Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯಾಜಕಕಾಂಡ


1 : ಇಸ್ರಯೇಲ್ ಸಮಾಜದವರಿಗೆ ಹೀಗೆ ಆಜ್ಞಾಪಿಸುವಂತೆ ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು:
2 : “ನಿಮ್ಮ ದೇವರಾದ ಸರ್ವೇಶ್ವರನೆಂಬ ನಾನು ಪರಿಶುದ್ಧನಾಗಿರುವಂತೆ ನೀವು ಕೂಡ ಪರಿಶುದ್ಧರಾಗಿರಬೇಕು.
3 : ಪ್ರತಿಯೊಬ್ಬ ವ್ಯಕ್ತಿಯು ತನ್ನ ತಂದೆತಾಯಿಗಳ ವಿಷಯದಲ್ಲಿ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ಆಚರಿಸಬೇಕು. ನಾನೇ ನಿಮ್ಮ ದೇವರಾದ ಸರ್ವೇಶ್ವರ.
4 : “ಶೂನ್ಯ ದೇವರುಗಳ ಕಡೆ ತಿರುಗಿಕೊಳ್ಳಬೇಡಿ; ದೇವರೆಂದು ಎರಕದ ವಿಗ್ರಹಗಳನ್ನು ಮಾಡಿಕೊಳ್ಳಬೇಡಿ. ನಾನೇ ನಿಮ್ಮ ದೇವರಾದ ಸರ್ವೇಶ್ವರ.
5 : “ಶಾಂತಿಸಮಾಧಾನದ ಬಲಿಗಳನ್ನು ಸರ್ವೇಶ್ವರನಿಗೆ ಸಮರ್ಪಿಸುವಾಗ ಅವರಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ಸಮರ್ಪಿಸಬೇಕು.
6 : ನೀವು ಮಾಡುವ ಬಲಿದಾನದ ಮಾಂಸವನ್ನು ಅದೇ ದಿನದಲ್ಲಿ ಅಥವಾ ಮರುದಿನದಲ್ಲಿ ಊಟ ಮಾಡಿಬಿಡಬೇಕು. ಮೂರನೆಯ ದಿನದವರೆಗೆ ಏನಾದರೂ ಮಿಕ್ಕಿದ್ದರೆ ಅದನ್ನು ಬೆಂಕಿಯಲ್ಲಿ ಸುಟ್ಟುಬಿಡಬೇಕು.
7 : ಮೂರನೆಯ ದಿನದ ತನಕ ಉಳಿದದ್ದು ಅಳಿಸಿಹೋದದ್ದು. ಆದುದರಿಂದ ಅದರಲ್ಲಿ ಏನನ್ನಾದರು ತಿಂದರೆ ಆ ಬಲಿದಾನ ಸರ್ವೇಶ್ವರನಿಗೆ ಸ್ವೀಕೃತವಾಗುವುದಿಲ್ಲ.
8 : ಅದರಲ್ಲಿ ಏನನ್ನಾದರೂ ತಿಂದವನು ಸರ್ವೇಶ್ವರನ ದ್ರವ್ಯವಾದ ಪರಿಶುದ್ಧತೆಯನ್ನು ಹೊಲೆಮಾಡುತ್ತಾನೆ. ಆದುದರಿಂದ ತನ್ನ ಪಾಪದ ಫಲವನ್ನು ಅನುಭವಿಸಲೇಬೇಕು. ಅವನು ಕುಲದಿಂದ ಬಹಿಷ್ಕøತನಾಗಬೇಕು.
9 : “ನೀವು ಹೊಲಕೊಯ್ಯುವಾಗ ಮೂಲೆ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬಾರದು; ಕೊಯ್ದಾದ ಮೇಲೆ ಹಕ್ಕಲಾಯಬಾರದು;
10 : ದ್ರಾಕ್ಷಿ ತೋಟಗಳಲ್ಲೂ ಹಕ್ಕಲಾಯಕೂಡದು. ಉದುರಿದ ಹಣ್ಣುಗಳನ್ನು ಆರಿಸಿಕೊಳ್ಳದೆ ಬಡಬಗ್ಗರಿಗೂ ಪರದೇಶಿಗಳಿಗೂ ಅವುಗಳನ್ನು ಬಿಟ್ಟು ಬಿಡಬೇಕು. ನಿಮ್ಮ ದೇವರಾದ ಸರ್ವೇಶ್ವರ ನಾನೇ.
11 : “ಕಳಬೇಡ; ಹುಸಿಯನುಡಿಯಲು ಬೇಡ; ಒಬ್ಬರನ್ನೊಬ್ಬರು ಮೋಸಗೊಳಿಸುವುದು ಬೇಡ.
12 : ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿನ್ನ ದೇವರ ನಾಮಕ್ಕೆ ಅಪಕೀರ್ತಿ ತರಬೇಡ. ನಾನೇ ಸರ್ವೇಶ್ವರ.
13 : “ಮತ್ತೊಬ್ಬನನ್ನು ಬಲಾತ್ಕರಿಸಬೇಡ; ಅವನ ಸೊತ್ತನ್ನು ಅಪಹರಿಸಬೇಡ. ಕೂಲಿಯವನ ಕೂಲಿಯನ್ನು ಮರುದಿನದವರೆಗೆ ನಿನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಡ.
14 : ಕಿವುಡರನ್ನು ದೂಷಿಸಬೇಡ; ಕುರುಡರು ನಡೆಯುವ ದಾರಿಯಲ್ಲಿ ಎಡರು ಕಲ್ಲನ್ನು ಇಡಬೇಡ. ನಿನ್ನ ದೇವರಲ್ಲಿ ಭಯಭಕ್ತಿಯಿರಲಿ. ನಾನೇ ಸರ್ವೇಶ್ವರ.
15 : “ವ್ಯಾಜ್ಯತೀರಿಸುವಾಗ ಅನ್ಯಾಯವಾದ ತೀರ್ಪನ್ನು ಕೊಡಬೇಡ. ಬಡವನ ಬಡತನ ವನ್ನಾಗಲಿ, ದೊಡ್ಡವನ ಘನತೆಯನ್ನಾಗಲಿ ಲಕ್ಷ್ಯಮಾಡದೆ ಪಕ್ಷಪಾತವಿಲ್ಲದ ತೀರ್ಪನ್ನು ಕೊಡು.
16 : “ನಿನ್ನ ಜನರ ನಡುವೆ ಚಾಡಿಕೋರನಾಗಿ ತಿರುಗಾಡಬೇಡ; ಮತ್ತೊಬ್ಬನಿಗೆ ಮರಣಶಿಕ್ಷೆ ಆಗಲೇಬೇಕೆಂದು ಛಲ ಹಿಡಿಯಬೇಡ. ನಾನೇ ಸರ್ವೇಶ್ವರ.
17 : “ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡ. ನೆರೆಯವನ ದೋಷಕ್ಕೆ ನೀನು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ಎತ್ತಿ ತೋರಿಸಲೇಬೇಕು.
18 : ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡ, ಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡ, ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು. ನಾನು ಸರ್ವೇಶ್ವರ.
19 : “ನನ್ನ ಆಜ್ಞೆಗಳನ್ನು ನೀನು ಅನುಸರಿಸಿ ನಡೆಯಬೇಕು. ನಿನ್ನ ಜಾನುವಾರುಗಳಿಂದ ಬೆರಕೆ ತಳಿಯನ್ನು ಪಡೆಯಲು ಅವಕಾಶವೀಯಬಾರದು; ನಿನ್ನ ಹೊಲದಲ್ಲಿ ಇಬ್ಬಗೆಯ ಬೀಜವನ್ನು ಬಿತ್ತಬಾರದು; ನಾರು ಮತ್ತು ಉಣ್ಣೆಯಿಂದ ನೇಯ್ದ ಬಟ್ಟೆಯನ್ನು ಹಾಕಿಕೊಳ್ಳಬಾರದು.
20 : “ಒಬ್ಬನ ಅಧೀನದಲ್ಲಿರುವ ದಾಸಿ ಹಣ ಕೊಡುವುದರಿಂದಾಗಲಿ, ಉಚಿತವಾಗಿಯಾಗಲಿ ಬಿಡುಗಡೆ ಹೊಂದದೆ ಇರುವಾಗ ಇನ್ನೊಬ್ಬ ವ್ಯಕ್ತಿ ಅವಳನ್ನು ಕೂಡಿದರೆ ಅವರಿಗೆ ವಿಧಿಸಬೇಕಾದ ಶಿಕ್ಷೆಯ ಬಗ್ಗೆ ನ್ಯಾಯವಿಚಾರಣೆ ಆಗಬೇಕು. ಆದರೆ ಮರಣಶಿಕ್ಷೆ ವಿಧಿಸಬಾರದು. ಏಕೆಂದರೆ ಅವಳು ಇನ್ನೂ ದಾಸಿ.
21 : ಆ ವ್ಯಕ್ತಿ ಪ್ರಾಯಶ್ಚಿತ್ತ ಬಲಿಗಾಗಿ ಸರ್ವೇಶ್ವರನ ಸನ್ನಿಧಿಗೆ, ದೇವದರ್ಶನದ ಗುಡಾರದ ಬಾಗಿಲಿಗೆ ಒಂದು ಟಗರನ್ನು ತರಬೇಕು.
22 : ಅವನ ದೋಷಪರಿಹಾರಕ್ಕಾಗಿ ಯಾಜಕನು ಆ ಟಗರನ್ನು ಪ್ರಾಯಶ್ಚಿತ್ತ ಬಲಿಯಾಗಿ ಸರ್ವೇಶ್ವರನಿಗೆ ಸಮರ್ಪಿಸಿ ಅವನ ಪರವಾಗಿ ದೋಷಪರಿಹಾರ ಮಾಡಿದಾಗ ಅವನಿಗೆ ಕ್ಷಮೆ ದೊರಕುವುದು.
23 : “ನೀವು ಆ ಕಾನಾನ್ ನಾಡನ್ನು ಸೇರಿದಾಗ ಆಹಾರಕ್ಕಾಗಿ ಯಾವ ಜಾತಿಯ ಹಣ್ಣಿನ ಸಸಿಯನ್ನು ನೆಟ್ಟರೂ ಅದರ ಫಲವನ್ನು ಮೂರು ವರ್ಷದ ತನಕ ಅಶುದ್ಧವೆಂದೆಣಿಸಿ ಅದನ್ನು ತಿನ್ನದಿರಬೇಕು.
24 : ನಾಲ್ಕನೆಯ ವರ್ಷ ಅದರ ಎಲ್ಲಾ ಹಣ್ಣುಗಳೂ ದೇವರವಾಗಿರಬೇಕು; ಅವುಗಳನ್ನು ಸರ್ವೇಶ್ವರನಿಗೆ ಕೃತಜ್ಞತೆಯ ಕಾಣಿಕೆಯನ್ನಾಗಿ ಸಮರ್ಪಿಸಬೇಕು.
25 : ಐದನೆಯ ವರ್ಷದಲ್ಲಿ ಅಂದು ಮೊದಲ್ಗೊಂಡು ಅದರ ಫಲಗಳನ್ನು ನೀವು ತಿನ್ನಬಹುದು. ನಿಮಗೆ ಹೆಚ್ಚು ಫಲ ದೊರಕುವುದು. ನಿಮ್ಮ ದೇವರಾದ ಸರ್ವೇಶ್ವರ ನಾನೇ.
26 : “ರಕ್ತಸಹಿತವಾದ ಯಾವ ಮಾಂಸವನ್ನೂ ತಿನ್ನಬೇಡ. ತಂತ್ರಮಂತ್ರಗಳನ್ನು ಮಾಡಬೇಡ; ಶಕುನಗಳನ್ನು ನೋಡಬೇಡ.
27 : ಚಂಡಿಕೆ ಬಿಡಬೇಡ; ಗಡ್ಡವನ್ನು ವಿಕಾರಗೊಳಿಸಬೇಡ.
28 : ಸತ್ತವರಿಗಾಗಿ ಸಂತಾಪ ಸೂಚಿಸಲು ದೇಹವನ್ನು ಗಾಯಗೊಳಿಸಿ ಕೊಳ್ಳಬೇಡ. ಶರೀರದ ಮೇಲೆ ಹಚ್ಚೆಚುಚ್ಚಿಸಿಕೊಳ್ಳಬೇಡ. ನಾನು ಸರ್ವೇಶ್ವರ.
29 : “ಮಗಳನ್ನು ಬಸವಿಬಿಟ್ಟು ವೇಶ್ಯೆಯನ್ನಾಗಿ ಮಾಡಬೇಡ. ಹಾಗೆ ಮಾಡಿದರೆ ಸೂಳೆಗಾರಿಕೆ ಪ್ರಬಲವಾಗಿ ನಾಡಿನಲ್ಲೆಲ್ಲಾ ತುಂಬಿ ಹೋಗುವುದು.
30 : ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ಆಚರಿಸಬೇಕು. ನನ್ನ ಆಲಯದ ಬಗ್ಗೆ ಭಯಭಕ್ತಿಯುಳ್ಳವರಾಗಿರಬೇಕು. ನಾನು ಸರ್ವೇಶ್ವರ.
31 : “ಭೂತಪ್ರೇತಗಳನ್ನು ವಿಚಾರಿಸುವವರ ಬಳಿಗೆ ಹೋಗಬೇಡ; ಅವರ ಆಲೋಚನೆಯನ್ನು ಕೇಳಿ ಅಶುದ್ಧನಾಗಬೇಡ. ನಾನು ಸರ್ವೇಶ್ವರ.
32 : “ತಲೆನರೆತ ವೃದ್ಧರ ಮುಂದೆ ಎದ್ದುನಿಂತು ಅವರನ್ನು ಸನ್ಮಾನಿಸಬೇಕು. ನಿನ್ನ ದೇವರಲ್ಲಿ ಭಯ ಭಕ್ತಿಯುಳ್ಳವನಾಗಿರಬೇಕು. ನಾನು ಸರ್ವೇಶ್ವರ.
33 : “ನಿಮ್ಮ ನಾಡಿನಲ್ಲಿ ತಂಗಿರುವ ಹೊರನಾಡಿಗರಿಗೆ ಅನ್ಯಾಯವೇನೂ ಮಾಡಬಾರದು.
34 : ಅವರು ನಿಮಗೆ ಸ್ವಂತನಾಡಿನವರಂತೆಯೇ ಇರಬೇಕು. ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಈಜಿಪ್ಟಿನಲ್ಲಿದ್ದಾಗ ನೀವು ಕೂಡ ಅನ್ಯರಾಗಿದ್ದಿರಲ್ಲವೆ? ನಾನು ನಿಮ್ಮ ದೇವರಾದ ಸರ್ವೇಶ್ವರ.
35 : “ನ್ಯಾಯ ವಿಚಾರಣೆ, ತೂಕ, ಅಳತೆ, ಪರಿಮಾಣ ಇವುಗಳಲ್ಲಿ ನೀವು ನ್ಯಾಯವಿರುದ್ಧವಾಗಿ ನಡೆಯಬಾರದು.
36 : ತಕ್ಕಡಿ, ತೂಕದ ಕಲ್ಲು, ಕೊಳಗ, ಸೇರು ಇವುಗಳೆಲ್ಲವು ನ್ಯಾಯಬದ್ಧ ಆಗಿಯೇ ಇರಬೇಕು. ಈಜಿಪ್ಟಿನಿಂದ ನಿಮ್ಮನ್ನು ಬರಮಾಡಿದ ನಿಮ್ಮ ದೇವರಾದ ಸರ್ವೇಶ್ವರ ನಾನೇ.
37 : ಆದುದರಿಂದ ನನ್ನ ಆಜ್ಞಾವಿಧಿಗಳನ್ನೆಲ್ಲಾ ನೀವು ಅನುಸರಿಸಿ ನಡೆಯಬೇಕು. ನಾನು ಸರ್ವೇಶ್ವರ.”

· © 2017 kannadacatholicbible.org Privacy Policy