Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಂಖ್ಯಾಕಾಂಡ


1 : ಇಸ್ರಯೇಲರಿಗೆ ಶುಭವಾಗಬೇಕು ಎಂಬುದೇ ಸರ್ವೇಶ್ವರನ ಚಿತ್ತ ಎಂದು ಅರಿತ ಬಿಳಾಮನು ಮೊದಲಿನಂತೆ ಶಕುನ ನೋಡಲು ಹೋಗಲಿಲ್ಲ. ಬದಲಿಗೆ ಮರುಭೂಮಿಯ ಕಡೆ ಮುಖ ತಿರುಗಿಸಿಕೊಂಡು, ಕಣ್ಣೆತ್ತಿ ನೋಡಿದನು.
2 : ಕುಲಗಳ ಅನುಸಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಯೇಲರು ಅವನಿಗೆ ಕಾಣಿಸಿದರು.
3 : ಆಗ ಅವನು ದೇವಾತ್ಮ ಪ್ರೇರಿತನಾಗಿ ಪದ್ಯರೂಪದಲ್ಲಿ ಇಂತೆಂದು ಭವಿಷ್ಯ ನುಡಿದನು: “ಇದು ಬೆಯೋರನ ಮಗ ಬಿಳಾಮನ ಭವಿಷ್ಯವಾಣಿ: ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ.
4 : ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದಾ ವ್ಯಕ್ತಿಯ ವಾಣಿ.
5 : ಯಕೋಬ್ಯರೇ, ನಿಮ್ಮ ಡೇರೆಗಳೆಷ್ಟು ರಮ್ಯ ! ಇಸ್ರಯೇಲರೇ, ನಿಮ್ಮ ನಿವಾಸಗಳೆಷ್ಟು ಸುಂದರ !
6 : ಅವಿವೆ ಉದ್ದುದ್ದ ಚಾಚಿಕೊಂಡಿರುವ ಕಣಿವೆಗಳಂತೆ ನದಿಯ ಬಳಿಯಿರುವ ತೋಟಗಳಂತೆ ಸರ್ವೇಶ್ವರ ನೆಟ್ಟ ಅಗರುಮರಗಳಂತೆ. ನೀರ ಬದಿಯ ದೇವದಾರು ವೃಕ್ಷಗಳಂತೆ.
7 : ನೀರು ಹರಿಯುತ್ತಲೇ ಇದೆ ಅವರ ಕಪಿಲೆಗಳಿಂದ ಅವರ ಬಿತ್ತನೆಗೆ ನೀರಿನ ಕೊರತೆಯೆಂಬುದಿಲ್ಲ. ಅಗಾಗ್‍ರಾಜನಿಗಿಂತ ಶ್ರೇಷ್ಠ ಅವರ ಅರಸ ಅಭಿವೃದ್ಧಿಯಾಗುತ್ತಿದೆ ಅವರ ರಾಜ್ಯ.
8 : ಅವರನ್ನು ದೇವರೇ ಕರೆದು ತಂದರು ಈಜಿಪ್ಟಿನಿಂದ ಅವರಿಗಿದೆ ಕಾಡುಕೋಣದಂಥ ಶಕ್ತಿಸಾಮಥ್ರ್ಯ. ನಿರ್ಮೂಲ ಮಾಡುವರವರು ಶತ್ರುಗಳನ್ನು ಮುರಿದು ಹಾಕುವರು ವೈರಿಗಳ ಎಲುಬುಗಳನ್ನು; ನುಚ್ಚುನೂರು ಮಾಡುವರು ಅವರ ಬಿಲ್ಲು ಬಾಣಗಳನ್ನು.
9 : ಕಾಲು ಮಡಚಿ ಹೊಂಚುಕೂತ ಸಿಂಹದಂತಿದೆ ಆ ಜನಾಂಗ; ಕೆಣಕಲು ಯಾರಿಂದಾದೀತು, ಅದು ಮೃಗೇಂದ್ರನಿಗೆ ಸಮಾನ !
10 : ಇದನ್ನು ಕೇಳಿ ಬಾಲಾಕನಿಗೆ ಬಿಳಾಮನ ಮೇಲೆ ಕಡುಕೋಪ ಉಂಟಾಯಿತು. ಅವನು ಕೈಕೈಹಿಸಿಕಿಕೊಂಡು ಬಿಳಾಮನಿಗೆ, “ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆ; ಆದರೆ ನೀನು ಮೂರು ಸಾರಿಯೂ ಅವರನ್ನೇ ಆಶೀರ್ವದಿಸಿದೆ.
11 : ಆದುದರಿಂದ ನಿನ್ನ ಊರಿಗೆ ತೆರಳು. ನಿನ್ನನ್ನು ಬಹಳವಾಗಿ ಸನ್ಮಾನಿಸಬೇಕೆಂದಿದ್ದೆ. ಆದರೆ ನಿನಗೆ ಸನ್ಮಾನ ಕೂಡದೆಂದು ಸರ್ವೇಶ್ವರ ಆಜ್ಞೆ ಮಾಡಿದ್ದಾನೆ,” ಎಂದನು.
12 : ಅದಕ್ಕೆ ಬಿಳಾಮನು, “ನೀನು ನಿನ್ನ ಮನೆತುಂಬ ಬೆಳ್ಳಿಬಂಗಾರವನ್ನು ದಾನಮಾಡಿದರೂ ನಾನು ಸರ್ವೇಶ್ವರನ ಆಜ್ಞೆಯನ್ನು ವಿೂರಿ ನನ್ನ ಇಷ್ಟದಂತೆ ಏನನ್ನೂ ಮಾಡಲಾರೆ.
13 : ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮಾಡುವೆನೆಂದು ನೀನು ನನ್ನ ಬಳಿಗೆ ಕಳಿಸಿದ ದೂತರಿಗೆ ನಾನು ಹೇಳಲಿಲ್ಲವೆ?
14 : ಆಗಲಿ, ನಾನು ನನ್ನ ಸ್ವಜನರ ಬಳಿಗೆ ತೆರಳುತ್ತೇನೆ. ಆದರೆ ಈ ಜನರು ನಿನ್ನ ಜನರಿಗೆ ಕೊನೆಗೆ ಏನು ಮಾಡುವರೋ ಅದನ್ನು ತಿಳಿಸುತ್ತೇನೆ ಕೇಳು,” ಎಂದು ಹೇಳಿ
15 : ಪದ್ಯರೂಪವಾಗಿ ಹೀಗೆಂದನು: “ಬೆಯೋರನ ಮಗ ಬಿಳಾಮನು ನುಡಿದ ಭವಷ್ಯವಾಣಿ:
16 : ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ ಪರಾತ್ಪರನ ಜ್ಞಾನವನ್ನು ಪಡೆದವನ ವಾಣಿ ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದವನ ಭವಿಷ್ಯವಾಣಿ:
17 : ಒಬ್ಬಾತನನ್ನು ನೋಡುತ್ತಿದ್ದೇನೆ; ಆತ ಈಗಿನವನಲ್ಲ. ಆತ ಕಾಣಿಸುತ್ತಾನೆ, ಆದರೆ ಸಮೀಪದಲ್ಲಿಲ್ಲ. ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ ಯಕೋಬವಂಶದಲ್ಲಿ ರಾಜದಂಡ ಹಿಡಿದವನು ಕಂಡು ಬಂದಿದ್ದಾನೆ ಇಸ್ರಯೇಲರಲ್ಲಿ. ಆತ ಸೀಳಿಹಾಕಿದ್ದಾನೆ ಮೊವಾಬ್ಯರ ತಲೆಯನ್ನು; ಕೆಡವಿಬಿಟ್ಟಿದ್ದಾನೆ ಯುದ್ಧವೀರರೆಲ್ಲರನ್ನು.
18 : ಸ್ವಾಧೀನವಾಗಿಸಿಕೊಂಡಿದ್ದಾನೆ ಎದೋಮ್ಯರ ನಾಡನ್ನು; ಆತನಿಗೆ ಅಧೀನರಾದರು ಹಗೆಗಳಾದ ಸೇಯೇರಿನವರು.
19 : ಹೌದು, ಇಸ್ರಯೇಲರು ಬಲವಂತರು ಯಕೋಬ್ಯರದೇ ದೊರೆತನವಾಯಿತು ನಗರಗಳಿಂದ ತಲೆತಪ್ಪಿಸಿಕೊಂಡವರೂ ನಾಶವಾದರು.”
20 : ಅನಂತರ ಅಮಾಲೇಕ್ಯರನ್ನು ನೋಡಿ ಅವರ ವಿಷಯದಲ್ಲಿ ಹೀಗೆಂದು ನುಡಿದನು: “ಅಮಾಲೇಕ್ಯರು ಶ್ರೇಷ್ಟರಲ್ಲವೆ ರಾಷ್ಟ್ರಗಳಲ್ಲಿ? ಆದರೂ ಅವರ ಗತಿ ವಿನಾಶವೇ ಸರಿ.”
21 : ಬಳಿಕ ಕೇನ್ಯರನ್ನು ನೋಡಿ ಅವರ ವಿಷಯದಲ್ಲಿ ಇಂತೆಂದು ನುಡಿದನು: “ನಿಮ್ಮ ನಿವಾಸಸ್ಥಳ ಸುರಕ್ಷಿತ ಬೆಟ್ಟದ ತುತ್ತತುದಿಯಲ್ಲಿ ಗೂಡು ಕಟ್ಟಿಕೊಂಡಷ್ಟು ಸುರಕ್ಷಿತ.
22 : ಆದರೂ ಕೇನ್ಯರು ಕೂಡ ನಾಶವಾಗುವರು. ಅಶ್ಯೂರ್ಯರು ನಿಮ್ಮನ್ನು ಸೆರೆ ಹಿಡಿಯಲು ಎಷ್ಟು ಕಾಲತಾನೆ ಹಿಡಿಯುವುದು?”
23 : ಬಿಳಾಮನು ಮುಂದುವರೆದು ನುಡಿದದ್ದು ಏನೆಂದರೆ: “ಅಯ್ಯೋ, ದೇವರೇ ಹೀಗೆ ಮಾಡುವಾಗ ಉಳಿಯುವವರಾರು?
24 : ‘ಸೈಪ್ರಸ್’ ಎಂಬ ಸ್ಥಳದಿಂದ ಹಡಗುಗಳಲ್ಲಿ ಬರುವರು ಜನರು ಸೋಲಿಸುವರವರು ಅಶ್ಯೂರ್ಯರನ್ನೂ ಏಬೆರ್‍ಜರನ್ನೂ; ಅವರಿಗೂ ನಾಶವುಂಟಾಗುವುದು.”
25 : ಇದಾದ ಮೇಲೆ ಬಿಳಾಮನು ಸ್ವಂತ ನಾಡಿಗೆ ಹಿಂದಿರುಗಿದನು. ಬಾಲಾಕನು ತನ್ನ ದಾರಿ ಹಿಡಿದನು.

· © 2017 kannadacatholicbible.org Privacy Policy