Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ತೊಬೀತ


1 : ತೊಬೀತನು ಹೀಗೆಂದು ಪ್ರಾರ್ಥಿಸಿದನು: ಚಿರಂಜೀವಿಯಾದ ಸರ್ವೇಶ್ವರನಿಗೆ ಸ್ತುತಿ ಸ್ತೋತ್ರ ಚಿರಕಾಲವಿರುವುದು ಆತನ ಸಾಮ್ರಾಜ್ಯ.
2 : ಶಿಕ್ಷಿಸುವವನೂ ಕ್ಷಮಿಸುವವನೂ ಆತನೇ ಪಾತಾಳಕ್ಕಿಳಿಸುವವನೂ ಮೇಲಕ್ಕೆತ್ತುವವನೂ ಆತನೇ ಆತನ ಕೈಯಿಂದ ತಪ್ಪಿಸಿಕೊಳ್ಳುವವನು ಯಾವನಿದ್ದಾನೆ?
3 : ಇಸ್ರಯೇಲಿನ ಕುಲಪುತ್ರರೇ, ದೇವಸ್ತುತಿಮಾಡಿ ಜನಾಂಗಗಳ ಮುಂದೆ ಚದರಿಸಿಹನು ನಿಮ್ಮನ್ನು ಅವರ ಮಧ್ಯೆ.
4 : ಅಲ್ಲೂ ತೋರ್ಪಡಿಸಿರುವನು ತನ್ನ ಪ್ರಭೆಯನು ಗುಣಗಾನ ಮಾಡಿರಿ, ಸರ್ವಜೀವಿಗಳ ಮುಂದೆ ಆತನನು. ಆತನೇ ನಮ್ಮ ಸರ್ವೇಶ್ವರ, ಆತನೇ ನಮ್ಮ ದೇವ ಆತನೇ ನಮ್ಮ ತಂದೆ; ಆತನೇ ನಮ್ಮ ದೇವ ಅನವರತ.
5 : ದಂಡನೆ ನೀಡದೆ ಬಿಡನು ನಿಮ್ಮ ದುಷ್ಕøತ್ಯಗಳಿಗೆ ಮರಳಿ ಕರುಣೆ ತೋರುವನು ನಿಮ್ಮೆಲ್ಲರಿಗೆ. ಒಂದುಗೂಡಿಸುವನು ನಿಮ್ಮನ್ನು ಎಲ್ಲಾ ರಾಷ್ಟ್ರಗಳಿಂದ, ತಂದು ಸೇರಿಸುವನು ಚದರಿಹೋದ ನಾಡುಗಳಿಂದ.
6 : ಅಭಿಮುಖರಾದರೆ ನೀವು ಪೂರ್ಣ ಹೃದಯದಿಂದ ಪೂರ್ಣಪ್ರಾಣದಿಂದ ನಡೆದರೆ ಆತನ ಸಮ್ಮುಖದಲ್ಲಿ ಸತ್ಯತೆಯಿಂದ, ಮರೆಮಾಚಿಕೊಳ್ಳನಾತ ಮುಖವನ್ನು ನಿಮ್ಮಿಂದ, ಸ್ತುತಿಸಿರಿ ಸತ್ಯಸ್ವರೂಪಿಯಾದ ಸರ್ವೇಶ್ವರನನು ಯುಗಯುಗಾಂತರಕ್ಕೂ ಆಳುವ ಅರಸನನು. ನಾನಾತನ ಭಕ್ತನು, ಗಡೀಪಾರಾದ ಈ ನಾಡಿನಲೂ ಆತನ ಶಕ್ತಿಸಾಮಥ್ರ್ಯವನು ಸಾರುವೆನು ದುಷ್ಟರ ಈ ರಾಷ್ಟ್ರದಲೂ. ಪಾಪಾತ್ಮರೇ, ಹಿಂದಿರುಗಿ ಬನ್ನಿರಿ ಆತನಿಗೆ ನ್ಯಾಯವಾದುದನ್ನೇ ಮಾಡಿರಿ ಕಟಾಕ್ಷಿಸಿಯಾನು ನಿಮಗೆ ಕೃಪೆತೋರಿ.
7 : ನಾನಾದರೋ ಗುಣಗಾನ ಮಾಡುವೆನು ನನ್ನ ದೇವನನು, ಸಂಕೀರ್ತಿಸುವುದು ನನ್ನ ಮನ ಪರಲೋಕ ರಾಜನನು.
8 : ದೇವರ ಮಹಿಮಾಸ್ತುತಿ ಇರಲಿ ಸರ್ವರ ಬಾಯಲಿ, ಆತನನು ಸಂಕೀರ್ತಿಸಲಿ ಜೆರುಸಲೇಮಿನಲಿ.
9 : ಎಲೈ ಜೆರುಸಲೇಮೇ, ಪವಿತ್ರ ನಗರಿಯೇ, ಶಿಕ್ಷಿಸುವನು ದೇವನು ನಿನ್ನ ಮಕ್ಕಳ ದುಷ್ಕøತ್ಯಗಳ ನಿಮಿತ್ತ, ಕರುಣೆ ತೋರುವನು ಮರಳಿ ಸಜ್ಜನರ ಸಂತತಿಯ ಪ್ರಯುಕ್ತ.
10 : ವಂದಿಸಿರಿ ಸದ್ಗುಣಶೀಲ ಸರ್ವೇಶ್ವರನನು ಸ್ತುತಿಸಿರಿ ಯುಗಯುಗಕ್ಕೂ ಆಳುವ ಅರಸನನು, ಆಗ ನಿರ್ಮಿಸಲಾಗುವುದು ಸಂತಸದಿ ದೇವಾಲಯವನು. ಹರ್ಷಗೊಳಿಸುವನಾತ ನಿಮ್ಮಲ್ಲಿ ಸೆರೆಹೋದವರನು, ಪ್ರೀತಿಸುವನು ನಿತ್ಯಕ್ಕೂ ನಿಮ್ಮ ದಲಿತರೆಲ್ಲರನು.
11 : ಉಜ್ವಲ ಜ್ಯೋತಿಯೊಂದು ಬೆಳಗುವುದು ಜಗಕೆಲ್ಲ, ನಿನ್ನಲ್ಲಿಗೆ ಬರಲಿರುವುವು ದೂರದ ರಾಷ್ಟ್ರಗಳೆಲ್ಲ. ಧರೆಯ ಕಟ್ಟಕಡೆಯಿಂದ ಬರುವರು ಶ್ರೀ ನಾಮದ ನಿವಾಸಕೆ, ಕೈತುಂಬ ಕಾಣಿಕೆಯನು ತರುವರು ಸ್ವರ್ಗಾಧಿಪತಿಗೆ. ಸನ್ನುತಿಗಳ ಸಲ್ಲಿಸುವರು ನಿನ್ನೊಳು ತಲತಲಾಂತರಕೂ ಈ ಭವ್ಯ ನಗರದ ನಾಮ ಉಳಿಯುವುದು ಸದಾಕಾಲಕೂ.
12 : ಧಿಕ್ಕಾರ ನಿನ್ನ ವಿರುದ್ಧ ಮಾತೆತ್ತುವವರಿಗೆ ! ನಿನ್ನ ಸೋಲಿಸಿ, ಕೋಟೆಗಳ ನಾಶ ಪಡಿಸುವವರಿಗೆ, ನಿನ್ನ ಗೋಪುರಗಳ ಕೆಡವಿ, ಗೃಹಗಳನು ಸುಡುವವರಿಗೆ. ಸರ್ವದಾ ಶುಭವಾಗಲಿ, ನಿನ್ನನ್ನು ಪುನರ್ ನಿರ್ಮಿಸುವವರಿಗೆ.
13 : ಸಂತೋಷಿಸಿರಿ ಸಜ್ಜನರ ಸಂತತಿಗಾಗಿ ಸ್ತುತಿಸುವರವರು ಸತ್ಯ ದೇವರನು ಒಟ್ಟಾಗಿ.
14 : ನಿನಗೆ ಪ್ರೀತಿ ತೋರಿಸುವವರು ಧನ್ಯರು ನಿನ್ನ ಏಳಿಗೆಗಾಗಿ ನಲಿವವರು ಧನ್ಯರು ನಿನಗಾದ ಶಿಕ್ಷೆಗಾಗಿ ಶೋಕಿಸುವವರು ಧನ್ಯರು! ಏಕೆನೆ ನಲಿದಾಡುವರು ನಿನ್ನೊಂದಿಗೆ, ನಿನ್ನ ಸೌಭಾಗ್ಯವನೆಲ್ಲ ಕಾಣುವರು ಸರ್ವಕಾಲಕೆ.
15 : ನನ್ನ ಮನವೇ, ಸ್ತುತಿಸ್ತೋತ್ರಗೈ ರಾಜಾಧಿರಾಜನಾದ ಸರ್ವೇಶ್ವರನಿಗೆ.
16 : ಏಕೆನೆ, ಪುನರ್ ನಿರ್ಮಾಣವಾಗುವುದು ಜೆರುಸಲೇಮ್ ನಗರ, ಅದಾಗುವುದು ಆತನ ಶಾಶ್ವತ ಮಂದಿರ; ನಿನ್ನ ವೈಭವ ನೋಡಲು, ಸ್ವರ್ಗರಾಜನಿಗೆ ತಲೆಬಾಗಲು ನನ್ನ ಸಂತಾನದ ಕುಡಿ ಉಳಿವುದಾದರೆ ಅದೆಂಥ ಭಾಗ್ಯ ನನ್ನದು !
17 : ನಿರ್ಮಿಸಲಾಗುವುದಾ ಜೆರುಸಲೇಮಿನ ದ್ವಾರಗಳನು ಇಂದ್ರನೀಲ ಮತ್ತು ಪಚ್ಚೆಗಳಿಂದ, ಅದರ ಗೋಡೆಗಳನ್ನೆಲ್ಲ ಅಮೂಲ್ಯ ರತ್ನಗಳಿಂದ, ಅದರ ಗೋಪುರಗಳನು ಬಂಗಾರದಿಂದ, ಅದರ ಕೋಟೆಗಳನು ಅಪ್ಪಟ ಚಿನ್ನದಿಂದ, ಅದರ ಬೀದಿಗಳನು ಹೊದಿಸಲಾಗುವುದು ಪೀತರತ್ನ ಓಫೀರಿನ ರತ್ನಗಳಿಂದ.
18 : ಹಾಡಲಾಗುವುದು ಸಂತಸ ಗೀತೆಗಳನು ಜೆರುಸಲೇಮಿನ ದ್ವಾರಗಳಲಿ ಅಲ್ಲೆಲೂಯ ಘೋಷಿಸಲಾಗುವುದು ಅದರ ಮನೆಗಳಲಿ. ಇಸ್ರಯೇಲಿನ ದೇವರಿಗೆ ಸ್ತೋತ್ರವಾಗಲಿ ನಿತ್ಯಕೂ ಆತನ ಶ್ರೀನಾಮ ಅಲ್ಲಿ ಪೂಜಿತವಾಗಲಿ! ಇತಿ ತೊಬೀತನ ಸ್ತುತಿಗೀತೆ.

· © 2017 kannadacatholicbible.org Privacy Policy