Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಂಖ್ಯಾಕಾಂಡ


1 : ಸೀನಾಯಿ ಬೆಟ್ಟದ ಮೇಲೆ ಸರ್ವೇಶ್ವರಸ್ವಾಮಿ ಮೋಶೆಯ ಸಂಗಡ ಮಾತಾಡಿದ ಕಾಲದಲ್ಲಿದ್ದ ಮೋಶೆ - ಆರೋನರ ವಂಶಸ್ಥರ ವಿವರ:
2 : ಆರೋನನಿಗಿದ್ದ ಮಕ್ಕಳ ಹೆಸರುಗಳು: ಜೇಷ್ಠಪುತ್ರ ನಾದಾಬ್, ಅಬೀಹು ಎಲ್ಲಾಜಾರ್ ಮತ್ತು ಈತಾಮಾರ್.
3 : ಯಾಜಕ ಸೇವಾವೃತ್ತಿಯನ್ನು ಕೈಗೊಳ್ಳುವುದಕ್ಕೆ ಅಭಿಷೇಕದಿಂದ ಪ್ರತಿಷ್ಠಿತರಾದವರು ಇವರೇ.
4 : ನಾದಾಬ್ ಮತ್ತು ಅಬೀಹೂ ಎಂಬಿಬ್ಬರು ಸೀನಾಯಿ ಮರುಭೂಮಿಯಲ್ಲಿ ಸರ್ವೇಶ್ವರ ಆಜ್ಞಾಪಿಸದ ಅಪವಿತ್ರ ಅಗ್ನಿಯಿಂದ ಧೂಪವನ್ನು ಸಮರ್ಪಿಸಿದರು. ಈ ಕಾರಣ ಸರ್ವೇಶ್ವರನ ಸನ್ನಿಧಿಯಲ್ಲಿ ಸತ್ತುಹೋದರು. ಅವರಿಗೆ ಮಕ್ಕಳಿರಲಿಲ್ಲ. ಎಲ್ಲಾಜಾರ್ ಮತ್ತು ಈತಾಮಾರ್ ಎಂಬ ಮಿಕ್ಕವರು ತಮ್ಮ ತಂದೆಯ ಕೈಕೆಳಗೆ ಯಾಜಕರಾಗಿ ಸೇವೆ ಸಲ್ಲಿಸಿದರು.
5 : ಸರ್ವೇಶ್ವರ ಮೋಶೆಗೆ ಇತ್ತ ಆಜ್ಞೆ ಇದು:
6 : “ನೀನು ಲೇವಿ ಕುಲದವರನ್ನು ಕರೆದುತಂದು ಅವರು ದೇವತಾಕಾರ್ಯಗಳಲ್ಲಿ ಯಾಜಕ ಆರೋನನಿಗೆ ಸಹಾಯಕರಾಗಿರುವಂತೆ ನಿಯುಕ್ತಗೊಳಿಸು.
7 : ಅವರು ದೇವದರ್ಶನದ ಗುಡಾರದ ಬಳಿಯಲ್ಲಿರಬೇಕು; ಆರೋನನಿಗೂ ಇಡೀ ಸಮಾಜಕ್ಕೂ ನೆರವಾಗಿ ದೇವಸ್ಥಾನದ ಪರಿಚರ್ಯವನ್ನು ನಡೆಸಬೇಕು.
8 : ದೇವದರ್ಶನದ ಗುಡಾರಕ್ಕೆ ಸೇರಿದ ಉಪಕರಣಗಳನ್ನು ನೋಡಿಕೊಳ್ಳಬೇಕು. ಇಸ್ರಯೇಲರ ಪರವಾಗಿ ದೇವಸ್ಥಾನದ ಸೇವಾಕಾರ್ಯಗಳನ್ನು ನಡೆಸಬೇಕು.
9 : ನೀನು ಲೇವಿಯರನ್ನು ಆರೋನನಿಗೂ ಅವನ ಮಕ್ಕಳಿಗೂ ಒಪ್ಪಿಸು. ಇಸ್ರಯೇಲರಲ್ಲಿ ಆರೋನನಿಗೆ ಸಂಪೂರ್ಣ ಶರಣರು ಇವರೇ.
10 : ಯಾಜಕ ಸೇವಾವೃತ್ತಿಯನ್ನು ಕೈಗೊಳ್ಳುವುದಕ್ಕೆ ಆರೋನನನ್ನು ಹಾಗೂ ಅವನ ಮಕ್ಕಳನ್ನು ನೇಮಿಸು. ಬೇರೆ ಯಾರಾದರು ಆ ವೃತ್ತಿಗೆ ಕೈ ಹಾಕಿದರೆ ಅಂಥವನಿಗೆ ಮರಣ ಶಿಕ್ಷೆಯಾಗಬೇಕು.”
11 : ಸರ್ವೇಶ್ವರ ಮೋಶೆಗೆ ಹೀಗೆಂದರು:
12 : “ನಾನು ಇಸ್ರಯೇಲರಲ್ಲಿ ಜೇಷ್ಠಪುತ್ರರಿಗೆ ಬದಲಾಗಿ ಲೇವಿಯರನ್ನೇ ಆರಿಸಿಕೊಂಡಿದ್ದೇನೆಂದು ತಿಳಿ. ಆದುದರಿಂದ ಲೇವಿಯರು ನನಗೆ ಸೇರಿದವರು, ನನ್ನ ಸೊತ್ತು.
13 : ವಾಸ್ತವವಾಗಿ ಇಸ್ರಯೇಲರ ಜೇಷ್ಠರೆಲ್ಲರು ನನ್ನ ಸೊತ್ತು. ಈಜಿಪ್ಟ್ ದೇಶದಲ್ಲಿ ಜೇಷ್ಠವಾದುದೆಲ್ಲವನ್ನು ನಾನು ಸಂಹಾರ ಮಾಡಿದಾಗ ಇಸ್ರಯೇಲರಲ್ಲಿಯ ಜೇಷ್ಠ ಮನುಷ್ಯರನ್ನೂ ಪಶುಪ್ರಾಣಿಗಳನ್ನೂ ನನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡೆ. ಆದರೆ ಈಗ ಅಂಥವರಿಗೆ ಬದಲಾಗಿ ಲೇವಿಯರನ್ನು ಆರಿಸಿಕೊಂಡಿದ್ದೇನೆ. ಅವರು ಸರ್ವೇಶ್ವರನಾದ ನನ್ನವರು.”
14 : ಸರ್ವೇಶ್ವರ ಸೀನಾಯಿ ಮರುಭೂಮಿಯಲ್ಲಿ ಮೋಶೆಗೆ,
15 : “ನೀನು ಲೇವಿಯರಲ್ಲಿ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರನ್ನೆಲ್ಲಾ ಗೋತ್ರ ಕುಟುಂಬಗಳ ಪ್ರಕಾರ ಎಣಿಸಬೇಕು,” ಎಂದು ಆಜ್ಞಾಪಿಸಿದರು.
16 : ಸ್ವಾಮಿಯ ಅಪ್ಪಣೆಯ ಮೇರೆಗೆ ಮೋಶೆ ಅವರನ್ನು ಎಣಿಸಿದನು.
17 : ಲೇವಿಯ ಮಕ್ಕಳ ಹೆಸರುಗಳು ಇವು: ಗೇರ್ಷೋನ್, ಕೆಹಾತ್, ಮೆರಾರೀ.
18 : ಅವರು ಗೋತ್ರಸ್ಥಾಪಕರು. ಗೋತ್ರಸ್ಥಾಪಕ ಗೇರ್ಷೋನನ ಮಕ್ಕಳು - ಲಿಬ್ನಿ, ಶಿವಿ್ಮೂ ಎಂಬವರು.
19 : ಗೋತ್ರಸ್ಥಾಪಕ ಕೆಹಾತನ ಮಕ್ಕಳು - ಅಮ್ರಾಮ್, ಇಚ್ಛಾರ್, ಹೆಬ್ರೋನ್, ಉಜ್ಜೀಯೇಲ್ ಎಂಬವರು.
20 : ಮೆರಾರಿಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ಗೋತ್ರ ಕುಟುಂಬಗಳ ಪ್ರಕಾರ ಇವರೇ ಲೇವಿಯ ವಂಶದವರು.
21 : ಗೇರ್ಷೋನ್ ವಂಶದವರಲ್ಲಿ ಲಿಬ್ನೀ ಗೋತ್ರದವರೂ ಶಿವಿ್ಮೂ ಗೋತ್ರದವರೂ ಇದ್ದರು.
22 : ಅವರಲ್ಲಿ ಎಣಿಕೆಯಾದ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ 7,500.
23 : ಗೇರ್ಷೋನ್ಯರ ಕುಟುಂಬಗಳವರು ದೇವದರ್ಶನದ ಗುಡಾರದ ಹಿಂದುಗಡೆ ಅಂದರೆ ಪಶ್ಚಿಮ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು.
24 : ಗೇರ್ಷೋನ್ಯರ ಗೋತ್ರಗಳ ಮುಖ್ಯಸ್ಥನು ಲಾಯೇಲನ ಮಗ ಎಲ್ಯಾಸಾಫ್.
25 : ದೇವದರ್ಶನದ ಗುಡಾರದ ಉಪಕರಣಗಳಲ್ಲಿ ಗೇರ್ಷೋನನ ವಂಶದವರು ನೋಡಿಕೊಳ್ಳಬೇಕಾಗಿದ್ದವುಗಳು ಇವು - ಗುಡಾರ, ಅದರ ಮೇಲಿನ ಡೇರೆಯ ಬಟ್ಟೆ, ಅದರ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಲ್ಲಿರುವ ಪರದೆ,
26 : ಗುಡಾರದ ಮತ್ತು ಬಲಿಪೀಠದ ಸುತ್ತಲಿರುವ ಅಂಗಳದ ತೆರೆಗಳು, ಅಂಗಳದ ಬಾಗಿಲಿನ ಪರದೆ ಮತ್ತು ಅವುಗಳ ಹಗ್ಗಗಳು. ಇಂತಹ ಎಲ್ಲಾ ವಿಧವಾದ ಸೇವೆಯನ್ನು ಗೇರ್ಷೋನ್ಯರು ಮಾಡಬೇಕಾಗಿತ್ತು.
27 : ಕೆಹಾತ್ ವಂಶದವರಲ್ಲಿ ಅಮ್ರಾಮ್ ಗೋತ್ರದವರು, ಇಚ್ಹಾರ್ ಗೋತ್ರದವರು, ಹೆಬ್ರೋನ್ ಗೋತ್ರದವರು ಹಾಗೂ ಉಜ್ಜೀಯೇಲ್ ಗೋತ್ರದವರು ಇದ್ದರು.
28 : ಅವರಲ್ಲಿ ದೇವಸ್ಥಾನ ನೋಡಿಕೊಳ್ಳತಕ್ಕವರು ಅಂದರೆ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ 8,600.
29 : ಕೆಹಾತ್ಯರ ಕುಟುಂಬಗಳವರು ದೇವದರ್ಶನದ ಗುಡಾರದ ದಕ್ಷಿಣ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು.
30 : ಈ ಕೇಹಾತ್ಯರ ಗೋತ್ರಗಳ ಮುಖ್ಯಸ್ಥನು ಉಜ್ಜೀಯೇಲನ ಮಗ ಎಲೀಚಾಫಾನ್.
31 : ಅವರು ನೋಡಿಕೊಳ್ಳಬೇಕಾಗಿದ್ದವುಗಳು ಇವು - ಮಂಜೂಷ, ಮೇಜು, ದೀಪಸ್ತಂಭ, ವೇದಿಕೆಗಳು, ದೇವಸ್ಥಾನದ ಸೇವೋಪಕರಣಗಳು ಹಾಗೂ ಒಳಗಣ ತೆರೆ. ಇಂಥ ಎಲ್ಲಾ ವಿಧವಾದ ಸೇವೆಯನ್ನು ಅವರು ಮಾಡಬೇಕಾಗಿತ್ತು.
32 : ಇದಲ್ಲದೆ ಮಹಾಯಾಜಕ ಆರೋನನ ಮಗ ಎಲ್ಲಾಜಾರನು ಲೇವಿಯರ ಮುಖ್ಯಸ್ಥರಿಗೆ ಅಧ್ಯಕ್ಷನಾಗಿದ್ದ; ದೇವಸ್ಥಾನವನ್ನು ಕಾಯುವವರಿಗೆ ಮೇಲ್ವಿಚಾರಕನಾಗಿದ್ದ.
33 : ಮೆರಾರೀ ವಂಶದವರಲ್ಲಿ ಮಹ್ಲೀ ಗೋತ್ರದವರು ಮತ್ತು ಮೂಷಿ ಗೋತ್ರದವರು ಇದ್ದರು.
34 : ಇವರಲ್ಲಿ ಎಣಿಕೆಯಾದ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ - 6200.
35 : ಮೆರಾರೀಯರ ಗೋತ್ರಗಳ ಮುಖ್ಯಸ್ಥನು ಅಬೀಹೈಲನ ಮಗ ಚೂರೀಯೇಲ್. ಇವರು ದೇವದರ್ಶನದ ಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು.
36 : ಮೆರಾರಿ ವಂಶದವರ ವಶಕ್ಕೆ ಒಪ್ಪಿಸಲಾಗಿದ್ದವುಗಳು ಇವು - ಗುಡಾರದ ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆ ಕಲ್ಲುಗಳು,
37 : ಇವುಗಳ ಉಪಕರಣಗಳು, ಅಂಗಳದ ಸುತ್ತಲು ಇದ್ದ ಕಂಬಗಳು, ಅವುಗಳ ಗದ್ದಿಗೆ ಕಲ್ಲುಗಳು, ಗೂಟಗಳು ಮತ್ತು ಹಗ್ಗಗಳು. ಇಂಥ ಎಲ್ಲಾ ವಿಧವಾದ ಸೇವೆಯನ್ನು ಇವರೇ ಮಾಡಬೇಕಾಗಿತ್ತು.
38 : ದೇವದರ್ಶನದ ಗುಡಾರದ ಪೂರ್ವ ದಿಕ್ಕಿನಲ್ಲಿ, ಅಂದರೆ ಸೂರ್ಯೋದಯವಾಗುವ ಕಡೆಯಲ್ಲಿ ಮೋಶೆ ಮತ್ತು ಆರೋನನು ಹಾಗೂ ಆರೋನನ ಮಕ್ಕಳು ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು. ಅವರು ಇಸ್ರಯೇಲರ ಪರವಾಗಿ ದೇವಸ್ಥಾನವನ್ನು ನೋಡಿಕೊಳ್ಳಬೇಕಾಗಿತ್ತು. ಬೇರೆ ಯಾರಾದರೂ ಆ ಕೆಲಸಕ್ಕೆ ಕೈ ಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕಾಗಿತ್ತು.
39 : ಮೋಶೆ ಮತ್ತು ಆರೋನರು ಸರ್ವೇಶ್ವರನ ಅಪ್ಪಣೆಯ ಮೇರೆಗೆ ಕುಟುಂಬಗಳ ಪ್ರಕಾರ ಎಣಿಸಿದ ಲೇವಿಯರ ಅಂದರೆ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ 22,000.
40 : ಸರ್ವೇಶ್ವರ ಮೋಶೆಗೆ, “ನೀನು ಇಸ್ರಯೇಲರಲ್ಲಿ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಜೇಷ್ಠಪುತ್ರರನ್ನು ಹೆಸರು ಹಿಡಿದು ಎಣಿಕೆಮಾಡು.
41 : ಆದರೆ ಸರ್ವೇಶ್ವರನೆಂಬ ನನ್ನ ಸೊತ್ತಾಗುವುದಕ್ಕೆ ನೀನು ಇಸ್ರಯೇಲರ ಚೊಚ್ಚಲಾದ ಪಶುಪ್ರಾಣಿಗಳಿಗೆ ಬದಲಾಗಿ ಲೇವಿಯರ ಪಶುಪ್ರಾಣಿಗಳನ್ನು ತೆಗೆದುಕೋ,” ಎಂದು ಆಜ್ಞಾಪಿಸಿದರು.
42 : ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಇಸ್ರಯೇಲರಲ್ಲಿದ್ದ ಜೇಷ್ಠರಾದವರೆಲ್ಲರನ್ನು ಎಣಿಕೆ ಮಾಡಿದನು.
43 : ಹೆಸರು ಹಿಡಿದು ಎಣಿಕೆ ಆದವರ, ಅಂದರೆ ಒಂದು ತಿಂಗಳ ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ - 22,273.
44 : ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದೇನೆಂದರೆ -
45 : “ನೀನು ಇಸ್ರಯೇಲರ ಜೇಷ್ಠರಿಗೆ ಬದಲಾಗಿ ಲೇವಿಯರನ್ನು ಮತ್ತು ಅವರ ಚೊಚ್ಚಲಾದ ಪಶುಪ್ರಾಣಿಗಳಿಗೆ ಬದಲಾಗಿ ಲೇವಿಯರ ಪಶುಪ್ರಾಣಿಗಳನ್ನು ತೆಗೆದುಕೊ. ಲೇವಿಯರೇ ನನ್ನ ಸೊತ್ತು. ನಾನು ಸರ್ವೇಶ್ವರ!
46 : ಲೇವಿಯರ ಸಂಖ್ಯೆಗಿಂತ 273 ಮಂದಿ ಜೇಷ್ಠರು ಇಸ್ರಯೇಲರಲ್ಲಿ ಹೆಚ್ಚಾಗಿದ್ದಾರೆ. ಆದುದರಿಂದ ಅವರನ್ನು ವಿಮೋಚಿಸುವುದಕ್ಕಾಗಿ ತಲೆ ಒಂದಕ್ಕೆ ಐದು ಬೆಳ್ಳಿ ನಾಣ್ಯಗಳಂತೆ ಈಡು ತೆಗೆದುಕೊ.
47 : ದೇವರ ಸೇವೆಗೆ ನಿಗದಿಯಾದ ನಾಣ್ಯಗಳ ಮೇರೆಗೆ ತೆಗೆದುಕೊಳ್ಳಬೇಕು.
48 : ಆ ಹೆಚ್ಚಾಗಿರುವವರ ವಿಮೋಚನೆಗಾಗಿ ಅವರು ಕೊಡುವ ಹಣವನ್ನು ಆರೋನನಿಗೂ ಅವನ ಮಕ್ಕಳಿಗೂ ಕೊಡು,” ಎಂದರು.
49 : ಅದರಂತೆಯೇ ಮೋಶೆ ಲೇವಿಯರಿಗಿಂತ ಹೆಚ್ಚಾದ ಜೇಷ್ಠರನ್ನು ವಿಮೋಚಿಸುವುದಕ್ಕಾಗಿ ಹಣವನ್ನು ತೆಗೆದುಕೊಂಡನು.
50 : ದೇವರ ಸೇವೆಗೆ ನಿಗದಿಯಾದ ನಾಣ್ಯದ ಮೇರೆಗೆ 1365 ನಾಣ್ಯಗಳನ್ನು ತೆಗೆದುಕೊಂಡನು.
51 : ಸರ್ವೇಶ್ವರನ ಆಜ್ಞೆಯಂತೆ ವಿಮೋಚನೆಯ ಹಣವನ್ನು ಆರೋನನಿಗೂ ಅವನ ಮಕ್ಕಳಿಗೂ ಕೊಟ್ಟನು.

· © 2017 kannadacatholicbible.org Privacy Policy