1 : ಸರ್ವೇಶ್ವರಸ್ವಾಮಿ ಮೋಶೆಗೆ:
2 : “ನೀನು ಆರೋನನನ್ನೂ ಅವನ ಗಂಡು ಮಕ್ಕಳನ್ನೂ ಕರೆದುಕೊಂಡು ಅವರಿಗೆ ಬೇಕಾದ ದೀಕ್ಷಾವಸ್ತ್ರಗಳನ್ನು, ಅಭಿಷೇಕ ತೈಲವನ್ನು, ದೋಷಪರಿಹಾರಕ್ಕಾಗಿ ಸಮರ್ಪಿಸಬೇಕಾದ ಹೋರಿಯನ್ನು, ಎರಡು ಟಗರುಗಳನ್ನು ಹಾಗು ಹುಳಿಯಿಲ್ಲದ ಭಕ್ಷ್ಯಗಳು ತುಂಬಿರುವ ಪುಟ್ಟಿಯನ್ನು ತೆಗೆದುಕೊಂಡು ಬಾ;
3 : ಜನಸಮೂಹವನ್ನೆಲ್ಲ ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಕರೆಯಿಸು,” ಎಂದು ಆಜ್ಞೆಮಾಡಿದರು.
4 : ಸರ್ವೇಶ್ವರ ಹೇಳಿದಂತೆಯೇ ಮೋಶೆ ಮಾಡಿದನು. ಜನರೆಲ್ಲರು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಕೂಡಿಬಂದರು.
6 : ಬಳಿಕ ಮೋಶೆ ಆರೋನನನ್ನೂ ಅವನ ಪುತ್ರರನ್ನೂ ಹತ್ತಿರಕ್ಕೆ ಬರಮಾಡಿಕೊಂಡು ಸ್ನಾನ ಮಾಡಿಸಿದನು.
7 : ಆಮೇಲೆ ಸರ್ವೇಶ್ವರ ಆಜ್ಞಾಪಿಸಿದಂತೆಯೇ ಆರೋನನಿಗೆ ನಿಲುವಂಗಿಯನ್ನು ತೊಡಿಸಿ, ನಡುಕಟ್ಟನ್ನು ಸುತ್ತಿಸಿ, ಅದರಿಂದ ಅವನ ಕವಚವನ್ನು ಕಟ್ಟಿ.
8 : ವೃಕ್ಷಪದಕವನ್ನು ಅವನಿಗೆ ಬಿಗಿಸಿ, ಅದರ ಚೀಲದೊಳಗೆ ಊರೀಮ್ ಹಾಗು ತುವ್ಮಿೂಮ್ ಎಂಬ ದಾಳಗಳನ್ನು ಹಾಕಿ
9 : ಅವನ ತಲೆಗೆ ಸಿರಿಪೇಟವನ್ನು ತೊಡಿಸಿ, ಅದರ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನು ಕಟ್ಟಿದನು; ಅದು ಅವನಿಗೆ ಪವಿತ್ರ ಕಿರೀಟದಂತಿತ್ತು.
10 : ಅನಂತರ ಮೋಶೆ ಅಭಿಷೇಕದ ಎಣ್ಣೆಯನ್ನು ತೆಗೆದುಕೊಂಡು ದೇವದರ್ಶನದ ಗುಡಾರವನ್ನು ಹಾಗು ಅದರಲ್ಲಿದ್ದ ಎಲ್ಲವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
11 : ಬಲಿಪೀಠದ ಮೇಲೆ ಏಳು ಸಾರಿ ಆ ಎಣ್ಣೆಯನ್ನು ಚಿಮುಕಿಸಿ ಬಲಿಪೀಠವನ್ನು, ಅದರ ಎಲ್ಲ ಉಪಕರಣಗಳನ್ನು ಹಾಗು ನೀರಿನ ತೊಟ್ಟಿಯನ್ನು ಅದರ ಪೀಠವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
12 : ಆ ಎಣ್ಣೆಯಲ್ಲಿ ಸ್ವಲ್ಪವನ್ನು ಆರೋನನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
13 : ಅನಂತರ ಸರ್ವೇಶ್ವರ ಆಜ್ಞಾಪಿಸಿದಂತೆ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಅವರಿಗೆ ನಿಲುವಂಗಿಗಳನ್ನು ತೊಡಿಸಿ, ನಡುಕಟ್ಟುಗಳನ್ನು ಸುತ್ತಿ, ಪೇಟಗಳನ್ನು ತೊಡಿಸಿದನು.
14 : ಅನಂತರ ಅವನು ದೋಷಪರಿಹಾರಾರ್ಥವಾದ ಹೋರಿಯನ್ನು ತರಿಸಿದನು. ಆರೋನನು ಮತ್ತು ಅವನ ಮಕ್ಕಳು ತಮ್ಮ ಕೈಗಳನ್ನು ಅದರ ತಲೆಯಮೇಲೆ ಚಾಚಿದರು.
15 : ಆ ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಬಲಿಪೀಠದ ಕೊಂಬುಗಳಿಗೆ ಸುತ್ತಲೂ ಹಚ್ಚಿ ಬಲಿಪೀಠವನ್ನು ಪ್ರತಿಷ್ಠಿಸಿದನು. ಮಿಕ್ಕ ರಕ್ತವನ್ನು ಬಲಿಪೀಠದ ಬುಡದಲ್ಲಿ ಸುರಿದು ಬಿಟ್ಟನು. ಹೀಗೆ ಬಲಿಪೀಠದ ಬಗ್ಗೆ ದೋಷ ಪರಿಹಾರಕ ಆಚಾರವನ್ನು ನಡೆಸಿ ಅದನ್ನು ಪವಿತ್ರೀಕರಿಸಿ ಪ್ರತಿಷ್ಠಾಪಿಸಿದನು.
16 : ಆ ಹೋರಿಯ ಕರುಳುಗಳ ಸುತ್ತಲಿರುವ ಎಲ್ಲ ಕೊಬ್ಬನ್ನು, ಕಾಳಿಜದ ಹತ್ತಿರವಿರುವ ಕೊಬ್ಬನ್ನು, ಮೂತ್ರ ಪಿಂಡಗಳನ್ನು ಹಾಗು ಅವುಗಳ ಮೇಲಿರುವ ಕೊಬ್ಬನ್ನು ಮೋಶೆ ತೆಗೆದುಕೊಂಡು ಬಲಿಪೀಠದ ಮೇಲೆ ಹೋಮಮಾಡಿದನು
17 : ಸರ್ವೇಶ್ವರನ ಆಜ್ಞಾನುಸಾರ ಆ ಪ್ರಾಣಿಯ ಮಿಕ್ಕ ಭಾಗಗಳನ್ನು, ಅಂದರೆ ಅದರ ಚರ್ಮ, ಮಾಂಸ ಹಾಗು ಕಲ್ಮಷಗಳನ್ನು ಪಾಳೆಯದ ಹೊರಗೆ ಬೆಂಕಿಯಿಂದ ಸುಡಿಸಿಬಿಟ್ಟನು.
18 : ತರುವಾಯ ಅವನು ದಹನ ಬಲಿಗಾಗಿ ಟಗರನ್ನು ತರಿಸಿದನು. ಆರೋನನು ಮತ್ತು ಅವನ ಮಕ್ಕಳು ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಚಾಚಿದರು.
19 : ಅದನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಿದನು.
20 : ಆ ಟಗರನ್ನು ತುಂಡುತುಂಡಾಗಿ ಕಡಿದಮೇಲೆ ಮೋಶೆ ಅದರ ತಲೆಯನ್ನೂ ಮಾಂಸ ಖಂಡಗಳನ್ನೂ ಕೊಬ್ಬನ್ನೂ ಹೋಮಮಾಡಿದನು.
21 : ಅದರ ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಿಸಿ ಆ ಟಗರನ್ನು ಬಲಿಪೀಠದ ಮೇಲೆ ಪೂರ್ತಿಯಾಗಿ ಹೋಮ ಮಾಡಿಬಿಟ್ಟನು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಅದು ದಹನಬಲಿ, ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿಯಾಯಿತು.
22 : ಇದಾದ ಮೇಲೆ ಯಾಜಕಾಭಿಷೇಕಕ್ಕಾಗಿ ಸಮರ್ಪಿಸಬೇಕಾದ ಎರಡನೆಯ ಟಗರನ್ನು ಮೋಶೆ ತರಿಸಿದನು. ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಚಾಚಿದರು.
23 : ಅದನ್ನು ವಧಿಸಿದ ನಂತರ ಮೋಶೆ ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು.
24 : ಬಳಿಕ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು ಆ ರಕ್ತದಲ್ಲಿ ಕಿಂಚಿತ್ತನ್ನು ಅವರವರ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಹಾಗು ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು. ಉಳಿದ ರಕ್ತವನ್ನು ಬಲಿಪೀಠದ ಸುತ್ತಲು ಚಿಮುಕಿಸಿದನು.
25 : ಹಾಗೆಯೆ ಮೋಶೆ ಆ ಟಗರಿನ ಕೊಬ್ಬನ್ನು, ಅಂದರೆ ಬಾಲದ ಕೊಬ್ಬು, ಕರುಳುಗಳ ಸುತ್ತಲಿನ ಕೊಬ್ಬು, ಕಾಳಿಜದ ಹತ್ತಿರವಿರುವ ಕೊಬ್ಬು, ಮೂತ್ರಪಿಂಡಗಳು, ಅವುಗಳ ಮೇಲಿರುವ ಕೊಬ್ಬು, ಇವುಗಳನ್ನು ಮತ್ತು ಬಲದೊಡೆಯನ್ನು ತೆಗೆದುಕೊಂಡನು.
26 : ಸರ್ವೇಶ್ವರನ ಸನ್ನಿಧಿಯಲ್ಲಿ ಬುಟ್ಟಿಯಲ್ಲಿಟ್ಟಿದ್ದ ಹುಳಿಯಿಲ್ಲದ ತಿಂಡಿ ಪದಾರ್ಥಗಳಲ್ಲಿ ಒಂದು ರೊಟ್ಟಿಯನ್ನು, ಎಣ್ಣೆ ಮಿಶ್ರವಾದ ಒಂದು ಹೋಳಿಗೆಯನ್ನು ಹಾಗು ಒಂದು ಕಡುಬನ್ನು ತೆಗೆದುಕೊಂಡು ಆ ಕೊಬ್ಬಿನ ಮತ್ತು ಬಲದೊಡೆಯ ಮೇಲೆ ಇಟ್ಟನು.
27 : ಇವೆಲ್ಲವುಗಳನ್ನು ಆರೋನನ ಮತ್ತು ಅವನ ಮಕ್ಕಳ ಕೈಗಳಿಗೆ ಕೊಟ್ಟು ನೈವೇದ್ಯವೆಂದು ಸೂಚಿಸುವುದಕ್ಕಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಿಸಿದನು.
28 : ಆಮೇಲೆ ಮೋಶೆ ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು ಬಲಿಪೀಠದಲ್ಲಿ ದಹನಬಲಿದ್ರವ್ಯದ ಮೇಲಿಟ್ಟು ಹೋಮಮಾಡಿದನು. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಯಾಜಕಾಭಿಷೇಕ ಬಲಿಯಾಗಿತ್ತು.
29 : ಮೋಶೆ ಬಲಿಪ್ರಾಣಿಯ ಎದೇ ಭಾಗವನ್ನು ತೆಗೆದುಕೊಂಡು ನೈವೇದ್ಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಿದನು. ಸರ್ವೇಶ್ವರನ ಆಜ್ಞಾನುಸಾರ ಆ ಯಾಜಕಾಭಿಷೇಕ ಬಲಿಯ ಟಗರಿನ ಎದೆಯ ಭಾಗ ಮೋಶೆಗೆ ಸಲ್ಲತಕ್ಕದಾಗಿತ್ತು.
30 : ಬಳಿಕ ಮೋಶೆ ಅಭಿಷೇಕ ಎಣ್ಣೆಯಿಂದಲೂ ಬಲಿಪೀಠದ ಮೇಲಿದ್ದ ರಕ್ತದಿಂದಲೂ ಸ್ವಲ್ಪ ತೆಗೆದುಕೊಂಡು ಆರೋನನ ಮತ್ತು ಅವನ ವಸ್ತ್ರಗಳ ಮೇಲೂ ಅವನ ಮಕ್ಕಳ ಹಾಗು ಅವರ ವಸ್ತ್ರಗಳ ಮೇಲೂ ಚಿಮುಕಿಸಿದನು. ಹೀಗೆ ಆರೋನನನ್ನು ಅವನ ಮಕ್ಕಳನ್ನೂ ಅವರ ವಸ್ತ್ರಗಳನ್ನೂ ಪ್ರತಿಷ್ಠಿಸಿದನು.
31 : ಆರೋನನಿಗೂ ಅವನ ಮಕ್ಕಳಿಗೂ ಮೋಶೆ ಹೀಗೆಂದನು: “ಮಾಂಸವನ್ನು ನೀವು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಬೇಯಿಸಬೇಕು. ಅದನ್ನೂ ಯಾಜಕಾಭಿಷೇಕಕ್ಕಾಗಿ ಪುಟ್ಟಿಯಲ್ಲಿ ಇಟ್ಟಿರುವ ರೊಟ್ಟಿಗಳನ್ನೂ ನೀವು ಅಲ್ಲೆ ಊಟ ಮಾಡಬೇಕು. ಇದು ಸರ್ವೇಶ್ವರನು ನನಗಿತ್ತ ಆಜ್ಞೆ.
32 : ಆ ಮಾಂಸದಲ್ಲಿ ಹಾಗು ರೊಟ್ಟಿಗಳಲ್ಲಿ ಮಿಕ್ಕದ್ದನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು.
33 : ಇದಲ್ಲದೆ, ಈ ನಮ್ಮ ಯಾಜಕ ಸೇವಾವೃತ್ತಿಯ ದೀಕ್ಷೆಯನ್ನು ಪೂರೈಸುವುದಕ್ಕೆ ಏಳು ದಿವಸ ಹಿಡಿಯುವುದರಿಂದ ಆವರೆಗೂ ನೀವು ದೇವದರ್ಶನದ ಗುಡಾರದ ಬಾಗಿಲಿನ ಆಚೆಗೆ ಹೋಗಬಾರದು.
34 : ನಿಮ್ಮ ದೋಷಪರಿಹಾರಕ್ಕಾಗಿ ಈ ದಿನ ಏನೇನು ನಡೆಯಿತೋ ಅದನ್ನು ಏಳು ದಿನವೂ ನಡೆಸಬೇಕೆಂಬುದು ಸರ್ವೇಶ್ವರನ ಆಜ್ಞೆ.
35 : ಆದುದರಿಂದ ನೀವು ಆ ಆಜ್ಞೆಯ ಮೇರೆಗೆ ಏಳು ದಿನಗಳೂ ಹಗಲಿರುಳು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಇರಬೇಕು; ಇಲ್ಲದಿದ್ದರೆ ಸಾಯುವಿರಿ. ಇದು ಸರ್ವೇಶ್ವರನ ಆಜ್ಞೆ.
36 : ಸರ್ವೇಶ್ವರ ಮೋಶೆಯ ಮುಖಾಂತರ ಆಜ್ಞಾಪಿಸಿದ್ದನ್ನೆಲ್ಲಾ ಆರೋನ ಮತ್ತು ಅವನ ಮಕ್ಕಳು ಮಾಡಿದರು.