Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯಾಜಕಕಾಂಡ


1 : ಇಸ್ರಯೇಲರಿಗೆ ಈ ಪ್ರಕಾರ ಆಜ್ಞಾಪಿಸಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು:
2 : “ಸರ್ವೇಶ್ವರನಿಂದ ನೇಮಕವಾದ ಹಬ್ಬದಿನಗಳಲ್ಲಿ ದೇವಾರಾಧನೆಗಾಗಿ ಜನರು ಸಭೆಸೇರಬೇಕು. ಹಾಗೆ ನೇಮಕವಾದ ಹಬ್ಬದ ದಿನಗಳು ಇವು:
3 : ಆರು ದಿನಗಳಲ್ಲಿ ನೀವು ದುಡಿದು ಕೆಲಸಮಾಡಬೇಕು. ಏಳನೆಯ ದಿನ ಯಾವ ದುಡಿಮೆಯನ್ನೂ ಮಾಡಬಾರದ ಸಬ್ಬತ್‍ದಿನ. ಅಂದು ದೇವರ ಆರಾಧನೆಗಾಗಿ ಸಭೆಸೇರಬೇಕು. ಆ ದಿನದಲ್ಲಿ ಯಾವ ವಿಧವಾದ ದುಡಿಮೆಯನ್ನೂ ಮಾಡಕೂಡದು. ನಿಮ್ಮ ನಿಮ್ಮ ನಿವಾಸಸ್ಥಳಗಳಲ್ಲೇ ಅದು ಸರ್ವೇಶ್ವರನಿಗೆ ವಿೂಸಲಾದ ವಿಶ್ರಾಂತಿ ದಿನವಾಗಿರಬೇಕು.
4 : ಸರ್ವೇಶ್ವರನಿಂದ ನೇಮಕವಾದ ಹಬ್ಬದ ಕಾಲಗಳಲ್ಲಿ ದೇವರ ಆರಾಧನೆಗಾಗಿ ಸಭೆಸೇರಬೇಕು. ಆ ಹಬ್ಬದ ದಿನಗಳನ್ನು ನಿಯಮಿತ ಕಾಲದಲ್ಲಿ ಪ್ರಕಟಿಸಬೇಕು:
5 : “ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ವೇಳೆಯಲ್ಲಿ ಸರ್ವೇಶ್ವರ ನೇಮಿಸಿದ ಪಾಸ್ಕಹಬ್ಬವಾಗಬೇಕು.
6 : ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ಹಬ್ಬವನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು. ಅಂದು ಮೊದಲ್ಗೊಂಡು ಏಳು ದಿನಗಳಲ್ಲೂ ಹುಳಿರಹಿತ ರೊಟ್ಟಿಯನ್ನು ಊಟ ಮಾಡಬೇಕು.
7 : ಮೊದಲನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನ ಯಾವ ದುಡಿಮೆಯನ್ನೂ ಮಾಡಬಾರದು.
8 : ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನಿಗೆ ದಹನಬಲಿಗಳನ್ನು ಸಮರ್ಪಿಸಬೇಕು. ಏಳನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಅಂದು ಯಾವ ದುಡಿಮೆಯನ್ನೂ ಕೈಗೊಳ್ಳಬಾರದು.”
9 : ಮೋಶೆಯ ಮುಖಾಂತರ ಇಸ್ರಯೇಲರಿಗೆ ಸರ್ವೇಶ್ವರ ಹೀಗೆ ಆಜ್ಞಾಪಿಸಿದರು:
10 : “ನಾನು ನಿಮಗೆ ಕೊಡುವ ನಾಡನ್ನು ನೀವು ಸೇರಿದ ನಂತರ ಅಲ್ಲಿನ (ಜವೆಗೋದಿ) ಪೈರನ್ನು ಕೊಯ್ಯುವಾಗ ಪ್ರಥಮ ಫಲದ ಸಿವುಡನ್ನು ಯಾಜಕನ ಬಳಿಗೆ ತಂದೊಪ್ಪಿಸಬೇಕು.
11 : ನೀವು ಅಂಗೀಕೃತರಾಗುವಂತೆ ಯಾಜಕನು ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ನೈವೇದ್ಯವಾಗಿ ಆರತಿಯೆತ್ತಬೇಕು. ಆ ಸಿವುಡನ್ನು ನೈವೇದ್ಯವಾಗಿ ಆರತಿಯೆತ್ತುವ ದಿನದಂದೇ
12 : ನೀವು ಒಂದು ವರ್ಷದ ಕಳಂಕರಹಿತವಾದ ಟಗರನ್ನು ದಹನಬಲಿಯಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು.
13 : ಅದರ ಸಮೇತ ಎಣ್ಣೆಬೆರೆತ ಎರಡು ಕಿಲೋಗ್ರಾಂ ಹಿಟ್ಟನ್ನು ಧಾನ್ಯನೈವೇದ್ಯವಾಗಿ ಅರ್ಪಿಸಬೇಕು. ಸರ್ವೇಶ್ವರನಿಗೆ ಪ್ರಿಯವಾದ ಸುವಾಸನೆಯುಂಟುಮಾಡುವುದಕ್ಕೆ ಅದನ್ನು ಬೆಂಕಿಯಲ್ಲಿ ಹೋಮಮಾಡಬೇಕು. ಅದರೊಂದಿಗೆ ಸಮರ್ಪಿಸಬೇಕಾದ ಪಾನದ್ರವ್ಯ ಒಂದು ಲೀಟರ್ ದ್ರಾಕ್ಷಾರಸ.
14 : ನೀವು ನಿಮ್ಮ ದೇವರಿಗೆ ಸಲ್ಲಿಸಬೇಕಾದ ಕಾಣಿಕೆಯನ್ನು ತಂದುಕೊಡುವವರೆಗೆ ಆ ವರ್ಷದ ಬೆಳೆಯ ರೊಟ್ಟಿಯನ್ನಾಗಲಿ, ಸುಟ್ಟ ತೆನೆಗಳನ್ನಾಗಲಿ, ಅಥವಾ ಹಸಿತೆನೆಗಳನ್ನಾಗಲಿ ತಿನ್ನಲೇಕೂಡದು. ನೀವು ಎಲ್ಲಿದ್ದರೂ ನಿಮಗೂ ನಿಮ್ಮ ಸಂತತಿಯವರಿಗೂ ಇದು ಶಾಶ್ವತ ನಿಯಮವಾಗಿದೆ.
15 : “ಸಬ್ಬತ್‍ದಿನದ ಮಾರನೆಯ ದಿನ ಮೊದಲ್ಗೊಂಡು, ಅಂದರೆ ಆ ಪ್ರಥಮ ಸಿವುಡನ್ನು ನೈವೇದ್ಯವಾಗಿ ಆರತಿ ಎತ್ತಿದ ದಿನ ಮೊದಲುಗೊಂಡು, ಪೂರ್ಣವಾಗಿ ಏಳುವಾರಗಳು ಮುಗಿಯುವಂತೆ, ಐವತ್ತು ದಿನಗಳನ್ನು ಎಣಿಸಬೇಕು.
16 : ಏಳನೆಯ ಸಬ್ಬತ್‍ದಿನದ ಮರುದಿನದಲ್ಲಿ ಸರ್ವೇಶ್ವರನಿಗೆ ಹೊಸ ಬೆಳೆಯ ನೈವೇದ್ಯವನ್ನು ಸಮರ್ಪಿಸಬೇಕು.
17 : ನಿಮ್ಮ ನಿವಾಸಗಳಿಂದ ತಂದ ಹಿಟ್ಟಿನಲ್ಲಿ ಎರಡೆರಡು ಕಿಲೋಗ್ರಾಂ ಹಿಟ್ಟಿನಿಂದ ಎರಡು ನೈವೇದ್ಯದ ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋದಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು.
18 : ಆ ರೊಟ್ಟಿಗಳೊಡನೆ ಒಂದು ವರ್ಷದ ಕಳಂಕರಹಿತವಾದ ಏಳು ಕುರಿಗಳನ್ನೂ ಒಂದು ಹೋರಿಯನ್ನೂ ಎರಡು ಟಗರುಗಳನ್ನೂ ಸಮರ್ಪಿಸಬೇಕು. ಇವು ಧಾನ್ಯದ್ರವ್ಯದೊಡನೆಯೂ ಪಾನದ್ರವ್ಯದೊಡನೆಯೂ ಅಗ್ನಿ ಮೂಲಕ ಸರ್ವೇಶ್ವರನಿಗೆ ಪ್ರಿಯವಾದ ಸುವಾಸನೆಯನ್ನುಂಟು ಮಾಡುವ ದಹನಬಲಿದಾನಗಳಾಗುವುವು.
19 : ಅದಲ್ಲದೆ, ದೋಷಪರಿಹಾರಕ ಬಲಿ ಆಗಿ ಒಂದು ಹೋತವನ್ನೂ, ಶಾಂತಿಸಮಾಧಾನ ಬಲಿಯಾಗಿ ಒಂದು ವರ್ಷದ ಎರಡು ಟಗರುಗಳನ್ನೂ ಸಮರ್ಪಿಸಬೇಕು.
20 : ಯಾಜಕನು ಇವುಗಳನ್ನೂ ಪ್ರಥಮಫಲದ ರೊಟ್ಟಿಗಳನ್ನೂ ಎರಡು ಕುರಿಗಳನ್ನೂ ಸರ್ವೇಶ್ವರನ ಸನ್ನಿಧಿಯಲ್ಲಿ ನೈವೇದ್ಯವಾಗಿ ಆರತಿಯೆತ್ತಬೇಕು. ಅವು ಸರ್ವೇಶ್ವರನಿಗೆ ವಿೂಸಲಾಗಿ ಯಾಜಕನಿಗೆ ಸಲ್ಲಬೇಕು.
21 : ಆ ದಿವಸದಲ್ಲಿ ದೇವಾರಾಧನೆಗಾಗಿ ಸಭೆಕೂಡಬೇಕೆಂದು ಪ್ರಕಟಿಸಬೇಕು. ಅಂದು ಯಾವ ದುಡಿಮೆಯನ್ನೂ ಕೈಗೊಳ್ಳಬಾರದು. ನೀವು ಎಲ್ಲೇ ಇರಲಿ, ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರುವುದು.
22 : “ನಿಮ್ಮ ನಾಡಿನ ಹೊಲ ಕೊಯ್ಯುವಾಗ ಮೂಲೆ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬಾರದು, ಹಕ್ಕಲನ್ನೂ ಆಯಬಾರದು. ಬಡವರಿಗಾಗಿ ಹಾಗು ಪರದೇಶಿಗಳಿಗಾಗಿ ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾಗಿರುವ ಸರ್ವೇಶ್ವರ.”
23 : ಸರ್ವೇಶ್ವರ ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ಹೇಳಿದರು:
24 : “ನೀನು ಏಳನೆಯ ತಿಂಗಳಿನ ಮೊದಲನೆಯ ದಿನ ನಿಮಗೆ ಸಂಪೂರ್ಣ ವಿರಾಮವಿರಬೇಕು. ಅದನ್ನು ತುತೂರಿಗಳ ಧ್ವನಿಯಿಂದ ಪ್ರಕಟಪಡಿಸಬೇಕು. ದೇವಾರಾಧನೆಗಾಗಿ ಸಭೆಕೂಡಬೇಕು.
25 : ಆ ದಿನ ಯಾವ ದುಡಿಮೆಯನ್ನೂ ಮಾಡಬಾರದು; ಸರ್ವೇಶ್ವರನಿಗೆ ದಹನಬಲಿಯನ್ನು ಸಮರ್ಪಿಸಬೇಕು.”
26 : ಸರ್ವೇಶ್ವರ ಮೋಶೆಗೆ ಹೇಳಿದ ಮಾತುಗಳಿವು:
27 : “ಅದೇ ಏಳನೆಯ ತಿಂಗಳಿನ ಹತ್ತನೆಯ ದಿನವನ್ನು ಸರ್ವದೋಷಪರಿಹಾರ ದಿನವನ್ನಾಗಿ ಆಚರಿಸಬೇಕು. ಅಂದು ದೇವಾರಾಧನೆಗಾಗಿ ಸಭೆಕೂಡಬೇಕು. ಪೂರ್ಣವಾಗಿ ಉಪವಾಸ ಮಾಡಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನ ಬಲಿದಾನಮಾಡಬೇಕು.
28 : ಆ ದಿನದಂದು ಯಾವ ದುಡಿಮೆಯನ್ನೂ ಕೈಗೊಳ್ಳಬಾರದು. ಅದು ದೋಷ ಪರಿಹಾರಕ ದಿನ. ಅಂದು ನಿಮ್ಮ ಪರವಾಗಿ ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರಕ ಆಚರಣೆ ನಡೆಯುವುದು.
29 : ಯಾವನಾದರು ಆ ದಿನದಲ್ಲಿ ಉಪವಾಸ ಮಾಡದೆ ಹೋದರೆ ಅವನನ್ನು ಕುಲದಿಂದ ತೆಗೆದುಹಾಕಬೇಕು.
30 : ಯಾವನಾದರು ಆ ದಿನ ಕಿಂಚಿತ್ತಾದರು ದುಡಿದರೆ ಅವನನ್ನು ಇಸ್ರಯೇಲರಿಂದ ಅಳಿಸಿ ಬಿಡುವೆನು.
31 : ಆ ದಿನ ಯಾವ ದುಡಿಮೆಯನ್ನೂ ಮಾಡಬಾರದು. ನೀವು ಎಲ್ಲೇ ವಾಸವಾಗಿದ್ದರೂ, ನಿಮಗೂ ನಿಮ್ಮ ಸಂತತಿಯವರಿಗೂ ಇದು ಶಾಶ್ವತ ನಿಯಮ
32 : ಆ ದಿನವು ಸಂಪೂರ್ಣ ವಿರಾಮವುಳ್ಳ ವಿಶ್ರಾಂತಿ ದಿನವಾಗಿರಬೇಕು. ಅಂದು ಉಪವಾಸದಿಂದಿರಬೇಕು. ಆ ತಿಂಗಳಿನ ಒಂಬತ್ತನೆಯ ದಿನದ ಸಂಜೆ ಪ್ರಾರಂಭಿಸಿ ಮರುದಿನದ ಸಂಜೆಯವರೆಗೆ ನೀವು ಆ ವಿರಾಮ ದಿನವನ್ನು ಆಚರಿಸಬೇಕು.”
33 : ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ಸರ್ವೇಶ್ವರ ಮೋಶೆಗೆ ತಿಳಿಸಿದರು:
34 : “ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲ್ಗೊಂಡು ಏಳು ದಿನದವರೆಗೆ ಪರ್ಣಕುಟೀರಗಳ ಜಾತ್ರೆಯನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು.
35 : ಮೊದಲನೆಯ ದಿನ ದೇವಾರಾಧನೆಗಾಗಿ ಸಭೆ ಸೇರಬೇಕು; ಯಾವ ದುಡಿಮೆಯನ್ನೂ ಕೈಗೊಳ್ಳಬಾರದು.
36 : ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿದಾನ ಮಾಡಬೇಕು. ಎಂಟನೆಯ ದಿನದಂದು ದೇವ ಆರಾಧನೆಗಾಗಿ ಸಭೆಸೇರಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿದಾನ ಮಾಡಬೇಕು. ಅದು ಸಭೆಸೇರುವ ದಿನವಾದುದರಿಂದ ಅಂದು ಎಲ್ಲ ದುಡಿಮೆಯನ್ನು ನಿಲ್ಲಿಸಬೇಕು.
37 : “ಸರ್ವೇಶ್ವರ ನೇಮಿಸಿರುವ ಸಬ್ಬತ್ ದಿನಗಳನ್ನು ಮತ್ತು ಮೇಲೆ ಹೇಳಿದ ಸ್ವಾಮಿಯ ಹಬ್ಬದ ದಿನಗಳನ್ನು ನೀವು ಆಚರಿಸಬೇಕು. ಆ ದಿನಗಳಲ್ಲಿ ದೇವಾರಾಧನೆಗಾಗಿ ಸಭೆಸೇರುವಂತೆ ಜನರಿಗೆ ಪ್ರಕಟಿಸಬೇಕು.
38 : ಸರ್ವೇಶ್ವರನಿಗೆ ಒಪ್ಪಿಸಬೇಕಾದ ಕಪ್ಪಕಾಣಿಕೆಗಳನ್ನೂ ಹರಕೆಗಳನ್ನೂ ಸಲ್ಲಿಸಬೇಕಲ್ಲವೆ, ಮೇಲೆ ಸೂಚಿಸಿರುವ ಹಬ್ಬಗಳಲ್ಲಿ ಆಯಾ ದಿನಕ್ಕೆ ನೇಮಿಸಿರುವ ಪ್ರಕಾರ ದಹನಬಲಿ, ನೈವೇದ್ಯದ್ರವ್ಯ, ಶಾಂತಿ ಸಮಾಧಾನದ ಬಲಿ, ಪಾನದ್ರವ್ಯ ಇವುಗಳನ್ನು ತಂದು ಸರ್ವೇಶ್ವರನ ಸನ್ನಿಧಿಯಲ್ಲಿ ಹೋಮಮಾಡಬೇಕು.
39 : “ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ತೋಟ-ತೋಪುಗಳ ಬೆಳೆಯನ್ನು ಕೂಡಿಸಿದ ನಂತರ ಸರ್ವೇಶ್ವರ ನೇಮಿಸಿದ ಪರ್ಣಕುಟೀರಗಳ ಜಾತ್ರೆಯನ್ನು ಏಳು ದಿನದವರೆಗೂ ಆಚರಿಸಬೇಕು. ಮೊದಲನೆಯ ದಿನದಲ್ಲಿ ಹಾಗು ಎಂಟನೆಯ ದಿನದಲ್ಲಿ ಎಲ್ಲ ದುಡಿಮೆಯನ್ನು ನಿಲ್ಲಿಸಿ ಸಂಪೂರ್ಣ ವಿರಾಮದಿಂದಿರಬೇಕು.
40 : “ಮೊದಲನೆಯ ದಿನ ಮರಗಳಿಂದ ಒಳ್ಳೊಳ್ಳೆಯ ಹಣ್ಣುಗಳನ್ನು, ಖರ್ಜೂರ ಮರದ ಗರಿಗಳನ್ನು, ಎಲೆಗಳು ದಟ್ಟವಾಗಿರುವ ಮರಗಳ ಕೊಂಬೆಗಳನ್ನು ಮತ್ತು ನೀರಿನ ಕಾಲುವೆಗಳ ಬಳಿ ಬೆಳೆಯುವ ನೀರವಂಜಿ ಚಿಗುರುಗಳನ್ನು ತೆಗೆದುಕೊಂಡು ಬಂದು ಸರ್ವೇಶ್ವರನ ಸನ್ನಿಧಿಯಲ್ಲಿ ಏಳುದಿನಗಳೂ ಸಂಭ್ರಮದಿಂದಿರಬೇಕು.
41 : ಹೀಗೆ ಪ್ರತಿವರ್ಷ ಏಳು ದಿನಗಳ ತನಕ ಈ ಉತ್ಸವವನ್ನು ಆಚರಿಸಬೇಕು. ನಿಮಗೂ ನಿಮ್ಮ ಸಂತತಿಯವರಿಗೂ ಇದು ಶಾಶ್ವತ ನಿಯಮ. ಏಳನೆಯ ತಿಂಗಳಲ್ಲಿ ಇದನ್ನು ಆಚರಿಸಬೇಕು.
42 : ಆ ಏಳು ದಿನಗಳು ನೀವು ಪರ್ಣಕುಟೀರಗಳಲ್ಲೇ ವಾಸವಾಗಿರಬೇಕು. ಸ್ವದೇಶೀಯರಾದ ಇಸ್ರಯೇಲರೆಲ್ಲರು ಪರ್ಣಕುಟೀರಗಳಲ್ಲೇ ವಾಸವಾಗಿರಬೇಕು.
43 : ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿದಾಗ ಇಸ್ರಯೇಲರು ಪರ್ಣಕುಟೀರಗಳಲ್ಲಿ ವಾಸವಾಗಿ ಇರುವಂತೆ ಮಾಡಿದೆನೆಂಬುದಾಗಿ ಇದರಿಂದ ನಿಮ್ಮ ಸಂತತಿಯವರಿಗೆ ತಿಳಿಯುವುದು. ನಾನು ನಿಮ್ಮ ದೇವರಾದ ಸರ್ವೇಶ್ವರ.”
44 : ಹೀಗೆ ಮೋಶೆ ಸರ್ವೇಶ್ವರಸ್ವಾಮಿಯಿಂದ ನೇಮಕವಾದ ಹಬ್ಬಗಳ ವಿಷಯವಾಗಿ ಇಸ್ರಯೇಲರಿಗೆ ವಿವರಿಸಿದನು.

· © 2017 kannadacatholicbible.org Privacy Policy