1 : ಸರ್ವೇಶ್ವರಸ್ವಾಮಿ ಮೋಶೆಗೆ:
2 : “ನೀನು ಇಸ್ರಯೇಲರಿಗೆ ಹೀಗೆಂದು ಹೇಳು: ‘ನಿಮ್ಮ ನಿವಾಸಕ್ಕಾಗಿ ನಾನು ಕೊಡುವ ನಾಡಿಗೆ ನೀವು ಬಂದು ಸೇರಿದನಂತರ
3 : ಸರ್ವೇಶ್ವರನಾದ ನನಗೆ ಸುವಾಸನೆಯ ಕಾಣಿಕೆಯಾಗಿ ದನಕರುಗಳಿಂದ, ಆಡುಕುರಿಗಳಿಂದ ಬಲಿಯನ್ನು ಅರ್ಪಿಸುವಾಗ ಅದು ಹರಕೆಯ, ಕೃತಜ್ಞತೆಯ, ಹಬ್ಬಾಚರಣೆಯ, ಶಾಂತಿ ಸಮಾಧಾನದ ಬಲಿಯಾಗಿರಲಿ ಅಥವಾ ದಹನಬಲಿಯಾಗಿರಲಿ.
4 : ಆ ಬಲಿಪ್ರಾಣಿಯೊಂದಿಗೆ ಧಾನ್ಯನೈವೇದ್ಯಕ್ಕಾಗಿ ಒಂದೂವರೆ ಸೇರು ಎಣ್ಣೆ ಬೆರೆಸಿದ ಮೂರು ಸೇರು ಗೋದಿಯ ಹಿಟ್ಟನ್ನು ತರಬೇಕು.
5 : ಮತ್ತು ಪಾನ ದ್ರವ್ಯಕ್ಕಾಗಿ ಒಂದೂವರೆ ಸೇರು ದ್ರಾಕ್ಷಾರಸವನ್ನೂ ತರಬೇಕು. ನೀವು ದಹನಬಲಿದಾನವಾಗಿ ಇಲ್ಲವೆ ಸಮಾಧಾನಬಲಿಯಾಗಿ ಸಮರ್ಪಿಸುವ ಒಂದೊಂದು ಕುರಿಯೊಂದಿಗೆ ಇದನ್ನು ಸಮರ್ಪಿಸಬೇಕು.
6 : “ಸರ್ವೇಶ್ವರನಾದ ನನಗೆ ಸುವಾಸನೆಯ ಕಾಣಿಕೆಯಾಗಿ ಟಗರನ್ನು ಅರ್ಪಿಸುವಾಗ ಅದರೊಂದಿಗೆ ಧಾನ್ಯನೈವೇದ್ಯಕ್ಕಾಗಿ ಎರಡು ಸೇರು ಎಣ್ಣೆ ಬೆರೆಸಿದ ಆರುಸೇರು ಗೋದಿಯ ಹಿಟ್ಟನ್ನು ಅರ್ಪಿಸಬೇಕು;
7 : ಮತ್ತು ಪಾನದ್ರವ್ಯಕ್ಕಾಗಿ ಎರಡು ಸೇರು ದ್ರಾಕ್ಷಾರಸವನ್ನು ಸಮರ್ಪಿಸಬೇಕು.
8 : “ನೀವು ಅರ್ಪಿಸುವಂಥದ್ದು ಹೋರಿ ಆಗಿದ್ದರೆ, ಅದು ಸರ್ವಾಂಗ ಹೋಮವೇ ಆಗಿರಲಿ ಅಥವಾ ಹರಕೆಯ ಹಾಗೂ ಬೇರೆ ವಿಧವಾದ ಬಲಿಯೇ ಆಗಿರಲಿ,
9 : ಆಗ ನೀವು ಆ ಬಲಿ ಪ್ರಾಣಿಯೊಂದಿಗೆ ಧಾನ್ಯನೈವೇದ್ಯಕ್ಕಾಗಿ ಮೂರು ಸೇರು ಎಣ್ಣೆ ಬೆರೆಸಿದ ಒಂಬತ್ತು ಸೇರು ಗೋದಿಯ ಹಿಟ್ಟನ್ನು ಅರ್ಪಿಸಬೇಕು;
10 : ಮತ್ತು ಪಾನದ್ರವ್ಯಕ್ಕಾಗಿ ಮೂರು ಸೇರು ದ್ರಾಕ್ಷಾರಸವನ್ನು ತಂದು ಸಮರ್ಪಿಸಬೇಕು. ಇದು ಸರ್ವೇಶ್ವರನಾದ ನನಗೆ ಪ್ರಿಯವಾದ ಸುಗಂಧ ದಹನಬಲಿಯಾಗುವುದು.
11 : “ಕುರಿ, ಆಡು, ಟಗರು, ಹೋರಿ - ಇವುಗಳಲ್ಲಿ ಪ್ರತಿಯೊಂದು ಬಲಿಪ್ರಾಣಿಯ ಸಂಗಡ ನೀವು ಈ ಮೇರೆಗೆ ನೈವೇದ್ಯಮಾಡಬೇಕು.
12 : ನೀವು ಸಮರ್ಪಿಸುವ ಬಲಿಪ್ರಾಣಿಗಳ ಸಂಖ್ಯಾನುಸಾರ ಒಂದೊಂದು ಪ್ರಾಣಿಯ ಸಮೇತ ಹೀಗೆಯೇ ಮಾಡಬೇಕು.
13 : ಸ್ವದೇಶದವರೆಲ್ಲರೂ ಸರ್ವೇಶ್ವರನಿಗೆ ಸುಗಂಧಬಲಿಯನ್ನು ಸಮರ್ಪಿಸುವಾಗ ಈ ರೀತಿಯಾಗಿಯೇ ಮಾಡಬೇಕು.
14 : ನಿಮ್ಮ ಮಧ್ಯೆ, ಇಲ್ಲವೆ ನಿಮ್ಮ ಸಂತತಿಯವರ ಮಧ್ಯೆ ವಾಸಿಸುವ ಅನ್ಯದೇಶಿಯನಾಗಲಿ, ಪ್ರವಾಸಿಯಾಗಲಿ ಸುಗಂಧ ದಹನಬಲಿಯನ್ನು ಅರ್ಪಿಸಲಾಶಿಸಿದರೆ ನಿಮ್ಮಂತೆಯೇ ಅವನೂ ಮಾಡಬೇಕು.
15 : ಸರ್ವರಿಗೂ ಅಂದರೆ, ನಿಮಗೂ ನಿಮ್ಮಲ್ಲಿರುವ ಅನ್ಯದೇಶಿಯರಿಗೂ ಒಂದೇ ವಿಧಿಯಿರಬೇಕು. ಇದು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಲಿ. ಸರ್ವೇಶ್ವರನ ಸನ್ನಿಧಿಯಲ್ಲಿ ನೀವು ಹೇಗೆ ಇರುವಿರೋ ಹಾಗೆಯೇ ಅನ್ಯದೇಶಿಯನೂ ಇರುವನು.
16 : ನಿಮಗೂ ನಿಮ್ಮಲ್ಲಿ ವಾಸಿಸುವ ವಿದೇಶಿಯನಿಗೂ ಒಂದೇ ವಿಧಿ, ಒಂದೇ ನಿಯಮ ಇರಬೇಕು,” ಎಂದರು.
17 : ಸರ್ವೇಶ್ವರ ಮೋಶೆಗೆ,
18 : “ನೀನು ಇಸ್ರಯೇಲರಿಗೆ ಹೀಗೆ ಆಜ್ಞಾಪಿಸು: ನಾನು ನಿಮ್ಮನ್ನು ಕರೆದುಕೊಂಡು ಹೋಗುವ ನಾಡಿಗೆ ನೀವು ಸೇರಿದ ನಂತರ
19 : ಆ ಭೂಮಿಯ ಬೆಳೆಯನ್ನು ಅನುಭವಿಸುವಾಗ ಅದರಲ್ಲಿ ಸ್ವಲ್ಪವನ್ನು ಸರ್ವೇಶ್ವರನಿಗೆ ವಿೂಸಲಾಗಿಡಬೇಕು.
20 : ನೀವು ಕಣದಲ್ಲಿ ತುಳಿಸಿದ ದವಸದಲ್ಲಿ ಕಿಂಚಿತ್ತನ್ನು ಸರ್ವೇಶ್ವರನಿಗೆಂದು ವಿೂಸಲಾಗಿಡುವಂತೆಯೆ ಆ ಕಣಕದಿಂದ ಮಾಡುವ ಮೊದಲ ರೊಟ್ಟಿಯನ್ನು ವಿೂಸಲಾಗಿಡಬೇಕು.
21 : ನೀವು ಹಾಗು ನಿಮ್ಮ ಸಂತತಿಯವರು ಹೀಗೆ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಸರ್ವೇಶ್ವರನಿಗೆ ವಿೂಸಲಾಗಿಡಬೇಕು,” ಎಂದರು.
22 : “ಸರ್ವೇಶ್ವರಸ್ವಾಮಿ ಮೋಶೆಯ ಮುಖಾಂತರ ಕೊಟ್ಟ ಈ ಆಜ್ಞೆಗಳಲ್ಲಿ ಒಂದನ್ನು, ಒಬ್ಬನು ತಿಳಿಯದೆ ವಿೂರಿ ನಡೆಯಲು ಸಾಧ್ಯ.
23 : ಅಂತೆಯೇ ಮುಂಬರುವ ಕಾಲದಲ್ಲಿ ಎಂದಾದರೂ ಒಂದು ಸಭೆ ಇವುಗಳಲ್ಲಿ ಒಂದನ್ನು ವಿೂರಿ ದೋಷಿಯಾಗಲು ಸಾಧ್ಯ.
24 : ಆಗ ಅವರೆಲ್ಲರು ಒಟ್ಟಿಗೆ ಸೇರಿ ಸರ್ವೇಶ್ವರನಿಗೆ ಸುಗಂಧಕಾಣಿಕೆಯಾಗಿ ಹಾಗೂ ದಹನಬಲಿಯಾಗಿ ಒಂದು ಹೋರಿಯನ್ನು ಅರ್ಪಿಸಬೇಕು; ನೈವೇದ್ಯವಾಗಿ ನಿಯಮಿತ ಧಾನ್ಯದ್ರವ್ಯಗಳನ್ನು ಹಾಗೂ ಪಾನ ದ್ರವ್ಯಗಳನ್ನು ಅರ್ಪಿಸಬೇಕು; ಅಲ್ಲದೆ ದೋಷ ಪರಿಹಾರಕಬಲಿಯಾಗಿ ಒಂದು ಹೋತವನ್ನು ಸಮರ್ಪಿಸಬೇಕು.
25 : ಹೀಗೆ ಯಾಜಕನು ಇಸ್ರಯೇಲರ ಸರ್ವಸಮೂಹದ ಪರವಾಗಿ ದೋಷ ಪರಿಹಾರವನ್ನು ಮಾಡಿದಾಗ ಅವರಿಗೆ ಕ್ಷಮಾಪಣೆ ದೊರಕುವುದು. ಅವರು ಆ ತಪ್ಪನ್ನು ತಿಳಿಯದೆ ಮಾಡಿದ್ದರಿಂದ ಮತ್ತು ಅವರು ಅದರ ಪರಿಹಾರಕ್ಕಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿಯನ್ನೂ ದೋಷಪರಿಹಾರಕ ಬಲಿಯನ್ನೂ ಅರ್ಪಿಸಿದ್ದರಿಂದ ಕ್ಷಮೆ ಲಭಿಸುವುದು.
26 : ಇಸ್ರಯೇಲರ ಸರ್ವಸಭೆಯವರಿಗೂ ಅವರ ಮಧ್ಯೆ ವಾಸಿಸುವ ವಿದೇಶಿಯರಿಗೂ ಅವರೆಲ್ಲರೂ ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆ ಲಭಿಸುವುದು.
27 : “ಯಾವನಾದರೂ ಒಬ್ಬನು ವೈಯಕ್ತಿಕವಾಗಿ ತಿಳಿಯದೆ ತಪ್ಪು ಮಾಡಿದರೆ, ಅಂಥವನು ದೋಷಪರಿಹಾರಕಬಲಿಗಾಗಿ ಒಂದು ವರ್ಷದ ಆಡನ್ನು ಸಮರ್ಪಿಸಬೇಕು.
28 : ತಿಳಿಯದೆ ತಪ್ಪು ಮಾಡಿದ ಅಂಥವನ ಪರವಾಗಿ ಯಾಜಕನು ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರಕ ವಿಧಿಯನ್ನು ನೆರವೇರಿಸಿದರೆ ಅವನಿಗೆ ಕ್ಷಮೆ ದೊರಕುವುದು.
29 : ಈ ಬಗ್ಗೆ ಇಸ್ರಯೇಲರಲ್ಲಿರುವ ಸ್ವದೇಶಿಯರಿಗೂ ವಿದೇಶೀಯರಿಗೂ ಒಂದೇ ವಿಧಿಯಿರಬೇಕು.
30 : “ಆದರೆ ಒಬ್ಬನು ಸ್ವದೇಶದವನೇ ಆಗಲಿ, ವಿದೇಶದವನೇ ಆಗಲಿ, ಮನಃಪೂರ್ವಕವಾಗಿ, ಬೇಕುಬೇಕೆಂದು ಪಾಪವನ್ನು ಮಾಡಿದರೆ ಅಂಥವನನ್ನು ಕುಲದಿಂದ ತೆಗೆದುಹಾಕಬೇಕು. ಏಕೆಂದರೆ ಅವನು ಸರ್ವೇಶ್ವರನನ್ನು ತೃಣೀಕರಿಸಿದ್ದಾನೆ.
31 : ಸರ್ವೇಶ್ವರನ ಮಾತನ್ನು ತಾತ್ಸಾರ ಮಾಡಿ, ಅವರ ಆಜ್ಞೆಯನ್ನು ಉಲ್ಲಂಘಿಸಿದ್ದರಿಂದ ಅಂಥವನಿಗೆ ಬಹಿಷ್ಕಾರ ಹಾಕಲೇಬೇಕು. ಅವನು ತನ್ನ ಪಾಪದ ದುಷ್ಫಲವನ್ನು ಅನುಭವಿಸುವಂತಾಗಬೇಕು.”
32 : ಇಸ್ರಯೇಲರು ಮರುಭೂಮಿಯಲ್ಲಿ ಇದ್ದಾಗ ಒಬ್ಬನು ‘ಸಬ್ಬತ್’ ದಿನದಂದು ಸೌದೆ ಕೂಡಿಸುವುದನ್ನು ಕಂಡರು.
33 : ಅವನನ್ನು ಮೋಶೆ, ಆರೋನ್ ಹಾಗೂ ಸರ್ವಸಮುದಾಯದ ಬಳಿಗೆ ಹಿಡಿದುಕೊಂಡು ಬಂದರು.
34 : ಅಂಥವನಿಗೆ ವಿಧಿಸಬೇಕಾದ ಶಿಕ್ಷೆಯ ಬಗ್ಗೆ ಇದುವರೆಗೂ ಯಾವ ನಿಯಮವೂ ಇರಲಿಲ್ಲ. ಆದುದರಿಂದ ಅವನನ್ನು ಕಾವಲಿನಲ್ಲಿಟ್ಟರು.
35 : ಆಗ ಸರ್ವೇಶ್ವರ ಮೋಶೆಗೆ, “ಆ ಮನುಷ್ಯನಿಗೆ ಮರಣ ಶಿಕ್ಷೆಯಾಗಬೇಕು. ಜನ ಸಮೂಹದವರೆಲ್ಲ ಅವನನ್ನು ಪಾಳೆಯದ ಹೊರಗೆ ಕಲ್ಲೆಸೆದು ಕೊಲ್ಲಬೇಕು,” ಎಂದು ಆಜ್ಞಾಪಿಸಿದರು.
36 : ಅಂತೆಯೆ ಜನಸಮೂಹದವರೆಲ್ಲರು ಆ ವ್ಯಕ್ತಿಯನ್ನು ಪಾಳೆಯದ ಹೊರಗೆ ಎಳೆದುಕೊಂಡು ಹೋಗಿ ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಕಲ್ಲೆಸೆದು ಕೊಂದರು.
37 : ಸರ್ವೇಶ್ವರ ಮೋಶೆಗೆ ಹೀಗೆಂದರು:
38 : “ಇಸ್ರಯೇಲರು ಮತ್ತು ಅವರ ಸಂತತಿಯವರು ತಮ್ಮ ಬಟ್ಟೆಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರಬೇಕೆಂದು ಆಜ್ಞಾಪಿಸು.
39 : ಆ ಗೊಂಡೆಗಳ ಪ್ರಯೋಜನವಿದು - ನೀವು ಅವುಗಳನ್ನು ನೋಡುವಾಗ ಸರ್ವೇಶ್ವರನ ಆಜ್ಞೆಗಳನ್ನೆಲ್ಲಾ ನೆನಪಿಗೆ ತಂದುಕೊಂಡು ಅವುಗಳನ್ನು ಪಾಲಿಸಬೇಕು. ಹಿಂದೆ ನೀವು ನನಗೆ ದ್ರೋಹಿಗಳಾಗಿ ನಿಮ್ಮ ಮನಸ್ಸಿಗೆ ಬಂದಂತೆ, ಕಣ್ಣಿಗೆ ತೋರಿದಂತೆ ದಾರಿತಪ್ಪಿ ನಡೆದಿರಿ.
40 : ಈಗ ನನ್ನ ಆಜ್ಞೆಗಳನ್ನೇ ಗಮನದಲ್ಲಿಟ್ಟು ಅವುಗಳನ್ನು ಅನುಸರಿಸಬೇಕು. ಹೀಗೆ ನಿಮ್ಮ ದೇವರಿಗೆ ಪ್ರತಿಷ್ಠಿತರಾಗಿರಬೇಕು.
41 : ನಿಮ್ಮ ದೇವರಾಗಬೇಕೆಂಬ ಉದ್ದೇಶದಿಂದಲೇ ನಿಮ್ಮನ್ನು ಈಜಿಪ್ಟ್ ದೇಶದಿಂದ ಬರಮಾಡಿದ ಸರ್ವೇಶ್ವರನಾದ ದೇವರು ನಾನು. ನಾನೇ ನಿಮ್ಮ ದೇವರಾದ ಸರ್ವೇಶ್ವರ.”