Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ದಾನಿಯೇಲ


1 : “ಮೇದ್ಯನಾದ ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ನಾನೇ ಮಿಕಾಯೇಲನಿಗೆ ಬೆಂಬಲಕೊಟ್ಟು ಆಶ್ರಯನಾಗಿ ನಿಂತೆ.
2 : “ಈಗ ಸತ್ಯಾಂಶವನ್ನು ತಿಳಿಸುತ್ತೇನೆ, ಕೇಳು: ಪರ್ಷಿಯ ದೇಶದಲ್ಲಿ ಇನ್ನೂ ಮೂವರು ರಾಜರು ಏಳುವರು. ನಾಲ್ಕನೆಯ ರಾಜನು ಎಲ್ಲರಿಗಿಂತಲೂ ಅಧಿಕ ಧನವಂತನಾಗಿರುವನು. ಅವನು ತನ್ನ ಧನದಿಂದ ಪ್ರಬಲನಾಗಿ ಗ್ರೀಕ್ ರಾಜ್ಯಕ್ಕೆ ವಿರುದ್ಧ ತನ್ನ ಬಲವನ್ನೆಲ್ಲ ಪ್ರಯೋಗಿಸುವನು.
3 : “ಅನಂತರ ಪರಾಕ್ರಮಶಾಲಿಯಾದ ಒಬ್ಬ ರಾಜನು ಎದ್ದು ಮಹಾಪ್ರಭುತ್ವದಿಂದ ಆಳುತ್ತಾ ತನ್ನ ಇಷ್ಟಾರ್ಥಗಳನ್ನು ಸಾಧಿಸಿಕೊಳ್ಳುವನು.
4 : ಆದರೆ ಅವನು ತಲೆಯೆತ್ತಿದ ಮೇಲೆ ಅವನ ರಾಜ್ಯ ಒಡೆದು ನಾಲ್ಕು ದಿಕ್ಕುಗಳಿಗೂ ಸೀಳಿ ಹೋಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ಪ್ರಬಲವಾಗಿ ಇದ್ದಂತೆ ಅದು ಇನ್ನು ಪ್ರಬಲವಾಗದು.
5 : “ದಕ್ಷಿಣ ದಿಕ್ಕಿನ ರಾಜನು ಮತ್ತು ಅವನ ದಳವಾಯಿಗಳಲ್ಲಿ ಒಬ್ಬನು ಶಕ್ತಿಶಾಲಿಗಳಾಗುವರು. ದಳವಾಯಿ ರಾಜನಿಗಿಂತ ಶಕ್ತಿಶಾಲಿಯಾಗಿ ಪ್ರಭುತ್ವಕ್ಕೆ ಬರುವನು. ಅವನ ರಾಜ್ಯ ದೊಡ್ಡ ರಾಜ್ಯವಾಗುವುದು.
6 : ಕೆಲವು ವರ್ಷಗಳಾದ ಮೇಲೆ ಅವರು ಒಪ್ಪಂದ ಮಾಡಿಕೊಳ್ಳುವರು. ಇದನ್ನು ದೃಢಪಡಿಸಿಕೊಳ್ಳಲು ಆ ದಕ್ಷಿಣ ರಾಜನ ಕುಮಾರಿ ಉತ್ತರ ದಿಕ್ಕಿನ ರಾಜನನ್ನು ಸೇರುವಳು. ಆದರೂ ತನ್ನ ಸಂಬಂಧವನ್ನು ಉಳಿಸಿಕೊಳ್ಳನು. ಅವನೂ ಅವನ ಸಂತಾನವೂ ನಿಲ್ಲವು. ಅವಳು, ಅವಳನ್ನು ಕರೆತಂದವರು, ಪಡೆದವನು, ಕರೆದುಕೊಂಡವನು ಇವರೆಲ್ಲರೂ ಅಂದು ನಾಶಕ್ಕೀಡಾಗುವರು.
7 : ಅನಂತರ ಅವಳು ಹುಟ್ಟಿದ ಬುಡದಿಂದ ಒಡೆದ ಸಸಿಯೊಂದು ಅದರ ಸ್ಥಾನದಲ್ಲಿ ನಿಲ್ಲುವುದು. ಉತ್ತರ ರಾಜನ ಸೈನ್ಯಕ್ಕೆ ವಿರುದ್ಧವಾಗಿ ಹೊರಟು, ಅವನ ದುರ್ಗದೊಳಗೆ ನುಗ್ಗಿ, ಅಲ್ಲಿನವರಿಗೆ ಮಾಡುವಷ್ಟೂ ಮಾಡಿ ಗೆಲ್ಲುವನು.
8 : ಅವರ ದೇವರುಗಳನ್ನೂ ಎರಕದ ಬೊಂಬೆಗಳನ್ನೂ ಒಳ್ಳೊಳ್ಳೆ ಬೆಳ್ಳಿ ಬಂಗಾರದ ಪಾತ್ರೆಗಳನ್ನೂ ಸೂರೆಮಾಡಿಕೊಂಡು ಈಜಿಪ್ಟಿಗೆ ಹಿಂದಿರುಗುವನು. ಕೆಲವು ವರ್ಷಗಳ ತನಕ ಉತ್ತರ ರಾಜನ ಗೊಡವೆಗೆ ಹೋಗನು.
9 : ಬಳಿಕ ಉತ್ತರ ರಾಜನು ದಕ್ಷಿಣ ರಾಜನ ರಾಜ್ಯದ ಮೇಲೆ ದಾಳಿಮಾಡುವನು. ಆದರೆ ಅವನು ಸ್ವದೇಶಕ್ಕೆ ಹಿಂದಿರುಗಬೇಕಾಗುವುದು.
10 : “ಆಮೇಲೆ ಉತ್ತರ ರಾಜನ ಮಕ್ಕಳು ಯುದ್ಧಸನ್ನಾಹ ಮಾಡಿ ಮಹಾವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯ ಬೆಳೆದು ತುಂಬಿತುಳುಕುವ ಪ್ರವಾಹದಂತೆ ಹಬ್ಬಿಕೊಳ್ಳುವುದು. ಅವರು ಮತ್ತೆ ಯುದ್ಧಕ್ಕೆ ಹೊರಟು ದಕ್ಷಿಣರಾಜನ ದುರ್ಗದವರೆಗೆ ನುಗ್ಗುವರು.
11 : ಆಗ ದಕ್ಷಿಣರಾಜನು ಕ್ರೋಧದಿಂದುರಿಯುತ್ತಾ ಹೊರಟು ಬಂದು ಉತ್ತರ ರಾಜನ ಸಂಗಡ ಯುದ್ಧ ಮಾಡುವನು. ಉತ್ತರ ರಾಜನು ಮಹಾವ್ಯೂಹವನ್ನು ಕಟ್ಟಿದರೂ ಅದೆಲ್ಲವು ದಕ್ಷಿಣ ರಾಜನ ಕೈವಶವಾಗುವುದು.
12 : ಇದರಿಂದಾಗಿ ಅವನು ಗರ್ವಿಷ್ಠನಾಗುವನು. ಲಕ್ಷಾಂತರ ಸೈನಿಕರನ್ನು ಸದೆಬಡಿದಿದ್ದರೂ ಪ್ರಾಬಲ್ಯಕ್ಕೆ ಬಾರನು.
13 : “ತರುವಾಯ ಉತ್ತರ ರಾಜನು ಹಿಂದಿನ ದಂಡಿಗಿಂತ ದೊಡ್ಡ ದಂಡನ್ನು ಮತ್ತೆ ಕೂಡಿಸಿಕೊಂಡು ಬಹಳ ವರ್ಷಗಳು ಕಳೆದನಂತರ ಮಹಾಸೈನ್ಯಸಮೇತ ಅಧಿಕ ಸನ್ನಾಹದಿಂದ ಬರುವನು.
14 : ಆ ಕಾಲದಲ್ಲಿ ಅನೇಕರು ದಕ್ಷಿಣ ರಾಜನಿಗೆ ಎದುರು ನಿಲ್ಲುವರು. ಇದಲ್ಲದೆ, ನಿನ್ನ ಸ್ವಂತ ಜನರಲ್ಲಿ ಹಿಂಸಾಪ್ರಿಯರು ಆ ದರ್ಶನವನ್ನು ನಿಜವಾಗಿಸಬೇಕೆಂದು ದಂಗೆ ಏಳುವರು. ಆದರೆ ಸೋತುಹೋಗುವರು.
15 : ಉತ್ತರ ರಾಜನು ಬಂದು, ಮುತ್ತಿಗೆ ಹಾಕಿ, ಕೋಟೆ ಕೊತ್ತಲದ ನಗರವನ್ನು ಹಿಡಿಯುವನು, ದಕ್ಷಿಣದ ಭುಜಬಲವು ಅವನನ್ನು ನಿಲ್ಲಿಸಲಾರದು. ಎದುರಿಸುವ ಯಾವ ಶಕ್ತಿಯೂ ಇರದು.
16 : ದಕ್ಷಿಣದ ರಾಜನಿಗೆ ವಿರುದ್ಧ ಬರುವವನು ಇಚ್ಛಾನುಸಾರ ವರ್ತಿಸುವನು. ಅವನನ್ನು ಎದುರಿಸಬಲ್ಲವನು ಒಬ್ಬನೂ ಇರನು. ಆ ‘ಚೆಲುವಿನ ನಾಡನ್ನೂ’ ಗೆದ್ದು ಅದನ್ನು ಪೂರ್ತಿಯಾಗಿ ತನ್ನ ಕೈ ಹಿಡಿತದಲ್ಲಿ ಇಟ್ಟುಕೊಳ್ಳುವನು.
17 : “ಉತ್ತರದ ರಾಜನು ದಕ್ಷಿಣರಾಜನ ಮೇಲೆ ಬೀಳಬೇಕೆಂದು ನಿರ್ಧರಿಸಿ ತನ್ನ ರಾಜ್ಯದ ಸಮಸ್ತ ಶಕ್ತಿಸಮೇತನಾಗಿ ಹೊರಟು ಅವನ ಸಂಗಡ ಒಪ್ಪಂದ ಮಾಡಿಕೊಳ್ಳುವನು. ಅವನ ರಾಜ್ಯದ ಹಾನಿಗಾಗಿಯೆ ಹೆಣ್ಣನ್ನು ಕೊಡುವನು. ಆದರೆ ಈ ಉಪಾಯ ಫಲಿಸದು. ಅದರಿಂದ ತನಗೂ ಅನುಕೂಲವಾಗದು.
18 : ಆಮೇಲೆ ಅವನು ಕರಾವಳಿಯ ನಾಡುಗಳ ಕಡೆಗೆ ಕಣ್ಣಿಟ್ಟು ಅಲ್ಲಿಯ ಅನೇಕ ನಾಡುಗಳನ್ನು ಆಕ್ರಮಿಸುವನು. ಆದರೆ ದಳವಾಯಿ ಒಬ್ಬನು ಅವನ ಅಟ್ಟಹಾಸವನ್ನು ತಡೆಗಟ್ಟುವನು. ಅವನು ಮಾಡುವ ಹಾನಿ ಅವನಿಗೇ ತಗಲುವಂತೆ ಮಾಡುವನು.
19 : ಬಳಿಕ ರಾಜನು ಸ್ವದೇಶದ ದುರ್ಗಗಳ ಕಡೆಗೆ ಹಿಂದಿರುಗುವನು. ಆದರೆ ಎಡವಿಬಿದ್ದು ಅಳಿದು ಹೋಗುವನು.
20 : “ಅವನ ಸ್ಥಾನದಲ್ಲಿ ಮತ್ತೊಬ್ಬನು ರಾಜ್ಯವಾಳುವನು. ಇವನು ರಾಜ್ಯದಲ್ಲಿನ ಶಿರೋಮಣಿಯಂಥ ನಾಡನ್ನೆಲ್ಲ ದೋಚಿಕೊಳ್ಳಬಲ್ಲ ಉದ್ಯೋಗಿಯನ್ನು ನೇಮಿಸುವನು. ಆದರೆ ಕೆಲವೇ ದಿನಗಳಲ್ಲಿ ಅವನು ಕದನದಿಂದ ಅಲ್ಲ, ಕೋಪದಿಂದ ಅಲ್ಲ, ಹಾಗೆಯೇ ಮಡಿದು ಹೋಗುವನು.
21 : “ಅವನ ಸ್ಥಾನದಲ್ಲಿ ನೀಚನೊಬ್ಬನು ಏಳುವನು. ಅವನು ರಾಜಪದವಿಗೆ ಹಕ್ಕುದಾರನಲ್ಲ. ಆದರೂ ನೆಮ್ಮದಿಯ ಕಾಲದಲ್ಲಿ ನಯವಾದ ನುಡಿಗಳಿಂದ ರಾಜ್ಯವನ್ನು ಪಡೆದುಕೊಳ್ಳುವನು.
22 : ಅವನನ್ನು ಎದುರಿಸುವ ದೊಡ್ಡ ದೊಡ್ಡ ಸೈನ್ಯಗಳು ಹಾಗು ದೇವರ ಪ್ರಧಾನ ಯಾಜಕನು ಅವನ ಸೈನ್ಯ ಪ್ರವಾಹಕ್ಕೆ ಸಿಕ್ಕಿ ಅದರಲ್ಲಿ ಮುಳುಗಿ ನಾಶವಾಗುವರು.
23 : ಅವನ ಸಂಗಡ ಒಪ್ಪಂದ ಮಾಡಿಕೊಂಡವನಿಗೆ ಕೂಡಲೆ ಮೋಸ ಮಾಡುವನು. ಕೊಂಚ ಜನರ ಸಹಾಯದಿಂದಲೆ ಏಳಿಗೆಯಾಗಿ ಬಲಗೊಳ್ಳುವನು.
24 : ನೆಮ್ಮದಿಯ ಕಾಲದಲ್ಲಿ ಸಂಸ್ಥಾನದ ಫಲವತ್ತಾದ ಪ್ರದೇಶಗಳ ಮೇಲೆ ದಾಳಿಮಾಡುವನು. ತಂದೆತಾತಂದಿರು ಮಾಡದಂಥ ಕಾರ್ಯಗಳನ್ನು ಮಾಡುವನು. ಸೂರೆ-ಸುಲಿಗೆ-ಕೊಳ್ಳೆ ಹೊಡೆದವುಗಳನ್ನು ತನ್ನವರಿಗೆ ಚೆಲ್ಲಿ ಬಿಡುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕೊನೆಯವರೆಗೂ ಮುಂದುವರೆಸುವನು.
25 : “ಅವನು ಧೈರ್ಯತಂದುಕೊಂಡು, ದೊಡ್ಡ ದಂಡೆತ್ತಿ, ದಕ್ಷಿಣರಾಜನಿಗೆ ವಿರುದ್ಧ ತನ್ನ ರಾಜ್ಯದ ಶಕ್ತಿಯನ್ನೆಲ್ಲ ಕೂಡಿಸುವನು. ದಕ್ಷಿಣ ರಾಜನಾದರೋ ಅತ್ಯಧಿಕ ಬಲವುಳ್ಳ ಮಹಾಸೈನ್ಯ ಸಮೇತನಾಗಿ ಯುದ್ಧಕ್ಕೆ ಹೊರಡುವನು. ಆದರೆ ಜಯಗಳಿಸನು. ಕುಯುಕ್ತಿಗಳಿಗೆ ಗುರಿಯಾಗಿ ಸೋಲನ್ನು ಅಪ್ಪಬೇಕಾಗುವುದು.
26 : ಅವನ ಮೃಷ್ಟಾನ್ನ ತಿಂದವರೇ ಅವನಿಗೆ ಎರಡು ಬಗೆಯುವರು. ಅವನ ಸೈನ್ಯವು ಕೊಚ್ಚಿಕೊಂಡು ಹೋಗುವುದು. ಬಹುಜನರು ಹತರಾಗಿ ಬೀಳುವರು.
27 : ಆ ಇಬ್ಬರು ರಾಜರು ಪರಸ್ಪರ ಕೇಡಿನ ಮನಸ್ಸು ಉಳ್ಳವರಾಗಿ ಸಹಪಂಕ್ತಿಯಲ್ಲಿ ಕುಳಿತಿದ್ದರೂ ಸುಳ್ಳುಪೊಳ್ಳು ಮಾತಾಡಿಕೊಳ್ಳುವರು. ಆದರೆ ನಿಶ್ಚಿತಕಾಲ ಬರುವ ತನಕ ಅವರಿಂದ ಏನೂ ಸಾಧಿಸಲಾಗದು.
28 : ಅನಂತರ ಉತ್ತರದ ಆ ನೀಚ ರಾಜನು ಬಹು ಆಸ್ತಿಯನ್ನು ಕೊಳ್ಳೆಹೊಡೆದು ಸ್ವದೇಶಕ್ಕೆ ಹಿಂತಿರುಗುವನು. ಅವನ ಮನಸ್ಸು ಪವಿತ್ರ ಒಡಂಬಡಿಕೆಗೆ ವಿರುದ್ಧವಾಗಿರುವುದು. ಇಷ್ಟ ಬಂದ ಹಾಗೆ ವರ್ತಿಸಿ ಮತ್ತೆ ಸ್ವದೇಶವನ್ನು ಸೇರುವನು.
29 : “ನಿಶ್ಚಿತ ಕಾಲದಲ್ಲಿ ಪುನಃ ದಕ್ಷಿಣ ದೇಶದ ಮೇಲೆ ದಾಳಿಮಾಡುವನು. ಆದರೆ ಮೊದಲು ಆದಂತೆಯೇ ಎರಡನೇಯ ಸಲ ಆಗದು.
30 : ಅವನಿಗೆ ವಿರುದ್ಧವಾಗಿ ರೋಮಿನ ಹಡಗುಗಳು ಬರಲು ಅವನು ಎದೆಗುಂದಿ ಹಿಂದಿರುಗುವನು. ಪವಿತ್ರ ಒಡಂಬಡಿಕೆಯ ವಿರುದ್ಧ ಮತ್ಸರಗೊಂಡು ಸಾಧ್ಯವಾದಷ್ಟೂ ಹಾನಿಮಾಡುವನು. ಸ್ವದೇಶಕ್ಕೆ ಹಿಂದಿರುಗಿ ಪವಿತ್ರ ಒಡಂಬಡಿಕೆಯನ್ನು ತೊರೆದವರಿಗೆ ಆದರ ತೋರುವನು.
31 : ಅವನು ಕೂಡಿಸುವ ಸೈನ್ಯವು ಆಶ್ರಯದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸುವುದು. ಅನುದಿನದ ಬಲಿಯನ್ನು ನಿಲ್ಲಿಸುವುದು. ವಿನಾಶಕರ ವಿಕಟ ಮೂರ್ತಿಯನ್ನು ಪ್ರತಿಷ್ಠಾಪಿಸುವುದು.
32 : ಒಡಂಬಡಿಕೆಯ ದ್ರೋಹಿಗಳು ಅವನ ನಯನುಡಿಗೆ ಮಾರುಹೋಗುವರು. ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು.
33 : ಜನರಲ್ಲಿನ ಬುದ್ಧಿವಂತ ನಾಯಕರು ಅನೇಕರಿಗೆ ಬುದ್ಧಿಹೇಳುವರು. ಕೆಲಕಾಲ ಅವರು ಕತ್ತಿ-ಬೆಂಕಿ-ಸೆರೆ-ಸೂರೆಗಳಿಗೆ ತುತ್ತಾಗುವರು.
34 : ಹೀಗಾಗುವಾಗ ಅವರಿಗೆ ಅಲ್ಪಸ್ವಲ್ಪ ಸಹಾಯ ದೊರೆಯುವುದು. ಆ ಬಳಿಕ ಬಹುಮಂದಿ ನಯನವಿರಾದ ಮಾತುಗಳನ್ನಾಡುತ್ತಾ ಅವರನ್ನು ಸೇರಿಕೊಳ್ಳುವರು.
35 : ಅಂತ್ಯಕಾಲದವರೆಗೆ ಬುದ್ಧಿವಂತ ನಾಯಕರಲ್ಲಿ ಕೆಲವರು ಸಾವಿಗೆ ತುತ್ತಾಗುವರು. ಇದರಿಂದ ಜನರು ಶೋಧಿಸಲ್ಪಟ್ಟು, ಶುದ್ಧಿಹೊಂದಿ ಶುಭ್ರರಾಗುವರು. ಅಂತ್ಯವು ಕ್ಲುಪ್ತಕಾಲದಲ್ಲೇ ಬರುವುದು.
36 : “(ಉತ್ತರದ) ರಾಜನು ಮನಸ್ಸು ಬಂದ ಹಾಗೆ ನಡೆದು ತಾನು ಎಲ್ಲ ದೇವರುಗಳಿಗಿಂತಲೂ ದೊಡ್ಡವನೆಂದು ತನ್ನನ್ನೇ ಹೆಚ್ಚಿಸಿಕೊಂಡು ಗರ್ವಿಷ್ಠನಾಗುವನು. ದೇವಾಧಿದೇವರನ್ನು ಅತಿಯಾಗಿ ದೂಷಿಸುವನು. ನಿಮ್ಮ ಮೇಲಿನ ದೈವಕೋಪ ತೀರುವ ತನಕ ಅವನು ವೃದ್ಧಿಯಾಗುವನು. ದೈವಸಂಕಲ್ಪ ನೆರವೇರಲೇಬೇಕು.
37 : ಅವನು ತನ್ನ ಪೂರ್ವಜರ ದೇವರನ್ನಾಗಲಿ, ಮಹಿಳೆಯರು ಮೋಹಿಸುವ ದೇವರನ್ನಾಗಲಿ, ಯಾವ ದೇವರನ್ನೇ ಆಗಲಿ, ಲಕ್ಷಿಸನು. ಎಲ್ಲ ದೇವರುಗಳಿಗಿಂತ ತನ್ನನ್ನೇ ಹೆಚ್ಚಿಸಿಕೊಳ್ಳುವನು.
38 : ಕುಲದೇವರಿಗೆ ಬದಲಾಗಿ ದುರ್ಗದೇವರನ್ನು ಘನಪಡಿಸುವನು. ಪೂರ್ವಜರಿಗೆ ತಿಳಿಯದ ದೇವರನ್ನು ಬೆಳ್ಳಿಬಂಗಾರದಿಂದಲೂ ರತ್ನಗಳಿಂದಲೂ ಅಮೂಲ್ಯ ಕೊಡುಗೆಗಳಿಂದಲೂ ಗೌರವಿಸುವನು.
39 : ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು. ತನಗೆ ಮೆಚ್ಚುಗೆಯಾದವರನ್ನು ಹೆಚ್ಚಾಗಿ ಸತ್ಕರಿಸುವನು. ಅವರನ್ನು ಬಹು ಜನರ ಮೇಲೆ ಅಧಿಕಾರಿಗಳನ್ನಾಗಿ ನೇಮಿಸುವನು. ಹಣಕ್ಕಾಗಿ ದೇಶವನ್ನೇ ಹಂಚಿಬಿಡುವನು.
40 : “ಅಂತ್ಯಕಾಲದಲ್ಲಿ ದಕ್ಷಿಣರಾಜನು ಉತ್ತರ ರಾಜನ ಮೇಲೆ ಬೀಳುವನು. ಆದರೆ ಉತ್ತರ ರಾಜನು ರಥಾಶ್ವಬಲಗಳಿಂದಲೂ ಬಹು ನಾವೆಗಳಿಂದಲೂ ಕೂಡಿದವನಾಗಿ ದಕ್ಷಿಣ ರಾಜನ ಮೇಲೆ ಧಾಳಿಮಾಡಿ ನಾಡುನಾಡುಗಳನ್ನು ನುಗ್ಗಿ, ಪ್ರವಾಹದಂತೆ ಹರಡಿಕೊಳ್ಳುವನು.
41 : ಆ ‘ಚೆಲುವಿನ ನಾಡಿಗೂ’ ನುಗ್ಗುವನು. ಅನೇಕ ಸೀಮೆಗಳು ಅವನಿಂದ ನಾಶವಾಗುವುವು. ಆದರೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿನ ಹೆಚ್ಚಿನ ಭಾಗದವರು ಅವನ ಕೈಯಿಂದ ತಪ್ಪಿಸಿಕೊಳ್ಳುವರು.
42 : ಬೇರೆ ದೇಶಗಳ ಮೇಲೂ ಕೈಮಾಡುವನು: ಈಜಿಪ್ಟ್ ದೇಶವು ಅವನ ಕೈಯಿಂದ ತಪ್ಪಿಸಿಕೊಳ್ಳದು.
43 : ಬೆಳ್ಳಿ ಬಂಗಾರಗಳ ನಿಧಿನಿಕ್ಷೇಪಗಳನ್ನು ಹಾಗು ಈಜಿಪ್ಟಿನ ಒಳ್ಳೊಳ್ಳೆಯ ವಸ್ತುಗಳೆಲ್ಲವನ್ನು ವಶಮಾಡಿಕೊಳ್ಳುವನು. ಲಿಬ್ಯ ಮತ್ತು ಸುಡಾನಿನವರು ಅವನನ್ನು ಹಿಂಬಾಲಿಸುವರು.
44 : ಹೀಗಿರಲು ಪೂರ್ವದಿಂದ ಮತ್ತು ಉತ್ತರದಿಂದ ಬರುವ ಸುದ್ದಿ ಅವನನ್ನು ಬಾಧಿಸುವುದು. ಅವನು ಅತಿರೋಷಗೊಂಡು ಬಹುಜನರನ್ನು ಧ್ವಂಸಿಸಿ ನಿರ್ನಾಮಮಾಡಲು ಹೊರಡುವನು.
45 : ಕಡಲಿಗೂ ಚೆಲುವಿನ ಪರಿಶುದ್ಧ ಪರ್ವತಕ್ಕೂ ನಡುವೆ ಅರಮನೆಯಂಥ ಗುಡಾರವನ್ನು ಹಾಕಿಸುವನು. ಆದರೂ ಸಹಾಯಕ್ಕೆ ಯಾರೂ ಇಲ್ಲದವನಾಗಿ ಸಾಯುವನು.

· © 2017 kannadacatholicbible.org Privacy Policy