Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಂಖ್ಯಾಕಾಂಡ


1 : ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದ್ದು ಏನೆಂದರೆ:
2 : “ನೀನು ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು - ‘ಇಡೀ ಕಾನಾನ್ ನಾಡು ನಿಮಗೆ ಸ್ವಂತ ನಾಡಾಗಿ ದೊರಕುವುದು.
3 : ನೀವು ಅಲ್ಲಿ ಸೇರಿದಾಗ ಎದೋಮ್ಯರ ಸರಹದ್ದಿನ ಬಳಿಯಿರುವ ಚಿನ್ ಮರುಭೂಮಿಯೇ ನಿಮ್ಮ ದಕ್ಷಿಣ ಮೇರೆಯಾಗಿರಬೇಕು. ಆ ಮೇರೆ ಮೂಡಣ ದಿಕ್ಕಿನಲ್ಲಿ ಲವಣಸಮುದ್ರದ ಕೊನೆಯಿಂದ ತೊಡಗುವುದು.
4 : ಅದು ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಅಕ್ರಬ್ಬೀಮ್ ಎಂಬ ಕಣಿವೆಯ ಮಾರ್ಗವಾಗಿ ಚಿನಿಗೆ ಬರುವುದು. ಅದರ ಮೂಲೆ ಕಾದೇಶ್ ಬರ್ನೆಯದ ದಕ್ಷಿಣ ಕಡೆಯಲ್ಲಿರುವುದು. ಅಲ್ಲಿಂದ ಹಚರದ್ದಾರ್, ಆಚ್ಮೋನ್ ಎಂಬ ಊರುಗಳ ಮೇಲೆ
5 : ಈಜಿಪ್ಟ್ ದೇಶದ ಮುಂದೆ ಇರುವ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯುವುದು.
6 : ‘ಪಶ್ಚಿಮ ದಿಕ್ಕಿನಲ್ಲಿ ಮಹಾಸಮುದ್ರದ ದಡವೇ ನಿಮ್ಮ ನಾಡಿನ ಮೇರೆಯಾಗಿರುವುದು.
7 : ‘ಉತ್ತರ ದಿಕ್ಕಿನ ಮೇರೆಗಾಗಿ ನೀವು ಮಹಾಸಮುದ್ರದಿಂದ ಹೋರ್ ಎಂಬ ಪರ್ವತಕ್ಕೂ
8 : ಆ ಪರ್ವತದಿಂದ ಹಮಾತಿನ ದಾರಿಗೂ ಗುರುತುಹಾಕಿಕೊಳ್ಳಬೇಕು. ಅದರ ಮೂಲೆ ಚೆದಾದಿನ ಹತ್ತಿರ ಇರುವುದು.
9 : ಆಮೇಲೆ ಅದು ಜಿಫ್ರೋನಿಗೆ ಹೋಗಿ ಹಚೆರೇನಾನಿನ ಬಳಿಯಲ್ಲಿ ಮುಗಿಯುವುದು.
10 : ‘ಪೂರ್ವದಿಕ್ಕಿನ ಮೇರೆಗಾಗಿ ಹಚೆರೇನಾನಿನಿಂದ ಶೆಫಾಮಿಗೆ ಗುರುತು ಹಾಕಬೇಕು.
11 : ಅಲ್ಲಿಂದ ಅದು ಅಯಿನಿನ ಮೂಡಲಲ್ಲಿರುವ ರಿಬ್ಲಕ್ಕೆ ಬರಬೇಕು. ತರುವಾಯ ಅದು ಗಟ್ಟಾ ಇಳಿದು ಕಿನ್ನೆರೆತ್ ಸಮುದ್ರದ ಮೂಡಲಲ್ಲಿರುವ ಬೆಟ್ಟಗಳಿಗೆ ಹೋಗಬೇಕು.
12 : ಅದೂ ಅಲ್ಲಿಂದ ಜೋರ್ಡನ್ ನದಿಗೆ ಇಳಿದು, ಅದನ್ನು ಅನುಸರಿಸುತ್ತಾ ಲವಣ ಸಮುದ್ರದ ಬಳಿಯಲ್ಲಿ ಮುಗಿಯಬೇಕು.’ ಇವೇ ನಿಮ್ಮ ನಾಡಿನ ಮೇರೆಗಳು,” ಎಂದರು.
13 : ಅದಕ್ಕನುಸಾರವಾಗಿ ಮೋಶೆ ಇಸ್ರಯೇಲರಿಗೆ, “ನೀವು ಚೀಟುಹಾಕಿ ಹಂಚಿಕೊಳ್ಳಬೇಕೆಂದು ಸರ್ವೇಶ್ವರ ಆಜ್ಞಾಪಿಸಿದ ನಾಡು ಇದೇ. ಒಂಬತ್ತುವರೆ ಕುಲದವರಿಗೆ ಇದನ್ನು ಹಂಚಿಕೊಡಬೇಕು.
14 : ಬೇರೆ ಎರಡುವರೆ ಕುಲಗಳವರು, ಅಂದರೆ ರೂಬೇನ್ಯರ ಕುಟುಂಬಗಳು, ಗಾದ್ಯರ ಕುಟುಂಬಗಳು ಹಾಗು
15 : ಹಾಗು ಮನಸ್ಸೆಕುಲದವರಲ್ಲಿ ಅರ್ಧಜನರು ಜೋರ್ಡನ್ ನದಿಯ ಈಚೆ ಜೆರಿಕೊ ಪಟ್ಟಣಕ್ಕೆ ಪೂರ್ವದಿಕ್ಕಿನಲ್ಲಿ ಸೊತ್ತನ್ನು ಹೊಂದಿದ್ದಾರೆ,” ಎಂದು ಅಪ್ಪಣೆಕೊಟ್ಟನು.
16 : ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದು ಏನೆಂದರೆ:
17 : “ಮಹಾಯಾಜಕ ಎಲ್ಲಾಜಾರನು, ನೂನನ ಮಗ ಯೆಹೋಶುವನು
18 : ಹಾಗು ಒಂದೊಂದು ಕುಲದಿಂದ ನೇಮಿಸಲ್ಪಟ್ಟ ಒಬ್ಬ ಕುಲನಾಯಕನು ಇವರೇ ಕಾನಾನ್ ನಾಡಿನಲ್ಲಿ ನಿಮ್ಮ ನಿಮ್ಮ ಸೊತ್ತುಗಳನ್ನು ಹಂಚಿಕೊಡಬೇಕಾದವರು.
19 : ಆಯಾ ಕುಲದಿಂದ ನೀವು ನೇಮಿಸಬೇಕಾದವರು ಇವರು: ಯೆಹೂದ ಕುಲದಿಂದ ಯೆಫುನ್ನೆಯ ಮಗ ಕಾಲೇಬ್,
20 : ಸಿಮೆಯೋನ್ ಕುಲದಿಂದ ಅವಿ್ಮೂಹೂದನ ಮಗ ಶೆಮೂವೇಲ್,
21 : ಬೆನ್ಯಾವಿೂನ್ ಕುಲದಿಂದ ಕಿಸ್ಲೋನನ ಮಗ ಎಲೀದಾದ್,
22 : ದಾನ್ ಕುಲದಿಂದ ಯೊಗ್ಲೀಯ ಮಗ ಬುಕ್ಕೀ ನಾಯಕ,
23 : ಜೋಸೆಫನ ವಂಶದವರಲ್ಲಿ ಮನಸ್ಸೆ ಕುಲದಿಂದ ಎಫೋದನ ಮಗ ಹನ್ನೀಯೇಲ್ ನಾಯಕ,
24 : ಎಫ್ರಯಿಮ್ ಕುಲದಿಂದ ಶಿಫ್ಟಾನನ ಮಗ ಕೆಮೂವೇಲ್ ನಾಯಕ,
25 : ಜೆಬುಲೂನ್ ಕುಲದಿಂದ ಪರ್ನಾಕನ ಮಗ ಎಲೀಚಾಫನ್ ನಾಯಕ,
26 : ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗ ಪಲ್ಟಿಯೇಲ್ ನಾಯಕ,
27 : ಆಶೇರ್ ಕುಲದಿಂದ ಶೆಲೋಮಿಯ ಮಗ ಅಹೀಹೂದ್ ನಾಯಕ,
28 : ನಫ್ತಾಲಿ ಕುಲದಿಂದ ಅವಿ್ಮೂಹೂದನ ಮಗ ಪೆದಹೇಲ್ ನಾಯಕ.”
29 : ಕಾನಾನ್ ನಾಡಿನಲ್ಲಿ ಇಸ್ರಯೇಲರಿಗೆ ಸೊತ್ತನ್ನು ಹಂಚಿಕೊಡುವುದಕ್ಕೆ ಸರ್ವೇಶ್ವರ ಇವರೆಲ್ಲರನ್ನು ನೇಮಿಸಿದರು.

· © 2017 kannadacatholicbible.org Privacy Policy