Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯಾಜಕಕಾಂಡ


1 : ಆರೋನನ ಇಬ್ಬರು ಮಕ್ಕಳು ಸರ್ವೇಶ್ವರಸ್ವಾಮಿಯ ಸನ್ನಿಧಿಗೆ ಬಂದು ನಾಶವಾದ ಮೇಲೆ
2 : ಮೋಶೆಯ ಸಂಗಡ ಸರ್ವೇಶ್ವರ ಮಾತಾಡಿ ಹೇಳಿದ್ದೇನೆಂದರೆ - “ನಿನ್ನ ಅಣ್ಣನಾದ ಆರೋನನು ಮನಸ್ಸಿಗೆ ಬಂದಾಗೆಲ್ಲಾ ತೆರೆಯನ್ನು ದಾಟಿ, ಮಹಾಪವಿತ್ರಸ್ಥಾನದೊಳಕ್ಕೆ ಮಂಜೂಷದ ಮೇಲಿನ ಕೃಪಾಸನದ ಹತ್ತಿರಕ್ಕೆ ಬರಬಾರದೆಂದು ಅವನಿಗೆ ಹೇಳು. ಬಂದರೆ ನಾಶವಾಗುವನು. ಏಕೆಂದರೆ ನಾನು ಕೃಪಾಸನದ ಮೇಲೆ ಮೇಘದಲ್ಲಿ ಕಾಣಿಸಿಕೊಳ್ಳುವೆನು.
3 : ಆರೋನನು ಮಹಾಪವಿತ್ರ ಸ್ಥಾನದೊಳಗೆ ಬರುವಾಗ ಈ ರೀತಿಯಾಗಿ ಬರಬೇಕು: ದೋಷಪರಿಹಾರಕ ಬಲಿಗಾಗಿ ಹೋರಿಯನ್ನೂ ದಹನಬಲಿಗಾಗಿ ಟಗರನ್ನೂ ತರಬೇಕು.
4 : ಅವನು ಪರಿಶುದ್ಧವಾದ ನಾರಿನ ನಿಲುವಂಗಿಯನ್ನೂ ತೊಟ್ಟುಕೊಂಡು ನಾರಿನ ಚಡ್ಡಿಯನ್ನು ಹಾಕಿಕೊಂಡು ನಾರಿನ ನಡುಕಟ್ಟನ್ನು ಕಟ್ಟಿಕೊಂಡು ತಲೆಗೆ ಪೇಟವನ್ನು ಸುತ್ತಿಕೊಳ್ಳಬೇಕು. ಅವು ದೀಕ್ಷಾವಸ್ತ್ರಗಳಾದುದರಿಂದ ಅವನು ಅವುಗಳನ್ನು ಧರಿಸಿಕೊಳ್ಳುವುದಕ್ಕೆ ಮುಂಚೆ ಸ್ನಾನ ಮಾಡಬೇಕು.
5 : ಇಸ್ರಯೇಲರ ಸಮಾಜದಿಂದ ದೋಷಪರಿಹಾರಕ ಬಲಿಗಾಗಿ ಎರಡು ಹೋತಗಳನ್ನೂ ದಹನಬಲಿಗಾಗಿ ಒಂದು ಟಗರನ್ನೂ ತೆಗೆದುಕೊಂಡು ಬರಬೇಕು
6 : ಆರೋನನು ತನಗಾಗಿ ತಂದ ಹೋರಿಯನ್ನು ಸಮರ್ಪಿಸಿ ತನ್ನ ಹಾಗು ತನ್ನ ಮನೆತನದವರ ಪರವಾಗಿ ಪಶ್ಚಾತ್ತಾಪ ವಿಧಿಯನ್ನು ನೆರವೇರಿಸಬೇಕು.
7 : ಆ ಎರಡು ಹೋತಗಳನ್ನು ಅವನು ದೇವದರ್ಶನದ ಗುಡಾರದ ಬಾಗಿಲಲ್ಲಿ ಸರ್ವೇಶ್ವರನ ಸನ್ನಿಧಿಯಲ್ಲಿ ನಿಲ್ಲಿಸಬೇಕು.
8 : ಆಗ ಅವನು ಆ ಹೋತಗಳಲ್ಲಿ ಯಾವುದು ಸರ್ವೇಶ್ವರನಿಗೆ, ಯಾವುದು ಅಜಾಜೇಲನಿಗೆ ಎಂದು ತಿಳಿದುಕೊಳ್ಳಲು ದಾಳಹಾಕಬೇಕು.
9 : ಯಾವ ಹೋತ ಸರ್ವೇಶ್ವರನದೆಂದು ಗೊತ್ತಾಗುವುದೋ ಅದನ್ನು ಆರೋನನು ದೋಷಪರಿಹಾರಕ ಬಲಿಯಾಗಿ ಸಮರ್ಪಿಸಬೇಕು.
10 : ಯಾವ ಹೋತ ಅಜಾಜೇಲನದೆಂದು ಗೊತ್ತಾಗುವುದೋ ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ, ಅದರ ಮೇಲೆ ದೋಷಹೊರಿಸಿ, ಮರುಭೂಮಿಗೆ ಅಜಾಜೇಲನಿಗಾಗಿ ಬಿಡಿಸಿಬಿಡಬೇಕು.
11 : “ಆರೋನನು ತನಗಾಗಿ ದೋಷಪರಿಹಾರಕ ಬಲಿಯ ಹೋರಿಯನ್ನು ಸಮರ್ಪಿಸಿ ತನ್ನ ಹಾಗು ತನ್ನ ಮನೆತನದವರ ಪರವಾಗಿ ಪ್ರಾಯಶ್ಚಿತ್ತವಿಧಿಯನ್ನು ನೆರವೇರಿಸಬೇಕು.
12 : ಅವನು ತನಗೋಸ್ಕರವಾದ ಆ ಹೋರಿಯನ್ನು ವಧಿಸಿದ ಮೇಲೆ ಸರ್ವೇಶ್ವರನ ಸನ್ನಿಧಿಯಲ್ಲಿರುವ ವೇದಿಕೆಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ ಪರಿಮಳ ಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ತೆರೆಯನ್ನು ದಾಟಿ,
13 : ಆ ಧೂಪವನ್ನು ಸರ್ವೇಶ್ವರನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣನಷ್ಟವಾಗದಂತೆ ಧೂಪದ ಹೊಗೆ ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು ಮುಟ್ಟುವುದು.
14 : ಆಗ ಆ ಹೋರಿಯ ರಕ್ತದಲ್ಲಿ ಸ್ವಲ್ಪ ತೆಗೆದುಕೊಂಡು ಕೃಪಾಸನದ ಪೂರ್ವ ಭಾಗದ ಮೇಲೆ ಬೆರಳಿನಿಂದ ಚಿಮುಕಿಸಿ ಕೃಪಾಸನದ ಎದುರಾಗಿಯೂ ಏಳು ಸಾರಿ ಚಿಮುಕಿಸಬೇಕು.
15 : “ತರುವಾಯ ಅವನು ಜನರ ಪರವಾಗಿ ದೋಷಪರಿಹಾರಕ ಬಲಿಯ ಹೋತವನ್ನು ವಧಿಸಿ ಅದರ ರಕ್ತವನ್ನು ತೆರೆಯೊಳಗೆ ತಂದು ಹೋರಿಯ ರಕ್ತದಿಂದ ಮಾಡಿದಂತೆಯೇ ಇದರ ರಕ್ತದಿಂದಲೂ ಮಾಡಿ ಕೃಪಾಸನದ ಮೇಲೆಯೂ ಎದುರಾಗಿಯೂ ಚಿಮುಕಿಸಬೇಕು.
16 : ಹೀಗೆ ಇಸ್ರಯೇಲರು ನಾನಾ ವಿಧವಾದ ಅಶುದ್ಧತ್ವ, ಅಪರಾಧ, ದ್ರೋಹ ಇವುಗಳಿಂದ ಮಹಾಪವಿತ್ರ ಸ್ಥಾನಕ್ಕೆ ಉಂಟುಮಾಡಿದ ದೋಷವನ್ನು ಆರೋನನು ಪರಿಹರಿಸುವನು. ಅಶುದ್ಧರಾದ ಅವರ ನಡುವೆ ಇರುವ ದೇವದರ್ಶನದ ಗುಡಾರಕ್ಕೂ ಹಾಗೆಯೇ ದೋಷಪರಿಹಾರಮಾಡುವನು.
17 : ಅವನು ದೋಷಪರಿಹಾರ ಮಾಡುವುದಕ್ಕಾಗಿ ಮಹಾಪವಿತ್ರಸ್ಥಾನದೊಳಗೆ ಹೋಗಿ ಹೊರಗೆ ಬರುವ ತನಕ ಯಾರೂ ದೇವದರ್ಶನದ ಗುಡಾರದೊಳಗೆ ಹೋಗಕೂಡದು. ಹಾಗೆ ತನ್ನ ಹಾಗು ಮನೆತನದವರ ಪರವಾಗಿ ಮತ್ತು ಇಸ್ರಯೇಲರ ಇಡೀ ಸಮಾಜದ ಪರವಾಗಿ ಪ್ರಾಯಶ್ಚಿತ್ತ ಮಾಡುವನು.
18 : ತರುವಾಯ ಅವನು ಹೊರಗೆ ಬಂದು ಸರ್ವೇಶ್ವರನ ಸನ್ನಿಧಿಯಲ್ಲಿರುವ ಬಲಿಪೀಠದ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲೂ ಆ ಹೋತದ ರಕ್ತದಲ್ಲೂ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಪೀಠದ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು.
19 : ಅವನು ಆ ರಕ್ತದಲ್ಲಿ ಸ್ವಲ್ಪವನ್ನು ಅದರ ಮೇಲೆ ಏಳು ಸಾರಿ ಬೆರಳಿನಿಂದ ಚಿಮಕಿಸಿ ಇಸ್ರಯೇಲರಿಂದ ಅದಕ್ಕುಂಟಾದ ಅಶುದ್ಧತ್ವವನ್ನು ಹೋಗಲಾಡಿಸಿ ಅದನ್ನು ಪರಿಶುದ್ಧಪಡಿಸಬೇಕು.
20 : “ಮಹಾಪವಿತ್ರಸ್ಥಾನ, ದೇವದರ್ಶನದ ಗುಡಾರ, ಪೀಠ, ಇವುಗಳಿಗೋಸ್ಕರ ಆರೋನನು ದೋಷಪರಿಹಾರ ಮಾಡಿ ಮುಗಿಸಿದ ಮೇಲೆ, ಆ ಸಜೀವವಾದ ಹೋತವನ್ನು ತರಿಸಿ,
21 : ಅದರ ತಲೆಯ ಮೇಲೆ ಎರಡು ಕೈಗಳನ್ನೂ ಇಟ್ಟು ಇಸ್ರಯೇಲರ ಎಲ್ಲಾ ಪಾಪಗಳನ್ನೂ ದ್ರೋಹಗಳನ್ನೂ ಅಪರಾಧಗಳನ್ನೂ ಸರ್ವೇಶ್ವರನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ, ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಮರುಭೂಮಿಗೆ ಕಳಿಸಿಬಿಡಬೇಕು.
22 : ಆ ಹೋತ ಅವರ ಎಲ್ಲಾ ಪಾಪಗಳನ್ನೂ ತನ್ನ ಮೇಲೆ ಹೊತ್ತುಕೊಂಡು ದುರ್ಗಮವಾದ ಪ್ರದೇಶಕ್ಕೆ ಒಯ್ಯುವಂತೆ ಆ ಮನುಷ್ಯನು ಅದನ್ನು ಮರುಭೂಮಿಗೆ ತೆಗೆದುಕೊಂಡು ಹೋಗಿ ಅಲ್ಲೇ ಬಿಟ್ಟುಬಿಡಬೇಕು.
23 : “ತರುವಾಯ ಆರೋನನು ದೇವದರ್ಶನದ ಗುಡಾರದೊಳಗೆ ಬಂದು, ತಾನು ಮಹಾಪವಿತ್ರ ಸ್ಥಾನದೊಳಗೆ ಹೋಗುವುದಕ್ಕಾಗಿ ಧರಿಸಿಕೊಂಡಿದ್ದ ನಾರುಮಡಿಗಳನ್ನು ತೆಗೆದು ಅಲ್ಲೇ ಇಟ್ಟು,
25 : ಅವನು ದೋಷಪರಿಹಾರಕ ಬಲಿಪ್ರಾಣಿಗಳ ಕೊಬ್ಬನ್ನು ಬಲಿಪೀಠದ ಮೇಲೆ ಹೋಮ ಮಾಡಬೇಕು.
26 : “ಅಜಾಜೇಲನಿಗೆ ಹೋತವನ್ನು ಬಿಟ್ಟು ಬಂದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯಕ್ಕೆ ಬರಬೇಕು.
27 : ದೋಷಪರಿಹಾರಕ ಬಲಿಪ್ರಾಣಿಗಳಾದ ಹೋರಿಹೋತಗಳ ರಕ್ತವನ್ನು ಮಹಾಪವಿತ್ರಸ್ಥಾನದಲ್ಲಿ ದೋಷಪರಿಹಾರ ಮಾಡುವುದಕ್ಕಾಗಿ ತಂದ ಮೇಲೆ ಅವುಗಳ ದೇಹಗಳನ್ನು ಪಾಳೆಯದ ಆಚೆಗೆ ತೆಗೆದುಕೊಂಡುಹೋಗಿ ಚರ್ಮ, ಮಾಂಸ, ಕಲ್ಮಷಗಳೆಲ್ಲವನ್ನೂ ಬೆಂಕಿಯಿಂದ ಸುಡಿಸಿಬಿಡಬೇಕು.
28 : ಅವುಗಳನ್ನು ಸುಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯದೊಳಗೆ ಬರಬೇಕು.
29 : “ಇದು ನಿಮಗೆ ಶಾಶ್ವತವಾದ ನಿಯಮ: ಸ್ವದೇಶಿಯರಾದ ನೀವೂ ನಿಮ್ಮಲ್ಲಿ ವಾಸಮಾಡುವ ಅನ್ಯದೇಶದವರೆಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನ ಸಕಲ ವಿಧವಾದ ದುಡಿಮೆಗಳನ್ನು ಬಿಟ್ಟು ತಮ್ಮನ್ನೇ ಪರಿತ್ಯಜಿಸಿಕೊಳ್ಳಬೇಕು.
30 : ಏಕೆಂದರೆ ನೀವು ಪರಿಶುದ್ಧರಾಗುವಂತೆ ಈ ದಿನ ನಿಮ್ಮ ಪರವಾಗಿ ಪ್ರಾಯಶ್ಚಿತ್ತ ಮಾಡಲಾಗುವುದು. ಸರ್ವೇಶ್ವರನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುವುವು.
31 : ಇದು ನಿಮಗೆ ಪೂರ್ತಿ ದುಡಿಮೆ ನಿಲ್ಲಿಸಬೇಕಾದ ಸಬ್ಬತ್ ದಿನವಾಗಿರಬೇಕು; ಇದರಲ್ಲಿ ನೀವು ಉಪವಾಸ ಇರಬೇಕು; ನಿಮಗಿದು ಶಾಶ್ವತ ನಿಯಮ.
32 : “ಆರೋನನ ವಂಶದವರಲ್ಲಿ ಯಾವನಿಗೆ ಪಿತೃಸ್ಥಾನದಲ್ಲಿ ಮಹಾಯಾಜಕನ ಸೇವಾವೃತ್ತಿ ಯನ್ನು ನಡೆಸುವುದಕ್ಕೆ ಪಟ್ಟಾಭಿಷೇಕವಾಗುವುದೋ ಅವನೇ ಈ ದೋಷಪರಿಹಾರ ಕಾರ್ಯವನ್ನು ನೆರವೇರಿಸಬೇಕು.
33 : ಅವನೇ ಆ ನಾರುಮಡಿಗಳನ್ನು ಧರಿಸಿಕೊಂಡು ಪರಿಶುದ್ಧವಾದ ದೇವಸ್ಥಾನ, ದೇವದರ್ಶನದ ಗುಡಾರ, ಬಲಿಪೀಠ, ಯಾಜಕರು, ಜನಸಮೂಹದವರು ಈ ಎಲ್ಲರ ಪರವಾಗಿ ಪ್ರಾಯಶ್ಚಿತ್ತ ವಿಧಿಯನ್ನು ನೆರವೇರಿಸಬೇಕು.
34 : ಇಸ್ರಯೇಲರ ಎಲ್ಲಾ ದೋಷಗಳನ್ನು ನಿವಾರಣೆ ಮಾಡುವುದಕ್ಕಾಗಿ ಅವರಿಗೋಸ್ಕರ ವರ್ಷಕ್ಕೆ ಒಂದಾವರ್ತಿ ಪ್ರಾಯಶ್ಚಿತ್ತ ಮಾಡಬೇಕಾದುದು ನಿಮಗೆ ಶಾಶ್ವತ ನಿಯಮವಾಗಿರಬೇಕು.” ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.

· © 2017 kannadacatholicbible.org Privacy Policy