Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಂಖ್ಯಾಕಾಂಡ


1 : ಜೋಸೆಫನ ವಂಶದವರೊಳಗೆ ಮನಸ್ಸೆಯ ಮೊಮ್ಮಗನೂ ಮಾಕೀರನ ಮಗನೂ ಆಗಿದ್ದ ಗಿಲ್ಯಾದನ ಸಂತತಿಯವರ ಮುಖಂಡರು ಮೋಶೆಯ ಹಾಗು ಇಸ್ರಯೇಲ್ ಕುಲನಾಯಕರ ಬಳಿಗೆ ಬಂದರು.
2 : “ಚೀಟುಹಾಕಿ ನಾಡನ್ನು ಇಸ್ರಯೇಲರಿಗೆ ಹಂಚಿಕೊಡಬೇಕೆಂದು ಸರ್ವೇಶ್ವರಸ್ವಾಮಿ ಒಡೆಯರಾದ ತಮಗೆ ಆಜ್ಞಾಪಿಸಿದರು. ತರುವಾಯ ನಮ್ಮ ಸ್ವಕುಲದವನಾದ ಚಲ್ಪಹಾದನಿಗೆ ಬರತಕ್ಕ ಸೊತ್ತನ್ನು ಅವನ ಹೆಣ್ಣು ಮಕ್ಕಳಿಗೆ ಕೊಡಬೇಕೆಂದು ಅಪ್ಪಣೆ ಮಾಡಿದರು.
3 : ಹೀಗಿರಲು ಆ ಹೆಣ್ಣುಮಕ್ಕಳು ಇಸ್ರಯೇಲರ ಬೇರೆ ಕುಲದವರಿಗೆ ಮದುವೆಯಾದರೆ ಅವರು ಸೇರಿಕೊಳ್ಳುವ ಕುಲಕ್ಕೆ ಹೋಗುತ್ತದೆ. ಇದರಿಂದ ನಮ್ಮ ಸೊತ್ತಿಗೆ ನಷ್ಟ ಉಂಟಾಗುತ್ತದೆ.
4 : ಇಸ್ರಯೇಲರ ಜೂಬಿಲಿ ವರ್ಷವು ಬಂದಾಗ ಅವರ ಸೊತ್ತು ಅವರು ಸೇರಿಕೊಳ್ಳುವ ಕುಲದ ಸೊತ್ತಿಗೆ ಸೇರಿಕೊಳ್ಳುತ್ತದೆ; ನಮ್ಮ ಕುಲದ ಸೊತ್ತಿನಿಂದ ವರ್ಗಾಯಿಸಲ್ಪಡುತ್ತದೆ,” ಎಂದು ಮೊರೆಯಿಟ್ಟರು.
5 : ಆಗ ಮೋಶೆ ಸರ್ವೇಶ್ವರನಿಂದ ಅಪ್ಪಣೆಯನ್ನು ಹೊಂದಿ ಇಸ್ರಯೇಲರಿಗೆ, “ಜೋಸೆಫನ ಕುಲದವರು ಹೇಳುವ ಮಾತು ನ್ಯಾಯವಾದುದು.
6 : ಆದಕಾರಣ ಚಲ್ಪಹಾದನ ಹೆಣ್ಣುಮಕ್ಕಳು ತಮ್ಮ ಕುಲದ ಕುಟುಂಬಗಳಲ್ಲಿ ಮಾತ್ರವೇ ತಮಗೆ ಇಷ್ಟಬಂದವರನ್ನು ಮದುವೆ ಮಾಡಿಕೊಳ್ಳಬೇಕೆಂದು ಸರ್ವೇಶ್ವರ ಅಪ್ಪಣೆಮಾಡಿದ್ದಾರೆ.
7 : ಇಸ್ರಯೇಲರ ಯಾವ ಸೊತ್ತೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರಯೇಲರೆಲ್ಲರು ತಮ್ಮ ತಮ್ಮ ಕುಲಗಳ ಸೊತ್ತನ್ನು ತಾವೇ ಹೊಂದಿರಬೇಕು.
8 : ಇದಕ್ಕಾಗಿ ಇಸ್ರಯೇಲರಲ್ಲಿ ಸೊತ್ತನ್ನು ಹೊಂದಿದ ಹೆಣ್ಣು ಮಕ್ಕಳು ಸ್ವಕುಲದಲ್ಲಿ ಮದುವೆಮಾಡಿಕೊಳ್ಳಬೇಕು.
9 : ಹೀಗೆ ಯಾವ ಸೊತ್ತು ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗದೆ ಇಸ್ರಯೇಲರ ಪ್ರತಿಯೊಂದು ಕುಲವೂ ತನ್ನ ಸೊತ್ತನ್ನು ಹೊಂದಿರುತ್ತದೆ,” ಎಂದು ಆಜ್ಞಾಪಿಸಿದನು.
10 : ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ತಿರ್ಚಾ, ಹೋಗ್ಲಾ, ಮಿಲ್ಕಾ
11 : ಹಾಗು ನೋವಾ ಎಂಬವರು ಸರ್ವೇಶ್ವರನ ಆಜ್ಞಾನುಸಾರ ತಂದೆಯ ಅಣ್ಣತಮ್ಮಂದಿರ ಮಕ್ಕಳನ್ನು ಮದುವೆ ಮಾಡಿಕೊಂಡರು.
12 : ಅವರು ಜೋಸೆಫನ ಮಗನಾದ ಮನಸ್ಸೆಯ ಕುಲದವರಿಗೇ ಮದುವೆ ಯಾದುದರಿಂದ ಅವರ ಸೊತ್ತು ತಂದೆಯ ಕುಲದಲ್ಲೇ ಉಳಿಯಿತು.
13 : ಜೋರ್ಡನ್ ನದಿಯ ತೀರದಲ್ಲಿ ಜೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಸರ್ವೇಶ್ವರಸ್ವಾಮಿ ಮೋಶೆಯ ಮುಖಾಂತರ ಇಸ್ರಯೇಲರಿಗೆ ಕೊಟ್ಟ ಆಜ್ಞಾವಿಧಿಗಳು ಇವೇ.

· © 2017 kannadacatholicbible.org Privacy Policy