1 : ಅದೇ ದಿನ, ಮೇದ್ಯನಾಡಿನ ರ್ಹಾಜೆಸ್ ಪಟ್ಟಣದಲ್ಲಿ ಗಬಯೇಲನ ಬಳಿ ಕೊಟ್ಟು ಇಟ್ಟಿದ್ದ ಬೆಳ್ಳಿನಾಣ್ಯವನ್ನು ತೊಬೀತನು ನೆನಪಿಗೆ ತಂದುಕೊಂಡನು.
2 : “ಸಾವಿಗಾಗಿ ಪ್ರಾರ್ಥಿಸುವ ಸಮಯ ಬಂದಿದೆ. ನನ್ನ ಮಗ ತೊಬಿಯಾಸನನ್ನು ಕರೆದು, ಹಣದ ವಿಷಯವನ್ನು ಕುರಿತು, ಅವನಿಗೆ ಸಾಯುವುದಕ್ಕೆ ಮುಂಚೆ ತಿಳಿಸುವುದು ಉಚಿತ,” ಎಂದು ಆಲೋಚಿಸಿದನು.
3 : ಆದುದರಿಂದ ತೊಬಿಯಾಸನನ್ನು ಕರೆದು, “ಮಗನೇ, ನಾನು ಸತ್ತಾಗ ಗೌರವಾರ್ಹ ಶವಸಂಸ್ಕಾರ ನಡೆಸು. ನಿನ್ನ ತಾಯಿಯನ್ನು ಸನ್ಮಾನಿಸು. ಅವಳ ಜೀವಮಾನ ಕಾಲದಲ್ಲೆಲ್ಲ ಕೈಬಿಡದೆ ನೋಡಿಕೊ. ಅವಳು ಅಪೇಕ್ಷಿಸುವುದನ್ನೆಲ್ಲ ನೆರವೇರಿಸು. ಯಾವ ಕಾರಣದಿಂದಲೂ ಅವಳ ಮನಸ್ಸನ್ನು ನೋಯಿಸಬೇಡ.
4 : ನೀನು ಅವಳ ಗರ್ಭದಲ್ಲಿದ್ದಾಗ ನಿನಗೋಸ್ಕರ ಆಕೆ ಅನುಭವಿಸಿದ ಕಷ್ಟಸಂಕಟಗಳನ್ನೆಲ್ಲ ನೆನೆಸಿಕೊ. ಆಕೆ ಮರಣಹೊಂದಿದಾಗ, ನನ್ನ ಪಕ್ಕದಲ್ಲೇ ಸಮಾಧಿ ಮಾಡು.
5 : “ಮಗನೇ, ನಿನ್ನ ಜೀವಮಾನಕಾಲದಲ್ಲಿ ಸರ್ವೇಶ್ವರನಿಗೆ ಪ್ರಾಮಾಣಿಕನಾಗಿ ನಡೆ. ಪಾಪ ಮಾಡುವುದಕ್ಕಾಗಲೀ, ಅವರ ಆಜ್ಞೆಗಳನ್ನು ಮೀರುವುದಕ್ಕಾಗಲೀ ಒಪ್ಪಬೇಡ. ಜೀವಮಾನ ಕಾಲದಲ್ಲೆಲ್ಲ ಸತ್ಕಾರ್ಯಗಳನ್ನು ಮಾಡು. ದುರ್ಮಾರ್ಗದಲ್ಲಿ ಕಾಲಿಡಬೇಡ.
6 : ಸತ್ಯವಂತನಾಗಿ ನೀನು ನಡೆದರೆ ಸಜ್ಜನರಿಗೆ ಆಗುವಂತೆ ನೀನೂ ಎಲ್ಲದರಲ್ಲೂ ಯಶಸ್ವಿಯಾಗುವೆ.
7 : “ನಿನ್ನ ಆಸ್ತಿಯಿಂದ ದಾನಧರ್ಮ ಮಾಡು, ಹಾಗೆ ಮಾಡುವಾಗ ಗೊಣಗುಟ್ಟಬೇಡ. ಬಡ ಬಗ್ಗರಿಗೆ ವಿಮುಖನಾಗಬೇಡ. ಆಗ ದೇವರು ನಿನಗೆ ವಿಮುಖರಾಗರು.
8 : ನಿನ್ನ ಬಂಡವಾಳಕ್ಕೆ ಅನುಸಾರವಾಗಿ ದಾನಮಾಡು ಹೆಚ್ಚಾಗಿದ್ದರೆ ಹೆಚ್ಚಾಗಿ ಕೊಡು, ಕಡಿಮೆಯಾಗಿದ್ದರೆ ಕಡಿಮೆ ಕೊಡಲು ಹಿಂಜರಿಯಬೇಡ.
9 : ಹೀಗೆ ಮಾಡುವುದರಿಂದ ವಿಪತ್ತಿನ ದಿನಕ್ಕೆ ದೊಡ್ಡ ನಿಧಿಯನ್ನೇ ಶೇಖರಿಸಿದಂತಾಗುತ್ತದೆ.
10 : ದಾನಧರ್ಮವು ಮರಣದಿಂದ ಪಾರುಮಾಡುತ್ತದೆ; ಕಾರ್ಗತ್ತಲೆಗೆ ನುಗ್ಗದಂತೆ ಕಾಪಾಡುತ್ತದೆ.
11 : ಸರ್ವೋನ್ನತರ ಸನ್ನಿಧಿಯಲ್ಲಿ ದಾನಧರ್ಮ ಎಂಬುದು ಉತ್ಕøಷ್ಟ ಕಾಣಿಕೆ.
12 : “ಮಗನೇ, ವ್ಯಭಿಚಾರದಿಂದ ದೂರವಿರು; ನಿನ್ನ ತಂದೆಯ ಕುಲದಿಂದಲೇ ಪತ್ನಿಯನ್ನು ಆರಿಸಿಕೊ. ನಿನ್ನ ತಂದೆಯ ಕುಲಕ್ಕೆ ಸೇರದ ವಿಜಾತಿ ಸ್ತ್ರೀಯನ್ನು ಹೆಂಡತಿಯಾಗಿ ತೆಗೆದುಕೊಳ್ಳಬೇಡ. ಏಕೆಂದರೆ ನಾವು ಪ್ರವಾದಿಗಳ ಸಂತಾನದವರು; ನಮ್ಮ ಪೂರ್ವಜರಾದ ನೋವ, ಅಬ್ರಹಾಮ್, ಇಸಾಕ್ ಹಾಗೂ ಯಕೋಬರನ್ನು ಸ್ಮರಿಸಿಕೊ. ಅವರೆಲ್ಲರು ತಮ್ಮ ಸ್ವಂತ ಕುಲದವರಿಂದಲೇ ಹೆಂಡತಿಯರನ್ನು ಆರಿಸಿಕೊಂಡರು. ಸಂತಾನ ಭಾಗ್ಯವನ್ನು ಪಡೆದರು. ಆ ಸಂತತಿಯವರೇ ನಾಡಿಗೆ ಬಾಧ್ಯಸ್ಥರಾಗುವರು.
13 : ಅಂತೆಯೇ ಮಗನೇ, ನೀನು ಕೂಡ ನಿನ್ನ ಬಂಧುಬಳಗದವರನ್ನು ವೀಕ್ಷಿಸಬೇಕು. ಅವರನ್ನು ಹಾಗು ಆ ನಿನ್ನ ಸ್ವಜನರ ಪುತ್ರಪುತ್ರಿಯರನ್ನು ತಿರಸ್ಕರಿಸುವಷ್ಟು ಗರ್ವ ನಿನಗೆ ಬೇಡ. ಅವರಿಂದಲೇ ನಿನ್ನ ಪತ್ನಿಯನ್ನು ಆರಿಸಿಕೊಳ್ಳಬೇಕು. ಏಕೆಂದರೆ, ಗರ್ವದಿಂದ ವಿನಾಶ ಹಾಗು ನಿರಾಶೆ ಉಂಟಾಗುತ್ತದೆ. ಹಾಗೆಯೇ ಸೋಮಾರಿತನದಿಂದ ಕೊರತೆ ಕಡುಬಡತನ ಬಂದೊದಗುತ್ತದೆ; ಬರಗಾಲದ ತಾಯಿ ಸೋಮಾರಿತನವೇ!
14 : “ನಿನಗೆ ಕೆಲಸಮಾಡುವವರ ಕೂಲಿಯನ್ನು ಮರುದಿನದವರೆಗೂ ಮಡಗಿಕೊಳ್ಳಬೇಡ. ತಕ್ಷಣವೇ ಅವರಿಗೆ ಅದನ್ನು ಕೊಟ್ಟುಬಿಡು. ಹೀಗೆ ನೀನು ದೇವರಿಗೆ ಸೇವೆಸಲ್ಲಿಸಿದರೆ ನಿನಗೂ ಸಂಭಾವನೆ ದೊರಕುವುದು ಮಗನೇ. ನಿನ್ನ ಕೆಲಸಕಾರ್ಯಗಳನ್ನೆಲ್ಲ ಎಚ್ಚರಿಕೆಯಿಂದ ಮಾಡು. ನಿನ್ನ ನಡತೆ ಶಿಸ್ತಿನಿಂದ ಕೂಡಿರಲಿ.
15 : ಇತರರು ನಿನಗೆ ಏನು ಮಾಡಬಾರದೆಂದು ಎಣಿಸುತ್ತೀಯೋ ಅದನ್ನು ನೀನು ಸಹ ಅವರಿಗೆ ಮಾಡಬೇಡ.
“ಅಮಲೇರುವ ತನಕ ಮದ್ಯಪಾನದಲ್ಲಿ ಮಗ್ನನಾಗಿರಬೇಡ. ಕುಡಿತ ನಿನಗೆ ಗೆಳೆತನ ಆಗಬಾರದು.
16 : “ಹಸಿದವರಿಗೆ ಅನ್ನಾಹಾರಗಳನ್ನು ಕೊಡು. ಬಟ್ಟೆಯಿಲ್ಲದೆ ಬರಿದಾಗಿರುವವರಿಗೆ ಬಟ್ಟೆ ಕೊಡು. ಅತಿಯಾಗಿರುವುದನ್ನು ಉದಾರವಾಗಿ ದಾನಮಾಡು. ಕೊಡುವಾಗ ಗೊಣಗುಟ್ಟದೆ ಕೊಡು.
17 : “ಪುಣ್ಯಾತ್ಮರು ಸತ್ತಾಗ ಅನ್ನಪಾನಗಳನ್ನು ಅವರ ಕುಟುಂಬಕ್ಕೆ ದಾನಮಾಡು. ದುರಾತ್ಮರಿಗೆ ಏನನ್ನೂ ಕೊಡಬೇಡ.
18 : “ಜ್ಞಾನಿಗಳ ಸಲಹೆಯನ್ನು ಪಡೆ. ಉಪಯುಕ್ತವಾದ ಯಾವ ಸಲಹೆಯನ್ನು ಅಲ್ಲಗಳೆಯಬೇಡ.
19 : “ಎಲ್ಲಾ ಕಾಲದೊಳು ದೇವರಾದ ಸರ್ವೇಶ್ವರನನ್ನು ಹೊಗಳು. ನಿನ್ನ ಮಾರ್ಗವನ್ನು ಸರಾಗಬಾಡಬೇಕೆಂದು, ನಿನ್ನ ಯೋಜನೆಗಳನ್ನೂ ಆಶೋತ್ತರಗಳನ್ನೂ ಪೂರೈಸಬೇಕೆಂದು ಯಾಚಿಸು. ಸುಜ್ಞಾನವು ಪ್ರತಿಯೊಂದು ರಾಷ್ಟ್ರದ ಸಂಪತ್ತಲ್ಲ. ಆ ರಾಷ್ಟ್ರಗಳಿಗೆ ಸಂಭಾವನೆ ನೀಡುವವರು ಸರ್ವೇಶ್ವರ. ತಮ್ಮ ಚಿತ್ತಾನುಸಾರ ಅವರು ಮೇಲಕ್ಕೆತ್ತುತ್ತಾರೆ, ಇಲ್ಲವೆ ಪಾತಾಳದ ಅಂತರಾಳಕ್ಕೆ ಕೆಡವಿಬಿಡುತ್ತಾರೆ. “ಆದುದರಿಂದ ಪ್ರಿಯ ಮಗನೇ, ಈ ಬುದ್ಧಿ ಮಾತುಗಳನ್ನು ನೆನಪಿನಲ್ಲಿಡು. ಇವು ನಿನ್ನ ಹೃದಯದಿಂದ ಅಳಿಸಿಹೋಗದಂತೆ ಎಚ್ಚರವಹಿಸು.
20 : “ಮಗನೇ, ಈಗ ನಿನಗೊಂದು ವಿಷಯ ತಿಳಿಸಬೇಕಾಗಿದೆ. ಅದೇನೆಂದರೆ, ಮೇದ್ಯನಾಡಿನ ರ್ಹಾಜೆಸ್ ಎಂಬ ಪಟ್ಟಣದಲ್ಲಿ ಗಬ್ರಿಯಾಸನ ಮಗ ಗಬಯೇಲ್ ಎಂಬವನಿದ್ದಾನೆ. ಅವನ ಬಳಿ ನಾನು ಮುನ್ನೂರು ಕಿಲೋಗ್ರಾಮಿನಷ್ಟು ಬೆಳ್ಳಿನಾಣ್ಯಗಳನ್ನು ಇಟ್ಟಿದ್ದೇನೆ.
21 : ಮಗನೇ, ನಮಗೀಗ ಬಡತನ ಬಂದಿದೆ, ಆದರೆ ಹೆದರಬೇಡ, ದೇವರಿಗೆ ಭಯಪಟ್ಟು ಎಲ್ಲಾ ಪಾಪಗಳಿಂದ ದೂರವಿದ್ದು ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಸರಿಯಾದುದನ್ನೇ ಮಾಡಿಕೊಂಡು ಬಂದೆಯಾದರೆ ನೀನೊಬ್ಬ ದೊಡ್ಡ ಶ್ರೀಮಂತನಾಗುವೆ,” ಎಂದು ಬುದ್ಧಿವಾದ ಹೇಳಿದನು.