Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ದಾನಿಯೇಲ


1 : ಅದು, ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷ. ಈತನು ಅಹಷ್ವೇರೋಷನ ಮಗ, ಮೇದ್ಯ ವಂಶದವನು ಹಾಗು ಬಾಬಿಲೋನಿನ ರಾಜ್ಯದ ದೊರೆ.
2 : ದಾನಿಯೇಲನಾದ ನಾನು ಪವಿತ್ರಗ್ರಂಥಗಳನ್ನು ಪರೀಕ್ಷಿಸಿ, ಸರ್ವೇಶ್ವರಸ್ವಾಮಿ ಪ್ರವಾದಿ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ ಜೆರುಸಲೇಮ್ ಪಾಳುಬಿದ್ದಿರಬೇಕಾದ ಪೂರ್ಣಕಾಲಾವಧಿ ಎಪ್ಪತ್ತು ವರ್ಷಗಳೆಂದು ತಿಳಿದುಕೊಂಡೆ.
3 : ಉಪವಾಸವಿದ್ದು, ಗೋಣಿತಟ್ಟು ಸುತ್ತಿಕೊಂಡು, ಬೂದಿ ಬಳಿದುಕೊಂಡು, ಸರ್ವೇಶ್ವರನಾದ ದೇವರ ಕಡೆಗೆ ಮುಖವೆತ್ತಿ, ಪ್ರಾರ್ಥನೆ – ವಿಜ್ಞಾಪನೆಗಳಲ್ಲಿ ನಿರತನಾದೆ.
4 : ಪಾಪವನ್ನು ಅರಿಕೆಮಾಡಿ ನನ್ನ ದೇವರಾದ ಸರ್ವೇಶ್ವರನಿಗೆ ಹೀಗೆಂದು ಬಿನ್ನವಿಸಿದೆ: “ಹೇ ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ದೇವರೇ, ನಿಮ್ಮನ್ನು ಪ್ರೀತಿಸಿ, ನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ವಾಗ್ದಾನಗಳನ್ನು ಪ್ರೀತಿಯಿಂದ ನೆರವೇರಿಸುತ್ತೀರಿ.
5 : “ನಾವು ಪಾಪಾಪರಾಧಗಳನ್ನು ಮಾಡಿ, ಕೆಟ್ಟವರಾಗಿ ನಡೆದಿದ್ದೇವೆ; ನಿಮಗೆ ವಿರುದ್ಧ ತಿರುಗಿಬಿದ್ದು, ನಿಮ್ಮ ಆಜ್ಞಾವಿಧಿಗಳನ್ನು ತೊರೆದು ಬಿಟ್ಟಿದ್ದೇವೆ.
6 : ಅರಸರಿಗೆ, ಒಡೆಯರಿಗೆ, ಹಿರಿಯರಿಗೆ ಹಾಗು ಜನಸಾಮಾನ್ಯರಿಗೆ ನಿಮ್ಮ ದಾಸರಾದ ಪ್ರವಾದಿಗಳು ನಿಮ್ಮ ಹೆಸರಿನಲ್ಲಿ ನುಡಿದ ಮಾತುಗಳಿಗೆ ನಾವು ಕಿವಿಗೊಡಲೇ ಇಲ್ಲ.
7 : ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಾವೋ ಲಜ್ಜೆಗೆಟ್ಟವರು. ಹೌದು, ಯೆಹೂದ್ಯರು ಹಾಗು ಜೆರುಸಲೇಮಿನ ನಿವಾಸಿಗಳು ಈಗಾಗಲೆ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ತಳ್ಳಲ್ಪಟ್ಟಿದ್ದಾರೆ. ದೂರದ ದೇಶಗಳಿಗೂ ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಎಲ್ಲ ಇಸ್ರಯೇಲರು ನಾಚಿಕೆಗೆ ಈಡಾಗಿದ್ದಾರೆ.
8 : ಸ್ವಾಮೀ, ನಿಮಗೆ ವಿರುದ್ಧ ಪಾಪಮಾಡಿದ್ದರಿಂದ ನಾವೂ ನಮ್ಮ ಅರಸರೂ ಒಡೆಯರೂ ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ.
9 : ನಮ್ಮ ದೇವರಾದ ಸರ್ವೇಶ್ವರ, ನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆ. ಆದರೆ ನಾವು ಅವರಿಗೆ ವಿರುದ್ಧ ತಿರುಗಿಬಿದ್ದೆವು.
10 : ನಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳಲಿಲ್ಲ. ಅವರ ದಾಸರಾದ ಪ್ರವಾದಿಗಳ ಮುಖಾಂತರ ನಮಗೆ ಗೊತ್ತುಮಾಡಿದ ಸನ್ಮಾರ್ಗದಲ್ಲಿ ನಾವು ನಡೆಯಲಿಲ್ಲ.
11 : ಇಸ್ರಯೇಲರೆಲ್ಲರು ನಿಮ್ಮ ಧರ್ಮಶಾಸ್ತ್ರವನ್ನು ಮೀರಿ ನಿಮ್ಮ ಮಾತನ್ನು ಕೇಳಲೊಲ್ಲದೆ ಓರೆಯಾಗಿ ಹೋದರು. ಆದಕಾರಣ ನಿಮ್ಮ ಶಾಪದ ಕೇಡುಗಳನ್ನೂ ದೇವರ ದಾಸನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ನೀವು ಆಣೆಯಿಟ್ಟು ಪ್ರಕಟಿಸಿದ ವಿಪತ್ತುಗಳನ್ನೂ ನಮ್ಮ ಮೇಲೆ ಸುರಿಯಲಾಗಿದೆ. ನಾವು ದ್ರೋಹಿಗಳೇ ಸರಿ.
12 : ನಮ್ಮ ದೇವರು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿದ್ದಾರೆ. ನಮ್ಮನ್ನೂ ನಮ್ಮನ್ನಾಳುವ ಅಧಿಪತಿಗಳನ್ನೂ ಖಂಡಿಸಿ ಹೇಳಿದ ಮಾತುಗಳನ್ನು ನೆರೆವೇರಿಸಿದ್ದಾರೆ. ಜೆರುಸಲೇಮಿಗೆ ಆದಂಥ ಕೇಡು ವಿಶ್ವದಲ್ಲಿ ಎಂದೂ ಆಗಲಿಲ್ಲ.
13 : ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆಯೇ ಈ ವಿಪತ್ತೆಲ್ಲಾ ನಮ್ಮ ಮೇಲೆ ಬಂದಿದೆ. ಆದರೂ ನಾವು ನಮ್ಮ ಧರ್ಮಮಾರ್ಗಗಳನ್ನು ತೊರೆದುಬಿಟ್ಟಿದ್ದೇವೆ. ನಿಮ್ಮ ಸತ್ಯೋಪದೇಶವನ್ನು ಗ್ರಹಿಸಿ ನಡೆಯುವಂತೆ ನಮ್ಮ ದೇವರಾದ ಸರ್ವೇಶ್ವರನೆಂಬ ನಿಮ್ಮ ದಯೆಯನ್ನು ಬೇಡಿಕೊಳ್ಳಲಿಲ್ಲ.
14 : ಆದಕಾರಣ ಸರ್ವೇಶ್ವರ ಈ ಕೇಡನ್ನು ಸಕಾಲಕ್ಕೆ ನಮ್ಮ ಮೇಲೆ ಬರಮಾಡಿದ್ದಾರೆ. ನಮ್ಮ ದೇವರಾದ ಸರ್ವೇಶ್ವರ ತಾವು ಮಾಡುವ ಸಕಲ ಕಾರ್ಯಗಳಲ್ಲೂ ನ್ಯಾಯಸ್ವರೂಪರು. ನಾವೋ ಅವರ ಮಾತನ್ನು ಕೇಳಲಿಲ್ಲ.
15 : “ಸರ್ವೇಶ್ವರಾ, ನಮ್ಮ ದೇವರೇ, ನೀವು ನಿಮ್ಮ ಭುಜ ಪರಾಕ್ರಮವನ್ನು ತೋರಿಸಿ, ನಿಮ್ಮ ಜನರನ್ನು ಈಜಿಪ್ಟಿನಿಂದ ಪಾರುಮಾಡಿ, ಇಂದಿನವರೆಗೂ ಸುಪ್ರಸಿದ್ಧವಾದ ಹೆಸರನ್ನು ಪಡೆದುಕೊಂಡವರಾಗಿದ್ದೀರಿ. ಈಗ ಚಿತ್ತೈಸಿ. ನಾವು ಪಾಪಮಾಡಿ ಕೆಟ್ಟವರಾಗಿ ನಡೆದಿದ್ದೇವೆ.
16 : ಸರ್ವೇಶ್ವರಾ, ನಿಮ್ಮ ಸಮಸ್ತ ಧರ್ಮಕಾರ್ಯಗಳಿಗೆ ಅನುಸಾರವಾಗಿ ನಿಮ್ಮ ನಗರವೂ ನಿಮ್ಮ ಪವಿತ್ರ ಪರ್ವತವೂ ಆದ ಜೆರುಸಲೇಮ್ ಮೇಲೆ ನಿಮಗಿರುವ ಕೋಪವನ್ನೂ ರೋಷಾಗ್ನಿಯನ್ನೂ ದಯಮಾಡಿ ತೊಲಗಿಸಿಬಿಡಿ. ನಮ್ಮ ಮತ್ತು ನಮ್ಮ ಪೂರ್ವಜರ ಪಾಪಾಪರಾಧಗಳ ನಿಮಿತ್ತ ಜೆರುಸಲೇಮ್ ಮತ್ತು ನಿಮ್ಮ ಜನತೆ ನೆರೆ ಹೊರೆಯವರೆಲ್ಲರ ನಿಂದೆಗೆ ಗುರಿಯಾಗಿವೆ.
17 : ಓ ನಮ್ಮ ದೇವರೇ, ನಿಮ್ಮ ದಾಸನ ಪ್ರಾರ್ಥನೆ ವಿಜ್ಞಾಪನೆಗಳನ್ನು ಈಗ ಆಲಿಸಿರಿ. ಹಾಳಾಗಿರುವ ನಿಮ್ಮ ಪವಿತ್ರಾಲಯವನ್ನು ಸರ್ವೇಶ್ವರ ಎಂಬ ನಿಮ್ಮ ಹೆಸರಿನ ನಿಮಿತ್ತವೇ ಪ್ರಸನ್ನ ಮುಖದಿಂದ ನೋಡಿ.
18 : ನನ್ನ ದೇವರೇ, ಕಿವಿಗೊಟ್ಟು ಕೇಳಿ. ಕಣ್ಣುತೆರೆದು ನಮ್ಮ ಹಾಳು ಪ್ರದೇಶಗಳನ್ನೂ ನಿಮ್ಮ ಹೆಸರುಗೊಂಡಿರುವ ನಗರವನ್ನೂ ನೋಡಿ. ನಾವು ಸದ್ಧರ್ಮಿಗಳೇನೂ ಅಲ್ಲ. ನಿಮ್ಮ ಮಹಾಕೃಪೆಯನ್ನೇ ನಂಬಿಕೊಂಡು ಈ ಬಿನ್ನಹಗಳನ್ನು ನಿಮ್ಮ ಮುಂದೆ ಅರಿಕೆ ಮಾಡುತ್ತಿದ್ದೇವೆ.
19 : ಸ್ವಾಮೀ, ಕೇಳಿ; ಸ್ವಾಮೀ, ಕ್ಷಮಿಸಿ; ಸ್ವಾಮೀ, ಆಲಿಸಿ ಕಾರ್ಯವನ್ನು ಸಾಧಿಸಿ ತಡಮಾಡಬೇಡಿ. ನನ್ನ ದೇವರೇ, ನಿಮ್ಮ ಜನತೆ ಹಾಗು ನಿಮ್ಮ ನಗರ ನಿಮ್ಮ ಹೆಸರಿನವುಗಳು. ಆದಕಾರಣ, ನಿಮ್ಮ ಹೆಸರನ್ನು ಕಾಪಾಡಿಕೊಳ್ಳಿ.”
20 : ನಾನು ಬಾಯಿಬಿಟ್ಟು ಬೇಡಿಕೊಂಡೆ. ನನ್ನ ಮತ್ತು ನನ್ನ ಜನರಾದ ಇಸ್ರಯೇಲರ ಪಾಪವನ್ನು ಅರಿಕೆಮಾಡುತ್ತಾ ನನ್ನ ದೇವರ ಪವಿತ್ರ ಪರ್ವತದ ವಿಷಯವಾಗಿ ದೇವರಾದ ಸರ್ವೇಶ್ವರನಿಗೆ ಬಿನ್ನವಿಸಿದೆ.
21 : ಹೀಗೆ ಪ್ರಾರ್ಥನೆ ಮಾಡುತ್ತಿರುವಾಗಲೇ, ಮೊದಲು ನನ್ನ ಕನಸಿನಲ್ಲಿ ಕಂಡ ಗಬ್ರಿಯೇಲೆಂಬ ವ್ಯಕ್ತಿ ಅಸುರುಸುರಾಗಿ ಹಾರಿ ಬಂದು, ಸಂಧ್ಯಾನೈವೇದ್ಯ ಸಮಯದಲ್ಲಿ ನನ್ನನ್ನು ಸೇರಿ, ನನ್ನೊಂದಿಗೆ ಮಾತಾಡಿ, ಹೀಗೆಂದು ಉಪದೇಶ ಮಾಡಿದನು:
22 : “ದಾನಿಯೇಲನೇ, ನಿನಗೆ ಜ್ಞಾನಬೋಧೆ ಮಾಡಲು ಈಗ ಬಂದಿದ್ದೇನೆ;
23 : ನಿನ್ನ ವಿಜ್ಞಾಪನೆಯ ಆರಂಭದಲ್ಲೇ ದೇವರ ಅಪ್ಪಣೆಯಾಯಿತು. ಅದನ್ನು ನಿನಗೆ ತಿಳಿಸಲು ಇಲ್ಲಿಗೆ ಬಂದಿದ್ದೇನೆ. ನೀನು ದೇವರಿಗೆ ಅತಿ ಪ್ರಿಯನು. ಈ ದೈವೋಕ್ತಿಯನ್ನು ಆಲೋಚಿಸು; ಈ ದರ್ಶನವನ್ನು ಗ್ರಹಿಸಿಕೊ:
24 : “ಅಧರ್ಮವನ್ನು ಕೊನೆಗಾಣಿಸುವುದಕ್ಕೆ ಪಾಪಗಳನ್ನು ತೀರಿಸುವುದಕ್ಕೆ, ಅಪರಾಧವನ್ನು ನಿವಾರಿಸುವುದಕ್ಕೆ, ಸನಾತನ ಧರ್ಮವನ್ನು ಸ್ಥಾಪಿಸುವುದಕ್ಕೆ, ದರ್ಶನವನ್ನೂ ಪ್ರವಾದಿಯ ನುಡಿಯನ್ನೂ ಮುದ್ರೆಹಾಕಿ ಯಥಾರ್ಥಮಾಡುವುದಕ್ಕೆ, ಅತಿಪರಿಶುದ್ಧವಾದುವನ್ನು ಅಭಿಷೇಕಿಸುವುದಕ್ಕೆ ನಿನ್ನ ಜನಕ್ಕೂ ನಿನ್ನ ಪವಿತ್ರ ನಗರಕ್ಕೂ ಏಳೆಪ್ಪತ್ತು ವರ್ಷಗಳು ಕಳೆಯಬೇಕೆಂದು ನಿಷ್ಕರ್ಷೆಯಾಗಿದೆ.
25 : ಇದನ್ನು ತಿಳಿದು ಮನದಟ್ಟು ಮಾಡಿಕೊ. ‘ಹಿಂದಿರುಗಿ ಜೆರುಸಲೇಮನ್ನು ಪುನರ್ ನಿರ್ಮಿಸಿ’ ಎಂಬ ದೈವೋಕ್ತಿ ಹೊರಡುವಂದಿನಿಂದ ಪ್ರಭುವಾಗಿ ಅಭಿಷಿಕ್ತನಾದವನು ಬರುವುದರೊಳಗೆ ಏಳು ಸಾರಿ ಏಳು ವರ್ಷಗಳು ಕಳೆಯಬೇಕು. ಅದು ಪುನಃ ಬೀದಿ ಚೌಕಗಳಿಂದಲೂ ಕೋಟೆಕೊತ್ತಲುಗಳಿಂದಲೂ ಕಟ್ಟಲ್ಪಟ್ಟು ಏಳು ಸಾರಿ ಅರವತ್ತೆರಡು ವರ್ಷಗಳು ಇರುವುದು. ಆ ಕಾಲವು ಬಹು ಕಷ್ಟಕರವಾದ ಕಾಲವಾಗಿರುವುದು.
26 : ಆ ಏಳುಸಾರಿ ಅರವತ್ತೆರಡು ವರ್ಷಗಳು ಮುಗಿದ ಮೇಲೆ ಅಭಿಷಿಕ್ತನನ್ನು ಅನ್ಯಾಯವಾಗಿ ಕೊಲ್ಲುವರು. ದಂಡೆತ್ತಿಬರುವ ರಾಜನ ಜನರು ನಗರವನ್ನೂ ಪವಿತ್ರಾಲಯವನ್ನೂ ಹಾಳುಮಾಡುವರು. ಪ್ರಳಯದಿಂದಲೋ ಎಂಬಂತೆ ನಗರವು ನಾಶವಾಗುವುದು. ಅಂತ್ಯದವರೆಗೆ ಯುದ್ಧವೂ ನಿಶ್ಚಿತ ವಿನಾಶವೂ ಸಂಭವಿಸುವುವು.
27 : ಆ ರಾಜನು ಏಳು ವರ್ಷಗಳ ಮಟ್ಟಿಗೆ ಬಹು ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ಈ ಅವಧಿಯ ಅರ್ಧಭಾಗದಲ್ಲಿ ಬಲಿ ನೈವೇದ್ಯಗಳನ್ನು ನಿಲ್ಲಿಸಿಬಿಡುವನು. ದೇವಾಲಯದ ರೆಕ್ಕೆಯ ಮೇಲೆ ಅಸಹ್ಯವಾದುದನ್ನು ಸ್ಥಾಪಿಸಲಾಗುವುದು. ಅವನ್ನು ಅಲ್ಲಿ ಇಟ್ಟು ಅಶುದ್ಧಗೊಳಿಸಿದ ಘಾತುಕನು ನಿಶ್ಚಿತ ಪ್ರಳಯದಲ್ಲಿ ಮುಳುಗುವ ತನಕ ಅವು ಅಲ್ಲೇ ಇರುವುವು.”

· © 2017 kannadacatholicbible.org Privacy Policy