Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಂಖ್ಯಾಕಾಂಡ


1 : ಮೋಶೆ ಮತ್ತು ಆರೋನರ ಮುಂದಾಳತ್ವದಲ್ಲಿ ಈಜಿಪ್ಟ್ ದೇಶದಿಂದ ಸೈನ್ಯ ಸೈನ್ಯವಾಗಿ ಹೊರಟ ಇಸ್ರಯೇಲರ ಪಯಣದ ವಿವರ:
2 : ಇಸ್ರಯೇಲರು ತಮ್ಮ ಪ್ರಯಾಣಗಳಲ್ಲಿ ತಂಗಿದ್ದ ಸ್ಥಳಗಳ ಹೆಸರುಗಳನ್ನು ಮೋಶೆ ಸರ್ವೇಶ್ವರನ ಅಪ್ಪಣೆಯನ್ನು ಪಡೆದು ಬರೆದಿಟ್ಟನು.
3 : ಮೊದಲನೆಯ ತಿಂಗಳಿನ ಹದಿನೈದನೆಯ ದಿನ, ಅಂದರೆ ಪಾಸ್ಕಹಬ್ಬದ ಮರುದಿನ, ಇಸ್ರಯೇಲರು ಈಜಿಪ್ಟರ ಎದುರಿನಲ್ಲೇ ಅಟ್ಟಹಾಸದಿಂದ ರಮ್ಸೇಸಿನಿಂದ ಹೊರಟರು.
4 : ಆ ಕಾಲದಲ್ಲಿ ಸರ್ವೇಶ್ವರಸ್ವಾಮಿ ಈಜಿಪ್ಟರ ದೇವತೆಗಳನ್ನು ದಂಡಿಸಿ ಈಜಿಪ್ಟರ ಚೊಚ್ಚಲು ಮಕ್ಕಳನ್ನು ಸಂಹರಿಸಿದ್ದರು. ಆ ಮಕ್ಕಳ ಶವಗಳನ್ನು ಸಮಾಧಿ ಮಾಡಲಾಗುತ್ತಿತ್ತು.
5 : ಇಸ್ರಯೇಲರು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದುಕೊಂಡರು.
6 : ಸುಕ್ಕೋತಿನಿಂದ ಹೊರಟು ಮರುಭೂಮಿಯ ಅಂಚಿನಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು.
7 : ಏತಾಮಿನಿಂದ ಹೊರಟು ಬಾಳ್ಚೆಪೋನಿಗೆ ಎದುರಿಗಿರುವ ಪೀಹಹೀರೋತಿಗೆ ತಿರುಗಿಕೊಂಡು ಮಿಗ್ದೋಲಿನ ಮೂಡಲಲ್ಲಿ ಇಳಿದುಕೊಂಡರು.
8 : ಅಲ್ಲಿಂದ ಹೊರಟು ಸಮುದ್ರದ ಮಧ್ಯದಲ್ಲೇ ನಡೆದು ಮರುಭೂಮಿಗೆ ಬಂದರು. ಏತಾಮಿನ ಮರುಭೂಮಿಯಲ್ಲಿ ಮೂರು ದಿನ ಪ್ರಯಾಣ ಮಾಡಿ ಮಾರಾ ಎಂಬ ಸ್ಥಳದಲ್ಲಿ ಇಳಿದುಕೊಂಡರು.
9 : ಮಾರಾದಿಂದ ಹೊರಟು ಏಲೀಮಿಗೆ ಬಂದರು. ಅಲ್ಲಿ ಹನ್ನೆರಡು ನೀರಿನ ಒರತೆಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದುದರಿಂದ ಅಲ್ಲಿ ಇಳಿದುಕೊಂಡರು.
10 : ಏಲೀಮಿನಿಂದ ಹೊರಟು ಕೆಂಪು ಸಮುದ್ರದ ದಡದಲ್ಲಿ ಇಳಿದುಕೊಂಡರು.
11 : ಅಲ್ಲಿಂದ ಹೊರಟು ಸೀನ್ ಮರುಭೂಮಿಯಲ್ಲೂ,
12 : ಅಲ್ಲಿಂದ ದೊಷ್ಕದಲ್ಲೂ,
13 : ಅನಂತರ ಅಲೂಷಿನಲ್ಲೂ ಇಳಿದುಕೊಂಡರು.
14 : ಅಲೂಷಿನಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಅಲ್ಲಿ ಅವರಿಗೆ ಕುಡಿಯುವುದಕ್ಕೆ ನೀರು ಸಿಕ್ಕಲಿಲ್ಲ.
15 : ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲೂ
16 : ಅಲ್ಲಿಂದ ಹೊರಟು ಕಿಬ್ರೋತ್ ಹತಾವಾದಲ್ಲೂ
17 : ಕಿಬ್ರೋತ್ ಹತಾವಾದಿಂದ ಹಚೆರೋತಿನಲ್ಲೂ
18 : ಹಚೆರೋತಿನಿಂದ ರಿತ್ಮದಲ್ಲೂ
19 : ರಿತ್ಮದಿಂದ ರಿಮ್ಮೋನ್ ಪೆರೆಚಿನಲ್ಲೂ
20 : ರಿಮ್ಮೋನ್ ಪೆರೆಚಿನಿಂದ ಲಿಬ್ನದಲ್ಲೂ
21 : ಲಿಬ್ನದಿಂದ ರಿಸ್ಸದಲ್ಲೂ
22 : ರಿಸ್ಸದಿಂದ ಕೆಹೇಲಾತದಲ್ಲೂ
23 : ಕೆಹೇಲಾತದಿಂದ ಶೆಫೆರ್ ಬೆಟ್ಟದಲ್ಲೂ
24 : ಅಲ್ಲಿಂದ ಹರಾದದಲ್ಲೂ
25 : ಹರಾದದಿಂದ ಹೊರಟು ಮಖೇಲೋತಿನಲ್ಲೂ ಇಳಿದುಕೊಂಡರು.
26 : ಮಖೇಲೋತಿನಿಂದ ಹೊರಟು ತಹತಿನಲ್ಲೂ
27 : ತಹತಿನಿಂದ ತೆರಹದಲ್ಲೂ
28 : ತೆರಹದಿಂದ ಮಿತ್ಕದಲ್ಲೂ
29 : ಮಿತ್ಕದಿಂದ ಹಷ್ಮೋನದಲ್ಲೂ
30 : ಹಷ್ಮೋನದಿಂದ ಮೋಸೇರೋತಿನಲ್ಲೂ
31 : ಮೋಸೇರೋತಿನಿಂದ ಬೆನೇಯಾಕಾನಿನಲ್ಲೂ
32 : ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲೂ
33 : ಹೋರ್ಹಗಿದ್ಗಾದಿನಿಂದ ಯೋಟ್ಬಾತದಲ್ಲೂ
34 : ಯೋಟ್ಬಾತದಿಂದ ಅಬ್ರೋನದಲ್ಲೂ
35 : ಅಬ್ರೋನದಿಂದ ಎಚ್ಯೋನ್ ಗೆಬೆರಿನಲ್ಲೂ
36 : ಎಚ್ಯೋನ್ ಗೆಬೆರಿನಿಂದ ಹೊರಟು ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು. ಅದೇ ಕಾದೇಶ್.
37 : ಕಾದೇಶಿನಿಂದ ಹೊರಟು ಎದೋಮ್ಯರ ನಾಡಿನ ಅಂಚಿನಲ್ಲಿರುವ ಹೋರ್ ಬೆಟ್ಟದ ಬಳಿಯಲ್ಲಿ ಇಳಿದುಕೊಂಡರು.
38 : ಮಹಾಯಾಜಕ ಆರೋನನು ಸರ್ವೇಶ್ವರನಿಂದ ಅಪ್ಪಣೆಯನ್ನು ಪಡೆದು ಆ ಹೋರ್ ಬೆಟ್ಟವನ್ನು ಹತ್ತಿ ಅಲ್ಲೇ ಪ್ರಾಣಬಿಟ್ಟನು. ಇಸ್ರಯೇಲರು ಈಜಿಪ್ಟಿನಿಂದ ಹೊರಟ ನಾಲ್ವತ್ತನೆಯ ವರ್ಷದ ಐದನೆಯ ತಿಂಗಳಿನ ಮೊದಲನೆಯ ದಿನ ಅದಾಗಿತ್ತು.
39 : ಆರೋನನು ಅಲ್ಲಿ ಸತ್ತಾಗ ಅವನಿಗೆ ನೂರಿಪ್ಪತ್ತು ವರ್ಷ ವಯಸ್ಸಾಗಿತ್ತು.
40 : ಇಸ್ರಯೇಲರು ಬರುತ್ತಾರೆಂಬ ವಾರ್ತೆ ಕಾನಾನ್ ನಾಡಿನ ದಕ್ಷಿಣಪ್ರಾಂತ್ಯದಲ್ಲಿ ವಾಸ ಆಗಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನಿಗೆ ಮುಟ್ಟಿತು.
41 : ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಚೆಲ್ಮೋನದಲ್ಲಿ ಇಳಿದುಕೊಂಡರು.
42 : ಚೆಲ್ಮೋನದಿಂದ ಪೂನೋನಿನಲ್ಲೂ
43 : ಪೂನೋನಿನಿಂದ ಓಬೋತಿನಲ್ಲೂ
44 : ಓಬೋತಿನಿಂದ ಮೋವಾಬ್ಯರ ಸರಹದ್ದಿನಲ್ಲಿರುವ ಜೋರ್ಡನ್ ನದಿಯ ಆಚೆಯಿರುವ ಇಯ್ಯೀಮಿನಲ್ಲಿ ಇಳಿದುಕೊಂಡರು.
45 : ಇಯ್ಯೀಮಿನಿಂದ ಹೊರಟು ದೀಬೋನ್ ಗಾದಿನಲ್ಲೂ
46 : ದೀಬೋನ್ ಗಾದಿನಿಂದ ಆಲ್ಮೋನ್ ದಿಬ್ಲಾತಯಿಮಿನಲ್ಲೂ
47 : ಅಲ್ಲಿಂದ ಹೊರಟು ಅಬಾರೀಮ್ ಬೆಟ್ಟಗಳಲ್ಲಿರುವ ನೇಬೋವಿನ ಮೂಡಣದಲ್ಲಿ ಇಳಿದುಕೊಂಡರು.
48 : ಅಬಾರೀಮ್ ಬೆಟ್ಟಗಳಿಂದ ಹೊರಟು ಜೆರಿಕೋ ಪಟ್ಟಣದ ಹತ್ತಿರ ಜೋರ್ಡನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿ ಇಳಿದುಕೊಂಡರು.
49 : ಅವರು ಮೋವಾಬ್ಯರ ಮೈದಾನದಲ್ಲಿ ಬೇತ್‍ಯೆಷೀಮೋತಿನಿಂದ ಆಬೇಲ್‍ಶಿಟ್ಟೀಮಿನವರೆಗೂ ಜೋರ್ಡನ್ ನದಿಯ ತೀರದಲ್ಲಿ ಇಳಿದುಕೊಂಡರು.
50 : ಜೋರ್ಡನ್ ನದಿಯ ತೀರದಲ್ಲಿ ಜೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದ್ದು ಏನೆಂದರೆ:
51 : “ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು - ‘ನೀವು ಜೋರ್ಡನ್ ನದಿಯನ್ನು ದಾಟಿ ಕಾನಾನ್ ನಾಡನ್ನು ಸೇರಿದಾಗ
52 : ಆ ನಾಡಿನ ನಿವಾಸಿಗಳನ್ನೆಲ್ಲಾ ಹೊರಡಿಸಿಬಿಡಿ. ಅವರ ವಿಚಿತ್ರ ಕಲ್ಲುಗಳನ್ನು ಹಾಗು ಲೋಹವಿಗ್ರಹಗಳನ್ನು ನಾಶಮಾಡಿ ಅವರ ಪೂಜಾಸ್ಥಳಗಳನ್ನು ಹಾಳು ಮಾಡಬೇಕು.
53 : ನಾನು ಆ ನಾಡನ್ನು ನಿಮಗೆ ಸ್ವಂತ ನಾಡಾಗಲೆಂದು ಕೊಟ್ಟಿದ್ದೇನೆ. ಆದ್ದರಿಂದ ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲೇ ವಾಸಮಾಡಿ.
54 : ಚೀಟು ಹಾಕಿ ಅದನ್ನು ನಿಮ್ಮ ನಿಮ್ಮ ಕುಟುಂಬಗಳಿಗೆ ಹಂಚಿಕೊಳ್ಳಿ. ಹೆಚ್ಚು ಮಂದಿಯುಳ್ಳ ಕುಟುಂಬಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಟುಂಬಕ್ಕೆ ಕಡಿಮೆಯಾಗಿಯೂ ಆಸ್ತಿ ದೊರಕಬೇಕು. ಒಂದೊಂದು ಕುಟುಂಬದ ಚೀಟು ಯಾವ ಯಾವ ಸ್ಥಳವನ್ನು ಸೂಚಿಸುವುದೋ ಅಲ್ಲೇ ಆ ಕುಟುಂಬದ ಸೊತ್ತಿರಬೇಕು. ಒಂದೊಂದು ಕುಲಕ್ಕೆ ಸೇರಿದ ಕುಟುಂಬಗಳು ಒಂದೇ ಪ್ರದೇಶದಲ್ಲಿರಬೇಕು.
55 : ನೀವು ಆ ನಾಡಿನ ನಿವಾಸಿಗಳನ್ನು ಹೊರಡಿಸದೆ ಹೋದರೆ ಅವರಲ್ಲಿ ನೀವು ಉಳಿಸಿದವರು ನಿಮಗೆ ಕಣ್ಣುಚುಚ್ಚುವ ಮುಳ್ಳುಗಳಂತೆ ಆಗುವರು; ಪಕ್ಕೆ ತಿವಿಯುವ ಶೂಲಗಳಂತೆ ಆಗುವರು; ನೀವು ವಾಸಿಸುವ ನಾಡಿನಲ್ಲಿ ನಿಮಗೆ ಕಂಠಕಪ್ರಾಯರಾಗುವರು.
56 : ಅಲ್ಲದೆ, ನಾನು ಅವರಿಗೆ ಮಾಡಯೋಚಿಸಿದಂತೆ ನಿಮಗೇ ಮಾಡುವೆನು’.”

· © 2017 kannadacatholicbible.org Privacy Policy