Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯಾಜಕಕಾಂಡ


1 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆಂದರು:
2 : “ನೀನು ಇಸ್ರಯೇಲರ ಸಂಗಡ ಮಾತಾಡಿ ಹೇಳಬೇಕಾದುದು ಏನೆಂದರೆ: ಯಾರೇ ಆಗಲಿ ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರು ತಿಳಿಯದೆಮಾಡಿ ದೋಷಿಯಾದರೆ ಆ ದೋಷಪರಿಹಾರಕ್ಕಾಗಿ ಈ ಕ್ರಮಗಳನ್ನು ಅನುಸರಿಸಬೇಕು:
3 : “ಅಭಿಷಿಕ್ತನಾದ ಯಾಜಕನೇ ಅಂಥ ದೋಷಿಯಾಗಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ ತನ್ನ ದೋಷಪರಿಹಾರಕ್ಕಾಗಿ ಅವನು ಕಳಂಕರಹಿತವಾದ ಪ್ರಾಯದ ಹೋರಿಯೊಂದನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕು.
4 : ಅವನು ಆ ಹೋರಿಯನ್ನು ಸರ್ವೇಶ್ವರನ ಸನ್ನಿಧಿಗೆ, ದೇವದರ್ಶನದ ಗುಡಾರದ ಬಾಗಿಲಿಗೆ, ತಂದು ಅದರ ತಲೆಯ ಮೇಲೆ ಕೈಯಿಟ್ಟು ಸರ್ವೇಶ್ವರನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.
5 : ಅಭಿಷಿಕ್ತ ಯಾಜಕನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನದ ಗುಡಾರದೊಳಗೆ ಬರಬೇಕು;
6 : ಆ ರಕ್ತದಲ್ಲಿ ಬೆರಳನ್ನು ಅದ್ದಿ ಮಹಾ ಪವಿತ್ರ ಸ್ಥಾನದ ಮುಂದಿನ ತೆರೆಯ ಎದುರಿಗೆ, ಸರ್ವೇಶ್ವರನ ಸನ್ನಿಧಿಯಲ್ಲಿ ಏಳು ಸಾರಿ ಚಿಮುಕಿಸಬೇಕು.
7 : ಬಳಿಕ ಯಾಜಕನು ದೇವದರ್ಶನದ ಗುಡಾರದೊಳಗೆ ಸರ್ವೇಶ್ವರನ ಸನ್ನಿಧಿಯಲ್ಲಿರುವ ಪರಿಮಳ ಧೂಪವೇದಿಕೆಯ ಕೊಂಬುಗಳಿಗೆ ಆ ರಕ್ತವನ್ನು ಹಚ್ಚಿ ಹೋರಿಯ ಮಿಕ್ಕ ರಕ್ತವನ್ನೆಲ್ಲ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿ ದಹನಬಲಿ ಕೊಡುವ ಬಲಿಪೀಠದ ಬುಡದಲ್ಲಿ ಸುರಿಯಬೇಕು.
8 : ದೋಷಪರಿಹಾರಕ ಬಲಿಹೋರಿಯ ಕೊಬ್ಬನ್ನೆಲ್ಲಾ, ಅಂದರೆ ಕರುಳ ಸುತ್ತಲಿನ ಕೊಬ್ಬನ್ನೂ
9 : ಮೂತ್ರಪಿಂಡಗಳನ್ನೂ ಅವುಗಳ ಮೇಲಿನ ಕೊಬ್ಬನ್ನೂ ಕಾಳಿಜದ ಉತ್ತಮ ಭಾಗವನ್ನೂ
10 : ಶಾಂತಿಸಮಾಧಾನದ ಬಲಿಪ್ರಾಣಿಯಲ್ಲಿ ಪ್ರತ್ಯೇಕಿಸಿದಂತೆಯೇ ಇದರಲ್ಲೂ ಪ್ರತ್ಯೇಕಿಸಿ, ದಹನಬಲಿಪೀಠದ ಮೇಲೆ ಹೋಮಮಾಡಬೇಕು.
11 : ಆ ಹೋರಿಯಲ್ಲಿ ಮಿಕ್ಕದ್ದನ್ನೆಲ್ಲಾ, ಅಂದರೆ ಅದರ ಚರ್ಮ, ಮಾಂಸ, ತಲೆ, ಕಾಲುಗಳು, ಕರುಳುಗಳು
12 : ಹಾಗು ಕರುಳುಗಳಲ್ಲಿರುವ ಕಲ್ಮಶ ಇವುಗಳನ್ನೆಲ್ಲ ಪಾಳೆಯದ ಹೊರಗೆ, ವೇದಿಕೆಯ ಬೂದಿಯನ್ನು ಹಾಕುವ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಕಟ್ಟಿಗೆಯ ಮೇಲಿರಿಸಿ, ಬೆಂಕಿಯಲ್ಲಿ ಸುಡಿಸಿಬಿಡಬೇಕು. ಬೂದಿಯನ್ನು ಹಾಕುವ ಸ್ಥಳದಲ್ಲೇ ಅದನ್ನು ಸುಡಿಸಿಬಿಡಬೇಕು.
13 : “ಇಸ್ರಯೇಲರ ಸಮಾಜವೆಲ್ಲ ತಿಳಿಯದೆ ದೋಷಿಗಳಾದರೆ, ಅಂದರೆ ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಅವರು ಯಾವುದನ್ನಾದರು ಮಾಡಿ ದೋಷಕ್ಕೆ ಗುರಿಯಾದರೆ,
14 : ಮೊದಲು ತಮಗೂ ಮರೆಯಾಗಿದ್ದ ಆ ದೋಷವು ತಿಳಿದು ಬಂದ ನಂತರ ಅದನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಹೋರಿಯೊಂದನ್ನು ಸಮರ್ಪಿಸಬೇಕು. ಆ ಹೋರಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ತರಿಸಿದಾಗ ಸಮಾಜದ ಹಿರಿಯರು
15 : ಸರ್ವೇಶ್ವರನ ಸನ್ನಿಧಿಯಲ್ಲಿ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಡಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.
16 : ಅಭಿಷಿಕ್ತಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನದ ಗುಡಾರದೊಳಗೆ ತಂದು
17 : ಅದರಲ್ಲಿ ಬೆರಳನ್ನು ಅದ್ದಿ ತೆರೆಯ ಮುಂದೆ ಸರ್ವೇಶ್ವರನ ಸನ್ನಿಧಿಯಲ್ಲಿ ಅದನ್ನು ಏಳು ಸಾರಿ ಚಿಮುಕಿಸಬೇಕು.
18 : ಆ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನದ ಗುಡಾರದೊಳಗೆ ಸರ್ವೇಶ್ವರನ ಸನ್ನಿಧಿಯಲ್ಲಿರುವ ಧೂಪವೇದಿಕೆಯ ಕೊಂಬುಗಳಿಗೆ ಹಚ್ಚಬೇಕು.
19 : ಮಿಕ್ಕದ್ದನ್ನೆಲ್ಲಾ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿರುವ ಬಲಿಪೀಠದ ಬುಡದಲ್ಲಿ ಸುರಿದು ಬಿಡಬೇಕು.
20 : ಅಭಿಷಿಕ್ತ ಯಾಜಕನು ದೋಷಪರಿಹಾರಕ ಹೋರಿಯ ವಿಷಯದಲ್ಲಿ ಹೇಗೆ ಮಾಡಬೇಕೆಂದು ವಿಧಿಸಲಾಯಿತೋ ಹಾಗೆಯೆ, ಇದರ ವಿಷಯದಲ್ಲೂ ಮಾಡಬೇಕು. ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದ ನಂತರ ಅವರಿಗೆ ಕ್ಷಮಾಪಣೆಯಾಗುವುದು.
21 : ಆ ಮೊದಲನೆಯ ಹೋರಿಯನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಸುಡಿಸಿ ಬಿಟ್ಟಂತೆಯೇ ಈ ಹೋರಿಯನ್ನೂ ಸುಡಿಸಿಬಿಡಬೇಕು. ಇದು ಜನ ಸಮಾಜದ ದೋಷಪರಿಹಾರಕ ಬಲಿ.
22 : “ಮುಖ್ಯಾಧಿಕಾರಿಯೊಬ್ಬನು ತನ್ನ ದೇವರಾದ ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ
23 : ತನ್ನ ತಪ್ಪು ತನಗೆ ತಿಳಿದು ಬಂದಾಗ ಅವನು ಕಳಂಕರಹಿತವಾದ ಒಂದು ಹೋತವನ್ನು ತಂದು ಸಮರ್ಪಿಸಬೇಕು.
24 : ಅವನು ಆ ಹೋತದ ತಲೆಯ ಮೇಲೆ ಕೈಯಿಟ್ಟು ಸರ್ವೇಶ್ವರನ ಸನ್ನಿಧಿಯಲ್ಲಿ, ದಹನಬಲಿಪ್ರಾಣಿಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು. ಅದು ದೋಷಪರಿಹಾರಕ ಬಲಿ.
25 : ಯಾಜಕನು ಆ ಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಬಲಿಪೀಠದ ಕೊಂಬುಗಳಿಗೆ ಹಚ್ಚಿ, ಮಿಕ್ಕ ರಕ್ತವನ್ನು ಬಲಿಪೀಠದ ಬುಡದಲ್ಲಿ ಸುರಿದುಬಿಡಬೇಕು.
26 : ಶಾಂತಿ ಸಮಾಧಾನದ ಬಲಿಪ್ರಾಣಿಯ ಕೊಬ್ಬನ್ನು ಅವನು ಹೋಮಮಾಡುವ ಪ್ರಕಾರವೇ ಇದರ ಎಲ್ಲ ಕೊಬ್ಬನ್ನೂ ಹೋಮಮಾಡಬೇಕು. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮೆ ದೊರಕುವುದು.
27 : “ನಿಮ್ಮ ನಾಡಿನವರಲ್ಲಿ ಬೇರೆ ಯಾರಾದರು ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ
28 : ತನ್ನ ತಪ್ಪು ತನಗೆ ತಿಳಿದು ಬಂದಾಗ ಆ ದೋಷಪರಿಹಾರಕ್ಕಾಗಿ ಕಳಂಕರಹಿತವಾದ ಒಂದು ಹೆಣ್ಣು ಮೇಕೆಯನ್ನು ತಂದು ಸಮರ್ಪಿಸಬೇಕು.
29 : ಅವನು ಅದರ ತಲೆಯ ಮೇಲೆ ಕೈಯಿಟ್ಟ ನಂತರ ದಹನಬಲಿಪ್ರಾಣಿಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು.
30 : ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಬಲಿಪೀಠದ ಕೊಂಬುಗಳಿಗೆ ಹಚ್ಚಿ ಮಿಕ್ಕ ರಕ್ತವನ್ನೆಲ್ಲಾ ಬಲಿಪೀಠದ ಬುಡದಲ್ಲಿ ಸುರಿದುಬಿಡಲಿ.
31 : ಶಾಂತಿ ಸಮಾಧಾನದ ಬಲಿಪ್ರಾಣಿಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲ ಕೊಬ್ಬನ್ನು ಪ್ರತ್ಯೇಕಿಸಿ ಸರ್ವೇಶ್ವರನಿಗೆ ಸುವಾಸನೆಯನ್ನುಂಟು ಮಾಡಲು ಬಲಿಪೀಠದ ಮೇಲೆ ಹೋಮಮಾಡಲಿ. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವುದರಿಂದ ಅವನಿಗೆ ಕ್ಷಮೆ ದೊರಕುವುದು.
32 : “ಅವನು ತನ್ನ ದೋಷಪರಿಹಾರಾರ್ಥವಾಗಿ ತರುವುದು ಒಂದು ಕುರಿಯಾದರೆ ಅದು ಕಳಂಕರಹಿತವಾದ ಹೆಣ್ಣಾಗಿರಬೇಕು.
33 : ಅವನು ಅದರ ತಲೆಯ ಮೇಲೆ ಕೈಯಿಟ್ಟನಂತರ ದಹನ ಬಲಿ ಪ್ರಾಣಿಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ದೋಷಪರಿಹಾರಾರ್ಥವಾಗಿ ವಧಿಸಬೇಕು.
34 : ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಬಲಿಪೀಠದ ಕೊಂಬುಗಳಿಗೆ ಹಚ್ಚಿ ಮಿಕ್ಕ ರಕ್ತವನ್ನೆಲ್ಲಾ ಬಲಿಪೀಠದ ಬುಡದಲ್ಲಿ ಸುರಿದುಬಿಡಲಿ.
35 : ಶಾಂತಿ ಸಮಾಧಾನದ ಬಲಿಪ್ರಾಣಿಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲ ಕೊಬ್ಬನ್ನು ಪ್ರತ್ಯೇಕಿಸಿ ಬಲಿಪೀಠದಲ್ಲಿ ಉರಿಯುವ ಹೋಮದ್ರವ್ಯಗಳ ಮೇಲೆ ಸರ್ವೇಶ್ವರನಿಗೆ ಹೋಮಮಾಡಲಿ. ಅವನ ತಪ್ಪಿನ ನಿಮಿತ್ತ ಯಾಜಕನು ಹೀಗೆ ಅವನಿಗೋಸ್ಕರ ದೋಷಪರಿಹಾರ ಮಾಡುವುದರಿಂದ ಅವನಿಗೆ ಕ್ಷಮೆ ದೊರಕುವುದು.

· © 2017 kannadacatholicbible.org Privacy Policy