Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ತೊಬೀತ


1 : ಅತ್ತ ತೊಬೀತನು, ಮಗ ತೊಬಿಯಾಸನು ಪ್ರಯಾಣ ಮುಗಿಸಿ ಹಿಂದಿರುಗುವುದಕ್ಕೆ ಎಷ್ಟು ದಿನಗಳು ಹಿಡಿಯುತ್ತವೆಂದು ಲೆಕ್ಕಹಾಕುತ್ತಿದ್ದನು. ಅವನ ಲೆಕ್ಕಾಚಾರದ ಪ್ರಕಾರ ತೊಬಿಯಾಸನು ಹಿಂದಿರುಗದೆ ಹೋಗಿದ್ದರಿಂದ,
2 : “ತೊಬಿಯಾಸನನ್ನು ಅವರು ತಡೆಗಟ್ಟಿರಬಹುದೇ? ಗಬಯೇಲನೇನಾದರು ಸತ್ತು ಹೋಗಿರಬಹುದೇ? ಹಣವನ್ನು ಹಿಂದಿರುಗಿಸಲು ಯಾರೂ ಇಲ್ಲದಿರಬಹುದೇ?”
3 : ಎಂದೆಲ್ಲ ಚಿಂತಿಸ ತೊಡಗಿದನು.
4 : ಅವನ ಹೆಂಡತಿ ಅನ್ನಳಾದರೋ, “ನನ್ನ ಕಂದ ಸತ್ತೇ ಹೋಗಿದ್ದಾನೆ, ಅವನು ಬದುಕಿದಂತಿಲ್ಲ,” ಎಂದು ದುಃಖಿಸಿ ರೋದಿಸತೊಡಗಿದಳು.
5 : “ಅಯ್ಯೋ ಕಂದಾ; ನನ್ನ ಕಣ್ಮಣಿಯೇ; ನಿನ್ನನ್ನೇಕೆ ಹೋಗಲು ಬಿಟ್ಟೆ? ನನ್ನದೇ ತಪ್ಪು” ಎಂದು ಅತ್ತಳು.
6 : ಆಗ ತೊಬೀತನು ಅವಳಿಗೆ, “ಪ್ರಿಯಳೇ, ಸುಮ್ಮನಿರು, ಚಿಂತೆಪಡಬೇಡ. ಅವನು ಸುಖವಾಗಿದ್ದಾನೆ. ಬಹುಶಃ ಅಲ್ಲಿ ಏನೋ ಅನಿರೀಕ್ಷಿತವಾಗಿ ನಡೆದಿರಬೇಕು. ಅವನ ಜೊತೆಹೋಗಿದ್ದ ವ್ಯಕ್ತಿ ನಂಬಿಗಸ್ಥ, ನಮ್ಮ ಸಂಬಂಧಿಕ. ಆದ್ದರಿಂದ ಪ್ರಿಯಳೇ, ಅಳಬೇಡ; ಅವನು ಬೇಗ ಹಿಂದಿರುಗುತ್ತಾನೆ,” ಎಂದು ಸಮಾಧಾನ ಪಡಿಸಿದನು.
7 : ಆದರೆ ಅನ್ನಳು, “ನೀವು ಸುಮ್ಮನಿರಿ, ನೆಪಹೇಳಬೇಡಿ; ನನ್ನ ಕಂದ ಖಂಡಿತವಾಗಿ ಸತ್ತಿದ್ದಾನೆ,” ಎಂದು ವಾದಿಸಿದಳು. ಪ್ರತಿದಿನ ಹೊರಗೆ ಹೋಗಿ ಮಗನು ಹೋದ ಹಾದಿಯನ್ನೇ ನೋಡಿ, ಅವನಿಗಾಗಿ ಕಾಯುತ್ತಿದ್ದಳು. ಯಾರೂ ಅವಳಿಗೆ ಸಮಾಧಾನ ಹೇಳುವಂತಿರಲಿಲ್ಲ. ಹೊತ್ತು ಮುಳುಗಿದ ನಂತರ ಮನೆಯೊಳಕ್ಕೆ ಬಂದು ರಾತ್ರಿಯೆಲ್ಲಾ ನಿದ್ದೆಗೆಟ್ಟು ದುಃಖಿಸುತ್ತಿದ್ದಳು. ಎಕ್ಬತಾನ ನಗರದಿಂದ ಮರುಪ್ರಯಾಣ ಇತ್ತ ತನ್ನ ಮಗಳ ವಿವಾಹ ಔತಣಕ್ಕೆಂದು ರಾಗುಯೇಲನು ಪ್ರಮಾಣಪೂರ್ವಕವಾಗಿ ನಿಗದಿ ಮಾಡಿದ್ದ ಎರಡು ವಾರದ ಸಮಾರಂಭದ ದಿನಗಳು ಮುಗಿದವು. ಆಗ ತೊಬಿಯಾಸನು ತನ್ನ ಮಾವನ ಬಳಿಗೆ ಬಂದು, “ದಯವಿಟ್ಟು ನನ್ನನ್ನು ಕಳುಹಿಸಿಕೊಡಿ. ನನ್ನ ತಂದೆತಾಯಿಗಳು ನನ್ನನ್ನು ನೋಡುವ ಆಶೆಯನ್ನೇ ಕಳೆದುಕೊಂಡಿರಬೇಕು. ಆದ್ದರಿಂದ, ದಯವಿಟ್ಟು ತಂದೆಯ ಬಳಿಗೆ ಹೋಗಲು ನೀವು ಅಪ್ಪಣೆ ಕೊಡಬೇಕು. ನಾನು ಯಾವ ಪರಿಸ್ಥಿತಿಯಲ್ಲಿ ಅವರನ್ನು ಬಿಟ್ಟುಬಂದೆನು ಎಂದು ಈಗಾಗಲೇ ನಿಮಗೆ ವಿವರಿಸಿದ್ದೇನೆ,” ಎಂದನು.
8 : ಆದರೆ ರಾಗುಯೇಲನು, “ಇರು ಮಗೂ, ನನ್ನ ಬಳಿಯಲ್ಲೇ ಇರು. ಬೇಕಾದರೆ ನಿನ್ನ ತಂದೆಯ ಬಳಿಗೆ ಆಳುಗಳನ್ನು ಕಳುಹಿಸಿ, ಎಲ್ಲಾ ವಿಷಯಗಳನ್ನು ತಿಳಿಯಪಡಿಸುತ್ತೇನೆ,” ಎಂದನು.
9 : ಅದಕ್ಕೆ ತೊಬಿಯಾಸನು, “ಇಲ್ಲ, ನಾನು ಇರಲಾಗದು, ದಯವಿಟ್ಟು, ನನ್ನನ್ನು ತಂದೆಯ ಬಳಿಗೆ ಕಳುಹಿಸಿಕೊಡಿ,” ಎಂದು ಒತ್ತಾಯಿಸಿದನು.
10 : ಆದುದರಿಂದ ರಾಗುಯೇಲನು ತಡಮಾಡದೆ ಸಾರಳನ್ನೂ ತನ್ನ ಆಸ್ತಿಯ ಅರ್ಧಭಾಗವನ್ನೂ ತೊಬಿಯಾಸನಿಗೆ ಒಪ್ಪಿಸಿದನು. ದಾಸ ದಾಸಿಯರು, ದನಕುರಿಗಳು, ಒಂಟೆಕತ್ತೆಗಳು, ಬಟ್ಟೆಬರೆ, ಹಣಕಾಸು, ಮತ್ತಿತರ ಸಾಮಾನುಗಳನ್ನೂ ಅವನಿಗೆ ಕೊಟ್ಟನು.
11 : ಅವರನ್ನು ಸುರಕ್ಷಿತವಾಗಿ ಕಳುಹಿಸಿಕೊಡುತ್ತಾ ತೊಬಿಯಾಸನನ್ನು ತಬ್ಬಿಕೊಂಡು ಹೀಗೆಂದನು: “ಹೋಗಿ ಬಾ ಮಗು, ನಿನ್ನ ಪ್ರಯಾಣ ಸುರಕ್ಷಿತವಾಗಿರಲಿ. ಪರಲೋಕದಲ್ಲಿರುವ ಸರ್ವೇಶ್ವರ ನಿನ್ನನ್ನೂ ನಿನ್ನ ಹೆಂಡತಿ ಸಾರಳನ್ನೂ ಹೇರಳವಾಗಿ ಆಶೀರ್ವದಿಸಲಿ! ನಾನು ಸಾಯುವುದಕ್ಕೆ ಮುಂಚೆ ನಿನ್ನ ಮಕ್ಕಳನ್ನು ನೋಡುವ ಭಾಗ್ಯ ದೊರಕಲಿ,” ಎಂದನು.
12 : ಬಳಿಕ ತನ್ನ ಮಗಳು ಸಾರಳಿಗೆ ಮುತ್ತಿಟ್ಟು, “ಮಗಳೇ, ಹೋಗಿ ಬಾ, ನಿನ್ನ ಅತ್ತೆ ಮಾವಂದಿರನ್ನು ಗೌರವಿಸು. ಇಂದಿನಿಂದ ಅವರೇ ನಿನ್ನ ತಂದೆತಾಯಿ. ನಾನು ಸಾಯುವವರೆಗೂ ನಿನ್ನ ಬಗ್ಗೆ ಶುಭಸಮಾಚಾರವನ್ನೇ ನಾನು ಕೇಳುವಂತಾಗಲಿ. ಸಮಾಧಾನದಿಂದ ಹೋಗಿ ಬಾ, ಮಗಳೇ,” ಎಂದನು. ಬಳಿಕ ಎಡ್ನ ತೊಬಿಯಾಸನಿಗೆ, “ಮಗೂ, ಸ್ವರ್ಗದಲ್ಲಿರುವ ಸರ್ವೇಶ್ವರ ನಿನ್ನನ್ನು ಸುರಕ್ಷಿತವಾಗಿ ಮನೆಗೆ ಕೊಂಡೊಯ್ಯಲಿ. ನಾನು ಸಾಯುವ ಮುಂಚೆ ಮಕ್ಕಳನ್ನು ನೋಡುವ ಭಾಗ್ಯ ನನ್ನದಾಗಲಿ. ದೇವರ ಸನ್ನಿಧಿಯಲ್ಲಿ ಮಗಳನ್ನು ನಿನ್ನ ವಶಕ್ಕೆ ಒಪ್ಪಿಸುತ್ತಿದ್ದೇನೆ. ಜೀವಮಾನದಲ್ಲೆಲ್ಲ ಅವಳ ಮನಸ್ಸನ್ನು ನೋಯಿಸಬೇಡ. ಇಂದಿನಿಂದ ಸಾರ ನಿನ್ನ ಹೆಂಡತಿ, ನಾನು ನಿನ್ನ ತಾಯಿ; ನಾವೆಲ್ಲರು ಜೀವಮಾನ ಪರ್ಯಂತ ಸುಖಸಂತೋಷದಿಂದ ಇರುವಂತಾಗಲಿ. ಸಮಾಧಾನದಿಂದ ಹೋಗಿ ಬಾ, ಮಗನೇ,” ಎಂದಳು. ಬಳಿಕ ಎಡ್ನಳು ಅವರಿಬ್ಬರಿಗೂ ಮುತ್ತಿಟ್ಟು, “ಸುರಕ್ಷಿತವಾಗಿ ಹೋಗಿ ಬನ್ನಿ!” ಎಂದು ಬೀಳ್ಕೊಟ್ಟಳು.
13 : ತೊಬಿಯಾಸನು ಅಲ್ಲಿಂದ ಹೊರಡುವಾಗ ಸಂತೋಷದಿಂದ ಭೂಪರಗಳ ಒಡೆಯರಾದ ಸರ್ವೇಶ್ವರನ ಸ್ತುತಿ ಮಾಡಿದನು. ರಾಜಾಧಿರಾಜರಾದ ದೇವರಿಗೆ ಧನ್ಯವಾದಗಳನ್ನು ಸಲ್ಲಿಸಿದನು. ಕಾರಣ, ಅವರ ಪ್ರಯಾಣ ಯಶಸ್ವಿ ಆಗಿತ್ತು. ಆತನ ಪತ್ನಿ ಎಡ್ನಳಿಗೆ ವಂದನೆ ಸಲ್ಲಿಸುತ್ತಾ, “ನನ್ನ ಜೀವಮಾನ ಪರ್ಯಂತ ನಿಮ್ಮನ್ನು ಗೌರವಿಸುವುದೇ ನನ್ನ ಭಾಗ್ಯ!” ಎಂದನು. ಅಂತಿಮವಾಗಿ ಸಂತೋಷದಿಂದ ಅವರನ್ನು ಬೀಳ್ಕೊಟ್ಟನು.

· © 2017 kannadacatholicbible.org Privacy Policy