು ಜನರು ಮುಟ್ಟುವಂತಿಲ್ಲ.
14 : ಹೀಗಿರುವಲ್ಲಿ, ನಮ್ಮ ಜನರು ಅಂಥದ್ದನ್ನು ತಿನ್ನಲು, ದ್ರಾಕ್ಷಾರಸದ ಹಾಗು ಎಣ್ಣೆಯ ದಶಮಾಂಶವನ್ನು ಬಳಸಿಕೊಳ್ಳಲು ತೀರ್ಮಾನ ಕೈಗೊಂಡು, ಹಿರಿಯರ ಆಲೋಚನಾಸಭೆಯ ಅನುಮತಿಯನ್ನು ಪಡೆಯಲು ಜೆರುಸಲೇಮಿಗೆ ಜನರನ್ನು ಕಳುಹಿಸಿದ್ದಾರೆ. ಅಲ್ಲಿನ ಹಿರಿಯರು ಸಹ ಅಂಥದ್ದನ್ನೇ ಮಾಡುತ್ತಿದ್ದಾರೆ.
15 : ಅದರ ಪರಿಣಾಮ ಇಷ್ಟೆ: ಅನುಮತಿ ದೊರಕಿ, ಮೀಸಲಾದವುಗಳಿಗೆ ಅವರು ಕೈ ಹಾಕಿದ ದಿನವೇ, ನಿಮ್ಮ ಕೈವಶವಾಗಿ ನಾಶವಾಗುತ್ತಾರೆ.
16 : “ದಾಸಿಯಾದ ನಾನು ಇದನ್ನು ಕೇಳಿದಾಕ್ಷಣ ಅವರಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದೆ. ನಾನು ನಿಮ್ಮೊಂದಿಗೆ ಎಂಥ ಕಾರ್ಯವನ್ನು ಸಾಧಿಸಲು ದೇವರು ನನ್ನನ್ನು ಕಳುಹಿಸಿದ್ದಾರೆಂದರೆ – ಇಡೀ ವಿಶ್ವವೇ ಅದನ್ನು ಕೇಳಿ ಬೆರಗಾಗಬೇಕು.
17 : ನಿಮ್ಮ ದಾಸಿಯಾದ ನಾನು ಭಯಭಕ್ತಿಯುಳ್ಳ ಮಹಿಳೆ. ಹಗಲುರಾತ್ರಿ, ಪರಲೋಕದ ದೇವರನ್ನು ಆರಾಧಿಸಿ ಗೌರವಿಸುವಂಥ ಮಹಿಳೆ. ಆದುದರಿಂದ, ನಿಮಗೆ ನನ್ನ ಸಲಹೆ ಏನೆಂದರೆ ನಾನು ನಿಮ್ಮೊಂದಿಗೆ ಇರುತ್ತೇನೆ. ದಾಸಿಯಾದ ನಾನು ಪ್ರತಿದಿನ ಆ ಕಣಿವೆಗೆ ಹೋಗಿ ದೇವರನ್ನು ಪ್ರಾರ್ಥಿಸಿ ಆ ಜನರು ಯಾವಾಗ ಪಾಪವನ್ನು ಕಟ್ಟಿಕೊಳ್ಳುತ್ತಾರೆಂದು ನನಗೆ ತಿಳಿಸಲು ಅವರಲ್ಲಿ ಯಾಚಿಸುತ್ತೇನೆ.
18 : ಆಗ ನಾನು ಬಂದು ನಿಮಗೆ ತಿಳಿಸಿದರೆ, ನೀವು ಇಡೀ ಸೈನ್ಯವನ್ನು ಅವರ ಕಡೆಗೆ ಕರೆದುಕೊಂಡು ಹೋಗಬಹುದು. ಅವರಾರೂ ನಿಮ್ಮನ್ನು ಎದುರಿಸಲಾರರು.
19 : ಜುದೇಯವನ್ನು ದಾಟಿ, ಜೆರುಸಲೇಮನ್ನು ತಲುಪುವವರೆಗೆ ನಾನು ನಿಮಗೆ ದಾರಿತೋರಿಸುತ್ತೇನೆ. ಜೆರುಸಲೇಮ್ ನಗರದ ಮಧ್ಯೆ ನಿಮ್ಮನ್ನು ಸಿಂಹಾಸನದಲ್ಲಿ ಕುಳ್ಳಿರಿಸುತ್ತೇನೆ. ಆಗ ನೀವು ಕುರುಬನಿಲ್ಲದ ಕುರಿಗಳಂತಿರುವ ಅವರನ್ನು ಸುತ್ತುಗಟ್ಟಬಹುದು. ಒಂದೇ ಒಂದು ನಾಯಿ ಕೂಡ ನಿಮಗೆ ತಡೆಯಾಗಿ ಬೊಗಳಲಾರದು. ಭವಿಷ್ಯಜ್ಞಾನದಿಂದ ನನಗಿದು ತಿಳಿದು ಬಂದಿದೆ. ಈ ಸಂಗತಿಯನ್ನು ನನಗೆ ಮುನ್ ತಿಳಿಸಲಾಗಿರುವುದರಿಂದ ನಾನು ನಿಮಗೆ ಅದನ್ನು ಬಯಲುಮಾಡಲು ಬಂದಿದ್ದೇನೆ,” ಎಂದಳು.
20 : ಹೊಲೊಫರ್ನೆಸನಿಗೂ ಅವನ ಸಹಾಯಕರಿಗೂ ಅವಳ ಮಾತು ಹಿಡಿಸಿತು. ಆಕೆಯ ಬುದ್ಧಿ ವಂತಿಕೆಯನ್ನು ಮೆಚ್ಚಿ ಚಕಿತರಾಗಿ, “ಭೂಮಿಯ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಈಕೆಗೆ ಯಾವ ಸ್ತ್ರೀಯೂ ಸಾಟಿಯಿಲ್ಲ. ಈಕೆಯ ರೂಪು ಎಷ್ಟು ಚೆನ್ನ! ಆಕೆಯ ನುಡಿ ಎಷ್ಟು ವಿವೇಕಪೂರ್ಣ!” ಎಂದರು. ಪುನಃ ಹೊಲೊಫರ್ನೆಸ್, “ಇತರರಿಗಿಂತ ಮುಂಚಿತವಾಗಿ ನಿನ್ನನ್ನು ದೇವರು ಇಲ್ಲಿಗೆ ಕಳುಹಿಸಿದ್ದು ಒಳ್ಳೆಯದಾಯಿತು. ಜಯ ಲಭಿಸುವುದು ನಮಗೆ; ವಿನಾಶ ನನ್ನ ಒಡೆಯನನ್ನು ಅವಮಾನಪಡಿಸಿದ ಅವರಿಗೆ. ನಿನಗಾದರೋ, ಬುದ್ಧಿಯಿದ್ದಷ್ಟು ಬೆಡಗೂ ಇದೆ; ನೀನು ನುಡಿದ ಪ್ರಕಾರ ಮಾಡಿದರೆ ನಿನ್ನ ದೇವರು ನನ್ನ ದೇವರಾಗುವರು; ಅರಸ ನೆಬೂಕದ್ನೆಚ್ಚರನ ಅರಮನೆ ನಿನ್ನ ನಿವಾಸವಾಗುವುದು. ವಿಶ್ವದಲ್ಲೆಲ್ಲಾ ನೀನು ಪ್ರಖ್ಯಾತಿ ಹೊಂದುವೆ,” ಎಂದನು.

· © 2017 kannadacatholicbible.org Privacy Policy