1 : “ಯಾರಾದರು ಶಾಂತಿಸಮಾಧಾನಕ್ಕಾಗಿ ಬಲಿದಾನ ಮಾಡಬೇಕಾದರೆ ಅಂಥವನು ಸಮರ್ಪಿಸುವ ಪ್ರಾಣಿ ದನಕರುವಾಗಿದ್ದಲ್ಲಿ, ಅದು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ, ಕಳಂಕರಹಿತವಾಗಿರಬೇಕು.
2 : ಅವನು ಆ ಪ್ರಾಣಿಯನ್ನು ಸರ್ವೇಶ್ವರನ ಸನ್ನಿಧಿಗೆ ತಂದು ಅದರ ತಲೆಯ ಮೇಲೆ ಕೈಯಿಡಬೇಕು; ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
3 : ಬಲಿಪ್ರಾಣಿಯ ಈ ಭಾಗಗಳನ್ನು: ಕರುಳ ಸುತ್ತಲಿನ ಕೊಬ್ಬನ್ನೂ ಮೂತ್ರಪಿಂಡಗಳನ್ನೂ
4 : ಮತ್ತು ಅವುಗಳ ಮೇಲಿನ ಕೊಬ್ಬನ್ನೂ ಕಾಳಿಜದ ಉತ್ತಮ ಭಾಗವನ್ನೂ ತೆಗೆದು ಸರ್ವೇಶ್ವರನಿಗೆ ಹೋಮಮಾಡಬೇಕು.
5 : ಆರೋನನ ವಂಶಜರಾದ ಯಾಜಕರು ಅದನ್ನು ಬಲಿಪೀಠದಲ್ಲಿ ಉರಿಯುವ ಕಟ್ಟಿಗೆಯ ಮೇಲಿರುವ ದಹನಬಲಿಪದಾರ್ಥಗಳೊಡನೆ ಹೋಮಮಾಡಬೇಕು. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧ ಬಲಿಯಾಗಿರುವುದು.
6 : “ಶಾಂತಿಸಮಾಧಾನಕ್ಕಾಗಿ ಸರ್ವೇಶ್ವರನಿಗೆ ಸಮರ್ಪಿಸುವ ಬಲಿಪ್ರಾಣಿ ಕುರಿ ಅಥವಾ ಆಡು ಆಗಿದ್ದರೆ, ಅದು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ, ಕಳಂಕರಹಿತವಾಗಿರಬೇಕು.
7 : “ಅದು ಕುರಿಯಾಗಿದ್ದರೆ ತಂದವನು ಅದನ್ನು ಸರ್ವೇಶ್ವರನ ಸನ್ನಿಧಿಗೆ ತೆಗೆದುಕೊಂಡು ಬಂದು ಅದರ ತಲೆಯ ಮೇಲೆ ಕೈಯಿಟ್ಟು
8 : ದೇವದರ್ಶನದ ಗುಡಾರದ ಎದುರಿಗೆ ಅದನ್ನು ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲು ಚಿಮುಕಿಸಬೇಕು.
9 : ಶಾಂತಿಸಮಾಧಾನಕ್ಕಾಗಿ ಅರ್ಪಿಸುವ ಆ ಬಲಿಪ್ರಾಣಿಯ ಕೊಬ್ಬನ್ನು ಸರ್ವೇಶ್ವರನಿಗೆ ಹೋಮವಾಗಿ ಸಮರ್ಪಿಸಬೇಕು.
10 : ಹೇಗೆಂದರೆ, ಬಾಲದ ಕೊಬ್ಬನ್ನೆಲ್ಲಾ ಬೆನ್ನೆಲುವಿನ ಬಳಿಯಿಂದ ತೆಗೆದುಬಿಟ್ಟು ಅದನ್ನೂ ಕರುಳ ಸುತ್ತಲಿನ ಕೊಬ್ಬನ್ನೂ ಮೂತ್ರಪಿಂಡಗಳನ್ನೂ ಅವುಗಳ ಮೇಲಿನ ಕೊಬ್ಬನ್ನು ಮತ್ತು ಕಾಳಿಜದ ಉತ್ತಮ ಭಾಗವನ್ನೂ
11 : ಯಾಜಕನು ಬಲಿಪೀಠದ ಮೇಲೆ ಹೋಮಮಾಡಬೇಕು. ಅದು ಸರ್ವೇಶ್ವರನಿಗೆ ದಹನಬಲಿಯ ಆಹಾರವಾಗುವುದು.
12 : “ಸಮರ್ಪಿಸುವಂಥದ್ದು ಆಡಾಗಿದ್ದರೆ ಅರ್ಪಿಸುವವನು ಅದನ್ನು ಸರ್ವೇಶ್ವರನ ಸನ್ನಿಧಿಗೆ ತೆಗೆದುಕೊಂಡು ಬರಬೇಕು.
13 : ಅದರ ತಲೆಯ ಮೇಲೆ ಕೈಯಿಟ್ಟು ದೇವದರ್ಶನದ ಗುಡಾರದ ಎದುರಿಗೆ ವಧಿಸಬೇಕು. ಆರೋನನ ವಂಶಜರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲು ಚಿಮುಕಿಸಬೇಕು.
14 : ಅದರ ಕರುಳ ಸುತ್ತಲಿನ ಕೊಬ್ಬನ್ನೂ ಮೂತ್ರಪಿಂಡಗಳನ್ನೂ
15 : ಮತ್ತು ಅವುಗಳ ಮೇಲಿನ ಕೊಬ್ಬನ್ನೂ ಕಾಳಿಜದ ಉತ್ತಮ ಭಾಗವನ್ನೂ ಸರ್ವೇಶ್ವರನಿಗೆ ಅಗ್ನಿಯ ಮೂಲಕ ಸಮರ್ಪಿಸಬೇಕು.
16 : ಯಾಜಕನು ಅದನ್ನು ಬಲಿಪೀಠದ ಮೇಲೆ ಹೋಮಮಾಡಬೇಕು. ಅದು ಸುಗಂಧ ಹೋಮ ರೂಪವಾಗಿ ಸರ್ವೇಶ್ವರನಿಗೆ ಆಹಾರವಾಗಿರುವುದು. ಬಲಿಪ್ರಾಣಿಗಳ ಕೊಬ್ಬೆಲ್ಲವು ಸರ್ವೇಶ್ವರನದು.
17 : ಕೊಬ್ಬನ್ನಾಗಲಿ, ರಕ್ತವನ್ನಾಗಲಿ ತಿನ್ನಕೂಡದು ಎಂಬುದು ನಿಮಗೂ ನಿಮ್ಮ ಸಂತತಿಯವರಿಗೂ ನೀವು ವಾಸಿಸುವ ಎಲ್ಲ ಸ್ಥಳಗಳಲ್ಲಿಯೂ ಶಾಶ್ವತ ನಿಯಮವಾಗಿದೆ.”