1 : ತೊಬೀತನು ಕುರುಡನಾದಾಗ ಅವನಿಗೆ 62 ವರ್ಷ ವಯಸ್ಸು. ಕಣ್ಣುಗಳು ಬಂದನಂತರ ಅವನು ದೀರ್ಘಕಾಲ ನೆಮ್ಮದಿಯಿಂದ ಬಾಳಿದನು.
2 : ದಾನಧರ್ಮ ಮಾಡುವುದರಲ್ಲೂ ದೇವರನ್ನು ಸ್ತುತಿಸಿ ಅವರ ಮಹತ್ಕಾರ್ಯಗಳನ್ನು ಸಾರುವುದರಲ್ಲೂ ತನ್ನ ಜೀವಮಾನವನ್ನು ಕಳೆದನು.
3 : ಸಾಯುವುದಕ್ಕೆ ಮುನ್ನ ತೊಬೀತನು ತನ್ನ ಮಗ ತೊಬಿಯಾಸನನ್ನು ಕರೆದು ಇಂತೆಂದನು:
4 : “ಮಗನೇ, ನಿನ್ನ ಮಕ್ಕಳನ್ನು ಕರೆದುಕೊಂಡು ಬೇಗನೆ ಮೇದ್ಯನಾಡಿಗೆ ಹೋಗು. ಏಕೆಂದರೆ, ನಿನೆವೆಯ ವಿರುದ್ಧ ಯೋನನು ಪ್ರವಾದಿಸಿದ ದೇವರ ವಾಕ್ಯ ನೆರವೇರಲಿದೆ. ಇದು ನನ್ನ ದೃಢನಂಬಿಕೆ. ಪ್ರವಾದಿಗಳು ಮುಂತಿಳಿಸಿದ ಎಲ್ಲಾ ಘಟನೆಗಳು ನಿನೆವೆ ಮತ್ತು ಅಸ್ಸೀರಿಯಾಗೆ ಸಂಭವಿಸುತ್ತವೆ. ದೇವರು ಕಳುಹಿಸಿದ ಇಸ್ರಯೇಲಿನ ಪ್ರವಾದಿಗಳು ನುಡಿದುದೆಲ್ಲ ಸಂಭವಿಸಿಯೇ ತೀರುವುದು. ಅದರಲ್ಲಿ ಒಂದೂ ನಿರರ್ಥಕವಾಗದು. ಎಲ್ಲವೂ ಸೂಕ್ತ ಸಮಯದಲ್ಲಿ ಈಡೇರುವುದು. ಆದುದರಿಂದ ಅಸ್ಸೀರಿಯ ಹಾಗೂ ಬಾಬಿಲೋನಿನಲ್ಲಿ ಇರುವುದಕ್ಕಿಂತ ಮೇದ್ಯ ನಾಡಿನಲ್ಲಿರುವುದು ನಿಮಗೆ ಕ್ಷೇಮಕರ. ದೇವರು ನುಡಿದದ್ದು ಸತ್ಯವಾಗಿ ಕೈಗೂಡಲೇಬೇಕು. ಪ್ರವಾದನೆಯ ಯಾವ ವಾಕ್ಯವೂ ನಿರರ್ಥಕವಾಗದು. ಇದು ನನ್ನ ಅರಿಕೆ ಹಾಗೂ ನಂಬಿಕೆ.
“ನಮ್ಮ ಬಂಧುಬಳಗದವರೆಲ್ಲರೂ ಇಸ್ರಯೇಲ್ ನಾಡಿನ ನಿವಾಸಿಗಳೆಲ್ಲರೂ ಚದರಿ ಹೋಗುವರು. ಈ ಒಳ್ಳೆಯ ನಾಡಿನಿಂದ ಗಡೀಪಾರಾಗುವರು. ಇಸ್ರಯೇಲ್ ನಾಡೆಲ್ಲವೂ ನಿರ್ಜನ ಪ್ರದೇಶವಾಗುವುದು, ಸಮಾರಿಯ ಮತ್ತು ಜೆರುಸಲೇಮ್ ನಗರಗಳು ಕೂಡ ಪಾಳು ಬೀಳುವುವು. ಮಾತ್ರವಲ್ಲ, ದೇವರ ಮಹಾ ದೇವಾಲಯ ಸುಟ್ಟು ಹೋಗಿ ನೆಲಸಮವಾಗುವುದು. ಕೆಲವು ಕಾಲದ ತನಕ ಅದು ಪಾಳು ಬಿದ್ದಿರುವುದು.
5 : ದೇವರು ಪುನಃ ತಮ್ಮ ಜನರಿಗೆ ಕೃಪೆತೋರಿ ಇಸ್ರಯೇಲಿಗೆ ಅವರನ್ನು ಮರಳಿ ಕರೆದುತರುವರು. ಜನರು ಮತ್ತೆ ದೇವರ ಮಹಾದೇವಾಲಯವನ್ನು ಕಟ್ಟುವರು. ಆದರೆ ಅದು ಮೊದಲಿನಂತೆ ಇರದು. ಈಡೇರುವ ಕಾಲ ಬರುವವರೆಗೆ ಹಾಗೆಯೇ ಇರುವುದು. ಅನಂತರ ಜನರು ಗಡೀಪಾರಾಗಿದ್ದ ಎಲ್ಲ ಕಡೆಗಳಿಂದ ಹಿಂದಿರುಗುವರು. ಭವ್ಯವಾದ ಜೆರುಸಲೇಮನ್ನು ಪುನಃ ನಿರ್ಮಿಸುವರು. ಮಹಾ ದೇವಾಲಯವನ್ನು ಸಹ ಮರಳಿಕಟ್ಟುವರು. ಹೀಗೆ ಇಸ್ರಯೇಲಿನ ಪ್ರವಾದಿಗಳು ನುಡಿದುದೆಲ್ಲವು ನೆರವೇರುವುದು.
6 : ಆಗ ಜಗದ ಎಲ್ಲಾ ರಾಷ್ಟ್ರಗಳು ಮನಪರಿವರ್ತನೆಗೊಂಡು ನಿಜದೇವರನ್ನು ಪ್ರಾಮಾಣಿಕವಾಗಿ ಆರಾಧಿಸುವರು. ಆಗ ತಮ್ಮನ್ನು ಮರುಳುಗೊಳಿಸಿ ಮಿಥ್ಯ ಪಥಕ್ಕೆ ಎಳೆದ ಎಲ್ಲಾ ವಿಗ್ರಹಗಳನ್ನು ತೊರೆದುಬಿಡುವರು.
7 : ನಿತ್ಯದೇವರನ್ನು ಋಜುವಾದ ರೀತಿಯಲ್ಲಿ ಆರಾಧಿಸುವರು. ದೇವರಲ್ಲಿ ನಿಜವಾದ ನಂಬಿಕೆಯಿಟ್ಟು ಸಂರಕ್ಷಣೆ ಹೊಂದಿದ ಇಸ್ರಯೇಲರೆಲ್ಲರನ್ನು ಆ ದಿನಗಳಲ್ಲಿ ಒಟ್ಟಾಗಿ ಸೇರಿಸಲಾಗುವುದು. ಅವರೆಲ್ಲರೂ ಜೆರುಸಲೇಮಿಗೆ ತೆರಳಿ ಅಬ್ರಹಾಮನ ನಾಡಿನಲ್ಲಿ ಸುರಕ್ಷಿತವಾಗಿ ಬಾಳುವರು. ಆ ನಾಡು ಅವರದಾಗುವುದು. ದೇವರನ್ನು ಪ್ರಾಮಾಣಿಕವಾಗಿ ಪ್ರೀತಿಸುವವರಿಗೆ ಸುಖಸಂತೋಷ ಇರುವುದು. ಆದರೆ ಪಾಪಾಕ್ರಮಗಳನ್ನು ಮಾಡಿ ಅನ್ಯಾಯವಾಗಿ ವರ್ತಿಸುವವರು ಧರೆಯಿಂದ ಮಾಯವಾಗುವರು.
8 : “ಆದ್ದರಿಂದ ಮಕ್ಕಳೇ, ದೇವರಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿರಿ. ಅವರಿಗೆ ಪ್ರಿಯವಾದುದೆಲ್ಲ ಮಾಡಿರಿ. ಇದು ನನ್ನ ಆಜ್ಞೆ.
9 : ನಿಮ್ಮ ಮಕ್ಕಳಿಗೂ ಸಹಾ ಈ ಆಜ್ಞೆ ವಿಧಿಸಿರಿ. ಅವರು ಸತ್ಯವಾದುದನ್ನೇ ಮಾಡಬೇಕು; ದಾನಧರ್ಮ ನೀಡಬೇಕು; ದೇವರನ್ನು ಸ್ಮರಿಸಬೇಕು; ಎಲ್ಲ ಕಾಲದೊಳು ಅವರ ನಾಮವನ್ನು ಪೂಜಿಸಬೇಕು. ಇವುಗಳನ್ನು ಪೂರ್ಣಶಕ್ತಿಯಿಂದ, ಪ್ರಾಮಾಣಿಕತೆಯಿಂದ ನೆರವೇರಿಸಬೇಕು.
10 : “ಆದ್ದರಿಂದ ಮಗನೇ, ನಿನೆವೆಯನ್ನು ಬಿಟ್ಟು ತೆರಳು. ಇಲ್ಲಿ ನೆಲೆಸಬೇಡ, ನಿನ್ನ ತಾಯಿ ಸತ್ತ ಬಳಿಕ ಆಕೆಯನ್ನು ನನ್ನ ಬಳಿ ಸಮಾಧಿ ಮಾಡಿದ ಮೇಲೆ ಒಂದು ರಾತ್ರಿಯಾದರೂ ಈ ನಗರದಲ್ಲಿರಬೇಡ. ಏಕೆಂದರೆ ನನಗೆ ತಿಳಿದಿರುವಂತೆ ಇಲ್ಲಿ ದುಷ್ಟತನ ತುಂಬಿದೆ. ಮೋಸ ವಂಚನೆಗಳು ತಾಂಡವವಾಡುತ್ತಿವೆ; ಜನರು ನಾಚಿಕೆ ಎಂಬುದನ್ನೇ ಮರೆತು ಜೀವಿಸುತ್ತಿದ್ದಾರೆ. ಮಗನೇ, ತನ್ನ ಸ್ವಂತ ಸಾಕುತಂದೆ ಅಹೀಕರನಿಗೆ ನಾದಾಬನು ಮಾಡಿದ್ದನ್ನು ಯೋಚಿಸಿ ನೋಡು. ಅಹೀಕರನು ಕೊಲೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಜೀವದಿಂದಿರುವಾಗಲೇ ಸಮಾಧಿಯಲ್ಲಿ ತಲೆಮರೆಸಿಕೊಳ್ಳಬೇಕಾಯಿತಲ್ಲವೆ? ದೇವರು ನಾದಾಬನಿಗೆ ಅವಮಾನಕರ ದಂಡನೆಯನ್ನು ನೀಡಿದರಲ್ಲವೆ? ಈ ಕಾರಣ ಅಹೀಕರನು ಬೆಳಕಿಗೆ ಬಂದನು; ನಾದಾಬನು ಅವನನ್ನು ಕೊಲ್ಲಲೆತ್ನಿಸಿದ್ದರಿಂದ ಅನಂತ ಅಂಧಕಾರಕ್ಕೆ ತೆರಳಿದನು. ಅಹೀಕರನು ದಾನಧರ್ಮ ಮಾಡಿದ್ದರಿಂದಲೇ ನಾದಾಬನು ಒಡ್ಡಿದ ಮಾರಕ ಬಲೆಯಿಂದ ಪಾರಾದನು. ನಾದಾಬನಾದರೋ ತಾನೊಡ್ಡಿದ ಬಲೆಯಲ್ಲಿ ತಾನೇ ಬಿದ್ದು ನಾಶವಾದನು.
11 : “ಆದ್ದರಿಂದ ಮಕ್ಕಳೇ, ದಾನಧರ್ಮದಿಂದ ಲಭಿಸುವ ಫಲವನ್ನು, ಅನ್ಯಾಯ ಅಕ್ರಮಗಳು ತರುವ ಮರಣವನ್ನು ಯೋಚಿಸಿ ನೋಡಿ; ಈಗ ನನಗೆ ಉಸಿರುಕಟ್ಟುತ್ತಿದೆ,” ಎಂದನು.
ಅನಂತರ ತೊಬೀತನನ್ನು ಹಾಸಿಗೆಯ ಮೇಲೆ ಮಲಗಿಸಿದರು. ಅಷ್ಟರಲ್ಲಿ ಅವನು ಸತ್ತು ಹೋದನು. ಅವನನ್ನು ಯೋಗ್ಯ ಮರ್ಯಾದೆಯಿಂದ ಶವಸಂಸ್ಕಾರ ಮಾಡಲಾಯಿತು.
12 : ತನ್ನ ತಾಯಿ ಮೃತಳಾದಾಗ, ತೊಬಿಯಾಸನು ಆಕೆಯನ್ನು ತನ್ನ ತಂದೆಯ ಪಕ್ಕದಲ್ಲಿ ಸಮಾಧಿ ಮಾಡಿದನು. ಬಳಿಕ ಮಡದಿಮಕ್ಕಳ ಸಮೇತ ಮೇದ್ಯ ನಾಡಿಗೆ ಬಂದು ಎಕ್ಬತಾನ ನಗರದಲ್ಲಿದ್ದ ತನ್ನ ಮಾವ ರಾಗುಯೇಲನೊಂದಿಗೆ ವಾಸಮಾಡಿದನು.
13 : ತನ್ನ ಅತ್ತೆ ಮಾವಂದಿರನ್ನು ಅವರ ಮುಪ್ಪು ವಯಸ್ಸಿನಲ್ಲಿ ಅಕ್ಕರೆಯಿಂದ ನೋಡಿಕೊಂಡನು. ಅವರು ಸತ್ತಾಗ ಮೇದ್ಯನಾಡಿನ ಎಕ್ಬತಾನದಲ್ಲಿ ಸಮಾಧಿ ಮಾಡಿದನು. ತನ್ನ ತಂದೆ ತೊಬೀತನ ಆಸ್ತಿಗೂ ತನ್ನ ಮಾವ ರಾಗುಯೇಲನ ಆಸ್ತಿಗೂ ಅವನೇ ವಾರಸುದಾರನಾದನು.
14 : ತೊಬಿಯಾಸನು ಘನತೆ ಗೌರವದಿಂದ ಬಾಳಿದನು; ವಯೋವೃದ್ಧನಾಗಿ ಸತ್ತಾಗ ಅವನಿಗೆ 117 ವರ್ಷವಾಗಿತ್ತು.
15 : ಸಾಯುವುದಕ್ಕೆ ಮುಂಚೆ ನಿನೆವೆ ನಗರದ ವಿನಾಶ ಕುರಿತು ಕಿವಿಯಾರೆ ಕೇಳಿದನು; ಅದರ ನಿವಾಸಿಗಳು ಮೇದ್ಯಕ್ಕೆ ಸೆರೆಯಾಗಿ ಬಂದುದನ್ನೂ ಕಣ್ಣಾರೆ ನೋಡಿದನು. ಮೇದ್ಯದ ಅರಸ ಆ ಜನರನ್ನು ಕೈದಿಗಳಾಗಿ ಹಿಡಿದು ತಂದಿದ್ದನು. ದೇವರು ನಿನೆವೆ ಹಾಗೂ ಅಸ್ಸೀರಿಯದ ಜನರಿಗೆ ವಿಧಿಸಿದ ದಂಡನೆಗಾಗಿ ತೊಬಿಯಾಸನು ದೇವರಿಗೆ ಧನ್ಯವಾದ ಸಲ್ಲಿಸಿದನು. ಸಾಯುವುದಕ್ಕೆ ಮುಂಚೆ ನಿನೆವೆಗಾದ ಪರಿಸ್ಥಿತಿ ಅವನಿಗೆ ಸಂತೋಷವನ್ನು ತಂದಿತ್ತು. ದೇವರಾದ ಸರ್ವೇಶ್ವರನಿಗೆ ನಿರಂತರ ಸ್ತೋತ್ರವನ್ನು ಸಲ್ಲಿಸಿದನು. (ಆಮೆನ್).