Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ತೊಬೀತ


1 : ತರುವಾಯ ತೊಬಿಯಾಸನು ರಫಯೇಲನನ್ನು ಕರೆದು,
2 : “ಗೆಳೆಯ ಅಜರ್ಯನೇ, ನಿನ್ನ ಸಂಗಡ ನಾಲ್ಕು ಆಳುಗಳನ್ನೂ ಒಂಟೆಗಳನ್ನೂ ತೆಗೆದುಕೊಂಡು ರ್ಹಾಜೆಸ್ಗೆ ಹೋಗು. ಅಲ್ಲಿ ಗಬಯೇಲನ ಮನೆಗೆ ಹೋಗಿ, ಈ ಮುಚ್ಚಳಿಕೆಯನ್ನು ತೋರಿಸು. ಅವನಿಂದ ಹಣವನ್ನು ತೆಗೆದುಕೊಂಡು, ಈ ಮದುವೆಯ ಔತಣಕ್ಕೆ ಅವನನ್ನೂ ಕರೆದುಕೊಂಡು ಬಾ.
3 : ನಿನಗೆ ತಿಳಿದಿರುವಂತೆ ನನ್ನ ತಂದೆ ತನ್ನ ಜೀವಮಾನದ ದಿನಗಳನ್ನು ಎಣಿಕೆ ಮಾಡುತ್ತಿದ್ದಾರೆ. ನಾವು ಹಿಂದಿರುಗುವುದು ಒಂದು ದಿನ ತಡವಾದರೂ, ಅವರಿಗೆ ತುಂಬಾ ಕಳವಳ ಉಂಟಾಗುತ್ತದೆ.
4 : ಅದಲ್ಲದೆ, ರಾಗುಯೇಲನು ಮಾಡಿರುವ ಪ್ರಮಾಣಕ್ಕೆ ನೀನೇ ಸಾಕ್ಷಿ; ಅವನ ಪ್ರಮಾಣವನ್ನು ಮೀರಿ ನಾನು ಈಗ ಇಲ್ಲಿಂದ ಹೊರಡುವಂತಿಲ್ಲ,” ಎಂದನು.
5 : ಅಂತೆಯೇ ರಫಯೇಲನು ನಾಲ್ಕು ಆಳುಗಳನ್ನೂ ಎರಡು ಒಂಟೆಗಳನ್ನೂ ತೆಗೆದುಕೊಂಡು, ಮೇದ್ಯದಲ್ಲಿರುವ ರ್ಹಾಜೆಸ್ಗೆ ತೆರಳಿ, ಗಬಯೇಲನ ಮನೆಯಲ್ಲಿ ತಂಗಿದನು. ರಫಯೇಲನು ತಾನು ತಂದ ಮುಚ್ಚಳಿಕೆಯನ್ನು ಕೊಟ್ಟು, ತೊಬೀತನ ಮಗ ತೊಬಿಯಾಸನಿಗೆ ಮದುವೆಯಾಗಿದೆ, ಮದುವೆಯ ಔತಣಕ್ಕೆ ಬರಬೇಕೆಂದು ಗಬಯೇಲನು ಮುದ್ರೆಹಾಕಿದ ಹಣದ ಚೀಲಗಳನ್ನು ಅವನಿಗೆ ಎಣಿಸಿಕೊಟ್ಟನು. ಚೀಲಗಳನ್ನು ಒಂಟೆಗಳ ಮೇಲೆ ಹೇರಲಾಯಿತು.
6 : ಮುಂಜಾನೆ ಅವರಿಬ್ಬರೂ ಎದ್ದು ಔತಣಕೂಟಕ್ಕೆಂದು ರಾಗುಯೇಲನ ಮನೆಗೆ ಬಂದರು. ಅವರು ರಾಗುಯೇಲನ ಮನೆಯನ್ನು ತಲುಪಿದಾಗ ತೊಬಿಯಾಸನು ಊಟಕ್ಕೆ ಕುಳಿತಿರುವುದನ್ನು ಕಂಡರು. ತೊಬಿಯಾಸನು ತಕ್ಷಣವೇ ಎದ್ದು ಗಬಯೇಲನನ್ನು ವಂದಿಸಿದನು. ಗಬಯೇಲನು ಕಣ್ಣೀರು ಸುರಿಸುತ್ತಾ, “ನಿನ್ನ ತಂದೆ ಸಭ್ಯ, ಸದ್ಗುಣಶೀಲ, ನೀತಿವಂತ, ಪರೋಪಕಾರಿ, ಅಂಥ ತಂದೆಗೆ ನೀನು ತಕ್ಕ ಮಗ; ನಿನಗೆ, ನಿನ್ನ ಪತ್ನಿಗೆ, ನಿನ್ನ ಅತ್ತೆ ಮಾವಂದಿರಿಗೆ ದೇವರು ತಮ್ಮ ಆಶೀರ್ವಾದಗಳನ್ನು ಅನುಗ್ರಹಿಸಲಿ! ನನ್ನ ನೆಂಟ ತೊಬೀತನ ಪ್ರತಿಬಿಂಬವನ್ನೇ ನಿನ್ನಲ್ಲಿ ಕಾಣುತ್ತಿದ್ದೇನೆ. ದೇವರಿಗೆ ಸ್ತುತಿಯಾಗಲಿ!” ಎಂದು ಅವನನ್ನು ಆಶೀರ್ವದಿಸಿದನು.

· © 2017 kannadacatholicbible.org Privacy Policy