Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಂಖ್ಯಾಕಾಂಡ


1 : ಜೋರ್ಡನ್ ನದಿಯ ತೀರದಲ್ಲಿ ಜೆರಿಕೋ ನಗರದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದ್ದೇನೆಂದರೆ -
2 : “ಇಸ್ರಯೇಲರು ತಾವು ಹೊಂದುವ ಸೊತ್ತಿನಲ್ಲಿ ಕೆಲವು ಊರುಗಳನ್ನು ಹಾಗು ಆ ಊರಿನ ಸುತ್ತಲಿನ ಭೂಮಿಯನ್ನು ಲೇವಿಯರಿಗೆ ನಿವಾಸಕ್ಕಾಗಿ ಕೊಡಬೇಕೆಂದು ಅವರಿಗೆ ಆಜ್ಞಾಪಿಸು.
3 : ಆ ಊರುಗಳು ಲೇವಿಯರ ನಿವಾಸಕ್ಕೆ ಆಗುವುದು; ಅವುಗಳ ಸುತ್ತಲಿನ ಭೂಮಿಗಳು ಅವರ ದನಕುರಿ, ಪ್ರಾಣಿ ಪಶುಗಳ ಪ್ರಯೋಜನಕ್ಕಾಗುವುದು.
4 : ಲೇವಿಯರಿಗೆ ನೀವು ಕೊಡುವ ಊರುಗಳ ಸುತ್ತಲಿನ ಭೂಮಿ ಊರಿನ ಗೋಡೆಯಿಂದ ನಾಲ್ಕು ಕಡೆಗೂ ಸಾವಿರ ಮೊಳದಷ್ಟು ವಿಸ್ತಾರವಾಗಿರಲಿ.
5 : “ಊರಿನ ಹೊರಗಡೆ ನಾಲ್ಕು ದಿಕ್ಕುಗಳಲ್ಲೂ ಎರಡೆರಡು ಸಾವಿರ ಮೊಳಗಳಷ್ಟು ದೂರದಲ್ಲಿ ಎಲ್ಲೆಗಳನ್ನು ಗೊತ್ತುಮಾಡಬೇಕು. ಆ ಭೂಮಿಯ ನಡುವೆ ಊರಿರಬೇಕು. ಮಿಕ್ಕದ್ದು ಹುಲ್ಲುಗಾವಲಾಗಿರಬೇಕು.
6 : ಮನುಷ್ಯಹತ್ಯೆ ಮಾಡಿದವರು ಆಶ್ರಯಕ್ಕಾಗಿ ಓಡಿಹೋಗಲು ನೀವು ನೇಮಿಸುವ ಆರು ಆಶ್ರಯನಗರಗಳನ್ನೂ ಬೇರೆ ನಾಲ್ವತ್ತೆರಡು ಪಟ್ಟಣಗಳನ್ನೂ, ಹೀಗೆ ನಾಲ್ವತ್ತೆಂಟು ಊರುಗಳನ್ನೂ
7 : ಇವುಗಳ ಸುತ್ತಲಿನ ಭೂಮಿಯನ್ನೂ ಲೇವಿಯರಿಗೆ ಕೊಡಬೇಕು.
8 : ಇಸ್ರಯೇಲರ ಸೊತ್ತಿನಲ್ಲಿ ಆಯಾ ಕುಲದ ಸೊತ್ತಿನ ಅಳತೆಗೆ ತಕ್ಕಹಾಗೆ, ಅಂದರೆ ಹೆಚ್ಚು ಉಳ್ಳವರಿಂದ ಹೆಚ್ಚಾಗಿಯೂ ಕಡಿಮೆ ಉಳ್ಳವರಿಂದ ಕಡಿಮೆಯಾಗಿಯೂ ಲೇವಿಯರಿಗೆ ಊರುಗಳನ್ನು ಕೊಡಿಸಬೇಕು.”
9 : ಸರ್ವೇಶ್ವರ ಮೋಶೆಗೆ ಹೇಳಿದ್ದು ಇದು:
10 : “ನೀನು ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು - ನೀವು ಜೋರ್ಡನ್ ನದಿಯನ್ನು ದಾಟಿ ಕಾನಾನ್ ನಾಡನ್ನು ಸೇರಿದನಂತರ
11 : ಆಶ್ರಯಧಾಮ ಗಳಿಗಾಗಿ ಪಟ್ಟಣಗಳನ್ನು ನಿಗದಿಮಾಡಿರಿ. ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಅವುಗಳಲ್ಲಿ ಒಂದಕ್ಕೆ ಓಡಿಹೋಗಿ ಸುರಕ್ಷಿತನಾಗಿರಬಹುದು.
12 : ಅಂಥವನು ಸಭೆಯವರಿಂದ ತೀರ್ಪುಹೊಂದುವುದಕ್ಕಿಂತ ಮೊದಲೇ ಹತನಾದವನ ಸವಿೂಪ ಬಂಧುವಿನಿಂದ ಸಾಯದಂತೆ ಈ ಆಶ್ರಯಧಾಮಗಳು ನಿಮ್ಮಲ್ಲಿ ಇರಬೇಕು.
13 : ಹೀಗೆ ಆಶ್ರಯಧಾಮಗಳಾಗಿರಲು ಜೋರ್ಡನ್ ನದಿಯ ಈಚೆಕಡೆ
14 : ಮೂರು ಕಾನಾನ್ ನಾಡಿನಲ್ಲಿ ಮೂರು ಹೀಗೆ ಆರು ಪಟ್ಟಣಗಳನ್ನು ನಿಗದಿಮಾಡಬೇಕು.
15 : ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರಯೇಲನಾಗಿರಲಿ, ಪರದೇಶದವನಾಗಿರಲಿ ಅಥವಾ ನಿಮ್ಮ ಮಧ್ಯೆ ವಾಸಿಸುವವನಾಗಿರಲಿ, ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯ ಪಡೆಯಲಿ.
16 : “ಆದರೆ ಒಬ್ಬನು ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಹೊಡೆದು ಕೊಂದರೆ ಅಂಥವನು ನರಹತ್ಯ ಮಾಡಿದವನೆಂದು ನೀವು ನಿರ್ಣಯಿಸಬೇಕು. ಅವನಿಗೆ ಮರಣಶಿಕ್ಷೆಯಾಗಬೇಕು.
17 : ಒಬ್ಬನನ್ನು ಕೊಲ್ಲುವಷ್ಟು ದೊಡ್ಡ ಕಲ್ಲಿನಿಂದ ಮತ್ತೊಬ್ಬನನ್ನೂ ಹೊಡೆದುಕೊಂದರೆ ಅವನೂ ನರಹತ್ಯಗಾರನೇ; ಅಂಥವನಿಗೂ ಮರಣ ಶಿಕ್ಷೆಯಾಗಬೇಕು.
18 : ಒಬ್ಬನನ್ನು ಕೊಲ್ಲುವಷ್ಟು ದೊಡ್ಡ ಮರದ ಆಯುಧದಿಂದ ಮತ್ತೊಬ್ಬನನ್ನು ಹೊಡೆದುಕೊಂದರೆ ಅವನೂ ನರಹತ್ಯಗಾರನೇ. ಅಂಥವನಿಗೂ ಮರಣಶಿಕ್ಷೆಯಾಗಬೇಕು.
19 : ನರಹತ್ಯ ಮಾಡಿದವನನ್ನು ಕಂಡೊಡನೆ ಕೊಲ್ಲ ಬೇಕಾದವನು ಹತನಾದವನ ಸವಿೂಪ ಬಂಧುವೇ.
20 : ಒಬ್ಬನು ಮತ್ತೊಬ್ಬನನ್ನು ಹಗೆಮಾಡಿ ನೂಕುವುದರಿಂದಾಗಲಿ, ಸಮಯ ನೋಡಿ ಅವನ ಮೇಲೆ ಏನನ್ನಾದರು ಎಸೆಯುವುದರಿಂದಾಗಲಿ,
21 : ದ್ವೇಷದಿಂದ ಕೈಯಾರೆ ಹೊಡೆಯುವುದರಿಂದಾಗಲಿ ಕೊಂದರೆ ಅವನು ಕೂಡ ನರಹತ್ಯಗಾರನೆ. ಅಂಥವನಿಗೂ ಮರಣಶಿಕ್ಷೆಯಾಗಬೇಕು. ಹತನಾದವನ ಸವಿೂಪಬಂಧು ಅವನನ್ನು ಕಂಡೊಡನೆ ಕೊಲ್ಲಲಿ.
22 : "ಒಬ್ಬನು ಯಾವ ದ್ವೇಷವೂ ಇಲ್ಲದೆ, ಅಕಸ್ಮಾತ್ತಾಗಿ ನೂಕುವುದರಿಂದಾಗಲಿ, ಹೊಂಚುಕಾಯದೆ ಏನನ್ನಾದರು ಎಸೆಯುವುದರಿಂದಾಗಲಿ,
23 : ಕೊಲ್ಲುವಷ್ಟು ದೊಡ್ಡಕಲ್ಲನ್ನು ತಿಳಿಯದೆ ಬೀಳಿಸುವುದರಿಂದಾಗಲಿ ಮತ್ತೊಬ್ಬನು ಸತ್ತರೆ ಅವನು ಆ ಮನುಷ್ಯನಿಗೆ ವೈರಿಯಾಗಿದ್ದನೆ? ಹಾನಿಮಾಡಬೇಕೆಂಬ ಅಭಿಪ್ರಾಯ ಅವನದಾಗಿತ್ತೆ? ಎಂದು ವಿಚಾರಿಸಬೇಕು.
24 : ಹಾಗಿಲ್ಲದ ಪಕ್ಷದಲ್ಲಿ ಸಭೆಯವರು ಹತ್ಯ ಮಾಡಿದವನಿಗೂ ಹತವಾದವನ ಸವಿೂಪಬಂಧುವಿಗೂ ಈ ವಿಚಾರಗಳಿಗನುಸಾರ ನ್ಯಾಯ ತೀರಿಸಬೇಕು; ಹತ್ಯಮಾಡಿದವನನ್ನು ಆ ಸವಿೂಪಬಂಧುವಿನ ಕೈಯಿಂದ ತಪ್ಪಿಸಬೇಕು.
25 : ಅವನು ಓಡಿಹೋಗಿದ್ದ ಆಶ್ರಯನಗರಕ್ಕೆ ತಿರುಗಿ ಸೇರಿಸಬೇಕು. ಪಟ್ಟಾಭಿಷೇಕ ಹೊಂದಿದ ಮಹಾಯಾಜಕನು ಜೀವದಿಂದಿರುವ ತನಕ ಅವನು ಆ ಪಟ್ಟಣದಲ್ಲೇ ವಾಸಿಸಬೇಕು.
26 : “ಆ ಹತ್ಯ ಮಾಡಿದವನು ಎಂದಾದರು ತಾನು ಓಡಿಹೋಗಿದ್ದ ಆಶ್ರಯ ನಗರದ ಮೇರೆಗೆ ಹೊರಗೆ ಹೋಗಿದ್ದು
27 : ಹತವಾದವನ ಸವಿೂಪ ಬಂಧು ಅವನನ್ನು ಕಂಡು ಕೊಂದು ಹಾಕಿದರೆ ಕೊಲೆಪಾತಕನಾಗುವುದಿಲ್ಲ.
28 : ಏಕೆಂದರೆ ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯನಗರದೊಳಗೇ ಇರಬೇಕಾಗಿತ್ತು. ಮಹಾಯಾಜಕನು ತೀರಿ ಹೋದನಂತರ ಅವನು ತನ್ನ ಆಸ್ತಿಪಾಸ್ತಿಯಿರುವ ಸ್ಥಳಕ್ಕೆ ಹೋಗಬಹುದು.
29 : ನೀವು ಮತ್ತು ನಿಮ್ಮ ಸಂತತಿಯವರು ಈ ವಿಧಿಗಳಿಗನುಸಾರ ನಿಮ್ಮ ನಿವಾಸಗಳಲ್ಲೆಲ್ಲ ನ್ಯಾಯ ತೀರಿಸಬೇಕು.
30 : “ಒಬ್ಬನು ಮತ್ತೊಬ್ಬನನ್ನು ಕೊಂದಾಗ ನೀವು ಸಾಕ್ಷಿಗಳನ್ನು ವಿಚಾರಿಸಿಕೊಂಡೇ ಅವನಿಗೆ ಮರಣಶಿಕ್ಷೆ ವಿಧಿಸಬೇಕು. ಒಬ್ಬನೇ ಒಬ್ಬ ಸಾಕ್ಷಿ ಮಾತ್ರ ಇದ್ದರೆ ಮರಣಶಿಕ್ಷೆಯನ್ನು ವಿಧಿಸಕೂಡದು.
31 : ಮರಣಶಿಕ್ಷೆಗೆ ಪಾತ್ರನಾದ ಕೊಲೆಗಡುಕನನ್ನು ಉಳಿಸುವುದಕ್ಕೆ ಈಡನ್ನು ತೆಗೆದುಕೊಳ್ಳಕೂಡದು. ಅವನಿಗೆ ಮರಣಶಿಕ್ಷೆ ಆಗಲೇಬೇಕು.
32 : ಆಶ್ರಯ ನಗರಕ್ಕೆ ಓಡಿಹೋದವನಿಂದ ನೀವು ಹಣವನ್ನು ತೆಗೆದುಕೊಂಡು ಮಹಾಯಾಜಕನು ಜೀವದಿಂದಿರುವಾಗಲೇ ಸ್ವಂತ ಊರಿಗೆ ಹೋಗಬಿಡಕೂಡದು.
33 : “ನೀವು ಈ ಪ್ರಕಾರ ನಡೆದುಕೊಂಡರೆ ನಿಮ್ಮ ನಾಡು ಅಪವಿತ್ರವಾಗುವುದಿಲ್ಲ. ರಕ್ತಪಾತವು ನಾಡನ್ನು ಅಪವಿತ್ರಗೊಳಿಸುತ್ತದೆ. ಅದಕ್ಕೆ ಕೊಲ್ಲಲ್ಪಟ್ಟವನ ರಕ್ತಕ್ಕಾಗಿ ಕೊಂದವನ ರಕ್ತದಿಂದಲೇ ಹೊರತು ಬೇರೆ ಪ್ರಾಯಶ್ಚಿತ್ತವಿಲ್ಲ.
34 : ನೀವು ವಾಸಮಾಡುವ ನಾಡನ್ನು ಅಪವಿತ್ರ ಮಾಡಬೇಡಿ. ಸರ್ವೇಶ್ವರನೆಂಬ ನಾನೇ ಇಸ್ರಯೇಲರ ನಡುವೆ ಆ ನಾಡಿನಲ್ಲಿ ವಾಸಿಸುತ್ತೇನೆ.”

· © 2017 kannadacatholicbible.org Privacy Policy