Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಂಖ್ಯಾಕಾಂಡ


1 : ಇಸ್ರಯೇಲರು ತಮಗೆ ದುರವಸ್ಥೆ ಪ್ರಾಪ್ತವಾಯಿತೆಂದು ಸರ್ವೇಶ್ವರಸ್ವಾಮಿಗೆ ವಿರುದ್ಧ ಗೊಣಗುಟ್ಟಿದರು. ಅದಕ್ಕೆ ಕೋಪಗೊಂಡ ಸರ್ವೇಶ್ವರ ಅವರ ಮಧ್ಯೆ ಬೆಂಕಿ ಬೀಳುವಂತೆ ಮಾಡಿದರು. ಇದರ ಪರಿಣಾಮವಾಗಿ ಪಾಳೆಯದ ಕಡೇಭಾಗದಲ್ಲಿದ್ದವರು ಸುಟ್ಟು ಹೋದರು.
2 : ಆಗ ಜನರು ಮೋಶೆಯ ಬಳಿಗೆ ಬಂದು ಮೊರೆಯಿಟ್ಟರು. ಮೋಶೆ ಅವರ ಪರವಾಗಿ ಸರ್ವೇಶ್ವರನನ್ನು ಪ್ರಾರ್ಥಿಸಿದ್ದೇ ಆ ಬೆಂಕಿ ಆರಿಹೋಯಿತು.
3 : ಆದ್ದರಿಂದ, ಹಾಗು ಸರ್ವೇಶ್ವರನೇ ಆ ಬೆಂಕಿಯನ್ನು ಬರಮಾಡಿದ್ದ ಕಾರಣ, ಆ ಸ್ಥಳಕ್ಕೆ “ತಬೇರ” ಎಂದು ಹೆಸರು ಆಯಿತು.
4 : ಇಸ್ರಯೇಲರೊಡನೆ ಪ್ರಯಾಣಮಾಡುತ್ತಿದ್ದ ಅನ್ಯಜನರು ಮಾಂಸಕ್ಕಾಗಿ ಹಂಬಲಿಸಿದರು. ಇಸ್ರಯೇಲರು ಕೂಡ, ಕಣ್ಣೀರಿಡುತ್ತಾ: “ಅಯ್ಯೋ, ನಮಗೆ ಮಾಂಸ ಕೊಡುವವರಾರು?
5 : ಈಜಿಪ್ಟ್ ದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ವಿೂನು, ಸೌತೆಕಾಯಿ, ಕರ್ಬೂಜ, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವೆಲ್ಲಾ ನೆನಪಿಗೆ ಬರುತ್ತವೆ.
6 : ಇಲ್ಲಿಯಾದರೋ ನಮ್ಮ ಜೀವ ಬತ್ತಿಹೋಯಿತು. ಈ ‘ಮನ್ನ’ವನ್ನು ಬಿಟ್ಟರೆ ನಮಗೆ ಇನ್ನೇನು ಗತಿಯಿಲ್ಲ,” ಎಂದು ನಿಷ್ಠುರವಾಗಿ ಮಾತನಾಡಿಕೊಳ್ಳುತ್ತಿದ್ದರು.
7 : ಆ ‘ಮನ್ನ’ ಕೊತ್ತುಂಬರಿ ಬೀಜದಂತಿತ್ತು; ಗುಗ್ಗುಲದಂತೆ ಕಾಣಿಸುತ್ತಿತ್ತು.
8 : ಜನರು ಹೊರಗೆ ಹೋಗಿ ಅದನ್ನು ಕೂಡಿಸಿಕೊಂಡು ಬಂದು ಬೀಸುವ ಕಲ್ಲುಗಳಿಂದ ಬೀಸಿ, ಇಲ್ಲವೆ ಒರಳಲ್ಲಿ ಕುಟ್ಟಿ, ಮಡಿಕೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡಿಕೊಳ್ಳುತ್ತಿದ್ದರು. ಅದರ ರುಚಿ ಎಣ್ಣೆಬೆರೆಸಿ ಮಾಡಿದ ತಿಂಡಿಯಂತೆ ಇರುತ್ತಿತ್ತು.
9 : ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುತ್ತಿದ್ದಾಗ ಅದರೊಂದಿಗೆ ‘ಮನ್ನ’ವೂ ಬೀಳುತ್ತಿತ್ತು.
10 : ಎಲ್ಲ ಕುಟುಂಬದವರು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತು ನಿಷ್ಠುರವಾಗಿ ಮಾತನಾಡಿಕೊಳ್ಳುತ್ತಿದ್ದದ್ದು ಮೋಶೆಗೆ ಕೇಳಿಸಿತು. ಆಗ ಸರ್ವೇಶ್ವರನ ಕೋಪ ಉಕ್ಕೇರಿತು; ಮೋಶೆಗೆ ಇದನ್ನು ಸಹಿಸಲಾಗಲಿಲ್ಲ.
11 : ಆತ ಸರ್ವೇಶ್ವರನಿಗೆ, “ನಿಮ್ಮ ದಾಸನಾದ ನನಗೇಕೆ ಈ ಜನರನ್ನು ಕರೆದೊಯ್ಯುವ ಭಾರವನ್ನು ಹಾಕಿದಿರಿ?
12 : ನಿಮ್ಮ ದಯೆಗೆ ನಾನು ಅಯೋಗ್ಯನಾದೆನೇ? ‘ಮೊಲೆ ಕೂಸನ್ನು ಎತ್ತಿಕೊಂಡು ಹೋಗುವವಳಂತೆ ಈ ಜನರನ್ನು ತೋಳತೆಕ್ಕೆಯಲ್ಲಿರಿಸಿ, ಅವರ ಪೂರ್ವಜರಿಗೆ ನಾನು ಪ್ರಮಾಣಮಾಡಿದ ನಾಡಿಗೆ ಒಯ್ಯಿ’ ಎಂದು ಹೇಳುತ್ತೀರಲ್ಲವೆ? ನಾನು ಇವರಿಗೆ ಹೆತ್ತ ತಾಯಿಯೋ?
13 : ಇವರು ನಿಷ್ಠುರವಾಗಿ ಮಾತಾಡುತ್ತಾ ನನ್ನ ಬಳಿಗೆ ಬಂದು, ‘ತಿನ್ನಲಿಕ್ಕೆ ನಮಗೆ ಮಾಂಸವನ್ನು ಕೊಡು’ ಎಂದು ಕೇಳುತ್ತಿದ್ದಾರಲ್ಲಾ’ ಇಷ್ಟು ಜನಕ್ಕೆ ಬೇಕಾದ ಮಾಂಸ ನನಗೆಲ್ಲಿ ದೊರಕೀತು.
14 : ಇಷ್ಟು ಜನರ ಭಾರವನ್ನು ನಾನೊಬ್ಬನೇ ಹೊರುವುದು ಅಸಾಧ್ಯ. ಅದು ನನ್ನ ಶಕ್ತಿಗೆ ವಿೂರಿದ ಕೆಲಸ.
15 : ನೀವು ಹೀಗೆ ಮಾಡುವುದಕ್ಕಿಂತಲೂ ನನ್ನನ್ನು ಈ ಕೂಡಲೆ ಕೊಂದು ಹಾಕಿದರೆ ಉಪಕಾರವಾದೀತು; ನನಗೆ ಆಗುತ್ತಿರುವ ಸಂಕಟವನ್ನು ಸಹಿಸಲಾರೆ,” ಎಂದನು.
16 : ಆಗ ಸರ್ವೇಶ್ವರ ಮೋಶೆಗೆ ಹೇಳಿದುದು: “ಇಸ್ರಯೇಲರಲ್ಲಿ ಹಿರಿಯರೆಂದೂ ಅಧಿಪತಿಗಳೆಂದೂ ನನಗೆ ತಿಳಿದಿರುವ ಎಪ್ಪತ್ತು ಮಂದಿಯನ್ನು ಕೂಟವಾಗಿ ಕರೆಸಿ, ದೇವದರ್ಶನದ ಗುಡಾರದ ಬಳಿಗೆ ಕರೆದುಕೊಂಡು ಬಾ. ಅವರು ಅಲ್ಲೇ ನಿನ್ನೊಡನೆ ನಿಂತಿರಲಿ.
17 : ನಾನು ಅಲ್ಲಿಗೆ ಇಳಿದು ಬಂದು ನಿನ್ನೊಡನೆ ಮಾತಾಡುವೆನು. ನಿನಗೆ ನಾನು ಅನುಗ್ರಹಿಸಿರುವ ಆತ್ಮಶಕ್ತಿಯಲ್ಲಿ ಕಿಂಚಿತ್ತನ್ನು ಅವರಿಗೂ ಹಂಚಿಕೊಡುವೆನು. ಆಗ ನೀನೊಬ್ಬನೇ ಈ ಜನರ ಜವಾಬ್ದಾರಿಯನ್ನು ವಹಿಸಬೇಕಾಗುವುದಿಲ್ಲ; ನಿನ್ನ ಸಂಗಡ ಇವರೂ ವಹಿಸಿಕೊಳ್ಳುವರು.
18 : “ಇದಲ್ಲದೆ ಇಸ್ರಯೇಲರಿಗೆ ಹೀಗೆಂದು ಹೇಳು: ‘ನಾಳೆಗೆ ನಿಮ್ಮನ್ನೇ ಶುದ್ಧೀಕರಿಸಿಕೊಳ್ಳಿ; ನಾಳೆ ನಿಮಗೆ ಮಾಂಸಾಹಾರ ದೊರಕುವುದು. ನೀವು ಸರ್ವೇಶ್ವರನಿಗೆ ಕೇಳಿಸುವಂತೆ - ನಮಗೆ ಮಾಂಸ ಕೊಡುವವರೇ ಇಲ್ಲ; ಈಜಿಪ್ಟ್ ದೇಶದಲ್ಲಿ ಎಷ್ಟೋ ಸುಖವಾಗಿದ್ದೆವು - ಎಂದು ನಿಷ್ಠೂರವಾಗಿ ಮಾತಾಡುತ್ತೀರಿ. ಆದ್ದರಿಂದ ಸರ್ವೇಶ್ವರನೇ ನಿಮಗೆ ಮಾಂಸವನ್ನು ತಿನ್ನಲಿಕ್ಕೆ ಕೊಡುವರು.
19 : ನಿಮ್ಮ ಮಧ್ಯೆಯೇ ಇರುವ ಸರ್ವೇಶ್ವರನನ್ನು ಧಿಕ್ಕರಿಸಿ, ‘ಅಯ್ಯೋ, ನಾವು ಈಜಿಪ್ಟನ್ನು ಬಿಟ್ಟುಬಂದು ಮೋಸವಾಯಿತು’ ಎಂದು ಅವರ ಮುಂದೆ ನಿಷ್ಠೂರವಾಗಿ ಮಾತಾಡಿದಿರಿ. ಆದ್ದರಿಂದ ನೀವು ಒಂದು ದಿನವಲ್ಲ, ಎರಡು ದಿನವಲ್ಲ, ಐದು ದಿನವಲ್ಲ, ಇಪ್ಪತ್ತು ದಿನವಲ್ಲ, ಒಂದು ತಿಂಗಳು ಪೂರ್ತಿ ತಿನ್ನುವಿರಿ.
20 : ಅದು ಓಕರಿಕೆಯಾಗಿ, ನಿಮ್ಮ ಮೂಗಿನಲ್ಲಿ, ಹೊರಟು ನಿಮಗೆ ಅಸಹ್ಯವಾಗುವ ತನಕ ಅದನ್ನು ತಿನ್ನುವಿರಿ’.”
21 : ಮೋಶೆ ಸರ್ವೇಶ್ವರನಿಗೆ, “ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು. ಆದರೂ ನೀವು, ‘ಇವರು ಇಡೀ ಒಂದು ತಿಂಗಳು ತಿನ್ನುವಷ್ಟು ಮಾಂಸವನ್ನು ಕೊಡುತ್ತೇನೆ’ ಎಂದು ಹೇಳಿದ್ದೀರಿ.
22 : ಅವರಿಗೆ ಬೇಕಾದಷ್ಟು ಸಿಗುವಂತೆ ಆಡುಕುರಿಗಳನ್ನೂ ದನಗಳನ್ನೂ ಕೊಯ್ಯಬೇಕೆನ್ನುತ್ತೀರೋ? ಇಲ್ಲವೆ ಸಮುದ್ರದಲ್ಲಿರುವ ವಿೂನುಗಳನ್ನೆಲ್ಲಾ ಹಿಡಿದುಕೊಳ್ಳ ಬೇಕೆನ್ನುತ್ತೀರೋ?” ಎಂದು ಹೇಳಿದನು.
23 : ಸರ್ವೇಶ್ವರ ಅವನಿಗೆ, “ಸರ್ವೇಶ್ವರನ ಕೈ ಮೋಟುಗೈಯೋ? ನನ್ನ ಮಾತು ನೆರವೇರುತ್ತದೋ ಇಲ್ಲವೋ ನೀನೇ ನೋಡುವೆ,” ಎಂದರು.
24 : ಮೋಶೆ ಹೊರಟುಹೋಗಿ ಸರ್ವೇಶ್ವರನ ಮಾತುಗಳನ್ನು ಜನರಿಗೆ ತಿಳಿಸಿದನು. ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನದ ಗುಡಾರದ ಸುತ್ತಲೂ ನಿಲ್ಲಿಸಿದನು.
25 : ಆಗ ಸರ್ವೇಶ್ವರ ಮೇಘದಲ್ಲಿ ಇಳಿದು ಬಂದು ಅವನೊಡನೆ ಮಾತಾಡಿ ಅವನಿಗೆ ಅನುಗ್ರಹಿಸಲಾಗಿದ್ದ ಆತ್ಮಶಕ್ತಿಯಲ್ಲಿ ಕಿಂಚಿತ್ತನ್ನು ಆ ಎಪ್ಪತ್ತು ಮಂದಿ ಹಿರಿಯರಿಗೂ ಹಂಚಿದರು. ಆ ಶಕ್ತಿ ಅವರ ಮೇಲೆ ಇಳಿದುಬಂದಾಗ ಅವರು ಪರವಶರಾಗಿ ಪ್ರವಾದಿಸಿದರು. ಅಂಥ ಅನುಭವ ಅವರಿಗೆ ಮತ್ತೆ ಬರಲಿಲ್ಲ.
26 : ಎಲ್ದಾದ್ ಮತ್ತು ಮೇದಾದ್ ಎಂಬ ಹಿರಿಯರಿಬ್ಬರು ಪಾಳೆಯದೊಳಗೆ ಉಳಿದುಕೊಂಡಿದ್ದರು. ಅವರ ಹೆಸರು ಲಿಖಿತವಾಗಿದ್ದರೂ ಅವರು ದೇವದರ್ಶನದ ಗುಡಾರಕ್ಕೆ ಹೊರಟು ಬಂದಿರಲಿಲ್ಲ. ಆ ಆತ್ಮಶಕ್ತಿ ಅವರ ಮೇಲೂ ಇಳಿದುಬಂದುದರಿಂದ ಅವರು ಕೂಡ ಪಾಳೆಯದಲ್ಲೇ ಪರವಶರಾಗಿ ಪ್ರವಾದಿಸಿದರು.
27 : ಆಗ ಒಬ್ಬ ಯುವಕ ಮೋಶೆಯ ಬಳಿಗೆ ಓಡಿಬಂದು, “ಎಲ್ದಾದ್ ಮತ್ತು ಮೇದಾದರು ಪಾಳೆಯದಲ್ಲೇ ಪರವಶರಾಗಿ ಪ್ರವಾದಿಸುತ್ತಿದ್ದಾರೆ,” ಎಂದು ತಿಳಿಸಿದನು.
28 : ಚಿಕ್ಕಂದಿನಿಂದ ಮೋಶೆಗೆ ಶಿಷ್ಯನಾಗಿದ್ದ ಹಾಗೂ ನೂನನ ಮಗನಾಗಿದ್ದ ಯೆಹೋಶುವನು ಮೋಶೆಗೆ, “ಗುರುವೇ, ಅವರಿಗೆ ಅದು ಬೇಡವೆನ್ನಬೇಕು” ಎಂದು ವಿನಂತಿಸಿದನು.
29 : ಅದಕ್ಕೆ ಮೋಶೆ, “ನನ್ನ ಗೌರವ ಕಾಪಾಡಲು ನಿನಗೇಕೆ ಅಸೂಯೆ? ಸರ್ವೇಶ್ವರನ ಅನುಗ್ರಹದಿಂದ ಅವರ ಜನರೆಲ್ಲರೂ ಆತ್ಮಶಕ್ತಿಯನ್ನು ಹೊಂದಿ ಪ್ರವಾದಿಸುವವರಾದರೆ ಎಷ್ಟೋ ಒಳ್ಳೆಯದು!” ಎಂದನು.
30 : ತರುವಾಯ ಮೋಶೆ ಮತ್ತು ಇಸ್ರಯೇಲರ ಹಿರಿಯರು ಪಾಳೆಯಕ್ಕೆ ಹಿಂದಿರುಗಿದರು.
31 : ಸರ್ವೇಶ್ವರನಿಂದ ಕಳಿಸಲಾದ ಗಾಳಿಯೊಂದು ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನು ಹೊಡೆದುಕೊಂಡು ಬಂದಿತು. ಆ ಹಕ್ಕಿಗಳು ಪಾಳೆಯದ ಸುತ್ತಲೂ ಒಂದು ದಿನದ ಪ್ರಯಾಣದಷ್ಟು ದೂರದವರೆಗೆ ಭೂಮಿಗಿಂತ ಎರಡು ಮೊಳ ಎತ್ತರದಲ್ಲಿ ಹಾರುತ್ತಾ ಬಂದವು.
32 : ಇಸ್ರಯೇಲರು ಆ ದಿನ ಹಗಲಿರುಳೂ ಮರುದಿನ ಹಗಲಲ್ಲೂ ಆ ಲಾವಕ್ಕಿಗಳನ್ನು ಕೂಡಿಸಿಕೊಂಡರು. ಕಡಿಮೆ ಕೂಡಿಸಿಕೊಂಡವರು ಕೂಡ ಸಾವಿರ ಕಿಲೋಗ್ರಾಮಿನಷ್ಟು ಕೂಡಿಸಿಕೊಂಡರು. ಅವುಗಳನ್ನು ಪಾಳೆಯದ ಸುತ್ತಲೂ ಹರವಿ ಒಣಗಿಸಿಕೊಂಡರು.
33 : ಅವರು ಆ ಮಾಂಸವನ್ನು ಕಚ್ಚಿ, ಅಗಿದು, ತಿಂದು ಮುಗಿಸುವುದರೊಳಗೆ ಸರ್ವೇಶ್ವರನ ಕೋಪ ಅವರ ವಿರುದ್ಧ ಉದ್ರೇಕಗೊಂಡಿತು. ಬಹಳಷ್ಟು ಜನ ಘೋರವ್ಯಾಧಿಗೆ ತುತ್ತಾಗಿ ಸತ್ತರು.
34 : ಆ ಸ್ಥಳಕ್ಕೆ “ಕಿಬ್ರೋತ್ ಹತಾವಾ” ಎಂದು ಹೆಸರಾಯಿತು. ಏಕೆಂದರೆ ಅತ್ಯಾಶೆಪಟ್ಟವರು ಅಲ್ಲಿ ಸಮಾಧಿಯಾದರು.
35 : ಇಸ್ರಯೇಲರು ಕಿಬ್ರೋತ್ ಹತಾವಾದಿಂದ ಹೊರಟು ಹಚೇರೋತಿಗೆ ಬಂದು ಅಲ್ಲಿ ತಂಗಿದರು. ಮಿರ್ಯಾಮಳಿಗೆ ತೊನ್ನು ಶಿಕ್ಷೆ

· © 2017 kannadacatholicbible.org Privacy Policy