Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ದಾನಿಯೇಲ


1 : ಜುದೇಯದ ಅರಸ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬಾಬಿಲೋನಿನ ರಾಜ ನೆಬೂಕದ್ನೆಚ್ಚರನು ಜೆರುಸಲೇಮಿಗೆ ಬಂದು ಮುತ್ತಿಗೆ ಹಾಕಿದನು.
2 : ಸರ್ವೇಶ್ವರಸ್ವಾಮಿ ಜುದೇಯದ ಅರಸ ಯೆಹೋಯಾಕೀಮನನ್ನು ಅವನ ಕೈವಶವಾಗುವಂತೆ ಮಾಡಿದರು. ಅಂತೆಯೇ ದೇವಾಲಯದ ಅನೇಕ ಪೂಜಾಪಾತ್ರೆಗಳು ಅವನ ಕೈವಶವಾದವು. ನೆಬೂಕದ್ನೆಚ್ಚರನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ, ತನ್ನ ದೇವರ ಮಂದಿರಕ್ಕೆ ತಂದು, ಆ ದೇವರ ಭಂಡಾರಕ್ಕೆ ಸೇರಿಸಿಕೊಂಡನು.
3 : ಅನಂತರ ಆ ರಾಜನು ತನ್ನ ಕಂಚುಕಿಯರಲ್ಲಿ ಮುಖ್ಯಸ್ಥನಾದ ಅಶ್ಪೆನಜನಿಗೆ, “ನೀನು ಇಸ್ರಯೇಲರಲ್ಲಿ, ಅಂದರೆ ರಾಜವಂಶೀಯರಲ್ಲಿ ಮತ್ತು ಪ್ರಧಾನರಲ್ಲಿ ಕೆಲವು ಯುವಕರನ್ನು ಇಲ್ಲಿಗೆ ಕರೆದು ಬಾ.
4 : ಅವರು ಅಂಗದೋಷವಿಲ್ಲದವರಾಗಿರಬೇಕು. ಸುಂದರರು, ಸಮಸ್ತ ಶಾಸ್ತ್ರಜ್ಞರು, ಪಂಡಿತರು, ವಿದ್ಯಾನಿಪುಣರು, ರಾಜಾಲಯದಲ್ಲಿ ಸನ್ನಿಧಿಸೇವೆ ಮಾಡಲು ಸಮರ್ಥರೂ ಆಗಿರಬೇಕು. ಅವರಿಗೆ ಬಾಬಿಲೋನ್ ಪಂಡಿತರ ಭಾಷೆಯನ್ನೂ ಶಾಸ್ತ್ರಗಳನ್ನೂ ಕಲಿಸಬೇಕು,” ಎಂದು ಅಪ್ಪಣೆಕೊಟ್ಟನು.
5 : ಇದಲ್ಲದೆ, “ಇನ್ನು ಮುಂದಕ್ಕೆ ಅವರು ಸನ್ನಿಧಿಸೇವಕರಾಗುವಂತೆ, ನನ್ನ ಭೋಜನ ಪದಾರ್ಥಗಳನ್ನು ಹಾಗೂ ನಾನು ಕುಡಿಯುವ ದ್ರಾಕ್ಷಾರಸವನ್ನು ಅವರಿಗೆ ಪ್ರತಿದಿನ ಬಡಿಸುವ ಏರ್ಪಾಡುಮಾಡಿ ಅವರನ್ನು ಮೂರು ವರ್ಷ ಪೋಷಿಸಬೇಕು” ಎಂದು ಆಜ್ಞಾಪಿಸಿದನು.
6 : ಹೀಗೆ ಆರಿಸಿಕೊಂಡ ಯುವಕರಲ್ಲಿ ದಾನಿಯೇಲನು, ಹನನ್ಯನು, ಮಿಶಾಯೇಲನು, ಅಜರ್ಯನು ಎಂಬ ಯೆಹೂದ್ಯರು ಸೇರಿದ್ದರು.
7 : ಕಂಚುಕಿಯರ ನಾಯಕನು ಇವರಿಗೆ ನಾಮಕರಣಮಾಡಿ ದಾನಿಯೇಲನಿಗೆ ‘ಬೇಲ್ತೆಶಚ್ಚರ್’, ಹನನ್ಯನಿಗೆ ‘ಶದ್ರಕ್’, ಮಿಶಾಯೇಲನಿಗೆ ‘ಮೇಶಕ್’, ಹಾಗೂ ಅಜರ್ಯನಿಗೆ ‘ಅಬೇದ್‍ನೆಗೋ’, ಎಂಬ ಹೆಸರಿಟ್ಟನು.
8 : ಆದರೆ ದಾನಿಯೇಲನು ತಾನು ರಾಜನ ಭೋಜನ ಪದಾರ್ಥಗಳನ್ನು ತಿಂದು ಹಾಗೂ ರಾಜನು ಕುಡಿಯುವ ದ್ರಾಕ್ಷಾರಸವನ್ನು ಕುಡಿದು ತನ್ನನ್ನೇ ಅಶುದ್ಧ ಮಾಡಿಕೊಳ್ಳಬಾರದೆಂದು ನಿಶ್ಚಯಿಸಿಕೊಂಡನು. ಕಂಚುಕಿಯರ ನಾಯಕನಿಗೆ, “ಕ್ಷಮಿಸು, ನಾನು ಅಶುದ್ಧನಾಗಲಾರೆ,” ಎಂದು ವಿನಂತಿಸಿದನು.
9 : ಕಂಚುಕಿಯರ ನಾಯಕನು ದಾನಿಯೇಲನ ಮೇಲೆ ಕನಿಕರ ಮತ್ತು ದಯೆ ತೋರುವಂತೆ ದೇವರು ಅನುಗ್ರಹಿಸಿದ್ದರು.
10 : ಆದುದರಿಂದ ಆ ನಾಯಕನು ದಾನಿಯೇಲನಿಗೆ, “ನಿಮಗೆ ಅನ್ನಪಾನಗಳನ್ನು ಏರ್ಪಡಿಸಿದ ನನ್ನೊಡೆಯನಾದ ರಾಜನು ನಿಮ್ಮಂತೆ ಆಯ್ಕೆಯಾದ ಯುವಕರ ಮುಖಕ್ಕಿಂತ ನಿಮ್ಮ ಮುಖ ಬಾಡಿರುವುದನ್ನು ನೋಡಿ ನನ್ನ ತಲೆ ತೆಗೆಸಬಹುದೆಂಬ ಭಯ ನನಗಿದೆ. ಇದಕ್ಕೆ ನೀವು ಕಾರಣರಾಗಬಹುದಲ್ಲವೆ?” ಎಂದು ಹೇಳಿದನು.
11 : ದಾನಿಯೇಲನು ತನ್ನನ್ನೂ, ಹನನ್ಯ, ಮಿಶಾಯೇಲ, ಅಜರ್ಯ ಇವರನ್ನೂ ನೋಡಿಕೊಳ್ಳಲು ಆ ನಾಯಕನು ನೇಮಿಸಿದ್ದ ವಿಚಾರಕನ ಬಳಿಗೆ ಬಂದು,
12 : “ಅಯ್ಯಾ, ಹತ್ತು ದಿನಗಳ ಮಟ್ಟಿಗೆ ನಮ್ಮನ್ನು ಪರೀಕ್ಷಿಸಿನೋಡು. ಸೇವಕರಾದ ನಮಗೆ ಭೋಜನಕ್ಕೆ ಬದಲಾಗಿ ಕಾಯಿಪಲ್ಯ, ಪಾನಕ್ಕೆ ಬದಲಾಗಿ ನೀರು ಒದಗಿಸಿದರೆ ಸಾಕು.
13 : ಆಮೇಲೆ ನಮ್ಮ ಮುಖಗಳನ್ನೂ ರಾಜಭೋಜನ ಉಣ್ಣುವ ಯುವಕರ ಮುಖಗಳನ್ನೂ ಹೋಲಿಸಿನೋಡು. ಅನಂತರ ನಿನಗೆ ತೋಚಿದ ಹಾಗೆ ನಮಗೆ ಮಾಡು,” ಎಂದು ಕೇಳಿಕೊಂಡನು.
14 : ವಿಚಾರಕನು ಅವರ ಬಿನ್ನಹಕ್ಕೆ ಒಪ್ಪಿ ಹತ್ತುದಿನದವರೆಗೆ ಪರೀಕ್ಷಿಸಿದನು.
15 : ಹತ್ತು ದಿನಗಳಾದ ಮೇಲೆ ರಾಜಭೋಜನ ಉಣ್ಣುತ್ತಿದ್ದ ಎಲ್ಲ ಯುವಕರಿಗಿಂತ ಇವರು ಸುಂದರವಾಗಿಯೂ ಪುಷ್ಟರಾಗಿಯೂ ಕಾಣಿಸಿದರು.
16 : ಅಂದಿನಿಂದ ವಿಚಾರಕನು ಇವರಿಗೆ ನೇಮಕವಾದ ಭೋಜನ ಪದಾರ್ಥಗಳನ್ನೂ ಕುಡಿಯಬೇಕಾದ ದ್ರಾಕ್ಷಾರಸವನ್ನೂ ತೆಗೆದುಬಿಟ್ಟು ಕಾಯಿಪಲ್ಯಗಳನ್ನೇ ಕೊಡುತ್ತಾ ಬಂದನು.
17 : ಹೀಗಿರಲು ದೇವರು ಆ ನಾಲ್ಕು ಮಂದಿ ಯುವಕರಿಗೆ ಸಕಲ ಶಾಸ್ತ್ರಗಳಲ್ಲೂ ವಿದ್ಯೆಗಳಲ್ಲೂ ಜ್ಞಾನ ವಿವೇಕಗಳನ್ನು ದಯಪಾಲಿಸಿದರು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ ದಿವ್ಯ ದರ್ಶನಗಳನ್ನೂ ಅರ್ಥೈಸುವುದರಲ್ಲಿ ಪ್ರವೀಣನಾದನು.
18 : ರಾಜನು ನೇಮಿಸಿದ ಕಾಲವು ಕಳೆಯಿತು. ಆ ಯುವಕರನ್ನು ರಾಜಸನ್ನಿಧಿಗೆ ಕರೆದು ತರುವ ಸಮಯವು ಬಂದಿತು. ಕಂಚುಕಿಯರ ನಾಯಕ ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆದು ತಂದನು.
19 : ರಾಜನು ಅವರ ಸಂಗಡ ಮಾತಾಡುವಾಗ ಅಲ್ಲಿದ್ದ ಯುವಕರಲ್ಲೆಲ್ಲ ದಾನಿಯೇಲನಿಗೆ, ಹನನ್ಯನಿಗೆ, ಮೀಶಾಯೇಲನಿಗೆ, ಅಜರ್ಯನಿಗೆ, ಸಮಾನರು ಯಾರೂ ಕಂಡುಬರಲಿಲ್ಲ. ಆದಕಾರಣ ಆ ನಾಲ್ವರು ಸನ್ನಿಧಿ ಸೇವಕರಾದರು.
20 : ಬಳಿಕ ರಾಜನು ಶಾಸ್ತ್ರೀಯ ವಿದ್ಯೆಯ ಎಲ್ಲ ವಿಷಯಗಳಲ್ಲಿ ಅವರನ್ನು ವಿಚಾರ ಮಾಡಿದಾಗ ಸಮಸ್ತ ರಾಜ್ಯದಲ್ಲಿನ ಎಲ್ಲ ಜೋಯಿಸರಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ ಕಂಡುಬಂದರು.
21 : ದಾನಿಯೇಲನು ರಾಜ ಸೈರೆಷನ ಆಳ್ವಿಕೆಯ ಮೊದಲನೆಯ ವರ್ಷದ ತನಕ ಸನ್ನಿಧಿ ಸೇವಕನಾಗಿಯೇ ಇದ್ದನು.

· © 2017 kannadacatholicbible.org Privacy Policy