Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯಾಜಕಕಾಂಡ


1 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆಂದರು:
2 : “ನಿಮ್ಮಲ್ಲಿ ಯಾರಾದರು ಮತ್ತೊಬ್ಬನಿಂದ ತಮ್ಮ ವಶಕ್ಕೆ ಕೊಡಲಾದ ವಸ್ತುವಿನ ವಿಷಯದಲ್ಲಾಗಲಿ, ತಮ್ಮ ಬಳಿಯಲ್ಲಿ ಇಡಲಾದ ಅಡವಿನ ವಿಷಯದಲ್ಲಾಗಲಿ, ತಾನು ಮಾಡಿದ ಕಳವಿನ ವಿಷಯದಲ್ಲಾಗಲಿ, ಸುಳ್ಳಾಡಿಯೋ, ಮತ್ತೊಬ್ಬನನ್ನು ಮೋಸಗೊಳಿಸಿಯೋ
3 : ಮತ್ತೊಬ್ಬನು ಕಳೆದುಕೊಂಡದ್ದನ್ನು ತಾವು ಕಂಡು ಬೊಂಕಿಯೋ, ಸುಳ್ಳಾಣೆಯಿಟ್ಟೋ ಅವುಗಳನ್ನು ಹಿಂದಿರುಗಿಸದೆ ತಮ್ಮಲ್ಲೇ ಇಟ್ಟುಕೊಂಡರೆ, ಇಂಥ ವಿಷಯಗಳಲ್ಲಿ ಪಾಪಮಾಡಿ, ಸರ್ವೇಶ್ವರನಿಗೆ ದ್ರೋಹಿಗಳಾಗಿ ದೋಷಕ್ಕೆ ಒಳಗಾಗುತ್ತಾರೆ.
4 : ಅಂಥವರು ಆಯಾ ವಸ್ತುಗಳನ್ನು, ಅಂದರೆ ಕದ್ದದ್ದನ್ನು, ಮೋಸದಿಂದ ಪಡೆದದ್ದನ್ನು, ತಮ್ಮ ವಶಕ್ಕೆ ತೆಗೆದುಕೊಂಡದ್ದನ್ನು ಪೂರ್ತಿಯಾಗಿ ಹಿಂದಕ್ಕೆ ತಂದುಕೊಡಬೇಕು.
5 : ಅದೂ ಅಲ್ಲದೆ, ಐದನೆಯ ಒಂದು ಪಾಲನ್ನು ಹೆಚ್ಚಾಗಿ ಸೇರಿಸಿಕೊಡಬೇಕು. ಅವರು ಪರಿಹಾರ ಮಾಡುವ ದಿನದಲ್ಲೆ ಅದನ್ನು ಅದರ ನಿಜವಾದ ಒಡೆಯನಿಗೆ ಹಿಂದಕ್ಕೆ ಕೊಡಬೇಕು.
6 : ಅವರು ಪರಿಹಾರಕ್ಕಾಗಿ, ತಮ್ಮ ಹಿಂಡಿನಿಂದ ಕಳಂಕರಹಿತವಾದ ಒಂದು ಟಗರನ್ನು ಅಥವಾ ಅದಕ್ಕೆ ಸರಿಸಮಾನವಾದುದ್ದನ್ನು ತಂದು ಯಾಜಕನಿಗೆ ಒಪ್ಪಿಸಬೇಕು.
7 : ಯಾಜಕನು ಅವರಿಗೋಸ್ಕರ ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವರು ಯಾವ ವಿಷಯದಲ್ಲಿ ಅಪರಾಧಕ್ಕೆ ಒಳಗಾದರೋ ಆ ವಿಷಯದಲ್ಲಿ ಅವರಿಗೆ ಕ್ಷಮೆ ದೊರಕುವುದು.”
8 : ಮೋಶೆಗೆ ಸರ್ವೇಶ್ವರ ಹೀಗೆಂದರು:
9 : “ನೀನು ಆರೋನನಿಗೂ ಅವನ ವಂಶದವರಿಗೂ ಕೆಳಕಂಡ ದಹನಬಲಿಯ ಈ ನಿಯಮಗಳನ್ನು ಆಜ್ಞಾಪಿಸು: ದಹನಬಲಿ ದ್ರವ್ಯವು ರಾತ್ರಿಯೆಲ್ಲಾ, ಮರುದಿನದ ಬೆಳಗಿನವರೆಗೂ ಬಲಿಪೀಠದ ಮೇಲೆ ಉರಿಯುತ್ತಿರಬೇಕು. ಅದರಿಂದಲೇ ಬಲಿಪೀಠದ ಮೇಲಿನ ಬೆಂಕಿ ಹೊತ್ತಿ ಉರಿಯುತ್ತಿರಬೇಕು.
10 : ಯಾಜಕನು ನಾರುಮಡಿಯ ನಿಲುವಂಗಿಯನ್ನು ಧರಿಸಿಕೊಂಡು, ಮಾನರಕ್ಷಕವಾದ ನಾರುಮಡಿ ಚಡ್ಡಿಯನ್ನು ಹಾಕಿಕೊಂಡು, ಬಲಿಪೀಠದ ಮೇಲಿನ ದಹನಬಲಿ ದ್ರವ್ಯದ ಬೂದಿಯನ್ನು ಎತ್ತಿ ವೇದಿಕೆಯ ಬಳಿ ಇಡಬೇಕು.
11 : ಅನಂತರ ತನ್ನ ವಸ್ತ್ರಗಳನ್ನು ಬದಲಾಯಿಸಿಕೊಂಡು ಆ ಬೂದಿಯನ್ನು ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
12 : ಬಲಿಪೀಠದ ಮೇಲಿನ ಬೆಂಕಿ ದಹನಬಲಿ ದ್ರವ್ಯದಿಂದ ಉರಿಯುತ್ತಲೇ ಇರಬೇಕು. ಅದು ಆರಿಹೋಗಬಾರದು. ಪ್ರತೀದಿನ ಬೆಳಿಗ್ಗೆ ಯಾಜಕನು ಕಟ್ಟಿಗೆಯನ್ನು ತಂದುಹಾಕಿ ಉರಿಸಿ, ಅದರ ಮೇಲೆ ದಹನದ್ರವ್ಯವನ್ನು ಕ್ರಮಪಡಿಸಿ, ಶಾಂತಿಸಮಾಧಾನ ಬಲಿಪ್ರಾಣಿಗಳ ಕೊಬ್ಬನ್ನು ಅದರ ಮೇಲೆ ಹೋಮಮಾಡಬೇಕು.
13 : ಬಲಿಪೀಠದ ಮೇಲೆ ಬೆಂಕಿ ಯಾವಾಗಲೂ ಉರಿಯುತ್ತಿರಬೇಕು, ಆರಿಹೋಗಬಾರದು.
14 : “ಧಾನ್ಯನೈವೇದ್ಯದ ಬಗ್ಗೆ ನಿಯಮಗಳಿವು: ಆರೋನನ ವಂಶಜರು ನೈವೇದ್ಯದ್ರವ್ಯವನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಬಲಿಪೀಠದ ಎದುರಿಗೇ ಸಮರ್ಪಿಸಬೇಕು.
15 : ಅವರಲ್ಲಿ ಒಬ್ಬನು ನೈವೇದ್ಯವಾದುದನ್ನು ಸೂಚಿಸುವುದಕ್ಕಾಗಿ ಎಣ್ಣೆಹೊಯ್ದ ಹಿಟ್ಟಿನಲ್ಲಿ ಒಂದು ಹಿಡಿಯನ್ನೂ ಅದರ ಮೇಲಿರುವ ಸಾಂಬ್ರಾಣಿಯೆಲ್ಲವನ್ನೂ ತೆಗೆದುಗೊಂಡು ಬಲಿಪೀಠದ ಮೇಲೆ ಹೋಮಮಾಡಿ ಸರ್ವೇಶ್ವರನಿಗೆ ಸುವಾಸನೆಯನ್ನುಂಟುಮಾಡಬೇಕು.
16 : ಮಿಕ್ಕದ್ದನ್ನು ಆರೋನನೂ ಅವನ ವಂಶಜರೂ ತಿನ್ನಬಹುದು. ಅವರು ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿಕೊಂಡು ಪವಿತ್ರಸ್ಥಳದೊಳಗೆ, ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ತಿನ್ನಬೇಕು.
17 : ಸರ್ವೇಶ್ವರನಿಗೆ ಹೋಮರೂಪವಾಗಿ ಸಮರ್ಪಿಸಿದ ದ್ರವ್ಯಗಳಲ್ಲಿ ಅದನ್ನು ಅವರ ಪಾಲಿಗೆ ಬಿಡಲಾಗಿದೆ. ಅದಕ್ಕೆ ಹುಳಿಕಲಸಿ ಸುಡಕೂಡದು. ದೋಷಪರಿಹಾರಕ ಬಲಿಯಂತೆ ಹಾಗು ಪ್ರಾಯಶ್ಚಿತ್ತ ಬಲಿದ್ರವ್ಯದಂತೆ ಅದು ಸಹ ಮಹಾಪರಿಶುದ್ಧವಾದುದು.
18 : ಆರೋನನ ವಂಶಜರಾದ ಗಂಡಸರೆಲ್ಲರು ಅದನ್ನು ತಿನ್ನಬಹುದು. ಸರ್ವೇಶ್ವರನಿಗೆ ಹೋಮವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಅದು ಶಾಶ್ವತ ನಿಯಮವಾಗಿ ಆರೋನನ ಸಂತತಿಗೆ ಸಲ್ಲತಕ್ಕದ್ದು. ಆ ದ್ರವ್ಯಗಳಿಗೆ ಸೋಂಕಿದೆಲ್ಲವೂ ಪರಿಶುದ್ಧವಾಗುವುದು.
19 : ಮೋಶೆಗೆ ಸರ್ವೇಶ್ವರ ಹೀಗೆಂದು ತಿಳಿಸಿದರು:
20 : “ಆರೋನನಿಗೆ ಅಭಿಷೇಕವಾದ ದಿನ ಮೊದಲ್ಗೊಂಡು ಅವನೂ ಅವನ ವಂಶಜರೂ ಸರ್ವೇಶ್ವರನಿಗೆ ಸಮರ್ಪಿಸಬೇಕಾದ ಧಾನ್ಯ ನೈವೇದ್ಯದ ಕ್ರಮ ಇದು: ಅವರು ದಿನನಿತ್ಯವೂ ಮೂರು ಸೇರು ಗೋದಿಹಿಟ್ಟನ್ನು, ಬೆಳಿಗ್ಗೆ ಅರ್ಧ, ಸಂಜೆ ಅರ್ಧ, ಸಮರ್ಪಿಸಬೇಕು.
21 : ಕಬ್ಬಿಣದ ಹೆಂಚಿನ ಮೇಲೆ ಎಣ್ಣೆ ಸವರಿ ಅದನ್ನು ಸುಡಬೇಕು. ಅದನ್ನು ತರುವಾಗ ಅದು ಎಣ್ಣೆಯಿಂದ ನೆನೆದೇ ಇರಬೇಕು. ಅದನ್ನು ಭಾಗಭಾಗವಾಗಿ ಮಾಡಿ ಸರ್ವೇಶ್ವರನಿಗೆ ಸುವಾಸನೆಯುಳ್ಳ ನೈವೇದ್ಯವನ್ನಾಗಿ ಸಮರ್ಪಿಸಬೇಕು.
22 : ಆರೋನನ ಸಂತತಿಯವರಲ್ಲಿ ಯಾವನು ಅವನ ತರುವಾಯ ಅಭಿಷಿಕ್ತ ಯಾಜಕಪಟ್ಟಕ್ಕೆ ಬರುತ್ತಾನೋ ಅವನೇ ಅದನ್ನು ಸಮರ್ಪಿಸಬೇಕು. ಇದು ಶಾಶ್ವತ ನಿಯಮ.
23 : “ಯಾಜಕರು ತಮಗೋಸ್ಕರ ಸಮರ್ಪಿಸುವ ನೈವೇದ್ಯ ದ್ರವ್ಯಗಳನ್ನು ನಿಶ್ಯೇಷವಾಗಿ ಹೋಮಮಾಡಿಬಿಡಬೇಕು; ಅದನ್ನು ತಿನ್ನಲೇಕೂಡದು.”
24 : ಮೋಶೆಗೆ ಸರ್ವೇಶ್ವರ ಹೀಗೆಂದರು:
25 : “ನೀನು ಆರೋನನಿಗೂ ಅವನ ವಂಶಜರಿಗೂ ದೋಷಪರಿಹಾರಕ ಬಲಿನಿಯಮಗಳ ಬಗ್ಗೆ ಹೀಗೆ ಆಜ್ಞಾಪಿಸು: ದಹನ ಬಲಿಪ್ರಾಣಿಯನ್ನು ವಧಿಸುವ ಸ್ಥಳದಲ್ಲೇ ದೋಷಪರಿಹಾರಕ ಬಲಿಪ್ರಾಣಿಗಳನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ವಧಿಸಬೇಕು.
26 : ಅದು ಮಹಾಪರಿಶುದ್ಧವಾದ್ದರಿಂದ ಸಮರ್ಪಿಸುವ ಯಾಜಕನು ಅದರ ಮಾಂಸವನ್ನು ಊಟಮಾಡಬೇಕು. ಅದನ್ನು ಪವಿತ್ರ ಸ್ಥಳದೊಳಗೆ, ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ಊಟಮಾಡಬೇಕು.
27 : ಆ ಪ್ರಾಣಿಯ ಮಾಂಸಕ್ಕೆ ಸೋಂಕಿದೆಲ್ಲವೂ ಪರಿಶುದ್ಧವಾಗುವುದು. ಅದರ ರಕ್ತದಲ್ಲಿ ಸ್ವಲ್ಪವಾದರೂ ಬಟ್ಟೆಯ ಮೇಲೆ ಬಿದ್ದರೆ ಆ ಬಟ್ಟೆಯನ್ನು ಪವಿತ್ರ ಸ್ಥಳದಲ್ಲೇ ಒಗೆದುಕೊಳ್ಳಬೇಕು.
28 : ಅದನ್ನು ಬೇಯಿಸಿದ ಮಣ್ಣಿನ ಪಾತ್ರೆಯನ್ನು ಒಡೆದುಬಿಡಬೇಕು. ತಾಮ್ರದ ಪಾತ್ರೆಯಲ್ಲಿ ಬೇಯಿಸಿದ್ದಾದರೆ ಆ ಪಾತ್ರೆಯನ್ನು ಬೆಳಗಿ ನೀರಿನಿಂದ ತೊಳೆಯಬೇಕು.
29 : ಯಾಜಕರಲ್ಲಿ ಗಂಡಸರೆಲ್ಲರು ಅದನ್ನು ತಿನ್ನಬಹುದು; ಅದು ಮಹಾಪರಿಶುದ್ಧವಾದುದು. .
30 : ಆದರೆ ದೋಷಪರಿಹಾರಕ ಬಲಿಪ್ರಾಣಿಗಳಲ್ಲಿ ಯಾವ ಪ್ರಾಣಿಯ ರಕ್ತವು ದೋಷಪರಿಹಾರಕ್ಕಾಗಿ ದೇವದರ್ಶನದ ಗುಡಾರದೊಳಗೆ ತರಲಾಗಿದೆಯೋ ಅದರ ಮಾಂಸವನ್ನು ತಿನ್ನಲೇಬಾರದು; ಅದನ್ನು ಬೆಂಕಿಯಲ್ಲಿ ಸುಟ್ಟುಬಿಡಬೇಕು

· © 2017 kannadacatholicbible.org Privacy Policy