1 : ತೊಬಿಯಾಸನೂ ದೇವದೂತನೂ ಪ್ರಯಾಣ ಹೊರಟರು. ತೊಬಿಯಾಸನ ನಾಯಿ ಅವರನ್ನು ಹೊಂಬಾಲಿಸಿತು. ಸೂರ್ಯ ಮುಳುಗುವವರೆಗೆ ಪ್ರಯಾಣಮಾಡಿ, ಟೈಗ್ರಿಸ್ ನದಿಯ ದಡದಲ್ಲಿ ತಂಗಿದರು.
2 : ತೊಬಿಯಾಸನು ಕಾಲುತೊಳೆಯಲು ನದಿಗೆ ಇಳಿದುಹೋದನು. ತಕ್ಷಣವೇ ದೊಡ್ಡ ಮೀನೊಂದು ನೀರಿಂದ ಜಿಗಿದು ಅವನ ಪಾದವನ್ನು ನುಂಗುವುದರಲ್ಲಿ ಇತ್ತು. ಆಗ ತೊಬಿಯಾಸನು ಗಟ್ಟಿಯಾಗಿ ಕೂಗಿಕೊಂಡನು.
3 : ದೇವದೂತನು ಅವನಿಗೆ, “ಆ ಮೀನನ್ನು ಬಿಗಿಯಾಗಿ ಹಿಡಿದುಕೊ; ಹೋಗಲು ಬಿಡಬೇಡ,” ಎಂದನು. ಅಂತೆಯೇ ತೊಬಿಯಾಸನು ಮೀನನ್ನು ಹಿಡಿದು ದಡಕ್ಕೆ ಎಳೆದುತಂದನು.
4 : ಆಗ ದೂತನು ಅವನಿಗೆ, “ಆ ಮೀನನ್ನು ಕೊಯ್ದು ತೆರೆ. ಅದರ ಒಳಗಿರು ಪಿತ್ತಕೋಶ, ಹೃದಯ ಮತ್ತು ಯಕೃತ್ತನ್ನು ತೆಗೆದಿಡು. ಕರುಳನ್ನು ಎಸೆದುಬಿಡು. ಏಕೆಂದರೆ ಪಿತ್ತಕೋಶ, ಹೃದಯ ಮತ್ತು ಯಕೃತ್ತು ಔಷಧಕ್ಕೆ ಉಪಯೋಗವಾಗುತ್ತದೆ,” ಎಂದು ಹೇಳಿದನು.
5 : ತೊಬಿಯಾಸನು ಹಾಗೆಯೇ ಮೀನನ್ನು ಕೊಯ್ದು ತೆಗೆದು ಪಿತ್ತಕೋಶ, ಹೃದಯ ಮತ್ತು ಯಕೃತ್ತನ್ನು ತೆಗೆದಿಟ್ಟನು. ಮೀನನ್ನು ಹುರಿದು ಸ್ವಲ್ಪ ಭಾಗವನ್ನು ತಿಂದನು. ಮಿಕ್ಕ ಭಾಗವನ್ನು ಉಪ್ಪುಹಾಕಿ ಇಟ್ಟುಕೊಂಡನು.
ಪ್ರಯಾಣವನ್ನು ಮುಂದುವರಿಸುತ್ತಾ ಇಬ್ಬರೂ ಮೇದ್ಯನಾಡನ್ನು ಸಮೀಪಿಸಿದರು.
6 : ಆಗ ತೊಬಿಯಾಸನು, “ಗೆಳೆಯಾ, ಅಜರ್ಯನೇ, ಮೀನಿನ ಪಿತ್ತಕೋಶ, ಹೃದಯ ಮತ್ತು ಯಕೃತ್ತಿನಿಂದ ಏನನ್ನು ಗುಣಪಡಿಸಬಹುದು?” ಎಂದು ಪ್ರಶ್ನಿಸಿದನು.
7 : ಅದಕ್ಕೆ ಪ್ರತ್ಯುತ್ತರವಿತ್ತ ದೇವದೂತನು, “ಮೀನಿನ ಹೃದಯವನ್ನೂ ಪಿತ್ತಕೋಶವನ್ನೂ ಪಿಶಾಚಿ ಪೀಡಿತರಾದ ಸ್ತ್ರೀಪುರುಷರ ಮುಂದೆ ಸುಟ್ಟರೆ, ಅವರು ಸಂಪೂರ್ಣವಾಗಿ ಸ್ವಸ್ಥರಾಗುವರು.
8 : ಅಂತೆಯೇ, ಯಾರೊಬ್ಬನ ಕಣ್ಣುಗಳನ್ನು ಬಿಳಿಮಚ್ಚೆಗಳಿದ್ದರೆ, ಪಿತ್ತರಸವನ್ನು ಕಣ್ಣಿಗೆ ಹಚ್ಚಿ ಊದಬೇಕು. ಆಗ ಮಚ್ಚೆಗಳು ಮಾಯವಾಗುತ್ತವೆ. ಕಣ್ಣುಗಳು ಗುಣಹೊಂದುತ್ತವೆ,” ಎಂದನು.
9 : ಮೇದ್ಯ ನಾಡನ್ನು ತಲುಪಿ, ಎಕ್ಬತಾನ ನಗರವನ್ನು ಸಮೀಪಿಸಿದಾಗ ರಫಯೇಲನು ತೊಬಿಯಾಸನಿಗೆ,
10 : 10“ಸಹೋದರ ತೊಬಿಯಾಸನೇ,” ಎನ್ನಲು ತೊಬಿಯಾಸನು, “ಏನಯ್ಯಾ?”, ಎಂದು ವಿಚಾರಿಸಿದನು.
ರಫಯೇಲನು, “ಈ ರಾತ್ರಿ ನಿನ್ನ ಬಂಧುವಾದ ರಾಗುಯೇಲನ ಮನೆಯಲ್ಲಿ ನಾವು ತಂಗಬೇಕು. ಆತನಿಗೆ ಸಾರಾ ಎಂಬ ಮಗಳಿದ್ದಾಳೆ.
11 : ಸಾರಳ ಹೊರತು ಆತನಿಗೆ ಬೇರಾವ ಮಗನಾಗಲೀ ಮಗಳಾಗಲೀ ಇಲ್ಲ. ನೀನು ಆಕೆಗೆ ಸಮೀಪ ಬಂಧು. ಆಕೆಯನ್ನು ಮದುವೆಯಾಗಲು ಇತರ ಎಲ್ಲರಿಗಿಂತಲೂ ನಿನಗೇ ಹೆಚ್ಚು ಹಕ್ಕಿದೆ. ಆಕೆಯ ತಂದೆಯ ಪಿತ್ರಾರ್ಜಿತಕ್ಕೆಲ್ಲ ನೀನೇ ಬಾಧ್ಯಸ್ಥ.
12 : ಅದಲ್ಲದೆ ಆಕೆ ಬುದ್ಧಿವಂತೆ, ಧೈರ್ಯವಂತೆ, ಅತೀ ಸುಂದರಿ, ತಂದೆಗೆ ಅಚ್ಚುಮೆಚ್ಚಿನವಳು. ಆಕೆಯನ್ನು ಮದುವೆಯಾಗಲು ನಿನಗೆ ಎಲ್ಲ ವಿಧದಲ್ಲೂ ಹಕ್ಕಿದೆ. ಆದುದರಿಂದ ಗೆಳೆಯನೇ, ನಾನು ಹೇಳುವುದನ್ನು ಕೇಳು. ಈ ರಾತ್ರಿ ಆ ಹುಡುಗಿಯ ಬಗ್ಗೆ ತಂದೆಯ ಬಳಿ ಪ್ರಸ್ತಾಪಿಸುತ್ತೇನೆ. ಆಕೆಯನ್ನು ನಿನಗೆ ಮದುವೆ ಮಾಡಿಕೊಡಬೇಕೆಂದು ಕೇಳುತ್ತೇನೆ. ನಾವು ರ್ಹಾಜೆಸ್ ಪಟ್ಟಣದಿಂದು ಹಿಂದಿರುಗಿ ಬಂದಾಗ ವಿವಾಹ ಸಮಾರಂಭವನ್ನು ಏರ್ಪಡಿಸೋಣ. ನೀನು ಅವಳನ್ನು ವಿವಾಹ ಮಾಡಿಕೊಳ್ಳಲು ರಾಗುಯೇಲನು ತಡೆಯುವಂತಿಲ್ಲ ಅಥವಾ ಇನ್ನೊಬ್ಬನಿಗೆ ಆಕೆಯನ್ನು ಕೊಡುವಂತಿಲ್ಲ. ಹಾಗೇನಾದರೂ ಮಾಡಿದರೆ, ಮೋಶೆಯ ನಿಯಮದ ಪ್ರಕಾರ, ಅವನಿಗೆ ಮರಣ ಶಿಕ್ಷೆಯಾಗಬೇಕಾಗುತ್ತದೆ. ಅಲ್ಲದೆ ತನ್ನ ಮಗಳನ್ನು ಮದುವೆಯಾಗಲು ಇತರ ಎಲ್ಲರಿಗಿಂತಲೂ ನಿನಗೆ ಹೆಚ್ಚು ಹಕ್ಕಿದೆ ಎಂದು ಅವನಿಗೆ ಗೊತ್ತಿದೆ. ಆದುದರಿಂದ ಗೆಳೆಯಾ, ನಾನು ಹೇಳುವುದನ್ನು ಕೇಳು: ಈ ಸಂಜೆ ಆ ಹುಡುಗಿಯ ಬಗ್ಗೆ ಮಾತಾಡಿ ನಿಶ್ಚಿತಾರ್ಥಕ್ಕೆ ಏರ್ಪಾಡು ಮಾಡೋಣ. ರ್ಹಾಜೆಸ್ ಪಟ್ಟಣದಿಂದ ಹಿಂದಿರುಗುವಾಗ ಆಕೆಯನ್ನು ನಮ್ಮೊಂದಿಗೆ ಕರೆದುಕೊಂಡು, ನಿಮ್ಮ ಮನೆಗೆ ಹೋಗೋಣ,” ಎಂದನು.
13 : ಆಗ ತೊಬಿಯಾಸನು ರಫಯೇಲನಿಗೆ ಹೀಗೆಂದು ಹೇಳಿದನು, “ಸೋದರ ಅಜರ್ಯನೇ, ಆಕೆಗೆ ಈಗಾಗಲೇ ಏಳು ಸಾರಿ ಮದುವೆ ಆಗಿದೆ, ಒಂದೊಂದು ಸಾರಿಯೂ ಆಕೆಯ ಗಂಡನು ಶಯನ ಕೊಠಡಿಯಲ್ಲೇ ಮೃತಪಟ್ಟಿದ್ದಾನೆ; ಆಕೆ ಕೊಠಡಿಯನ್ನು ಪ್ರವೇಶಿಸಿದ ರಾತ್ರಿಯಲ್ಲೇ ಸಾವನ್ನು ಅಪ್ಪಿದ್ದಾನೆ. ‘ಯಾವುದೋ ಒಂದು ದೆವ್ವ ಅವರನ್ನು ಕೊಂದುಹಾಕುತ್ತದೆ’ ಎಂದು ಜನರು ಆಡಿಕೊಳ್ಳುವುದನ್ನು ಕೇಳಿದ್ದೇನೆ.
14 : ಆ ದೆವ್ವ ಆಕೆಗೆ ಮಾತ್ರ ಹಾನಿಯನ್ನು ಮಾಡುವುದಿಲ್ಲ. ಯಾವ ಪುರುಷನಾದರೂ ಆಕೆಯನ್ನು ಸಮೀಪಿಸಿದರೆ ಅಂಥವನನ್ನು ಕೊಂದುಹಾಕುತ್ತದೆ. ಇದರಿಂದ ನನಗೆ ತುಂಬಾ ಭಯವಾಗುತ್ತದೆ. ಏಕೆಂದರೆ ನನ್ನ ತಂದೆಗೆ ನಾನೊಬ್ಬನೇ ಮಗ. ನಾನು ಸತ್ತರೆ, ನನ್ನ ತಂದೆತಾಯಿಯರು ಸಹ ದುಃಖದಿಂದ ಸಮಾಧಿ ಸೇರುವರು. ಅವರನ್ನು ಸಮಾಧಿಮಾಡಲು ಇನ್ನು ಯಾವ ಮಗನೂ ಇಲ್ಲ,” ಎಂದನು.
15 : ಅದಕ್ಕೆ ರಫಯೇಲನು, “ನಿನ್ನ ತಂದೆ ಕೊಟ್ಟ ಬುದ್ಧಿವಾದವನ್ನು ಮರೆತುಬಿಟ್ಟೆಯಾ? ನಿನ್ನ ತಂದೆಯ ಬಳಗದವರಲ್ಲೇ ಹೆಣ್ಣನ್ನು ಆರಿಸಿಕೊಳ್ಳಬೇಕೆಂದು ನಿನ್ನ ತಂದೆ ಹೇಳಲಿಲ್ಲವೆ? ಆದ್ದರಿಂದ ಗೆಳೆಯಾ, ನನ್ನ ಮಾತನ್ನು ಕೇಳು. ಆ ದೆವ್ವವನ್ನು ಕುರಿತು ಚಿಂತಿಸಬೇಕಾಗಿಲ್ಲ. ಆಕೆಯನ್ನು ಅಂಗೀಕರಿಸು. ಈ ಸಂಜೆ ಆಕೆಯನ್ನು ನಿನಗೆ ಪತ್ನಿಯಾಗಿ ಕೊಡಲಾಗುವುದೆಂದು ನಾನು ಬಲ್ಲೆ.
16 : ನೀನು ಶಯನ ಕೊಠಡಿಯನ್ನು ಪ್ರವೇಶಿಸುವಾಗ ಆ ಮೀನಿನ ಹೃದಯವನ್ನೂ ಯಕೃತ್ತನ್ನೂ ತೆಗೆದುಕೊಂಡು ಧೂಪದ ಕೆಂಡದ ಮೇಲೆ ಹಾಕು. ಆಗ ಹೊಗೆ ಮೇಲೇಳುವುದು. ದೆವ್ವವು ಆ ವಾಸನೆಯನ್ನು ಮೂಸುತ್ತಲೇ ಓಡಿ ಹೋಗುವುದು. ಅದು ಪುನಃ ಹುಡುಗಿಯ ಬಳಿ ಎಂದಿಗೂ ಸುಳಿಯುವುದಿಲ್ಲ.
17 : ಬಳಿಕ ನೀವಿಬ್ಬರೂ ಮಲಗಲು ಹೋಗುವುದಕ್ಕೆ ಮುಂಚೆ ಎದ್ದುನಿಂತು ನಿಮಗೆ ಕರುಣೆಯನ್ನೂ ರಕ್ಷಣೆಯನ್ನೂ ದಯಪಾಲಿಸುವಂತೆ ಪರಲೋಕದ ಸರ್ವೇಶ್ವರನನ್ನು ಪ್ರಾರ್ಥಿಸಬೇಕು; ಹೆದರಬೇಡ.
18 : ಸೃಷ್ಟಿಗೆ ಮುಂಚೆಯೇ ಸಾರಳು ನಿನಗೆ ಮೀಸಲಾಗಿದ್ದಳು. ನೀನು ಆಕೆಯನ್ನು ದೆವ್ವದಿಂದ ಬಿಡಿಸುವೆ; ಆಕೆ ನಿನ್ನನ್ನು ಹಿಂಬಾಲಿಸುವಳು. ಅವಳಿಂದ ನಿನಗೆ ಮಕ್ಕಳು ಆಗುವುವು. ಆ ಮಕ್ಕಳು ನಿನಗೆ ಮೆಚ್ಚುಗೆಯಾಗಿರುವುವು ಎಂಬ ನಂಬಿಕೆ ನನಗಿದೆ. ಇನ್ನು ಸಂಕೋಚ ಪಡಬೇಡ,” ಎಂದನು.
ತೊಬಿಯಾಸನು ಈ ಮಾತುಗಳನ್ನು ಆಲಿಸಿದನು. ಸಾರಾ ತನ್ನ ಸ್ವಂತ ಬಳಗದವಳು, ತನ್ನ ತಂದೆಯ ಕುಲಸ್ಥಳು, ಎಂದು ಅರಿತುಕೊಂಡ ಮೇಲೆ ಅವಳ ಮೇಲೆ ಅನುರಾಗ ಮೂಡಿತು. ಆಕೆ ಈತನಿಗೆ ಮನಃಪೂರ್ವಕವಾಗಿ ಆಕರ್ಷಿತಳಾದಳು.