Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಂಖ್ಯಾಕಾಂಡ


1 : ಸರ್ವೇಶ್ವರಸ್ವಾಮಿ ಆರೋನನಿಗೆ ಹೀಗೆಂದರು: “ದೇವದರ್ಶನದ ಗುಡಾರದ ವಿಷಯದಲ್ಲಿ ಏನಾದರು ಅಕ್ರಮ ನಡೆದರೆ ನೀನು, ನಿನ್ನ ಸಂತತಿಯವರು ಮತ್ತು ನಿನ್ನ ಕುಲದವರೆಲ್ಲರೂ ಆ ದೋಷದ ಫಲವನ್ನು ಅನುಭವಿಸಬೇಕು. ಯಾಜಕಸೇವೆಯ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನು ಮತ್ತು ನಿನ್ನ ಸಂತತಿಯವರು ಮಾತ್ರ ಆ ದೋಷದ ಫಲವನ್ನು ಅನುಭವಿಸಬೇಕು.
2 : ನಿನ್ನ ಕುಲದ ಮೂಲ ಪುರುಷನಾದ ಲೇವಿಯ ವಂಶದವರನ್ನು ನಿನ್ನ ಜೊತೆಯಲ್ಲಿರಿಸಿಕೊಂಡು, ನಿನ್ನ ಕೈಕೆಳಗೆ ಸೇವೆ ಮಾಡಿಸು. ಆದರೆ ಮಂಜೂಷವಿರುವ ಗುಡಾರದ ಮುಂದೆ ನೀನು ಮತ್ತು ನಿನ್ನ ಮಕ್ಕಳು ಮಾತ್ರ ಸೇವೆ ಮಾಡಬೇಕು.
3 : ಲೇವಿಯರು ನಿನ್ನ ಅಪ್ಪಣೆ ಮೇರೆಗೆ ನಡೆದು ಇಡೀ ಗುಡಾರವನ್ನು ಕಾಯಬೇಕು. ಆದರೆ ಪವಿತ್ರಸ್ಥಾನದ ವಸ್ತುಗಳ ಹತ್ತಿರವಾಗಲಿ, ಬಲಿಪೀಠದ ಹತ್ತಿರವಾಗಲಿ ಅವರು ಬರಕೂಡದು; ಬಂದರೆ ಅವರು ಮಾತ್ರವಲ್ಲ, ನೀವೂ ಕೂಡ ಸಾಯಬೇಕಾಗ ಬಹುದು.
4 : ಅವರು ನಿಮ್ಮ ಜೊತೆ ಸೇರಿ ದೇವದರ್ಶನದ ಗುಡಾರವನ್ನು ನೋಡಿಕೊಳ್ಳಲಿ; ಅದರ ಎಲ್ಲ ಪರಿಚರ್ಯವನ್ನು ಮಾಡಲಿ. ಇತರ ಕುಲದವರ ಜೊತೆ ನಿಮಗೆ ಬೇಡ.
5 : ದೇವಸ್ಥಾನದ ವ್ಯವಹಾರವನ್ನು ಮತ್ತು ಬಲಿಪೀಠವನ್ನು ನೀವೇ ನೋಡಿಕೊಳ್ಳಬೇಕು. ಆಗ ದೇವರ ಕೋಪ ಮತ್ತೆ ಇಸ್ರಯೇಲರ ಮೇಲೆ ಬಾರದು.
6 : ಇಸ್ರಯೇಲರಲ್ಲಿ ನಿನ್ನ ಕುಲದವರಾದ ಲೇವಿಯರನ್ನು ನಾನೇ ಆರಿಸಿಕೊಂಡಿದ್ದೇನೆ. ಅವರು ಸರ್ವೇಶ್ವರನಿಗೆ ಸಮರ್ಪಿತವಾಗಿ ಕಾಣಿಕೆಯಂತೆ ನಿನ್ನ ವಶದಲ್ಲೇ ಇದ್ದಾರೆ. ದೇವದರ್ಶನದ ಗುಡಾರದ ಪರಿಚರ್ಯವನ್ನು ಅವರೇ ಮಾಡಲಿ.
7 : ನೀನು ಮತ್ತು ನಿನ್ನ ಸಂತತಿಯವರು ಯಾಜಕ ಕರ್ತವ್ಯಗಳನ್ನು ಕೈಗೊಂಡು ಬಲಿಪೀಠದ ಮತ್ತು ಗರ್ಭಗುಡಿಯ ಸೇವೆಯನ್ನು ನಡೆಸಬೇಕು. ಅವುಗಳ ಪರಿಚರ್ಯವನ್ನು ನೀವೇ ಮಾಡಬೇಕು. ಯಾಜಕ ಪದವಿಯನ್ನು ನಿಮಗೆ ಅನುಗ್ರಹಿಸಿದ್ದೇನೆ. ಇತರರು ಅದಕ್ಕೆ ಕೈ ಹಾಕಬಾರದು. ಹಾಕಿದರೆ ಅಂಥವರಿಗೆ ಮರಣ ಶಿಕ್ಷೆಯಾಗಬೇಕು.”
8 : ಸರ್ವೇಶ್ವರ ಆರೋನನಿಗೆ ಹೀಗೆಂದು ಆಜ್ಞಾಪಿಸಿದರು: “ಇಸ್ರಯೇಲರು ನನಗಾಗಿ ವಿೂಸಲಾಗಿಟ್ಟು ಸಮರ್ಪಿಸುವ ಪದಾರ್ಥಗಳನ್ನೆಲ್ಲ ಅಂದರೆ, ಪ್ರತಿಷ್ಠಾಪಿತವಾದ ವಸ್ತುಗಳನ್ನೆಲ್ಲಾ ನಿನಗೂ ನಿನ್ನ ಸಂತತಿಯವರಿಗೂ ದಾನ ಮಾಡಿದ್ದೇನೆ. ಅವು ಸದಾಕಾಲ ನಿಮಗೆ ಸಲ್ಲಬೇಕಾದ ಪಾಲು.
9 : ಅಗ್ನಿಯಲ್ಲಿ ದಹನಮಾಡದೆ ಉಳಿಸುವ ಮಹಾ ಪರಿಶುದ್ಧ ಪದಾರ್ಥಗಳೆಲ್ಲ ಅಂದರೆ, ಇಸ್ರಯೇಲರು ನನಗೆ ಸಮರ್ಪಿಸುವ ಎಲ್ಲ ಧಾನ್ಯದ್ರವ್ಯ, ನೈವೇದ್ಯ ದ್ರವ್ಯ, ಪಾಪ ಪರಿಹಾರಕಬಲಿ, ಪ್ರಾಯಶ್ಚಿತ್ತ ಬಲಿಕಾಣಿಕೆ, ಇವುಗಳಲ್ಲಿ ದಹನವಾಗದೆ ಉಳಿದ ಭಾಗಗಳು ಮಹಾ ಪರಿಶುದ್ಧವಾದುವುಗಳು. ಅವು ನಿನಗೂ ನಿನ್ನ ಸಂತತಿಯವರಿಗೂ ಸಲ್ಲತಕ್ಕವು.
10 : ಅವುಗಳಲ್ಲಿ ಅತಿ ಪವಿತ್ರವಾದುವುಗಳನ್ನು ನೀವೇ ಊಟ ಮಾಡಬೇಕು. ನಿಮ್ಮಲ್ಲಿರುವ ಗಂಡಸರೆಲ್ಲರೂ ಅವುಗಳನ್ನು ತಿನ್ನಬಹುದು. ಅವು ಅತಿ ಪವಿತ್ರ ಆದುವು ಎಂಬುದನ್ನು ತಿಳಿದಿರಬೇಕು.
11 : “ಇದಲ್ಲದೆ ಇಸ್ರಯೇಲರು ನನಗೆ ವಿೂಸಲಾಗಿಟ್ಟು ಅರ್ಪಿಸುವ ದ್ರವ್ಯಗಳೂ, ನೈವೇದ್ಯ ಆಗಿ ಆರತಿಯೆತ್ತುವ ದ್ರವ್ಯಗಳೂ ನಿಮಗೆ ಸಲ್ಲಬೇಕು. ಇವು ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತ ನಿಯಮ ಆಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ಇವುಗಳನ್ನು ನಿಮ್ಮ ಮನೆಗಳಲ್ಲಿ ಶುದ್ಧರಾದವರು ಎಲ್ಲರೂ ಊಟಮಾಡಬಹುದು.
12 : “ಇಸ್ರಯೇಲರು ನನಗೆ ಸಮರ್ಪಿಸುವ ಪ್ರಥಮ ಫಲಗಳು, ಅಂದರೆ ಎಣ್ಣೆ, ದ್ರಾಕ್ಷಾರಸ, ಧಾನ್ಯ, ಇವುಗಳಲ್ಲಿ ಶ್ರೇಷ್ಠವಾದುದು ನಿನಗೇ ಸಿಗಬೇಕೆಂದು ವಿಧಿಸಿದ್ದೇನೆ.
13 : ಆ ಜನರು ತಮ್ಮ ನಾಡಿನ ಎಲ್ಲ ಬೆಳೆಗಳಲ್ಲಿ ನನಗೆ ತರುವ ಪ್ರಥಮ ಫಲಗಳು ನಿನಗೇ ಸಲ್ಲಬೇಕು. ನಿಮ್ಮ ಮನೆಗಳಲ್ಲಿ ಶುದ್ಧರಾಗಿರುವ ಎಲ್ಲರೂ ಅವುಗಳನ್ನು ಊಟಮಾಡಬಹುದು.
14 : ಅವರು ನನಗೆ ಹರಕೆ ಮಾಡಿ ಅರ್ಪಿಸಿಕೊಡುವ ಪ್ರತಿಯೊಂದು ನಿನಗೆ ಧಕ್ಕಬೇಕು.
15 : “ಮನುಷ್ಯರಲ್ಲೇ ಆಗಲಿ, ಪಶುಗಳಲ್ಲೇ ಆಗಲಿ, ಅವರು ನನಗೆ ಸಮರ್ಪಿಸುವ ಸಕಲ ಪ್ರಾಣಿಗಳಲ್ಲಿ ಚೊಚ್ಚಲಿನದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲು ಮಕ್ಕಳಿಗೂ ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.
16 : ಹೀಗೆ ಬಿಟ್ಟುಬಿಡಬೇಕಾದ ಶಿಶುಗಳು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗಲೆ ಗೊತ್ತಾದ ಈಡನ್ನು ಅಂದರೆ, ದೇವರ ಸೇವೆಗೆ ನಿಗದಿಯಾದ ಇಪ್ಪತ್ತು ‘ಗೇರಾ’ ತೂಕದ ನಾಣ್ಯದ ಮೇರೆಗೆ ಐದು ಶೆಕೆಲ್ ನಾಣ್ಯವನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡು.
17 : ಹಸುವಿನ ಮತ್ತು ಆಡುಕುರಿಗಳ ಚೊಚ್ಚಲು ಮರಿಗಳನ್ನು ಬಿಡಕೂಡದು. ಅವು ದೇವರ ಸೊತ್ತು. ಆದ್ದರಿಂದ ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸು; ಅವುಗಳ ಕೊಬ್ಬನ್ನು ಬಲಿಕಾಣಿಕೆಯಾಗಿ ದಹಿಸು.
18 : ಅವುಗಳ ಮಾಂಸ ಹಾಗೂ ನೈವೇದ್ಯವಾಗಿ ಆರತಿಯೆತ್ತುವ ಎದೆ ಮತ್ತು ಬಲತೊಡೆ ನಿನಗೆ ಸಲ್ಲಬೇಕು.
19 : “ಇಸ್ರಯೇಲರು ನನಗೆ ವಿೂಸಲಾಗಿಟ್ಟು ಸಮರ್ಪಿಸುವ ಪವಿತ್ರ ವಸ್ತುಗಳೆಲ್ಲಾ ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರಿಗೂ ಸಲ್ಲಬೇಕು. ಸದಾಕಾಲಕ್ಕೂ ಇದನ್ನು ನಾನು ನಿನಗೆ ಅನುಗ್ರಹಿಸಿದ್ದೇನೆ. ಇದು ನನ್ನ ಸನ್ನಿಧಿಯಲ್ಲಿ ನಿನ್ನೊಡನೆ ಮತ್ತು ನಿನ್ನ ಸಂತತಿಯೊಡನೆ ಮಾಡಿಕೊಂಡ ಶಶ್ವತವಾದ ಉಪ್ಪಿನ ಒಡಂಬಡಿಕೆ.”
20 : ಇದಲ್ಲದೆ ಸರ್ವೇಶ್ವರ ಆರೋನನಿಗೆ ಹೀಗೆಂದರು: “ಇಸ್ರಯೇಲರ ನಾಡಿನಲ್ಲಿ ನಿನ್ನ ಸ್ವಂತ ಸೊತ್ತಾಗಿ ಯಾವ ಆಸ್ತಿಯೂ ಇರುವುದಿಲ್ಲ; ಅವರೊಂದಿಗೆ ನಿನಗೆ ಯಾವ ಪಾಲೂ ಇರುವುದಿಲ್ಲ. ಇಸ್ರಯೇಲರ ನಡುವೆ ನಾನೇ ನಿನಗೆ ಆಸ್ತಿಪಾಸ್ತಿ, ಪಾಲುಪಸುಗೆ.”
21 : “ಇಗೋ, ಇಸ್ರಯೇಲರಿಂದ ಸಕಲ ಪದಾರ್ಥಗಳ ಹತ್ತನೆಯ ಪಾಲನ್ನು ಗೊತ್ತು ಮಾಡಿ ಲೇವಿಯರಿಗೆ ಕೊಟ್ಟಿದ್ದೇನೆ. ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡುವ ಅವರಿಗೆ ಇದು ಸಲ್ಲತಕ್ಕ ಸಂಭಾವನೆ.
22 : ಇನ್ನು ಮುಂದೆ ಇಸ್ರಯೇಲರು ಪಾಪಮಾಡಿ ಸಾವಿಗೆ ತುತ್ತಾಗದಂತೆ ದೇವದರ್ಶನದ ಗುಡಾರದ ಹತ್ತಿರಕ್ಕೆ ಬರಕೂಡದು.
23 : ಆ ಗುಡಾರದ ಪರಿಚರ್ಯವನ್ನು ಮಾಡಬೇಕಾದವರು ಲೇವಿಯರೇ. ಅದರ ಸಂಬಂಧವಾಗಿ ಅವರು ಮಾಡುವ ಪಾಪದ ಫಲವನ್ನು ಅವರೇ ಅನುಭವಿಸಲಿ. ಇದು ನಿಮಗೂ ನಿಮ್ಮ ಸಂತತಿಯವರಿಗೂ ಒಂದು ಶಾಶ್ವತವಾದ ನಿಯಮವಾಗಿರಲಿ. ಲೇವಿಯರಿಗೆ ಇಸ್ರಯೇಲರಲ್ಲಿ ಶಾಶ್ವತ ಸೊತ್ತು ಇರುವುದಿಲ್ಲ.
24 : ಇಸ್ರಯೇಲರು ನನಗೆ ವಿೂಸಲಾಗಿಟ್ಟು ಸಮರ್ಪಿಸುವ ಹತ್ತನೆಯ ಪಾಲನ್ನು ಅವರಿಗೆ ಸೊತ್ತಾಗಿ ಕೊಟ್ಟಿದ್ದೇನೆ. ಆದುದರಿಂದಲೇ ಇತರ ಇಸ್ರಯೇಲರಿಗೆ ಪಾಲು ದೊರಕುವಂತೆ ಅವರಿಗೆ ಪಾಲು ದೊರಕುವುದಿಲ್ಲವೆಂದು ಒತ್ತಿ ಹೇಳಿದ್ದೇನೆ.”
25 : ಸರ್ವೇಶ್ವರ ಮೋಶೆಗೆ ಹೀಗೆಂದರು:
26 : “ಲೇವಿಯರಿಗೆ ನೀನು ಇಂತೆಂದು ಆಜ್ಞಾಪಿಸು - ನಿಮ್ಮ ಸ್ವಂತಕ್ಕಾಗಿ ನಾನು ಗೊತ್ತು ಮಾಡಿರುವ ಹತ್ತನೆಯ ಒಂದು ಪಾಲನ್ನು ಇಸ್ರಯೇಲರಿಂದ ನೀವು ತೆಗೆದುಕೊಳ್ಳುವಾಗ ಅದರಲ್ಲಿ ಹತ್ತನೆಯ ಒಂದು ಪಾಲನ್ನು ಪ್ರತ್ಯೇಕಿಸಿ ಸರ್ವೇಶ್ವರನಿಗೆ ಸಮರ್ಪಿಸಬೇಕು.
27 : ಹೀಗೆ ನೀವು ಸಮರ್ಪಿಸಿದ ಹತ್ತನೆಯ ಪಾಲು, ಕಣದಲ್ಲಿನ ದವಸದಿಂದ ಹಾಗೂ ದ್ರಾಕ್ಷಿತೊಟ್ಟಿಯ ರಸದಿಂದ ಬರಬೇಕಾದ ದಶಾಂಶವೆಂದು ಪರಿಗಣಿತವಾಗುವುದು.
28 : ಇಸ್ರಯೇಲರಿಂದ ನಿಮಗೆ ಸಲ್ಲುವ ಹತ್ತನೆಯ ಒಂದು ಪಾಲಿನಲ್ಲಿ ನೀವು ಸರ್ವೇಶ್ವರನಿಗೆ ಹತ್ತನೆಯ ಒಂದು ಭಾಗವನ್ನು ಪ್ರತ್ಯೇಕಿಸಿ ಯಾಜಕ ಆರೋನನಿಗೆ ಒಪ್ಪಿಸಬೇಕು.
29 : ನಿಮಗೆ ಕೊಡಲಾಗುವ ಸಕಲ ಪದಾರ್ಥಗಳಲ್ಲಿ ಉತ್ತಮ ಭಾಗವನ್ನೇ, ಅಂದರೆ ದೇವರ ವಸ್ತುವಾಗುವುದಕ್ಕೆ ಯೋಗ್ಯವಾದ ಭಾಗವನ್ನೇ ಸರ್ವೇಶ್ವರನಿಗೆ ವಿೂಸಲಾಗಿಟ್ಟು ಸಮರ್ಪಿಸಬೇಕು.
30 : “ಲೇವಿಯರಿಗೆ ಮತ್ತೆ ಹೀಗೆಂದು ತಿಳಿಸು: ನಿಮಗೆ ದೊರಕಿದ್ದರಲ್ಲಿ ಉತ್ತಮವಾದುದನ್ನೇ ಪ್ರತ್ಯೇಕಿಸಿ ಸಮರ್ಪಿಸಿದ ಮೇಲೆ ಮಿಕ್ಕದ್ದನ್ನು ಕಣದಲ್ಲಿನ ದವಸ ಹಾಗೂ ದ್ರಾಕ್ಷಿತೊಟ್ಟಿಯ ರಸವೆಂದು ಭಾವಿಸಿ ನೀವು ಉಪಯೋಗಿಸಿಕೊಳ್ಳಬಹುದು.
31 : ನೀವು ಮತ್ತು ನಿಮ್ಮ ಮನೆಯವರು ಅದನ್ನು ಯಾವ ಸ್ಥಳದಲ್ಲಿಯಾದರೂ ಊಟಮಾಡಬಹುದು. ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡಿದ್ದಕ್ಕೆ ಅದು ನಿಮಗೆ ಪ್ರತಿಫಲ.
32 : ಅದರಲ್ಲಿ ಉತ್ತಮಭಾಗವನ್ನು ಸರ್ವೇಶ್ವರನಿಗೆ ವಿೂಸಲಾಗಿಟ್ಟ ನಂತರ ಮಿಕ್ಕದ್ದನ್ನು ಊಟಮಾಡುವುದರಿಂದ ಯಾವ ದೋಷಕ್ಕೂ ನೀವು ಗುರಿಯಾಗುವುದಿಲ್ಲ. ಇಸ್ರಯೇಲರು ಸಮರ್ಪಿಸುವ ಪವಿತ್ರ ವಸ್ತುಗಳನ್ನು ಅಪವಿತ್ರಗೊಳಿಸಬೇಡಿ; ಇಲ್ಲವಾದರೆ ಸಾಯುವಿರಿ.”

· © 2017 kannadacatholicbible.org Privacy Policy