Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ದಾನಿಯೇಲ


1 : ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಒಂದು ಕನಸುಕಂಡು ತತ್ತರಗೊಂಡನು. ಅವನಿಗೆ ನಿದ್ರೆ ತಪ್ಪಿತು.
2 : ಸರ್ವೇಶ್ವರಸ್ವಾಮಿ ಜುದೇಯದ ಅರಸ ಯೆಹೋಯಾಕೀಮನನ್ನು ಅವನ ಕೈವಶವಾಗುವಂತೆ ಮಾಡಿದರು. ಅಂತೆಯೇ ದೇವಾಲಯದ ಅನೇಕ ಪೂಜಾಪಾತ್ರೆಗಳು ಅವನ ಕೈವಶವಾದವು. ನೆಬೂಕದ್ನೆಚ್ಚರನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ, ತನ್ನ ದೇವರ ಮಂದಿರಕ್ಕೆ ತಂದು, ಆ ದೇವರ ಭಂಡಾರಕ್ಕೆ ಸೇರಿಸಿಕೊಂಡನು.
3 : ರಾಜನು ಅವರಿಗೆ, “ನಾನು ಒಂದು ಕನಸು ಕಂಡೆ. ಅದರ ಅರ್ಥವೇನೋ ಎಂದು ನನ್ನ ಮನಸ್ಸು ತತ್ತರಗೊಂಡಿದೆ,” ಎಂದನು.
4 : ಆ ಪಂಡಿತರು ಅರಮೀಯ ಭಾಷೆಯಲ್ಲಿ ರಾಜನಿಗೆ, “ಅರಸರೇ, ಚಿರಂಜೀವಿಯಾಗಿರಿ! ಆ ಕನಸನ್ನು ನಿಮ್ಮ ದಾಸರಾದ ನಮಗೆ ಹೇಳಿ. ಅದರ ತಾತ್ಪರ್ಯವನ್ನು ತಿಳಿಸುತ್ತೇವೆ,” ಎಂದು ಅರಿಕೆ ಮಾಡಿದರು.
5 : ಆಗ ರಾಜನು ಆ ಪಂಡಿತರಿಗೆ, “ನನ್ನ ಈ ಮಾತು ಖಂಡಿತ: ನೀವು ಈ ಕನಸನ್ನೂ ಅದರ ಉದ್ದೇಶವನ್ನೂ ನನಗೆ ತಿಳಿಸದಿದ್ದರೆ ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುವೆನು; ನಿಮ್ಮ ಮನೆಗಳನ್ನು ತಿಪ್ಪೆಗುಂಡಿಯನ್ನಾಗಿಸುವೆನು.
6 : ನೀವು ಆ ಕನಸನ್ನೂ ಅದರ ಉದ್ದೇಶವನ್ನೂ ತಿಳಿಸಿದ್ದೇ ಆದರೆ ನನ್ನಿಂದ ನಿಮಗೆ ದಾನ ಬಹುಮಾನಗಳೂ ವಿಶೇಷ ಸನ್ಮಾನಗಳೂ ದೊರಕುವುವು. ಆದಕಾರಣ ಆ ಕನಸನ್ನೂ ಅದರ ಉದ್ದೇಶವನ್ನೂ ನನಗೆ ತಿಳಿಸಿ,” ಎಂದನು.
7 : ಪಂಡಿತರು, “ರಾಜರು ತಮ್ಮ ದಾಸರಿಗೆ ಕನಸನ್ನು ತಿಳಿಸೋಣ ವಾಗಲಿ, ನಾವು ಅದರ ತಾತ್ಪರ್ಯವನ್ನು ವಿವರಿಸುವೆವು,” ಎಂದು ಮತ್ತೊಮ್ಮೆ ಉತ್ತರಕೊಟ್ಟರು.
8 : ಅದಕ್ಕೆ ರಾಜನು, “ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ ನಿಮಗೆ ಮರಣದಂಡನೆಯಾಗುವುದು ಖಚಿತವೆಂದು ತಿಳಿದೇ ಕಾಲಹರಣ ಮಾಡುತ್ತಿದ್ದೀರಿ. ಇದು ನನಗೆ ಚೆನ್ನಾಗಿ ಗೊತ್ತು.
9 : ಕಾಲ ಬದಲಾಗುತ್ತಿರುತ್ತದೆ ಎಂದುಕೊಂಡೇ ನನ್ನ ಮುಂದೆ ಇಲ್ಲಸಲ್ಲದ್ದನ್ನು ಆಡಲು ಒಪ್ಪಂದ ಮಾಡಿಕೊಂಡಿದ್ದೀರಿ. ಅಂತು ಆ ಕನಸನ್ನು ನೀವು ನನಗೆ ತಿಳಿಸಲೇಬೇಕು. ಆಗ ಅದರ ಉದ್ದೇಶವನ್ನು ವಿವರಿಸಬಲ್ಲಿರೆಂದು ನಾನು ತಿಳಿದುಕೊಳ್ಳುವೆನು,” ಎಂದು ಹೇಳಿದನು.
10 : ಆಗ ಆ ಪಂಡಿತರು ಸನ್ನಿಧಿಯ ಮುಂದೆ, “ರಾಜರು ಕೇಳುವ ಸಂಗತಿಯನ್ನು ತಿಳಿಸಬಲ್ಲವನು ಈ ಲೋಕದಲ್ಲಿ ಯಾವನೂ ಇಲ್ಲ. ಎಷ್ಟೆಷ್ಟೋ ಬಲಿಷ್ಠರಾದ, ಪ್ರಬಲರಾದ ಯಾವ ಅರಸರೂ ಜೋಯಿಸನನ್ನಾಗಲಿ, ಮಾಟಗಾರನನ್ನಾಗಲಿ, ಪಂಡಿತನನ್ನಾಗಲಿ, ಇಂಥ ಸಂಗತಿಯನ್ನು ಎಂದೂ ಕೇಳಿದ್ದಿಲ್ಲ.
11 : ರಾಜರು ಕೇಳುತ್ತಿರುವ ಸಂಗತಿ ಅತಿಕಷ್ಟವಾದುದು. ನರಮಾನವರ ನಡುವೆ ವಾಸ ಮಾಡದ ದೇವರುಗಳೇ ಹೊರತು ಇನ್ನಾರೂ ರಾಜರ ಸಮ್ಮುಖದಲ್ಲಿ ಇದನ್ನು ತಿಳಿಸಲಾರರು,” ಎಂದು ಉತ್ತರಕೊಟ್ಟರು.
12 : ಇದನ್ನು ಕೇಳಿ ರಾಜನು ಉಗ್ರಕೋಪಗೊಂಡನು. ಬಾಬಿಲೋನಿನ ಸಕಲ ವಿದ್ವಾಂಸರನ್ನು ಕೊಲ್ಲಬೇಕೆಂದು ಆಜ್ಞಾಪಿಸಿದನು.
13 : ಕೂಡಲೆ ಆ ಆಜ್ಞೆ ಹೊರಪಟ್ಟಿತು. ವಿದ್ವಾಂಸರು ಪ್ರಾಣಾಪಾಯಕ್ಕೆ ಗುರಿಯಾದರು. ಅಂತೆಯೇ ದಾನಿಯೇಲನನ್ನೂ ಅವನ ಗೆಳೆಯರೆಲ್ಲರನ್ನೂ ಕೊಲ್ಲಲಿಕ್ಕೆ ಹುಡುಕಿದನು.
14 : ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬಿಲೋನಿನ ವಿದ್ವಾಂಸರ ಸಂಹಾರಕ್ಕಾಗಿ ಹೊರಟಾಗ ದಾನಿಯೇಲನು ಬುದ್ಧಿ ವಿವೇಕಗಳಿಂದ ಅವನ ಸಂಗಡ ಮಾತಾಡಿದನು.
15 : “ಈ ರಾಜಾಜ್ಞೆಯೇಕೆ ಇಷ್ಟು ತೀಕ್ಷ್ಣ?” ಎಂದು ಕೇಳಿದನು. ಅರ್ಯೋಕನು ನಡೆದ ಸಂಗತಿಯನ್ನು ದಾನಿಯೇಲನಿಗೆ ತಿಳಿಸಿದನು.
16 : ಆಮೇಲೆ ದಾನಿಯೇಲನು ಅರಮನೆಗೆ ಹೋಗಿ, “ನನಗೆ ಸಮಯಕೊಟ್ಟರೆ ಆ ಕನಸಿನ ಅರ್ಥವನ್ನು ರಾಜರಿಗೆ ನಾನು ವಿವರಿಸಬಲ್ಲೆ,” ಎಂದು ಅರಿಕೆ ಮಾಡಿದನು.
17 : ಬಳಿಕ ದಾನಿಯೇಲನು ತನ್ನ ಮನೆಗೆ ಹಿಂತಿರುಗಿ ಹನನ್ಯ, ಮೀಶಾಯೇಲ ಮತ್ತು ಅಜರ್ಯ ಎಂಬ ತನ್ನ ಗೆಳೆಯರಿಗೆ ಈ ಸಮಾಚಾರ ತಿಳಿಸಿದನು.
18 : “ನಾವು ಬಾಬಿಲೋನಿನ ಇತರ ವಿದ್ವಾಂಸರೊಂದಿಗೆ ನಾಶವಾಗದಂತೆ ಪರಲೋಕ ದೇವರು ಈ ರಹಸ್ಯದ ವಿಷಯವಾಗಿ ಕೃಪೆ ತೋರುವಂತೆ ಬೇಡಿಕೊಳ್ಳೋಣ,” ಎಂದು ಹೇಳಿದನು.
19 : ಆ ರಾತ್ರಿಯೇ ಸ್ವಪ್ನದಲ್ಲಿ ಕನಸಿನ ಗುಟ್ಟು ದಾನಿಯೇಲನಿಗೆ ವ್ಯಕ್ತವಾಯಿತು. ಕೂಡಲೆ ಆತನು ಪರಲೋಕ ದೇವರನ್ನು ಹೀಗೆಂದು ಸ್ತುತಿಸಿದನು:
20 : ಯುಗಯುಗಾಂತರಕ್ಕೂ ದೇವರ ನಾಮಕ್ಕೆ ಸ್ತುತಿಸ್ತೋತ್ರ ! ಏಕೆಂದರೆ ಜ್ಞಾನವೂ ಶಕ್ತಿಯೂ ಆತನಿಗೆ ಸ್ವಂತ.
21 : ಕಾಲಗಳು ಋತುಗಳು ಆತನ ಕೈಯಲ್ಲಿವೆ ರಾಜರನ್ನು ಕೆಳಕ್ಕಿಳಿಸುವವನು, ಮೇಲೆ ನಿಲ್ಲಿಸುವವನು ಆತನೆ. ಜ್ಞಾನಿಗಳ ಜ್ಞಾನ, ವಿವೇಕಿಗಳ ವಿವೇಕ ಆತನ ಕೊಡುಗೆ.
22 : ಅಗಾಧ ವಿಷಯಗಳನ್ನೂ ನಿಗೂಢ ರಹಸ್ಯಗಳನ್ನೂ ತರುವನಾತ ಬಯಲಿಗೆ. ಕಗ್ಗತ್ತಲೆಯಲ್ಲಿ ಅಡಗಿರುವುದೂ ಆತನಿಗೆ ಗೋಚರ ಏಕೆಂದರೆ ಬೆಳಕು ಆತನಲ್ಲೇ ಸುಸ್ಥಿರ.
23 : ನನ್ನ ಪಿತೃಗಳ ದೇವಾ, ಮಾಡುವೆ ನಿನ್ನ ಗುಣಗಾನ, ನಿನಗೆ ನನ್ನ ಧನ್ಯವಾದ. ಏಕೆಂದರೆ ನೀನೇ ನನಗೆ ಜ್ಞಾನಶಕ್ತಿಗಳನ್ನು ದಯಪಾಲಿಸಿದಾತ. ನಾವು ಬೇಡಿದ್ದನ್ನು ನನಗೆ ತೋರ್ಪಡಿಸಿದಾತ ನೀನೇ ಹೌದು, ರಾಜ ಬಯಸಿದ ಗುಟ್ಟನ್ನು ನಮಗೆ ವ್ಯಕ್ತಪಡಿಸಿದಾತ ನೀನೇ.
24 : ತರುವಾಯ ದಾನಿಯೇಲನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲುವುದಕ್ಕೆ ರಾಜನು ನೇಮಸಿದ್ದ ಅರ್ಯೋಕನ ಬಳಿಗೆ ಹೋದನು. ಅವನಿಗೆ, “ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಬೇಡ. ನನ್ನನ್ನು ರಾಜನ ಸನ್ನಿಧಿಗೆ ಸೇರಿಸಿಬಿಡು. ನಾನು ಆ ಕನಸಿನ ಉದ್ದೇಶವನ್ನು ರಾಜನಿಗೆ ತಿಳಿಸುವೆನು,” ಎಂದು ಕೇಳಿಕೊಂಡನು.
25 : ಕೂಡಲೆ ಅರ್ಯೋಕನು ದಾನಿಯೇಲನನ್ನು ರಾಜನ ಸನ್ನಿಧಿಗೆ ಬೇಗಬೇಗನೆ ಕರೆದುಕೊಂಡು ಬಂದನು. “ರಾಜರೇ, ಆ ಕನಸಿನ ಉದ್ದೇಶವನ್ನು ನಿಮಗೆ ತಿಳಿಸಬಲ್ಲ ಒಬ್ಬನು ನನಗೆ ಸಿಕ್ಕಿದ್ದಾನೆ. ಅವನು ಜುದೇಯದಿಂದ ಸೆರೆಯಾಳಾಗಿ ತಂದವರಲ್ಲಿ ಒಬ್ಬನಾಗಿದ್ದಾನೆ,” ಎಂದು ಅರಿಕೆಮಾಡಿದನು.
26 : ರಾಜನು ಬೇಲ್ತೆಶಚ್ಚರನೆಂದು ಹೆಸರು ಪಡೆದಿದ್ದ ದಾನಿಯೇಲನನ್ನು ನೋಡಿ, “ನಾನು ಕಂಡ ಕನಸನ್ನೂ ಅದರ ಅರ್ಥವನ್ನೂ ತಿಳಿಸಬಲ್ಲೆಯಾ?” ಎಂದು ವಿಚಾರಿಸಿದನು.
27 : ಅದಕ್ಕೆ ದಾನಿಯೇಲನು ಸನ್ನಿಧಿಯಲ್ಲಿ, “ರಾಜರು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ, ಮಾಟಗಾರರಾಗಲಿ, ಜೋಯಿಸರಾಗಲಿ, ಶಕುನದವರಾಗಲಿ ಯಾರೂ ತಿಳಿಸಲಾರರು.
28 : ಆದರೆ ರಹಸ್ಯಗಳನ್ನು ವ್ಯಕ್ತಪಡಿಸಬಲ್ಲವರು ಒಬ್ಬರಿದ್ದಾರೆ. ಅವರೇ ಪರಲೋಕದಲ್ಲಿರುವ ದೇವರು. ಬರಲಿರುವ ಕಾಲದಲ್ಲಿ ನಡೆಯತಕ್ಕದ್ದನ್ನು ರಾಜ ನೆಬೂಕದ್ನೆಚ್ಚರರಾದ ನಿಮಗೆ ಅವರೇ ತಿಳಿಯಪಡಿಸಿದ್ದಾರೆ. ನೀವು ಕಂಡ ಕನಸು, ಹಾಸಿಗೆಯ ಮೇಲೆ ಮಲಗಿದ್ದಾಗ ನಿಮ್ಮ ಮನಸ್ಸಿಗೆ ತೋಚಿದ ಸ್ವಪ್ನಗಳು ಹೀಗಿವೆ:
29 : “ರಾಜರೇ, ನೀವು ಹಾಸಿಗೆಯ ಮೇಲೆ ಮಲಗಿರುವಾಗ ಮುಂದೆ ಏನು ಸಂಭವಿಸುವುದೋ ಎಂಬ ಯೋಚನೆ ನಿಮ್ಮಲ್ಲಿ ಹುಟ್ಟಿತ್ತು. ಗುಟ್ಟುಗಳನ್ನು ಬಟ್ಟಬಯಲಾಗಿಸುವಾತ ಮುಂದೆ ಸಂಭವಿಸುವುದನ್ನು ನಿಮಗೆ ಗೋಚರಪಡಿಸಿದ್ದಾರೆ.
30 : ಆ ಗುಟ್ಟನ್ನು ನನಗೂ ವ್ಯಕ್ತಪಡಿಸಿದ್ದಾರೆ. ನಾನು ಎಲ್ಲ ಜೀವಂತರಿಗಿಂತ ಹೆಚ್ಚು ಬುದ್ಧಿಯುಳ್ಳವನು ಎಂದೇನೂ ಅಲ್ಲ. ಆ ಕನಸಿನ ಉದ್ದೇಶ ರಾಜರಾದ ತಮಗೆ ಗೋಚರವಾಗಿ ನಿಮ್ಮ ಮನದಾಲೋಚನೆಗಳು ನಿಮಗೆ ಅರ್ಥವಾಗಲಿ ಎಂದು ನನಗೂ ವ್ಯಕ್ತಪಡಿಸಲಾಗಿದೆ.
31 : “ರಾಜರೇ ಕೇಳಿ, ತಾವು ಕಂಡದ್ದು ಒಂದು ಅದ್ಭುತ ಪ್ರತಿಮೆ. ಥಳಥಳನೆ ಹೊಳೆಯುವ ಆ ದೊಡ್ಡ ಪ್ರತಿಮೆ ನಿಮ್ಮೆದುರಿಗೆ ನಿಂತಿತ್ತು. ಭಯಂಕರವಾಗಿ ಕಾಣಿಸುತ್ತಿತ್ತು.
32 : ಆ ಪ್ರತಿಮೆಯ ತಲೆ ಅಪ್ಪಟ ಬಂಗಾರದ್ದು. ಎದೆ ತೋಳುಗಳು ಬೆಳ್ಳಿಯವು. ಹೊಟ್ಟೆಸೊಂಟಗಳು ಕಂಚಿನವು.
33 : ಕಾಲುಗಳು ಕಬ್ಬಿಣದವು. ಪಾದಗಳು ಕಬ್ಬಿಣ ಮತ್ತು ಮಣ್ಣಿನಿಂದ ಮಾಡಿದವು.
34 : ನೀವು ನೋಡುತ್ತಿದ್ದ ಹಾಗೆ ಬೆಟ್ಟದಿಂದ ಒಂದು ಗುಂಡು ಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದು ಬಂದು ಆ ಪ್ರತಿಮೆಯ ಕಬ್ಬಿಣ ಮಣ್ಣಿನಿಂದಾದ ಆ ಪಾದಗಳಿಗೆ ಬಡಿದು ಚೂರುಚೂರು ಮಾಡಿ ಬಿಟ್ಟಿತು.
35 : ಆಗ ಕಬ್ಬಿಣ-ಮಣ್ಣು-ಕಂಚು-ಬೆಳ್ಳಿ-ಬಂಗಾರ ಇವುಗಳೆಲ್ಲವೂ ಪುಡಿಪುಡಿಯಾದವು: ಸುಗ್ಗಿಯ ಕಣಗಳ ಹೊಟ್ಟಿನಂತಾದವು. ಗಾಳಿ ಅವುಗಳನ್ನು ತೂರಿಕೊಂಡು ಹೋಯಿತು. ಅವುಗಳಿಗೆ ನೆಲೆಯೇ ಇಲ್ಲವಾಯಿತು. ಪ್ರತಿಮೆಗೆ ಬಡಿದ ಆ ಬಂಡೆ ಮಹಾ ಪರ್ವತವಾಗಿ ಭೂಲೋಕದಲ್ಲೆಲ್ಲಾ ತುಂಬಿಕೊಂಡಿತು.
36 : “ಅರಸರೇ, ಇದೇ ನೀವು ಕಂಡ ಕನಸು. ಇದರ ಅರ್ಥವನ್ನೂ ತಮ್ಮ ಸನ್ನಿಧಿಯಲ್ಲಿ ಅರಿಕೆ ಮಾಡುತ್ತೇವೆ.
37 : ನೀವು ರಾಜಾಧಿರಾಜರು, ಪರಲೋಕ ದೇವರು ನಿಮಗೆ ರಾಜ್ಯಬಲ, ಪರಾಕ್ರಮ ಹಾಗು ವೈಭವಗಳನ್ನು ದಯಪಾಲಿಸಿದ್ದಾರೆ.
38 : ನರಮಾನವರು ವಾಸಿಸುವ ಸಕಲ ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನಿಮ್ಮ ಕೈಗೆ ಒಪ್ಪಿಸಿದ್ದಾರೆ.
39 : ನಿಮ್ಮ ಕಾಲವಾದ ಮೇಲೆ ನಿಮಗಿಂತ ಬೀಳಾದ ಮತ್ತೊಂದು ರಾಜ್ಯ ತಲೆಯೆತ್ತಿಕೊಳ್ಳುವುದು. ಅನಂತರ ಬೇರೊಂದು ರಾಜ್ಯ ಕಂಚಿನದಾಗಿ ಕಾಣಿಸಿಕೊಂಡು ಭೂಮಂಡಲವನ್ನೆಲ್ಲ ಆಳುವುದು.
40 : ನಾಲ್ಕನೆಯ ರಾಜ್ಯ ಕಬ್ಬಿಣದಷ್ಟು ಗಟ್ಟಿಗೆ ಕಬ್ಬಿಣ ಎಲ್ಲ ವಸ್ತುಗಳನ್ನು ಚೂರುಚೂರಾಗಿ ಒಡೆದು ಹಾಕುತ್ತದೆ. ಅಂತೆಯೇ ಅದು ಎಲ್ಲವನ್ನು ಚೂರು ಚೂರಾಗಿಸಿ ಧ್ವಂಸ ಮಾಡುವುದು.
41 : ಪಾದಗಳಲ್ಲಿ ಹಾಗು ಪಾದಬೆರಳುಗಳಲ್ಲಿ ಒಂದು ಅಂಶ ಕಬ್ಬಿಣ ಮತ್ತೊಂದು ಅಂಶ ಮಣ್ಣು ಆಗಿದ್ದನ್ನು ನೀವು ನೋಡಿದಿರಿ. ಅಂತೆಯೇ ಆ ರಾಜ್ಯವು ಭಿನ್ನಭಿನ್ನವಾಗಿರುವುದು. ಜೇಡಿಮಣ್ಣಿನೊಂದಿಗೆ ಕಬ್ಬಿಣ ಮಿಶ್ರವಾಗಿದ್ದನ್ನು ನೀವು ನೋಡಿದಂತೆ ಆ ರಾಜ್ಯದಲ್ಲಿ ಕಬ್ಬಿಣದ ಬಲ ಸೇರಿರುವುದು.
42 : ಕಾಲ್ಬೆರಳುಗಳ ಒಂದಂಶ ಮಣ್ಣು ಆಗಿದ್ದ ಹಾಗೆ ಆ ರಾಜ್ಯದ ಒಂದಂಶ ಗಟ್ಟಿ ಇನ್ನೊಂದು ಅಂಶ ಬೆಂಡು.
43 : ಕಬ್ಬಿಣ ಜೇಡಿಮಣ್ಣಿನೊಂದಿಗೆ ಬೆರೆತಿರುವುದನ್ನು ನೀವು ನೋಡಿದ ಮೇರೆಗೆ ಆ ರಾಜ್ಯಾಂಶಗಳು ಮದುವೆ ಸಂಬಂಧದಿಂದ ಬೆರೆತುಕೊಳ್ಳುವುವು. ಆದರೆ ಕಬ್ಬಿಣ ಮಣ್ಣಿನೊಂದಿಗೆ ಹೇಗೆ ಕಲೆಯುವುದಿಲ್ಲವೋ ಹಾಗೆ ಅವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.
44 : ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ಸಾಮ್ರಾಜ್ಯವನ್ನು ಸ್ಥಾಪಿಸುವರು. ಅದು ಎಂದಿಗೂ ಅಳಿಯದು. ಅದರ ಪ್ರಾಬಲ್ಯವು ಬೇರೆ ರಾಷ್ಟ್ರಕ್ಕೆ ಜಾರಿಹೋಗದು. ರಾಷ್ಟ್ರಗಳನ್ನೆಲ್ಲಾ ಭಂಗಪಡಿಸಿ, ನಿರ್ನಾಮಮಾಡಿ ಆ ಸಾಮ್ರಾಜ್ಯ ಶಾಶ್ವತವಾಗಿ ನಿಲ್ಲವುದು.
45 : ಬೆಟ್ಟದಿಂದ ಒಂದು ಗುಂಡುಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಕಬ್ಬಿಣ – ಕಂಚು – ಮಣ್ಣು - ಬೆಳ್ಳಿ - ಬಂಗಾರ ಇವುಗಳನ್ನು ಚೂರುಚೂರು ಮಾಡಿದ್ದನ್ನು ನೀವು ನೋಡಿದಿರಿ. ಇದರಿಂದ ಪರಲೋಕ ದೇವರು ಮುಂದೆ ನಡೆಯಲಿರುವ ವಿಷಯಗಳನ್ನು ರಾಜರಾದ ತಮಗೆ ತಿಳಿಯಪಡಿಸಿದ್ದಾರೆ. ಆ ಕನಸು ನಿಜವಾದುದು. ಅದರ ಅರ್ಥವೂ ನಂಬತಕ್ಕದ್ದು,” ಎಂದು ವಿವರಿಸಿದನು.
46 : ಇದನ್ನು ಆಲಿಸಿದ ರಾಜ ನೆಬೂಕದ್ನೆಚ್ಚರನು ಎದ್ದು ಅಡ್ಡಬಿದ್ದನು. ದಾನಿಯೇಲನನ್ನು ಪೂಜಿಸಿ, ಅವನಿಗೆ ನೈವೇದ್ಯಮಾಡಿ, ಧೂಪಾರತಿ ಎತ್ತಬೇಕೆಂದು ಆಜ್ಞಾಪಿಸಿದನು.
47 : ದಾನಿಯೇಲನ ವಿವರಕ್ಕೆ ಉತ್ತರವಾಗಿ, “ನೀನು ಈ ಗುಟ್ಟನ್ನು ಬಯಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿ ದೇವರು, ರಾಜಾಧಿರಾಜರು, ಗುಟ್ಟನ್ನು ಬಟ್ಟಬಯಲಾಗಿಸುವವರು! ಇದು ಸತ್ಯ” ಎಂದು ಹೇಳಿದನು.
48 : ಬಳಿಕ ರಾಜನು ದಾನಿಯೇಲನನ್ನು ದೊಡ್ಡ ಪದವಿಗೆ ಏರಿಸಿದನು. ಅಮೂಲ್ಯವಾದ ಬಹುಮಾನಗಳನ್ನು ಕೊಟ್ಟನು. ಬಾಬಿಲೋನಿನ ಸಂಸ್ಥಾನವನ್ನೆಲ್ಲ ಅವನಿಗೆ ಅಧೀನಪಡಿಸಿ ಬಾಬಿಲೋನಿನ ಎಲ್ಲಾ ವಿದ್ವಾಂಸರಿಗೂ ಅವನನ್ನು ಅಧ್ಯಕ್ಷನನ್ನಾಗಿ ನೇಮಿಸಿದನು.
49 : ದಾನಿಯೇಲನ ಕೋರಿಕೆಯ ಪ್ರಕಾರ ರಾಜನು ಶದ್ರಕ್, ಮೇಶಕ್ ಮತ್ತು ಅಬೇದ್‍ನೆಗೋ ಎಂಬುವರನ್ನು ಬಾಬಿಲೋನಿನ ಪ್ರಾಂತ್ಯಾಧಿಪತಿಗಳನ್ನಾಗಿ ನೇಮಿಸಿದನು. ದಾನಿಯೇಲನು ಮಾತ್ರ ಅರಮನೆಯಲ್ಲೇ ಕಾರ್ಯನಿರತನಾದನು.

· © 2017 kannadacatholicbible.org Privacy Policy